ಕರ್ನಾಟಕದ ಸಿಎಂ ಎಲ್ಲರ ‘ಪಂಚಿಂಗ್ ಬ್ಯಾಗ್’, ‘ಅಳಬುರುಕ’- ಮೋದಿ

ಹುಬ್ಬಳ್ಳಿ: ಹುಬ್ಬಳ್ಳಿಯ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕನ್ನಡದಲ್ಲೇ ಭಾಷಣ ಆರಂಭಿಸಿದ್ದು, ಸಿಎಂ ವಿರುದ್ಧ ಇಲ್ಲಿನ ಮೈತ್ರಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ತಮ್ಮ ಪ್ರೀತಿ ಆಶೀರ್ವಾದಕ್ಕೆ ನಾನು ಆಭಾರಿ. ಇವತ್ತು ವಸಂತಪಂಚಮಿ, ವಾತಾವರಣ ಬದಲಾಗುತ್ತಿದೆ. ಇವತ್ತು ದೊಡ್ಡ ಪ್ರಮಾಣದಲ್ಲಿ ನೀವು ಆಗಮಿಸಿದ್ದೀರಿ. ಸದ್ಯದ ಕರ್ನಾಟಕದ ರಾಜಕೀಯ ಬದಲಾವಣೆಯ ಅನುಭವ ನನಗೆ ಆಗುತ್ತಿದೆ. ಸಿದ್ಧಾರೂಢರು, ಗುರುಸಿದ್ಧ ಸ್ವಾಮೀಜಿಗಳು, ತೋಂಟದ ಶ್ರೀಗಳನ್ನು ಸ್ಮರಿಸುತ್ತೇನೆ. ಇದು ವೀರರ ನಾಡು, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿರಾಯಣ್ಣ, ಕುಮಾರವ್ಯಾಸ, ಕನಕದಾಸ, ದ.ರಾ. ಬೇಂದ್ರೆ, ಗಂಗೂಬಾಯಿ, ಹಾನಗಲ್, ಕುಮಾರ್ ಗಂಧರ್ವರನ್ನು ಸ್ಮರಿಸುತ್ತೇನೆ. ಈ ನೆಲದಲ್ಲಿ ಬಿಜೆಪಿ ಬಹಳ ಕಾಲದಿಂದ ನೆಲೆಯೂರಿದೆ ಎಂದು ಹೇಳಿದ್ದಾರೆ.

ಇನ್ನು ಅನಂತ್ ಕುಮಾರ್‌ ಅವರನ್ನು ನೆನೆದ ಪ್ರಧಾನಿ ಮೋದಿ, ಕೆಲ ಹೊತ್ತಿನ ಹಿಂದೆ 5 ಸಾವಿರ ಕ್ಕೂ ಹೆಚ್ಚಿನ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಿದ್ದೆನೆ. ಅನಂತ್ ಕುಮಾರ್ ಅವರ ಉದ್ದೇಶ ಒಂದೇ ಆಗಿತ್ತು ಎಂದು ಹೇಳಿದರು.

ಇನ್ನು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಕುಮಾರಸ್ವಾಮಿ ಬಗ್ಗೆ ವ್ಯಂಗ್ಯವಾಡಿದ ಪ್ರಧಾನಿ ಮೋದಿ, ಈ ಕಾಂಗ್ರೆಸ್ ಸರ್ಕಾರ 50 ವರ್ಷದಲ್ಲಿ ಮಾಡದ ಕೆಲಸವನ್ನು ನಾವು 55 ತಿಂಗಳಲ್ಲಿ ಮಾಡಿದ್ದೇವೆ. ಸಮ್ಮಿಶ್ರ ಸರ್ಕಾರ ನಿಶ್ಶಕ್ತಿಯಿಂದ ಕೂಡಿದೆ. ಇಲ್ಲಿನ ಸರ್ಕಾರಕ್ಕೆ ಶಕ್ತಿಯೇ ಇಲ್ಲ. ಇಲ್ಲಿನ ಸರ್ಕಾರದ ರಾಜಕಾರಣಿಗಳು ತಮ್ಮ ಕುರ್ಚಿ ಕಾಪಾಡಿಕೊಳ್ಳಲು ಹೆಣಗಾಡುತ್ತಿರುತ್ತಾರೆ.

ರೆಸಾರ್ಟ್‌ನಲ್ಲಿ ತಲೆ ಒಡೆದುಹೋಗುವ ಹಾಗೇ ಜಗಳವಾಡುತ್ತಾರೆ. ಮತ್ತೆ ಇಲ್ಲಿನ ಸಿಎಂ ಎಲ್ಲರ ಪಂಚಿಂಗ್ ಬ್ಯಾಗ್ ಆಗಿದ್ದಾರೆ. ಹಗಲು-ರಾತ್ರಿ ಕಾಂಗ್ರೆಸ್ ಸರ್ಕಾರದ ಒತ್ತಡ ಸಹಿಸಿಕೊಳ್ಳಲಾಗದೇ, ಹೋದ ಹೋದಲ್ಲಿ ಕಣ್ಣೀರು ಹಾಕುತ್ತಾರೆ. ಇಷ್ಟು ನಿಶ್ಶಕ್ತ ಸಿಎಂನಿಂದ ರಾಜ್ಯ ಉದ್ಧಾರವಾಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.

ಆದರೆ ಇಷ್ಟೆಲ್ಲ ಮಾತನಾಡಿದ ಪ್ರಧಾನಿ ಮೋದಿ ಮಹಾದಾಯಿ ಸಮಸ್ಯೆ ಬಗ್ಗೆ ತುಟಿ ಬಿಚ್ಚದೇ, ಉತ್ತರಕರ್ನಾಟಕ ಜನಕ್ಕೆ ನಿರಾಸೆ ಮೂಡಿಸಿದ್ದಾರೆ. ಈ ಮೂಲಕ ಮೋದಿ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದ ಜನರ ಆಕ್ರೋಶಕ್ಕೆ ಮೋದಿ ಕಾರಣರಾಗಿದ್ದಂತೂ ನಿಜ.