ಕೆಜಿಎಫ್‌ 2ನಲ್ಲಿ ರಾಕಿ ಭಾಯ್ V/S ಸಂಜು ಭಾಯ್: ಎಲ್ಲೆಲ್ಲಿ ಶೂಟಿಂಗ್..? ಹೇಗಿರಲಿದೆ ಸಿನಿಮಾ..? TV5 EXCLUSIVE

ಸ್ಯಾಂಡಲ್​ವುಡ್​ನ ಅಪ್ ಟು ಡೇಟ್ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿ, ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆದ ಕೆಜಿಎಫ್, ಇದೀಗ ಮತ್ತೊಂದು ಸಾಹಸಕ್ಕೆ ಕೈಹಾಕಿದೆ. ವಿಶ್ವ ಸಿನಿದುನಿಯಾನ ತನ್ನತ್ತ ತಿರುಗಿ ನೋಡುವಂತೆ ಮಾಡೋ ಸನ್ನಾಹದಲ್ಲಿರೋ ಟೀಮ್ ಕೆಜಿಎಫ್, ಚಾಪ್ಟರ್​ 2ನ ಸೈಲೆಂಟ್ ಆಗಿ ಕಿಕ್​ಸ್ಟಾರ್ಸ್​ ಮಾಡಿದೆ.

ಮನಸ್ಸು ಮಾಡಿದ್ರೆ ಬಾಲಿವುಡ್ ಹಾಲಿವುಡ್ ಮಂದಿಯನ್ನ ಮೀರಿಸೋ ಸಿನಿಮಾಗಳನ್ನ ಮಾಡಬಹುದು ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಕೆಜಿಎಫ್. ಇಟ್ಟ ಗುರಿಯನ್ನ ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಮಾಡಿದ್ರೆ ನಿರೀಕ್ಷೆ ಮಟ್ಟಕ್ಕಿಂತ ದೊಡ್ಡ ಸಕ್ಸಸ್ ಸಿಗುತ್ತೆ ಅನ್ನೋದಕ್ಕೆ ನಿದರ್ಶನ ಕೆಜಿಎಫ್. ಅದೇ ಲವ್ವು, ಅದೇ ಹೊಡೀಬಡಿ ಸಿನಿಮಾಗಳ ಮಧ್ಯೆ ಒಂದು ಹೊಸ ಪ್ರಯೋಗ ಮಾಡಿ ಗೆದ್ದೇ ಗೆಲ್ಲುತ್ತೇವೆ ಅನ್ನೋ ಆತ್ಮವಿಶ್ವಾಸದ ಪ್ರತಿಬಿಂಬ ಕೆಜಿಎಫ್. ಮಾರುಕಟ್ಟೆ ಚಿಕ್ಕದು ಅಂತ ಬಾವಿಯಲ್ಲಿ ಕಪ್ಪೆಯಂತಿರೋದು ಬಿಟ್ಟು, ಸಮುದ್ರದಲ್ಲಿನ ತಿಮಿಂಗಲ, ಶಾರ್ಕ್​ಗಳಿಗೆ ಶಾಕ್ ಕೊಡಬಹುದು ಅನ್ನೋದನ್ನ ತೋರಿಸಿಕೊಟ್ಟ ಚಿತ್ರ ಕೆಜಿಎಫ್.

ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸೃಷ್ಠಿಸಿದ ಕೆಜಿಎಫ್ ಸಿನಿಮಾದ ಕುರಿತು ಎಷ್ಟು ಹೇಳಿದ್ರೂ ಕಮ್ಮಿ ಆಗಿಬಿಡುತ್ತೆ. ಅಷ್ಟರಮಟ್ಟಿಗೆ ಹೈಪ್, ಹವಾ, ಸೆನ್ಸೇಷನ್ ಕ್ರಿಯೇಟ್ ಮಾಡಿದ ಚಿತ್ರ ಕೆಜಿಎಫ್. ಕನ್ನಡಿಗರ ತಾಕತ್ತು ಎಂಥದ್ದು ಅನ್ನೋದ್ರ ಪ್ರತೀಕವದು. ನೂರು ಕೋಟಿ ಕ್ಲಬ್ ದಾಟೋದೇ ಕಷ್ಟಸಾಧ್ಯ ಗುರು ಅಂದುಕೊಳ್ತಿದ್ದ ನಮ್ಮ ಇಂಡಸ್ಟ್ರಿಯಲ್ಲಿ ಮುನ್ನೂರು ಕೋಟಿ ಕೂಡ ಗಳಿಸಬಹುದು ಅಂತ ತೋರಿಸಿಕೊಟ್ಟ ದೃಶ್ಯಕಾವ್ಯ. ಇಂತಹ ಮಹೋನ್ನತ ಸಿನಿಮಾದ ಸೀಕ್ವೆಲ್​​ ಸದ್ದಿಲ್ಲದೆ ಸೆಟ್ಟೇರಿದೆ.

ಸೈಲೆಂಟ್ ಆಗಿ ರಾಕಿ ಭಾಯ್ ಕೆಜಿಎಫ್- 2 ಕಿಕ್​ಸ್ಟಾರ್ಟ್​
ಕಂಠೀರವದಲ್ಲಿ ಮುಹೂರ್ತ.. ಕೋದಂಡರಾಮ ಬಳಿ ವರ
ಮುಂಜಾನೆ ಸೂರ್ಯ ರಶ್ಮಿ ಕಿರಣಗಳು ಭೂಮಿ ತಾಗುವ ಅಮೃತ ಗಳಿಗೆಯಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಠಿಸೋಕ್ಕೆ ಮುಂದಾದ ಕೆಜಿಎಫ್ ಟೀಂ, ಚಾಪ್ಟರ್-2 ಮುಹೂರ್ತ ನೆರವೇರಿಸಿತು. ಕಂಠೀರವ ಸ್ಟುಡಿಯೋದಲ್ಲಿ ಸರಳವಾಗಿ ಮುಹೂರ್ತ ನೆರವೇರಿಸಿದ ಚಿತ್ರತಂಡ, ಅದಾದ ಬಳಿಕ ವಿಜಯನಗರದ ಪಂಚಮುಖಿ ಗಣಪತಿ ಹಾಗೂ ಕೋದಂಡರಾಮ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದೆ. ಆ ಮೂಲಕ ವಾಯುಪುತ್ರ ಹಾಗೂ ವಿನಾಯಕನ ಬಳಿ ಚಿನ್ನದ ವರ ಕೇಳಿದೆ ಟೀಂ ಕೆಜಿಎಫ್.

ರಾಕಿಂಗ್ ಸ್ಟಾರ್ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಸಿನಿಮಾಟೋಗ್ರಫರ್ ಭುವನ್ ಗೌಡ ಸೇರಿದಂತೆ ಬಹುತೇಕ ಕೆಜಿಎಫ್ ಟೀಂ ಈ ಶುಭಗಳಿಗೆಗೆ ಸಾಕ್ಷಿಯಾಗಿರೋದು ವಿಶೇಷ. ಇನ್ನು ಚಿತ್ರದ ಮೊದಲ ದೃಶ್ಯಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಸಹೋದರ ಮಂಜಣ್ಣ ಕ್ಲಾಪ್ ಮಾಡಿದ್ರೆ, ನಿರ್ದೇಶಕ ಪ್ರಶಾಂತ್ ನೀಲ್ ತಾಯಿ ಬಾರತಿ ಸುಭಾಷ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ದು ಮತ್ತೊಂದು ವಿಶೇಷ.

500 ಅಲ್ಲ ಸಾವಿರ ಕೋಟಿ ಟಾರ್ಗೆಟ್ ಇಟ್ಟ ಸೀಕ್ವೆಲ್..!!
KGF 2 ಎಲ್ಲೆಲ್ಲಿ ಶೂಟಿಂಗ್..? ಯಾರೆಲ್ಲಾ ಸ್ಟಾರ್ ಕಾಸ್ಟ್..?
ಅಧಿಕೃತ ಮೂಲಗಳ ಪ್ರಕಾರ ಕೆಜಿಎಫ್ ಬಾಕ್ಸಾಫೀಸ್ ಹೆಚ್ಚೂ ಕಡಿಮೆ 300ಕೋಟಿ ಗ್ರಾಸ್ ದಾಟಿದೆ. ಐದು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಕಂಡ ಈ ಸಿನಿಮಾ ಸಪ್ತಸಾಗರದಾಚೆಗೂ ಇಲ್ಲಿನಂತೆ ಸದ್ದು ಮಾಡಿತು. ಇನ್ನು ಸ್ಯಾಟಲೈಟ್ ರೈಟ್ಸ್, ಆಡಿಯೋ ರೈಟ್ಸ್ ಸೇರಿದಂತೆ ಸಿನಿಮಾ ಗಳಿಕೆಯ ಪ್ರಮಾಣ ಮುಗಿಲು ಮುಟ್ಟಿತ್ತು. ಅಂತಹ ಸಿನಿಮಾ ಸದ್ಯ 500ಕೋಟಿ ಅಲ್ಲ, ಸಾವಿರ ಕೋಟಿ ಟಾರ್ಗೆಟ್ ಇಟ್ಟುಕೊಂಡಿದೆ ಎನ್ನಲಾಗ್ತಿದೆ.

ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಬಹುತೇಕ ಪರಭಾಷಾ ವೀಕ್ಷಕರನ್ನೂ ಮೋಡಿ ಮಾಡಿದ ಕೆಜಿಎಫ್, ಸದ್ಯ ಸೀಕ್ವೆಲ್​ಗಾಗಿ ಕಾತುರತೆ ಹೆಚ್ಚಿಸಿದೆ. ಹಾಗಾಗಿ ಬಾಹುಬಲಿ ರೀತಿ ಸೀಕ್ವೆಲ್​ನಲ್ಲಿ ದುಪ್ಪಟ್ಟು ಪೈಸಾ ವಸೂಲ್ ಮಾಡೋ ಸೂಚನೆ ಕೊಟ್ಟಿದೆ ಕೆಜಿಎಫ್ ಚಾಪ್ಟರ್- 2. ಅಂದಹಾಗೆ ಶೂಟಿಂಗ್ ಯಾವಾಗಿಂದ, ಎಲ್ಲಿ ನಡೆಯಲಿದೆ..? ಯಾರೆಲ್ಲಾ ಮುಖ್ಯಭೂಮಿಕೆಯಲ್ಲಿ ಇರಲಿದ್ದಾರೆ ಅನ್ನೋದನ್ನ ಡಿಟೈಲ್ಡ್ ಆಗಿ ಹೇಳಿಬಿಡ್ತೀವಿ ಕೇಳಿ.

ಏಪ್ರಿಲ್ ಮೊದಲ ವಾರದಿಂದ ಚಾಪ್ಟರ್-2 ಶೂಟಿಂಗ್ ಶುರು
ಬೆಂಗಳೂರು- ಮೈಸೂರು ಜೊತೆ KGF- ರಾಜಸ್ತಾನ್​ನತ್ತ ಟೀಂ
ಕೆಜಿಎಫ್ ಸೀಕ್ವೆಲ್ ಇದೇ ಏಪ್ರಿಲ್ ಆರಂಭದಿಂದ ಶುರು ಮಾಡಲಿರೋ ಚಿತ್ರತಂಡ, ಬೆಂಗಳೂರು ಮೈಸೂರು ಸೇರಿದಂತೆ ಕೆಜಿಎಫ್​ನಲ್ಲಿ ಬೃಹತ್ ಸೆಟ್​ಗಳನ್ನ ಹಾಕಿ ಚಿತ್ರಿಸಲಿದೆ. ಅಂದಹಾಗೆ ಈ ಬಾರಿ ರಾಜಸ್ತಾನ್​ನಲ್ಲಿ ಚಿತ್ರಿಸೋ ಪ್ಲಾನ್ ರೂಪಿಸಿರೋ ಪ್ರಶಾಂತ್ ನೀಲ್, ಅದನ್ನ ಹಿಂದೆಂದೂ ಕಂಡು ಕೇಳರಿಯದ ರೇಂಜ್​ಗೆ ಶೂಟ್ ಮಾಡಲಿದ್ದಾರಂತೆ.

ಆರ್ಟ್​ ಡೈರೆಕ್ಟರ್ ಶಿವು, ಸಿನಿಮಾಟೋಗ್ರಫರ್ ಭುವನ್ ಹಾಗೂ ರವಿ ಬಸ್ರೂರು ಸಂಗೀತ ಚಿತ್ರಕ್ಕೆ ಇರಲಿದ್ದು, ಬಹುತೇಕ ಮೊದಲ ಭಾಗಕ್ಕೆ ಕೆಲಸ ಮಾಡಿದ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರು ಚಾಪ್ಟರ್-2ಗೆ ಕೆಲಸ ಮಾಡಲಿದ್ದಾರೆ. ಇನ್ನು ನಾಯಕಿಯ ಪಾತ್ರದಲ್ಲಿ ಶ್ರೀನಿಧಿ ಶೆಟ್ಟಿಯೇ ಮುಂದುವರೆಯಲಿದ್ದು, ಅಧೀರ ಹಾಗೂ ರಮಿಕಾ ಸೇನ್ ಪಾತ್ರಗಳಿಗೆ ಬಾಲಿವುಡ್​ನ ಇಬ್ಬರು ಬಿಗ್ ಸ್ಟಾರ್ಸ್​ ಸಾಥ್ ಕೊಡಲಿದ್ದಾರೆ.

ಅಧೀರನಾಗಿ ರಾಕಿ ಭಾಯ್ ಎದುರು ಸಂಜು ಭಾಯ್..!
ರಮಿಕಾ ಸೇನ್ ಪಾತ್ರದಲ್ಲಿ ರವೀನಾ ರೆಟ್ರೋ ಗಮ್ಮತ್ತು..!!
ಮೊದಲ ಭಾಗದಲ್ಲಿ ಗರುಡನನ್ನ ಮುಗಿಸಿದ ರಾಕಿ ಭಾಯ್, ಮುಂದಿನ ಭೇಟೆಗೆ ಸಜ್ಜಾಗೋ ಕಥಾನಕ ಚಾಪ್ಟರ್-2. ಹಾಗಾಗಿ ಸೀಕ್ವೆಲ್​ನಲ್ಲಿ ಅಧೀರನನ್ನ ಹೊಡೆದುರುಳಿಸೋಕ್ಕೆ ರಾಕಿ ಭಾಯ್ ನರೋಚಿಯಿಂದ ಮತ್ತೆಲ್ಲಿ ಹೋಗ್ತಾರೆ ಅನ್ನೋ ಕ್ಯೂರಿಯಾಸಿಟಿ ಇದೆ. ಅಂದಹಾಗೆ ಅಧೀರನ ಪಾತ್ರಕ್ಕೆ ಬಾಲಿವುಡ್​ನ ಸಂಜಯ್ ದತ್ ಆಲ್ಮೋಸ್ಟ್ ಫಿಕ್ಸ್ ಆಗಿದ್ದಾರೆ ಎನ್ನಲಾಗ್ತಿದೆ.

ಮೊದಲ ಭಾಗದ ಆರಂಭದಲ್ಲಿ ಬರೋ ರಮಿಕಾ ಸೇನ್ ಪಾತ್ರ ಚಾಪ್ಟರ್-2ನಲ್ಲಿ ದೊಡ್ಡ ಮಟ್ಟದಲ್ಲಿ ಇರಲಿದ್ದು, ಅದನ್ನ ಬಿಟೌನ್ ಚೆಲುವೆ ರವೀನಾ ಟಂಡನ್ ನಿಭಾಯಿಸೋದು ಫಿಕ್ಸ್ ಆಗಿದೆ. ಈಗಾಗ್ಲೇ ತಮ್ಮ ಪತಿ ಅನಿಲ್ ತದಾನಿಯೇ ಕೆಜಿಎಫ್ ಚಿತ್ರದ ಬಾಲಿವುಡ್ ಡಿಸ್ಟ್ರಿಬ್ಯೂಷನ್ ಹೊಣೆ ಹೊತ್ತಿದ್ದು, ಸಿನಿಮಾದ ಗತ್ತು, ಪಾತ್ರದ ಗಮ್ಮತ್ತು ಚೆನ್ನಾಗಿ ಅರಿತಿದ್ದಾರೆ ರವೀನಾ.

ಚಾಪ್ಟರ್-2 EXCLUSIVE ದೃಶ್ಯಗಳು ನಿಮ್ಮ TV5ನಲ್ಲಿ
ಆನಂದ್ ಅಂಗಳಗಿ ಕಥೆಯಲ್ಲಿ ಮಾನ್​ಸ್ಟರ್ ಕಿಲ್ಲಿಂಗ್ ಸೀನ್ಸ್
ಇವು ಚಾಪ್ಟರ್-2ನ ಎಕ್ಸ್​ಕ್ಲೂಸಿವ್ ದೃಶ್ಯಗಳು. ಬರಹಗಾರ ಆನಂದ್ ಅಂಗಳಗಿ ಪಾತ್ರದಲ್ಲಿ ಕಾಣಿಸಿಕೊಂಡಿರೋ ಅನಂತನಾಗ್, ಟಿವಿ ಸಂದರ್ಶನವೊಂದರಲ್ಲಿ ಮಾತನಾಡೋವಾಗ ಎಕ್ಸೈಟ್ ಆಗಿ ಒಂದಷ್ಟು ಸೀನ್​ಗಳನ್ನ ಮೊದಲೇ ಹೇಳಿದ್ದರು. ರಾಕಿ ಭಾಯ್​ಗೆ ಚಾಪರ್​ ನಲ್ಲಿ ಅಡ್ರೆಸ್ ಪ್ರೂಫ್ ತಂದುಕೊಟ್ಟು ಸ್ಟೇಷನ್​ನಿಂದ ಹೊರಗೆ ಕರೆದುಕೊಂಡು ಬರೋ ದೃಶ್ಯ ಹಾಗೂ ಪಬ್​ನಲ್ಲಿ ಮಾನ್​ಸ್ಟರ್​ ರೀತಿ ಬುಲೆಟ್​ಗಳ ಸುರಿಮಳೆಗೆಯ್ಯುವ ರಾಕಿ ಭಾಯ್​ನ ದೃಶ್ಯಗಳು ಸೀಕ್ವೆಲ್​​ನ ಹಿಂಟ್ಸ್.

ಮೊದಲ ಭಾಗವನ್ನ ಇಡೀ ವಿಶ್ವವೇ ತಿರುಗಿನೋಡುವಂತೆ ಮಾಡಿರೋ ಯಶ್ ಹಾಗೂ ಪ್ರಶಾಂತ್ ನೀಲ್, ಈ ಬಾರಿ ಚಾಪ್ಟರ್-2ನ ಅದಕ್ಕೂ ಮೀರಿದ ರೀತಿ ಕಟ್ಟಿಕೊಡೊ ಧಾವಂತದಲ್ಲಿದ್ದಾರೆ. ಅದೇನೇ ಇರಲಿ, ಈ ರೀತಿಯ ಪ್ರಯೋಗ ನಮ್ಮ ಕನ್ನಡದಲ್ಲಿ ಯಶ್ ಮೂಲಕ ಆಗಿರೋದು ಕನ್ನಡ ಚಿತ್ರರಂಗದ ಯಶಸ್ವಿ ಪಯಣಕ್ಕೆ ನಾಂದಿ ಹಾಡಿದಂತಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Recommended For You

Leave a Reply

Your email address will not be published. Required fields are marked *