Top

'ಮದಕರಿ' ಕದನಕ್ಕೆ ಬಿತ್ತು ಬ್ರೇಕ್- ಚಿತ್ರದಿಂದ ದೂರಸರಿದ ಸುದೀಪ್

ಮದಕರಿ ಕದನಕ್ಕೆ ಬಿತ್ತು ಬ್ರೇಕ್- ಚಿತ್ರದಿಂದ ದೂರಸರಿದ ಸುದೀಪ್
X

ಮದಕರಿ ನಾಯಕ. ಮದಕರಿ ನಾಯಕ. ಮದಕರಿ ನಾಯಕ. ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಚರ್ಚೆ ಹುಟ್ಟಾಕಿದ್ದ ಸಿನಿಮಾ. ಚಿತ್ರದುರ್ಗದ ವೀರ ಪಾಳೇಗಾರ ಮದಕರಿ ನಾಯಕನ ಚರಿತ್ರೆ, ಕೇಳುಗರಲ್ಲಿ ರೋಮಾಂಚನ ಹುಟ್ಟಿಸುತ್ತದೆ. ಅಂತಹ ಮಹಾನ್ ನಾಯಕನ ಸಾಹಸಗಾಥೆ ಒಳ್ಳೆ ಸಿನಿಮಾ ಸರಕು ಅನ್ನೋದು ಎಲ್ಲರಿಗೂ ಗೊತ್ತಿದೆ. ಅದೇ ಕಾರಣಕ್ಕೆ ಮದಕರಿ ನಾಯಕನಾಗಿ ಬಣ್ಣ ಹಚ್ಚೋಕೆ ನಾನಾ, ನೀನಾ..? ಅಂತ ಸುದೀಪ್ ಮತ್ತು ದರ್ಶನ್ ನಡುವೆ ಟಫ್​​​ ಫೈಟ್​​ ಏರ್ಪಟ್ಟಿತ್ತು. ಆದ್ರೆ, ಕಾಲ ಎಲ್ಲವನ್ನ ಬದಲಾಯಿಸಿಬಿಟ್ಟಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ರೂ ಮದಕರಿ ನಾಯಕರ ಚಿತ್ರವನ್ನ ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ರು. ಒಂದ್ಕಡೆ ಸುದೀಪ್ ತಾವೇ ಈ ಸಿನಿಮಾ ನಿರ್ಮಿಸಿ, ನಿರ್ದೇಶಿಸಿ, ನಟಿಸೋಕೆ ಮುಂದಾಗಿದ್ರು. ಮತ್ತೊಂದ್ಕಡೆ ನಿರ್ಮಾಪಕ ಧೀರ ರಾಕ್​ಲೈನ್ ವೆಂಕಟೇಶ್​, ದರ್ಶನ್​ನ ಹೀರೋ ಮಾಡಿ ಮದಕರಿ ನಾಯಕರ ಸಿನಿಮಾ ಮಾಡೋಕೆ ಸಿದ್ಧತೆ ನಡೆಸಿದ್ದಾರೆ. ಸುದೀಪ್​​ ಮತ್ತು ದರ್ಶನ್ ನಡುವೆ ವೈಮನಸ್ಸು ಉಂಟಾಗಿರೋದ್ರಿಂದ ಈ ಜಟಾಪಟಿ ನಿಲ್ಲೋದೇ ಇಲ್ಲ, ಯಾರೊಬ್ಬರು ಈ ಸಿನಿಮಾದಿಂದ ಹಿಂದೆ ಸರಿಯಲ್ಲ. ಮದಕರಿ ನಾಯಕನ ಕುರಿತು ಎರಡೆರಡು ಸಿನಿಮಾ ಬರೋದು ಪಕ್ಕಾ ಅಂದುಕೊಂಡಿದ್ರು.

ಯುದ್ಧಕ್ಕೂ ಮುನ್ನ ಶಸ್ತ್ರ ತ್ಯಾಗ ಮಾಡಿದ್ದೇಕೆ ಬಾದ್​​ ಶಾ..?!

ಕುಚಿಕು ಗೆಳೆಯ ದಚ್ಚುಗೆ ಮದಕರಿ ಚಿತ್ರ ಬಿಟ್ಟುಕೊಟ್ಟಿದ್ಯಾಕೆ..?

ಇದು ಲೇಟೆಸ್ಟ್ ಸಮಾಚಾರ. ಅಂದು ಮದಕರಿ ನಾಯಕನ ಕುರಿತು ಸಿನಿಮಾ ಮಾಡೋಕೆ ಕಿಚ್ಚ- ದಚ್ಚು ಇಬ್ಬರ ನಡುವೆ ಜಟಾಪಟಿ ಶುರುವಾಗಿದ್ದು ನಿಜ. ಆದ್ರೀಗ ಸುದೀಪ್​, ಆ ಸಿನಿಮಾ ಮಾಡದೇ ಇರೋದಕ್ಕೆ ನಿರ್ಧರಿಸಿದ್ದಾರಂತೆ. ಒಂದೇ ಚಿತ್ರರಂಗದಲ್ಲಿರೋ ಎಲ್ಲರೂ ಸ್ನೇಹಿತರಂತೆ ಇರಬೇಕು. ಮದಕರಿ ನಾಯಕ ಸಿನಿಮಾ ವಿಚಾರದಲ್ಲಿ ಕಿತ್ತಾಟ ಯಾಕೆ ಅನ್ನೋ ಲೆಕ್ಕಾಚಾರಕ್ಕೆ ಬಂದಿದ್ದಾರೆ ಅಭಿನಯ ಚಕ್ರವರ್ತಿ. ಅಲ್ಲಿಗೆ ಮದಕರಿ ಕದನಕ್ಕೆ ಬ್ರೇಕ್​ ಬಿದ್ದಂತಾಗಿದೆ.

ರಾಕ್​ಲೈನ್​ ವೆಂಕಟೇಶ್​​, ಮದಕರಿ ನಾಯಕ ಸಿನಿಮಾ ಅನೌನ್ಸ್ ಮಾಡಿದ್ದಾಗ ಎಲ್ಲರೂ ಖುಷಿಯಾಗಿದ್ರು. ಆ ಸಿನಿಮಾದಲ್ಲಿ ದರ್ಶನ್ ನಾಯಕ ಅನ್ನೋ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ಲಾಗಿದ್ರು. ಆಗಲೇ ನೋಡಿ ಕಿಚ್ಚ ಸುದೀಪ್​, ಕೂಡ ತೆರೆಮರೆಯಲ್ಲಿ ಮದಕರಿ ನಾಯಕ ಸಿನಿಮಾಗಾಗಿ ಕಸರತ್ತು ನಡೆಸ್ತಾ ಇದ್ದಿದ್ದು ಗೊತ್ತಾಗಿದ್ದು. ಆಗ ಶುರುವಾಯ್ತು ನೋಡಿ ಕಿಚ್ಚ- ದಚ್ಚು ಮಧ್ಯೆ ಮದಕರಿ ಕಾಳಗ.

‘ನಾನೂ ಮದಕರಿ.. ಸಿನಿಮಾ ಮಾಡಿ ಮಡಿಯುವುದೇ ಮೇಲು..!

ಮದಕರಿ ನಾಯಕ ಸಿನಿಮಾ ಮಾಡೋದು ಪಕ್ಕಾ ಅಂದಿದ್ದ ಕಿಚ್ಚ..!

ಸುದೀಪ್​ ಪ್ರತಿಭೆ, ಸಾಮರ್ಥ್ಯ ಎಂತದ್ದು ಅಂತ ಎಲ್ಲರಿಗೂ ಗೊತ್ತೇಯಿದೆ. ಒಂದ್ಕಾಲದಲ್ಲಿ ಐರೆನ್ ಲೆಗ್ ಅನ್ನಿಸಿಕೊಂಡಿದ್ದ ಕಿಚ್ಚ ಇಂದು ಹಾಲಿವುಡ್ ಸಿನಿಮಾದಲ್ಲಿ ನಟಿಸೋ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇಂತಿಪ್ಪ ಸುದೀಪ್ ‘ನಾನೂ ಮದಕರಿ. ಸಿನಿಮಾ ಮಾಡಿ ಮಡಿಯುವುದೇ ಮೇಲು..! ಅಂತ ಕಿಚ್ಚ ಟ್ವೀಟ್ ಮಾಡಿದ್ಮೇಲೆ ಅವರು ಸಿನಿಮಾದಿಂದ ಹಿಂದೆ ಸರಿಯೋ ಮಾತೇಯಿಲ್ಲ ಅಂದುಕೊಂಡಿದ್ರು. ಇದೇ ವಿಚಾರವಾಗಿ ಮಾಧ್ಯಮದವರು ಕೇಳಿದಾಗ ಅವರ ಸಿನಿಮಾ ಅವರು ಮಾಡಲಿ ನನ್ನ ಸಿನಿಮಾ ನಾನು ಮಾಡ್ತೀನಿ ಅಂದುಬಿಟ್ಟಿದ್ರು.

ಸದ್ದಿಲ್ಲದೇ ಶುರುವಾಗಿತ್ತು ದಚ್ಚು ಮದಕರಿ ನಾಯಕ ಸಿನಿಮಾ

ಶೀಘ್ರದಲ್ಲೇ ದುರ್ಗದ ಹುಲಿ ಪಾತ್ರದಲ್ಲಿ ಬಣ್ಣ ಹಚ್ತಾರೆ ದಚ್ಚು..!

ಕಿಚ್ಚನ ಮಾತಿಗೆ ದರ್ಶನ್​ ಆಗಲಿ, ರಾಕ್​ಲೈನ್ ವೆಂಕಟೇಶ್ ಆಗಲಿ ಪ್ರತಿಕ್ರಿಯಿಸೋ ಗೋಜಿಗೇ ಹೋಗಲಿಲ್ಲ. ಆದ್ರೆ, ತಂತ್ರಜ್ಞರು ಮತ್ತು ಕಲಾವಿದರನ್ನ ಚಿತ್ರಕ್ಕೆ ಆಯ್ಕೆ ಮಾಡಿಕೊಂಡು ತಾವು ಸಿನಿಮಾದಿಂದ ಹಿಂದೆ ಸರಿಯೋ ಮಾತೇ ಅಲ್ಲ, ಅನ್ನೋದನ್ನ ಸೂಚ್ಯವಾಗಿ ಹೇಳಿದ್ರು. ಸಂಗೀತದ ಜವಾಬ್ದಾರಿಯನ್ನ ಹಂಸಲೇಖ ಮತ್ತು ಸೆಟ್​ ಹಾಕೋ ಕೆಲಸವನ್ನ ಅರುಣ್​ ಸಾಗರ್​ಗೆ ವಹಿಸಿತ್ತು.

ಕಾರು ಅಪಘಾತದಲ್ಲಿ ದರ್ಶನ್​​ ಕೈಗೆ ಗಾಯವಾಗಿದ್ರಿಂದ ಮದಕರಿ ಸಿನಿಮಾ ಸೆಟ್ಟೇರೋದು ತಡವಾಗ್ತಿದೆ. ಆದ್ರೆ ಪ್ರೀಪ್ರೋಡಕ್ಷನ್ ವರ್ಕ್​ ಜೋರಾಗಿದೆ. ಇದರ ಬೆನ್ನಲೇ ಸುದೀಪ್​, ಮದಕರಿನಾಯಕ ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಅನ್ನೋದ ಸುದ್ದಿ ಬಂದಿದೆ. ರಾಕ್​ಲೈನ್​ ವೆಂಕಟೇಶ್​ ಅವರನ್ನ ಭೇಟಿ ಆದಾಗ ಈ ಕುರಿತು ಚರ್ಚಿಸಿದ್ದಾರಂತೆ..

ಅಷ್ಟಕ್ಕು ರಾಕ್​ಲೈನ್​ ವೆಂಕಟೇಶ್​ಗೆ ಕಿಚ್ಚ ಹೇಳಿದ್ದೇನು..?

‘ನೀವು ನಮ್ಮ ಕನ್ನಡ ಚಿತ್ರರಂಗದ ನಿರ್ಮಾಪಕರು. ದರ್ಶನ್‌ ಕೂಡ ನಮ್ಮ ಕನ್ನಡ ಚಿತ್ರರಂಗದ ಹೀರೋ. ಎಲ್ಲರೂ ಒಂದೇ. ನಾನೂ ನಿಮ್ಮವನೇ. ಆದರೆ, ಒಂದೇ ಹಿನ್ನೆಲೆಯ ಕತೆಗಾಗಿ ನಾವು ಮುನಿಸಿಕೊಳ್ಳುವುದು ಬೇಡ. ದರ್ಶನ್‌ ಬೇರೆ ಅಲ್ಲ, ನೀವು ಬೇರೆ ಅಲ್ಲ. ನಾವೆಲ್ಲ ಗೆಳೆಯರು. ಹೀಗಾಗಿ ನಾನೇ ದುರ್ಗದ ಹುಲಿ ಚಿತ್ರದಿಂದ ಹಿಂದೆ ಸರಿಯುತ್ತಿದ್ದೇನೆ. ಮುಂದೆ ಬೇರೆ ಐತಿಹಾಸಿಕ ಸಿನಿಮಾ ಕತೆ ಸಿಕ್ಕರೆ ಜತೆಯಾಗಿ ಸಿನಿಮಾ ಮಾಡೋಣ. ನೀವು ಖುಷಿಯಾಗಿ ವೀರ ಮದಕರಿ ನಾಯಕನ ಚಿತ್ರ ಮಾಡಿ’.

ಒಟ್ಟಾರೆ ಕುಚಿಕು ಗೆಳೆಯನಿಗಾಗಿ ತಮ್ಮ ಕನಸಿನ ಸಿನಿಮಾವನ್ನೇ ಸುದೀಪ್ ಬಿಟ್ಟುಕೊಟ್ಟಿದ್ದಾರೆ. ಸುದೀಪ್ ಹೇಳೋದು ನಿಜಕ್ಕೂ ಸರಿಯಾದ ಮಾತು. ಒಬ್ಬ ಐತಿಹಾಸಿಕ ನಾಯಕನ ಕುರಿತು ಎರಡೆರಡು ಸಿನಿಮಾ ಮಾಡೋದು ಸರಿಯಲ್ಲ. ಇದು ಆರೋಗ್ಯಕಾರಿ ಬೆಳವಣಿಗೆ ಕೂಡ ಅಲ್ಲ. ಅಭಿನಯ ಚಕ್ರವರ್ತಿ ನಿರ್ಧಾರಕ್ಕೆ ಎಲ್ಲರೂ ಜೈ ಅನ್ನಲೇಬೇಕು.

ತಮ್ಮಿಬ್ಬರ ನಡುವಿನ ವೈಮನಸ್ಸಿನ ಕುರಿತು ಸುದೀಪ್​, ಯಾವತ್ತೂ ನೇರವಾಗಿ ಮಾತನಾಡಿಲ್ಲ. ಪದೇ ಪದೇ ಕುಚಿಕು ಸ್ನೇಹಿತನ ಕಡೆ ಸ್ನೇಹ ಹಸ್ತ ಚಾಚುತ್ತಲೇ ಬರ್ತಿದ್ದಾರೆ. ಮದಕರಿ ನಾಯಕ ಸಿನಿಮಾ ವಿಚಾರದಲ್ಲೂ ಅದನ್ನೇ ಮಾಡಿದ್ದಾರೆ. ಗೆಳೆಯನಿಗಾಗಿ ಸಿನಿಮಾ ಬಿಟ್ಟುಕೊಟ್ಟಿದ್ದಾರೆ. ಆದಷ್ಟು ಬೇಗ ಇಬ್ಬರ ನಡುವಿನ ಮುನಿಸು ದೂರಾಗಲಿ. ಮತ್ತೆ ಸ್ನೇಹಿತರಾಗಿ ಒಟ್ಟಿಗೆ ಕಾಣಿಸಿಕೊಳ್ಳಲಿ ಅನ್ನೋದು ಅಭಿಮಾನಿಗಳ ಆಶಯ.

ನಾಣಿ, ಫಿಲ್ಮ್ ಬ್ಯೂರೋ, ಟಿವಿ5 ಕನ್ನಡ

Next Story

RELATED STORIES