ಮೋದಿ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು: ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ನರೇಂದ್ರ ಮೋದಿ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು, ಅವರ ಸ್ಥಾನಕ್ಕೆ‌ ಘನತೆ ಬರಬೇಕು ಅಂದರೆ ಸರಿಯಾಗಿ ನಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಜವಾಬ್ದಾರಿಯುತವಾಗಿ ಪ್ರಧಾನಿ ನಡೆದುಕೊಳ್ಳಬೇಕು

ಘಟ ಬಂಧನ ಕಳ್ಳರ ಸಂತೆ ಎಂಬ ಮೋದಿ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮೋದಿ ಅವರ ತೂಕಕ್ಕೆ ಸರಿಯಾಗಿ ಮಾತನಾಡಬೇಕು. ಎನ್ ಡಿಎ ಯಾವುದು, ಅದೂ ಘಟ ಬಂಧನ್ ಅಲ್ಲವೇ, ಯುಪಿಎ ಕೂಡ ಘಟಬಂಧನವೇ, ರಫೇಲ್ ವಿಚಾರದಲ್ಲಿ ಯಾಕೆ ಚರ್ಚೆಗೆ ಬರುತ್ತಿಲ್ಲ, ಜವಾಬ್ದಾರಿಯುತವಾಗಿ ಪ್ರಧಾನಿ ನಡೆದುಕೊಳ್ಳಬೇಕು ಎಂದು  ಪ್ರಧಾನಿ ಮೋದಿಯವರ ಹೇಳಿಕೆಯನ್ನು ಮಲ್ಲಿಕಾರ್ಜುನ್ ಖರ್ಗೆ ವಿರೋಧಿಸಿದರು.

ಕುಮಾರಸ್ವಾಮಿ ಕ್ಲಕ್ ರೀತಿ ಕಾಂಗ್ರೆಸ್ ನಡೆಸಿಕೊಳ್ಳುತ್ತದೆ ಎಂಬ ಪ್ರಧಾನಿ ಆರೋಪ, ಅವರ ಪಾರ್ಟಿಯಲ್ಲಿ ಯಾರೂ ಹೇಳೋರಿಲ್ಲ, ಕೇಳೋರಿಲ್ಲ, ಇಂತವರ ಅಡ್ವೈಜ್ ಅನ್ನು ನಾವು ತೆಗೆದುಕೊಳ್ತೇವಾ, ಕ್ಯಾಬಿನೆಟ್ ನಲ್ಲಿ ಅವರ ಪಕ್ಷದವರ ಮಾತನ್ನೇ ಅವರು ಕೇಳಲ್ಲ ಸುಮ್ಮನೆ ಆರೋಪ ಮಾಡುವುದಕ್ಕೇನು ಪ್ರಧಾನಿಗೇ ಎಂದು ತಿರುಗೇಟನ್ನು ಮಲ್ಲಿಕಾರ್ಜುನ ಖರ್ಗೆ ನೀಡಿದರು.

ಸಂಕ್ರಾಂತಿಗೆ ಕ್ರಾಂತಿಯೇನು ಆಗಲ್ಲ

ಬಿಜೆಪಿ ಸಂಕ್ರಾಂತಿ ಡೆಡ್ ಲೈನ್ ವಿಚಾರವಾಗಿ ಮಾತನಾಡಿದ ಅವರು, ಪಾಪ ಅವರು ಪ್ರತಿ ಸಲ ಇದನ್ನೇ ಹೇಳ್ತಾ ಹೋಗ್ತಿದ್ದಾರೆ, ಹೀಗೆ ಹೇಳಿ ನಾಲ್ಕೈ ದು ತಿಂಗಳೇ ಆಗಿದೆ ಸಂಕ್ರಾಂತಿಗೆ ಕ್ರಾಂತಿಯೇನು ಆಗಲ್ಲ, ಬಿಜೆಪಿಯವರು ಸಂಕ್ರಾಂತಿ ಹಬ್ಬ ಮಾಡ್ತಾರೆ ಅವರ ಮನೆಯಲ್ಲಿ ಹಬ್ಬ ಮಾಡಬಹುದು, ಯಾರೂ ಕಾಂಗ್ರೆಸ್ ಬಿಟ್ಟು ಹೋಗಲ್ಲ, ತತ್ವ,ನೀತಿಗೆ ಅನುಗುಣವಾಗಿ ಸರ್ಕಾರ ನಡೆಯುತ್ತಿದೆ. ಸ್ವಲ್ಪ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ವಿರಬಹುದು. ಅದೆಲ್ಲವನ್ನೂ ನಾಯಕರು ಸಮಾಧಾನ ಮಾಡ್ತಾರೆ. ಅವರ ಪಕ್ಷದಲ್ಲೇ ಭಿನ್ನಾಭಿಪ್ರಾಯಗಳಿವೆ. ಮೊದಲು ಅವರು ಅದನ್ನು ಸರಿಪಡಿಸಿಕೊಳ್ಳಲಿ ಎಂದು ಬಿಜೆಪಿ ನಾಯಕರಿಗೆ  ಮಲ್ಲಿಕಾರ್ಜುನ ಖರ್ಗೆ ಟಾಂಗ್ ಕೊಟ್ಟರು.