ರಾಜಕೀಯ, ಚಿತ್ರರಂಗ ಎರಡರಲ್ಲೂ ಇರುತ್ತೇನೆ- ನಿಖಿಲ್ ಕುಮಾರ್

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಮಂಡ್ಯದಿಂದ ಸ್ಪರ್ಧೆ ಮಾಡುವ ಆಸೆ ಬಗ್ಗೆ ಪರೋಕ್ಷವಾಗಿ ಗುಟ್ಟು ಬಿಚ್ಚಿಟ್ಟಿದ್ದಾರೆ.

ಮಂಡ್ಯದ ಕೆ.ಎಂ ದೊಡ್ಡಿಯಲ್ಲಿ ಮಾತನಾಡಿದ ನಿಖಿಲ್, ಮಂಡ್ಯದಿಂದ ಸ್ಪರ್ಧೆ ಮಾಡುವ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ. ನನ್ನ ಚಿತ್ರ ಸೀತಾರಾಮ ಕಲ್ಯಾಣ ಜನವರಿ 25ರಂದು ರಿಲೀಸ್ ಇದೆ. ಹೀಗಾಗಿ ಪ್ರಮೋಷನ್‌ಗೆ ಬಂದಿದ್ದೇನೆ. ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಭೇಟಿ ಮಾಡಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದ್ದಾರೆ. ಈ ಬಗ್ಗೆ ವರಿಷ್ಠರು, ರಾಜ್ಯಾಧ್ಯಕ್ಷರು, ಪಕ್ಷದ ಮುಖಂಡರು ತೀರ್ಮಾನ ಮಾಡಬೇಕು ಎಂದು ಹೇಳಿದ್ದಾರೆ.

ಅಲ್ಲದೇ ಇದು ನನ್ನ ತೀರ್ಮಾನ ಅಲ್ಲ. ಪಕ್ಷದ ತೀರ್ಮಾನ. ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ರಾಜಕೀಯಕ್ಕೆ ಬಂದರೆ ಚಿತ್ರರಂಗ, ರಾಜಕೀಯ ಎರಡರಲ್ಲೂ ಇರುತ್ತೇನೆ. ಮುಖ್ಯಮಂತ್ರಿ ಮಗನಾಗಿ ನನಗೆ ಜವಾಬ್ದಾರಿ ಇದೆ ಎಂದಿದ್ದಾರೆ.

ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತನಾಡಿದ ನಿಖಿಲ್, ಗಂಡ ಹೆಂಡತಿಯ ನಡುವೆಯೇ ಅಪಸ್ವರ ಇರುತ್ತೆ. ಆದ್ರೆ ಸಮ್ಮಿಶ್ರ ಸರ್ಕಾರ 5 ವರ್ಷ ಇರುತ್ತೆ. ಜನಗಳಿಗಾಗಿ ಸರ್ಕಾರ ಇರಬೇಕು. ರೈತರಿಗಾಗಿ ನಮ್ಮ ಸರ್ಕಾರ ಕೆಲಸ ಮಾಡಲಿದೆ.

ನನ್ನನ್ನು ಅಭ್ಯರ್ಥಿ ಆಗಿ ಆಯ್ಕೆ ಮಾಡೋದೆ ಆದ್ರೆ ನನ್ನ ಮೇಲೆ ಜವಾಬ್ದಾರಿ ಇದೆ. ಆದ್ರೆ ನಾನು ರಾಜಕೀಯವಾಗಿ ರಾಜ್ಯಾದ್ಯಂತ ಓಡಾಡುತ್ತೇನೆ. ರಾಜ್ಯದಲ್ಲಿ ಪಕ್ಷ ಕಟ್ಟಲು ನಾನು ಕೆಲಸ ಮಾಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯ ಗೌರವಿಸುತ್ತೇನೆ ಎಂದಿದ್ದಾರೆ.