ನಮ್ಮ ಮೆಟ್ರೋ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನ

ಬೆಂಗಳೂರು: ನಮ್ಮ ಮೆಟ್ರೋ ಹಳಿಗೆ ಬಿದ್ದು ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೆಟ್ರೋ ಸ್ಟೇಶನ್ ಬಳಿ ನಡೆದಿದ್ದು, ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆ ಹಿನ್ನೆಲೆ ಹಸಿರು ಮಾರ್ಗದ(ಯಲಚೇನಹಳ್ಳಿ ) ಮೆಟ್ರೋ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಸಾವಿರಾರು ಪ್ರಯಾಣಿಕರು ಪರದಾಡಿದ್ದು, ಪುನಃ ಮೆಟ್ರೋ ಸಂಚಾರ ಪ್ರಾರಂಭಿಸಲಾಯ್ತು.

ಆತ್ಮಹತ್ಯೆಗೆ ಯತ್ನಿಸಿದ ಯುವಕ ವೇಣು(25) ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೆಟ್ರೋ ಎಂಡಿ ಅಜಯ್ ಸೇಠ್, ಆತ ಯಾರೋ ಗೊತ್ತಿಲ್ಲ, ಧಿಡೀರನೆ ಟ್ರಾಕ್ ಮೇಲೆ ನೆಗೆದಿದ್ದಾನೆ. ಘಟನೆಯಾದ ಕೂಡಲೇ ಪವರ್ ಸಪ್ಲೈ ನಿಲ್ಲಿಸಿದ್ದೇವೆ. ಆತ ಸೇಫ್ಟಿಲೈನ್ ಮೀರಿ ಹೋಗಿದ್ದ . ಅದೃಷ್ಟವಶಾತ್ ಬದುಕಿದ್ದಾನೆ, ಕೂಡಲೇ ನಿಮ್ಹಾನ್ಸ್ ಶಿಫ್ಟ್ ಮಾಡಿದ್ದೀವಿ, ಚಿಕಿತ್ಸೆ ಕೊಡಲಾಗ್ತಿದೆ ಎಂದರು.

ಅಲ್ಲದೇ ಸುಮಾರು 45 ನಿಮಿಷಗಳ ಕಾಲ ಮೆಟ್ರೋ ನಿಲ್ಲಿಸಿದ್ದೇವೆ. ಸದ್ಯ ಪ್ರಜ್ಞೆ ಬಂದಿದೆ, ಹಳಿ ಮಧ್ಯಕ್ಕೆ ಸಿಲುಕಿರೋದ್ರಿಂದ ಪ್ರಾಣಾಪಾಯ ಸಂಭವಿಸಿಲ್ಲ. ತಲೆಗೆ ಗಂಭೀರ ಗಾಯವಾಗಿದೆ ಎಂದಿದ್ದಾರೆ.