ಒಡೆದ ಮನಸ್ಸಿನಿಂದ ಫ್ಯಾನ್ಸ್​ಗೆ ಖಡಕ್ ಕಿವಿಮಾತು ಹೇಳಿದ ಯಶ್

ಭಾವನೆಗಳಿಗೆ ಒಳಗಾಗ್ಬೇಡ. ಇಲ್ಲಿ ಅದಕ್ಕೆ ಬೆಲೆ ಇಲ್ಲ. ಇದು ಕೆಜಿಎಫ್ ಚಿತ್ರದ ಎಮೋಷನಲ್ ಡೈಲಾಗ್. ಚಿತ್ರದಲ್ಲಿ ಹಿರಿಯ ನಟ ಬಿ ಸುರೇಶ್ ನಾಯಕನಟ ಯಶ್​ಗೆ ಹೇಳೋ ಮಾತಿದು. ಎದೆಯಲ್ಲಿ ಕಲ್ಲು ಇದ್ದೋನಿಗೆ ಅದೆಲ್ಲಾ ಅಂಟೋದೂ ಇಲ್ಲ, ಅಂತ ಯಶ್ ಕೂಡ ಅದಕ್ಕೆ ತಕ್ಕ ಉತ್ತರ ಕೊಡ್ತಾರೆ. ಆದ್ರೆ ಅದು ಸಿನಿಮಾ. ಸಿನಿಮಾನೇ ಬೇರೆ, ನಿಜ ಜೀವನವೇ ಬೇರೆ. ಸದ್ಯ ಯಶ್ ಪರಿಸ್ಥಿತಿ ಸಹ ಅದೇ ರೀತಿ ಆಗಿದೆ.

ಫ್ಯಾನ್ಸ್​ ಬಳಿ ಬರ್ತ್​ ಡೇ ಬೇಡ ಅಂದಿದ್ದ ರಾಕಿ ಭಾಯ್
ಆದ್ರೂ ಯಶ್ ನಿವಾಸದ ಬಳಿ ಅಭಿಮಾನಿ ವೃಂದ ಹಾಜರ್
ಭಾವನೆಗಳಿಗೆ ಒಳಗಾಗಬಾರದು ಅಂತ ಯಶ್ ಎಷ್ಟೇ ದೃಢ ನಿರ್ಧಾರ ತೆಗೆದುಕೊಂಡ್ರೂ, ವಿಧಿ ಮಾತ್ರ ಅವ್ರನ್ನ ಬೆಂಬಿಡದೆ ಕಾಡ್ತಿದೆ. ಅದಕ್ಕೆ ಯಶ್ ಅಭಿಮಾನಿ ರವಿಯ ಆತ್ಮಹತ್ಯೆ ಪ್ರಕರಣ ಲೇಟೆಸ್ಟ್ ಎಕ್ಸಾಂಪಲ್. ಯಶ್ ಈ ಹಿಂದೆಯೇ ಕುಟುಂಬದ ಹಿರಿಯರಾದ ಅಂಬರಿಶ್ ಅವ್ರು ನಮ್ಮ ಜೊತೆಗಿಲ್ಲ. ಹಾಗಾಗಿ ಈ ವರ್ಷದ ಬರ್ತ್​ ಡೇ ಸೆಲೆಬ್ರೇಟ್ ಮಾಡೋದು ಸಮಂಜಸವಲ್ಲ. ಹಾಗಾಗಿ ಫ್ಯಾನ್ಸ್ ಸಹಕರಿಸಬೇಕು ಅಂತ ಬಹಿರಂಗವಾಗಿ ಹೇಳಿದ್ರು.

ಇದರ ಹೊರತಾಗಿಯೂ ಸಹ ಅಭಿಮಾನಿಗಳು ಕತ್ರಿಗುಪ್ಪೆಯಲ್ಲಿರೋ ಯಶ್ ನಿವಾಸದ ಮುಂದೆ ದೊಡ್ಡ ಪ್ರಮಾಣದಲ್ಲಿ ಹಾಜರಾಗಿದ್ರು. ತಮ್ಮ ನೆಚ್ಚಿನ ನಾಯಕನಟನನ್ನ ಕಾಣಲು ಹಾಗೂ ಶುಭಾಶಯ ಕೋರಲು ಮುಂದಾಗಿದ್ರು. ಆದ್ರೆ ಮೊದ್ಲೇ ಫ್ಯಾನ್ಸ್​ಗೆ ಮನವಿ ಮಾಡಿದಂತೆ ಯಶ್ ಬರ್ತ್​ ಡೇ ಆಚರಿಸಿಲ್ಲ. ಅಷ್ಟೇ ಅಲ್ಲ, ಮನೆಯಲ್ಲೂ ಇರಲಿಲ್ಲ. ಆದ್ರೆ ಅಭಿಮಾನಿಗಳ ಅಂಧಾಭಿಮಾನಕ್ಕೆ ಕಟ್ಟಾಭಿಮಾನಿಯ ಪ್ರಾಣಪಕ್ಷಿ ಹಾರಿಯೇ ಹೋಯ್ತು.

ಯಶ್ ಕಾಣದಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡ ಅಭಿಮಾನಿ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು- ಬದುಕಿನ ಹೋರಾಟ
ನಿನ್ನೆಯಿದ್ದ ರವಿ ಇಂದು ರವಿ ಮೂಡುವ ಮುನ್ನವೇ ಚಿರನಿದ್ರೆ..!
ರವಿ ಅನ್ನೋ ಯಶ್ ಅಭಿಮಾನಿ, ಯಶ್ ಬರ್ತ್​ ಡೇ ಆಚರಿಸಿಲ್ಲ ಅಂತ ತಮ್ಮ ನೆಚ್ಚಿನ ನಟನ ನಿವಾಸದ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಯಶ್ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದು, ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ ರವಿ, ಶೇಕಡಾ 80ರಷ್ಟು ಜೀವಂತವಾಗಿ ಸುಟ್ಟಿದ್ದರು. ನಂತ್ರ ಸಾವು- ಬದುಕಿನ ನಡುವೆ ಐಸಿಯುನಲ್ಲಿ ಹೋರಾಟ ಮಾಡ್ತಿದ್ದ ರವಿ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ಇಹಲೋಕ ತ್ಯಜಿಸಿದ್ದಾನೆ.

ಅಂದಹಾಗೆ ಯಶ್ ಅಭಿಮಾನಿ ರವಿ, ಗಾರೆ ಕೆಲಸ ಹಾಗೂ ಫಿಲ್ಮ್ ಪೋಸ್ಟರ್​ಗಳನ್ನ ಅಂಟಿಸೋ ಕೆಲಸ ಮಾಡ್ತಿದ್ದ ಕಡುಬಡತನ ಕುಟುಂಬದ ಕುಡಿ. ಅಮ್ಮ ಗಾರ್ಮೆಂಟ್ಸ್ ಕೆಲಸಕ್ಕೆ ಹೋದ್ರೆ, ಮಗ ಕೂಡ ದಿನಗೂಲಿ ಮಾಡಿ ಜೀವನ ಸಾಗಿಸ್ತಿದ್ದ ಕುಟುಂಬವದು. ಯಶ್ ಮೇಲಿನ ಅಭಿಮಾನಕ್ಕೆ ಕೆಜಿಎಫ್ ಸಿನಿಮಾ ತೋರಿಸ್ತೀನಿ ಅಂತ ಅಮ್ಮ-ಅಪ್ಪನಿಗೂ ಟಿಕೆಟ್ ತಂದಿದ್ದ ರವಿ, ನಂತ್ರ ಅಪ್ಪನ ಸೂಚನೆಯಂತೆ ಫ್ರೆಂಡ್ಸ್ ಜೊತೆ ಕೆಜಿಎಫ್ ವೀಕ್ಷಿಸಿದ್ದನು. ಆದ್ರೀಗ ಯಶ್ ಜನುಮ ದಿನಕ್ಕೆ ಶುಭ ಕೋರಿ ಬರೋದಾಗಿ ಹೇಳಿ ಹೋದ ಮಗ ಹೀಗಾಗಿದ್ದಾನೆ ಅಂತ ಅವ್ರ ತಂದೆ ಗೋಳಿಟ್ಟರು.

ಎಚ್ಚರಿಕೆ.. ! ಎಚ್ಚರಿಕೆ..! ಅತಿರೇಕದ ಅಭಿಮಾನ ಸಾವಿಗೆ ಸಂಚಕಾರ
ಅಭಿಮಾನಿಗಳ ಅವಾಂತರಕ್ಕೆ ರಾಕಿ ಭಾಯ್ ಭಾವುಕ ನುಡಿನಮನ
ಒಡೆದ ಮನಸ್ಸಿನಿಂದ ಫ್ಯಾನ್ಸ್​ಗೆ ಖಡಕ್ ಕಿವಿಮಾತು ಹೇಳಿದ ಯಶ್
ಯೆಸ್.. ಅಭಿಮಾನ ಅತಿರೇಕಕ್ಕೇರಿದರೆ ಏನೆಲ್ಲಾ ಆಗುತ್ತೆ ಅನ್ನೋದನ್ನ ನೀವೇ ನೋಡಿದ್ರಿ ಅಲ್ವಾ. ಇದು ಬರೀ ಯಶ್ ಅಭಿಮಾನಿಯಷ್ಟೇ ಅಲ್ಲ, ಯಾವ ಸ್ಟಾರ್ ನಟರ ಅಭಿಮಾನಿಯೇ ಆಗಿರಲಿ, ಈ ರೀತಿ ಮಾಡಿಕೊಳ್ಳೋದು ಎಷ್ಟು ಸರಿ..? ಆ ಸ್ಟಾರ್ ನಟ, ಈ ರೀತಿಯ ಅಭಿಮಾನವನ್ನ ಮೆಚ್ಚುತ್ತಾರೆಯೇ..? ಖಂಡಿತಾ ಇಲ್ಲ. ಯಶ್ ಕೂಡ ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ತೆರಳಿ ರವಿಯನ್ನ ಮಾತನಾಡಿಸಿದ್ದಾರೆ. ನಿನಗೇನೂ ಆಗಲ್ಲ ಅನ್ನೋ ಆತ್ಮಸ್ಥೈರ್ಯ ತುಂಬಿದ್ರು.

ಇದೇ ಸಂದರ್ಭದಲ್ಲಿ ಮಾತನಾಡಿದ ಯಶ್, ನಿಜವಾದ ಅಭಿಮಾನಿಗಳು ಈ ರೀತಿ ಮಾಡಲ್ಲ. ನೀವು ಯಶ್ ಅಭಿಮಾನಿ ಆಗಿದ್ರೆ ಮೊದಲು ನಿಮ್ಮ ತಂದೆ- ತಾಯಿಯನ್ನ ಚೆನ್ನಾಗಿ ನೋಡ್ಕೊಳಿ. ನನ್ನ ಮನಸ್ಸು ಕಲ್ಲು ಅಂದ್ಕೊಂಡ್ರೂ ಪರವಾಗಿಲ್ಲ. ಈತರಹ ಮಾಡೋದಾದ್ರೆ ಅವ್ರು ನನ್ನ ಅಭಿಮಾನಿಗಳೇ ಅಲ್ಲ. ನನಗೂ ಮನಸ್ಸಿದೆ. ತುಂಬಾ ನೋವು ತರಿಸಬೇಡಿ. ಅಭಿವೃದ್ದಿ ಕೆಲಸಗಳಲ್ಲಿ ಭಾಗಿಯಾಗಿ. ಅದಕ್ಕೆ ನಾನು ಏನ್ ಬೇಕಾದ್ರೂ ಮಾಡೋಕ್ಕೆ ಸಿದ್ದ ಎಂದಿದ್ರು.

ಕಳೆದ ವರ್ಷ ಬ್ಯಾನರ್ ಕಟ್ಟಲು ಹೋಗಿ ಕೈ ಕಳೆದುಕೊಂಡ ಫ್ಯಾನ್
ಹಾವೇರಿಯ ಅಭಿಮಾನಿ ಹರೀಶ್​ಗೆ ಮಿಡಿದಿತ್ತು ಯಶ್ ಹೃದಯ..!
ಪದೇ ಪದೇ ಈ ರೀತಿ ಆದ್ರೆ ನೋವು ಭರಿಸೋದು ಹೇಗೆ ಹೇಳಿ..?
ಕಳೆದ ಜುಲೈ ತಿಂಗಳಲ್ಲಿ ಹಾವೇರಿ ಮೂಲದ ಹರೀಶ್ ಅನ್ನೋ ಯಶ್ ಅಭಿಮಾನಿ, ಊರ ಹಬ್ಬದಲ್ಲಿ ಯಶ್​ರ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ತಂತಿ ಸ್ಪರ್ಶಿಸಿ ಎರಡೂ ಕೈ ಕಳೆದುಕೊಂಡಿದ್ದ. ಅದನ್ನ ತಿಳಿದ ಯಶ್, ಕೂಡಲೇ ಆತನ ಚಿಕಿತ್ಸಾ ವೆಚ್ಚ ಸೇರಿದಂತೆ ಕುಟುಂಬ ಪೋಷಣೆಗೆ ಮುಂದಾಗಿದ್ರು. ಸದ್ಯ ಹರೀಶ್​ಗೆ ಒಂದು ಕೃತಕ ಕೈ ಹಾಕಿಸಲು ಯಶ್ ಪ್ರಯತ್ನ ಪಡ್ತಿದ್ದಾರೆ.

ಆದರೆ, ಪದೇ ಪದೇ ಅಭಿಮಾನಿಗಳು ಈ ರೀತಿಯ ಎಡವಟ್ಟು ಮಾಡಿಕೊಂಡರೆ ಅದಕ್ಕೆ ಹೊಣೆ ಯಾರು..? ಆ ನೋವು ಅವ್ರ ಕುಟುಂಬ ಹಾಗೂ ಯಶ್​ ಅವ್ರಿಗೇ ತಾನೇ..? ಕೈಲಾದ ಪರಿಹಾರ ನೀಡೋದು ಬೇರೆ. ಆದ್ರೆ ಹೋದ ಜೀವ ಮತ್ತೆ ಬರುತ್ತದೆಯೇ..? ಮಕ್ಕಳ ಮೇಲೆ ದೊಡ್ಡ ಕನಸು ಕಟ್ಟಿಕೊಂಡಂತಹ ಪೋಷಕರ ಗತಿಯೇನು..? ಇದೆಲ್ಲವನ್ನೂ ಪ್ರತಿಯೊಬ್ಬ ಅಭಿಮಾನಿ ಯೋಚಿಸಬೇಕಾಗುತ್ತೆ.

ರವಿ, ಹರೀಶ್ ಎಡವಟ್ಟು ಪ್ರತಿಯೊಬ್ಬ ಸ್ಟಾರ್ ಫ್ಯಾನ್ಸ್​ಗೆ ಪಾಠ
ಸದ್ಯ ಯಶ್ ಫ್ಯಾನ್ಸ್ ಇಬ್ಬರ ಈ ಮಹಾನ್ ಎಡವಟ್ಟಿಗೆ ಇಡೀ ಚಿತ್ರರಂಗದ ಎಲ್ಲಾ ಸ್ಟಾರ್ ಫ್ಯಾನ್ಸ್ ಬೆಚ್ಚಿಬೀಳುವಂತಾಗಿದೆ. ಆದ್ರೆ ಇದನ್ನ ಒಂದು ಪಾಠವಾಗಿ ಪರಿಗಣಿಸಿ, ಇನ್ಮುಂದೆ ಆದ್ರೂ ಈ ರೀತಿಯ ಅವಘಡಗಳು ಆಗದಂತೆ ಎಚ್ಚರಿಕೆ ವಹಿಸಿದ್ರೆ, ಅದು ಅವರಿಗೂ ಉತ್ತಮ, ಇತ್ತ ಸ್ಟಾರ್ಸ್​ ಕೂಡ ನಿರಾಳವಾಗಿರೋಕ್ಕೆ ಸಾಧ್ಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5