ಲೋಕಸಭಾ ಚುನಾವಣೆ ರಣತಂತ್ರ: ಕರ್ನಾಟಕಕ್ಕೆ ಅಮಿತ್ ಶಾ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜಕೀಯ ಪಕ್ಷಗಳು ಗೆಲುವು ಸಾಧಿಸಲು ಪಣತೊಟ್ಟಿವೆ. ಕರ್ನಾಟಕದಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಕಾಂಗ್ರೆಸ್​-ಜೆಡಿಎಸ್​ ಮೈತ್ರಿಯನ್ನು ಮುರಿಯಲು ಬಿಜೆಪಿ ನಾಯಕರು ಹುನ್ನಾರ ನಡೆಸುತ್ತಿದ್ಧಾರೆ.  ಕಳೆದ ಭಾನುವಾರವಷ್ಟೇ ಕರ್ನಾಟಕಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಹುಬ್ಬಳ್ಳಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಕಹಳೆ ಊದಿದ್ದರು. ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ರಾಯಚೂರಿಗೆ ಆಗಮಿಸುತ್ತಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಯಚೂರಿನ ಸಿಂಧನೂರು ಹಾಗೂ ಬಳ್ಳಾರಿಯ ಹೊಸಪೇಟೆಗೆ ಭೇಟಿ ನೀಡಲಿದ್ದಾರೆ.

ಮಧ್ಯಾಹ್ನ 4 ಗಂಟೆಗೆ ಸಿಂಧನೂರಿಗೆ ಆಗಮಿಸಲಿದ್ದು ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಶಕ್ತಿಕೇಂದ್ರದ ಪ್ರಮುಖರ ಸಮಾವೇಶ ನಡೆಸಲಿದ್ದಾರೆ. ಸಿಂಧನೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ 10 ಸಾವಿರ ಕಾರ್ಯಕರ್ತರಿಗೆ ಮಾತ್ರ ಪ್ರವೇಶ ನಿಗದಿ ಮಾಡಲಾಗಿದೆ. ಸಮಾವೇಶದಲ್ಲಿ ಮೂರು ಜಿಲ್ಲೆಗಳ ಲೋಕಸಭಾ ಚುನಾವಣಾ ತಯಾರಿ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಅಮಿತ್ ಶಾ ಮಾತನಾಡಲಿದ್ದಾರೆ.

ಬಳಿಕ ಸಂಜೆ 6 ಗಂಟೆಗೆ ಬಳ್ಳಾರಿಯ ಹೊಸಪೇಟೆಯಲ್ಲಿ ಆಯೋಜಿಸಿರುವ ಇಂಟಲೆಕ್ಚುವಲ್ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಬಳ್ಳಾರಿ, ರಾಯಚೂರು, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮುಖಂಡರ ತಂಡ ಮತ್ತು ಕಾರ್ಯಕ್ರಮ ಉಸ್ತುವಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಿಂಧನೂರು ಹಾಗೂ ಹೊಸಪೇಟೆಯ ಕಾರ್ಯಕ್ರಮಗಳಲ್ಲಿ ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ..