’35 ನಿಮಿಷದ ಆಡಿಯೋವನ್ನ 2 ನಿಮಿಷ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ’

ಬೆಂಗಳೂರು: ಬಜೆಟ್ ಮಂಡನೆ ದಿನ ಯಡಿಯೂರಪ್ಪ ವಿರುದ್ಧ ಸಿಎಂ ಕುಮಾರಸ್ವಾಮಿ ಆಡಿಯೋ ರಿಲೀಸ್ ಮಾಡಿದ್ದು, ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸಲು ಯಡಿಯೂರಪ್ಪ ವಿರೋಧಿಸಿದ್ದಾರೆ. ಅಲ್ಲದೇ 35 ನಿಮಿಷವಿದ್ದ ಆಡಿಯೋವನ್ನು 2 ನಿಮಿಷ ಮಾಡಿ ಮಾಧ್ಯಮದ ಮುಂದಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಇಂದು ಸದನದಲ್ಲಿ ಮಾತನಾಡಿದ ಯಡಿಯೂರಪ್ಪ, ನಿನ್ನೆಯಿಂದ ಸವಿಸ್ತಾರವಾಗಿ ಚರ್ಚೆ ನಡೆದಿದೆ. ಸಿದ್ದರಾಮಯ್ಯ ಎಸ್‌ಐಟಿ ತನಿಖೆ ಆಗಬೇಕು ಅಂತ ಹೇಳಿದ್ದಾರೆ. ನಾವು ಎಸ್ ಐಟಿ ತನಿಖೆಗೆ ಒಪ್ಪಲ್ಲ. ಎಸ್ ಐಟಿ ಸಿಎಂ ಕೈಕೆಳಗೆ ಬರಲಿದೆ. ಹೀಗಾಗಿ ನಾವು ಆ ತನಿಖೆಗೆ ಒಪ್ಪುವುದಿಲ್ಲ ಎಂದು ಹೇಳಿದ್ದು, ಸದನಸಮಿತಿ ರಚಿಸಲು ಒತ್ತಾಯಿಸಿದ್ದಾರೆ.

ಇನ್ನು ಬಿಎಸ್‌ವೈ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ನನ್ನ ಅಭಿಪ್ರಾಯವನ್ನು ನೀವು ಕೇಳಿ. ಆಗದಿದ್ದರೆ ಸುಮ್ಮನಿರಿ ಎಂದು ಬಿಎಸ್‌ವೈ ಹೇಳಿದ್ದು, ಶರಣುಗೌಡ ಜೊತೆ ಮಾತನಾಡಿದ್ದನ್ನ ತಿರುಚಲಾಗಿದೆ. 8ರಂದು ಸಭಾಧ್ಯಕ್ಷರಿಗೆ ಸಿಎಂ ಪತ್ರ ಬರೆದಿದ್ದರು. ದೂರಿನಲ್ಲಿ ಆ ಆಡಿಯೋದಲ್ಲಿ ಪ್ರತಿಪಕ್ಷ ನಾಯಕ ಇದ್ದರು ಅಂತ ಸೇರಿಸಿದ್ದಾರೆ. ಸ್ಪೀಕರ್ ಬಗ್ಗೆ ನಾನು ಮಾತನಾಡಿದ್ದರೆ ರಾಜೀನಾಮೆ ನೀಡ್ತೇನೆ. ನಾನು ಈಗಲೂ ನನ್ನ ಹೇಳಿಕೆಗೆ ಬದ್ಧ. ಸಿಎಂ ಅವರು ನಕಲಿ,ಸುಳ್ಳು ದಾಖಲೆ ಸೃಷ್ಠಿಮಾಡಿದ್ದಾರೆ. ನಕಲಿ ದಾಖಲೆ ಅನ್ನೋದು ಗೊತ್ತಿದ್ದರೂ ಸತ್ಯವೆಂದು ಬಿಂಬಿಸಿದ್ದು ಅಪರಾಧ. ಇದು ನನ್ನ ಅಭಿಪ್ರಾಯ ಎಂದಿದ್ದಾರೆ.