ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪ್ರಕಾಶ್ ರೈ ಸ್ಪರ್ಧೆ..!

ಬೆಂಗಳೂರು: ನಟ ಪ್ರಕಾಶ್ ರೈ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಈ ಬಗ್ಗೆ ಮಾತನಾಡಿದ್ದು, ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ ಹೇಳಿದ್ದಾರೆ.

ಲೋಕಸಭೆಯಲ್ಲಿ ಜನಸಾಮಾನ್ಯರ ದನಿಯಾಗಬೇಕಿದೆ. ಈ ಉದ್ದೇಶದಿಂದ ನಾನು ರಾಜಕೀಯಕ್ಕೆ ಬರುತ್ತಿದ್ದೇನೆ, ಸ್ವತಂತ್ರ ಅಭ್ಯರ್ಥಿಯಾಗಿ ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಪಕ್ಷದ ಪ್ರಣಾಳಿಕೆ ಮತ್ತಿತರ ವಿಚಾರಗಳ ಬಗ್ಗೆ ಸದ್ಯದಲ್ಲೇ ಹೇಳುತ್ತೇನೆ ಎಂದಿದ್ದಾರೆ.

ಇನ್ನು ಮೋದಿ ಸರ್ಕಾರ ಮೇಲ್ವರ್ಗದ ಜನರಿಗೂ 10 ಪರ್ಸೆಂಟ್ ಮೀಸಲಾತಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರೈ, ನಮ್ಮ ದೇಶದಲ್ಲಿ ಇರುವುದೇ ಎರಡು ಜಾತಿ ಕಣ್ರೀ. ಒಂದು ಹಣ ಇರುವವರು, ಮತ್ತೊಂದು ಹಣವಿಲ್ಲದೇ ಇರುವವರು. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಟ್ಟರೆ ತಪ್ಪಿಲ್ಲ. ಆದರೆ ಇದೂ ಕೂಡಾ ಮೋದಿಯ ಸುಳ್ಳುಗಳಲ್ಲಿ ಒಂದಾಗಬಾರದು. ಪ್ರತಿಯೊಬ್ಬರ ಅಕೌಂಟ್‌ಗೆ ಹದಿನೈದು ಲಕ್ಷ ಬರುತ್ತೆ ಅಂದಿದ್ರು. ಅದೇ ರೀತಿ ಇದೂ ಕೂಡಾ ಸುಳ್ಳು ಆಗಬಾರದು ಎಂದರು.

ಇನ್ನು ಅರವಿಂದ್‌ ಕೇಜ್ರಿವಾಲ್‌ರನ್ನ ಭೇಟಿಯಾದ ಬಗ್ಗೆ ಮಾತನಾಡಿದ ರೈ, ನಾನು ಯಾರ ಬೆಂಬಲ ಕೂಡಾ ಕೇಳಲು ಹೋಗಿಲ್ಲ. ಆಮ್ ಆದ್ಮಿ ಕೂಡಾ ನನ್ನ ಬೆಂಬಲಕ್ಕೆ ಬರ್ತಿದೆ. ಅದೇ ರೀತಿ ತುಂಬಾ ಜನ ನನ್ನ ಬೆಂಬಲಕ್ಕೆ ಬರ್ತಿದಾರೆ. ಸದ್ಯಕ್ಕೆ ನನ್ನ ಸ್ಪರ್ಧೆ ವಿಚಾರ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಬಾಕಿ ಉಳಿದ ವಿಚಾರಗಳನ್ನು ಸದ್ಯದಲ್ಲೇ ಹೇಳುತ್ತೇನೆ. ಆರೆಳು ಲಕ್ಷ ಜನ ನಮಗೆ ಮತ ಹಾಕಿರುತ್ತಾರೆ. ಅವರ ದನಿಯಾಗಿ ನಾವು ಲೋಕಸಭೆಯಲ್ಲಿ ಮಾತನಾಡಬೇಕಿದೆ ಎಂದು ಹೇಳಿದ್ದಾರೆ.