TV5 EXCLUSIVE- ಪ್ರತಿಭಟನೆ ಬಗ್ಗೆ ಶಾಸಕ ಪ್ರೀತಂಗೌಡ ಹೇಳಿದ್ದೇನು..?

ಬೆಂಗಳೂರು: ಹಾಸನದಲ್ಲಿ ಶಾಸಕ ಪ್ರೀತಮ್ ಗೌಡ ವಿರುದ್ಧ ಪ್ರತಿಭಟನೆ ನಡೆದಿದ್ದು, ಪ್ರೀತಮ್‌ಗೌಡ ಮನೆಯಲ್ಲಿ ಇಲ್ಲದ ವೇಳೆ, ಅವರ ಪೋಷಕರ ಮೇಲೆ, ಬೆಂಬಲಿಗರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಟಿವಿ5 ಜೊತೆ ಮಾತನಾಡಿದ ಶಾಸಕ ಪ್ರೀತಂಗೌಡ ಕುಮಾರಸ್ವಾಮಿ ವಿರುದ್ಧ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಾನು ಮನೆಯಲ್ಲಿ ಇಲ್ಲದ ವೇಳೆ ವಿಪಕ್ಷದ ಬೆಂಬಲಿಗರು ನಮ್ಮ ಮನೆಯ ಮುಂದೆ ಪ್ರತಿಭಟನೆ ನಡೆಸಿ, ನನ್ನ ಅಮ್ಮನ ಮೇಲೆ, ನನ್ನ ಬೆಂಬಲಿಗರ ಮೇಲೆ ರಕ್ತ ಬರುವ ಹಾಗೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಮನೆಯ ಮುಂದಿನ ವಸ್ತುಗಳನ್ನು ಹಾಳು ಮಾಡಿದ್ದಾರೆ. ನನ್ನ ಕಾರಿಗೂ ಹಾನಿ ಮಾಡಿದ್ದಾರೆ. ಇದು ರಾಜ್ಯ ಸರ್ಕಾರದ ಗೂಂಡಾ ಪ್ರವೃತ್ತಿ ಎಂದು ಪ್ರೀತಮ್ ಗೌಡ, ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ದೇವೇಗೌಡರ ಬಗ್ಗೆ ಯಾವುದೇ ರೀತಿಯ ಹೇಳಿಕೆಯನ್ನೂ ಕೊಟ್ಟಿಲ್ಲ. ಇದೆಲ್ಲ ಕಪೋಲಕಲ್ಪಿತ ಹೇಳಿಕೆಗಳನ್ನು ಸೃಷ್ಟಿ ಮಾಡಿ, ಕುಮಾರಸ್ವಾಮಿಯವರು ಗೂಂಡಾಗಿರಿ ನಡೆಸಿದ್ದಾರೆ. ನನ್ನ ಪೋಷಕರ ಮೇಲೆ ಹಲ್ಲೆ ನಡೆಸುವ ಮಟ್ಟಿಗೆ ಇಂದು ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ಪ್ರೀತಂಗೌಡ ಹರಿಹಾಯ್ದಿದ್ದಾರೆ.

ಇನ್ನು ಸೆಕ್ಯೂರಿಟಿಯ ಬಗ್ಗೆ ಮಾತನಾಡಿದ ಪ್ರೀತಂಗೌಡ, ನಾನು ಸೆಕ್ಯೂರಿಟಿ ಕೇಳುವುದಿಲ್ಲ. ಒಬ್ಬ ಶಾಸಕನಿಗೆ ಹೀಗಾದಾಗ ಸೆಕ್ಯೂರಿಟಿ ಕೊಡಬೇಕೋ ಬೇಡವೋ ಎಂಬುದು ಕುಮಾರಸ್ವಾಮಿಯವರಿಗೆ ಗೊತ್ತಿರಬೇಕು ಎಂದು ಹೇಳಿದ್ದಾರೆ.