1 ಲಕ್ಷ ಉದ್ಯೋಗ ಸೃಷ್ಟಿಗೆ ನಿರ್ಧಾರ: ಕುಮಾರಸ್ವಾಮಿ

ತೆಂಗಿನ ನಾರಿನ ಉದ್ದಿಮೆ ಸ್ಥಾಪನೆಗೆ ರಾಜ್ಯದಲ್ಲಿ ವಿಪುಲ ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಕನಿಷ್ಠ 1 ಲಕ್ಷ ಉದ್ಯೋಗ ಸೃಷ್ಟಿಗೆ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕರ್ನಾಟಕ ರಾಜ್ಯ ತೆಂಗಿನ ನಾರು ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ತೆಂಗಿನ ನಾರಿನ ಉದ್ಯಮಗಳ ಪುನಶ್ಚೇತನ ಕುರಿತಂತೆ ಚರ್ಚಿಸಲು ಮುಖ್ಯಮಮತ್ರಿ ಕುಮಾರಸ್ವಾಮಿ ಸಭೆ ಕರೆದಿದ್ದರು. ಸಭೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ತೆಂಗು ಉತ್ಪಾದನೆಯಲ್ಲಿ ರಾಜ್ಯ ಶೇ. 29 ರಷ್ಟು ಉತ್ಪಾದನೆಯೊಂದಿಗೆ ಎರಡನೇ ಸ್ಥಾನದಲ್ಲಿದೆ.

ತೆಂಗಿನ ನಾರಿನ ಉತ್ಪನ್ನಗಳಲ್ಲಿ ರಾಜ್ಯದ ಪಾಲು ಶೇ. 10 ರಷ್ಟು ಮಾತ್ರ. ರಾಜ್ಯದಲ್ಲಿ ಅತ್ಯುತ್ತಮ ಗುಣಮಟ್ಟದ ತೆಂಗಿನನಾರು ಹೇರಳವಾಗಿ ಲಭ್ಯವಿರುವುದರಿಂದ ತೆಂಗಿನ ನಾರಿನ ಉದ್ಯಮಗಳ ಸ್ಥಾಪನೆಗೆ ಉತ್ತೇಜನ ನೀಡಲು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದರು.

ತೆಂಗಿನ ನಾರಿನ ಉತ್ಪನ್ನಗಳ ತಯಾರಿಕಾ ಘಟಕಗಳ ಸ್ಥಾಪನೆಗೆ ಪೂರಕ ವಾತಾವರಣ, ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮೊದಲಾದ ಅಂಶಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದರು.