‘ವೀಡಿಯೋ ಮಾಡ್ತಿಯಾ ಮಾಡೋ, ನಾನು ನೋಡ್ತೀನಿ’

ಬೆಂಗಳೂರು: ಟ್ರಾಫಿಕ್ ರೂಲ್ಸ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಪೊಲೀಸ್ ದರ್ಪ ಮೆರೆದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಯುವಕನೊಬ್ಬ ಪೊಲೀಸ್ ಪೇದೆಗೆ ಟ್ರಾಫಿಕ್ ರೂಲ್ಸ್ ಬಗ್ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ನಂಬರ್ ಪ್ಲೇಟ್ ಸರಿಯಿಲ್ಲವೆಂದು ಟ್ರಾಫಿಕ್ ಪೊಲೀಸ್ 300 ರೂಪಾಯಿ ಫೈನ್ ಹಾಕಿದ್ದು, ಫೈನ್ ಕಟ್ಟಿದ ಯುವಕ ಪೊಲೀಸರ ಬೈಕ್ ಗಮನಿಸಿದ್ದಾನೆ. ಪೊಲೀಸ್ ಬೈಕ್ ನಂಬರ್ ಪ್ಲೇಟ್ ಸರಿ ಇಲ್ಲದ್ದನ್ನ ಪ್ರಶ್ನಿಸಿದ ಯುವಕನಿಗೆ, ಸ್ವಲ್ಪ ಕಿತ್ತೋಗಿದೆ. ಹಾಕೋತಾರೆ ಅಂತ ಪೊಲೀಸಪ್ಪ ಉಡಾಫೆಯಿಂದ ತಮ್ಮ ತಪ್ಪನ್ನ ಸಮರ್ಥಿಸಿಕೊಂಡಿದ್ದಾರೆ.

ಈ ವೇಳೆ ಆಕ್ರೋಶಗೊಂಡ ಯುವಕ ನಮ್ಮತ್ರ ಫೈನ್ ಕಟ್ಟಿಸ್ತೀರಾ ನೀವೇ ಕಾನೂನು ಉಲ್ಲಂಘಿಸ್ತೀರಾ, ನಿಮ್ಮ ಸಿಬ್ಬಂದಿ ಕಾನೂನು ಉಲ್ಲಂಘಿಸಿದ್ರೆ ನೀವು ಕೇಳಬೇಕಲ್ವಾ..?ಎಂದು ಪ್ರಶ್ನಿಸಿದ್ದಾನೆ.

ಅಲ್ಲದೇ ಘಟನೆ ವೀಡಿಯೋ ಮಾಡಲು ಮುಂದಾದಾಗ, ಕೋಪಗೊಂಡ ಪೊಲೀಸಪ್ಪ, ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲದೇ ವೀಡಿಯೋ ಮಾಡ್ತಿಯಾ ಮಾಡೋ, ನಾನು ನೋಡ್ತೀನಿ ಎಂದು ಏಕವಚನದಲ್ಲಿ ಆವಾಜ್ ಹಾಕಿದ್ದಾರೆ.

ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪೊಲೀಸರ ವರ್ತನೆಗೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.