ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ಬೆಂಗಳೂರಿನ ಲಗ್ಗೆರೆಯ ನಿವಾಸಿ ರವಿ (28) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ್ದಾತ. ಮಂಗಳವಾರ ನಡೆದ ಘಟನೆಯಲ್ಲಿ ಶೇ.80 ರಷ್ಟು ಗಾಯಗೊಂಡಿದ್ದ ರವಿಗೆ ವಿಕ್ಟೋರಿಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೀವನ್ಮರಣ ಹೋರಾಟ ನಡೆಸುತ್ತಿದ್ದ ರವಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ಕೊನೆಯುಸಿರೆಳೆದಿದ್ದಾನೆ.

ಯಶ್‌ ಅವರ ಅಪ್ಪಟ ಅಭಿಮಾನಿ

ರವಿ ಮೂಲತಃ ಪಾವಗಡ ತಾಲೂಕಿನವನಾಗಿದ್ದು, ಹಲವು ವರ್ಷಗಳಿಂದ ತನ್ನ ಪೋಷಕರ ಜತೆ ಲಗ್ಗೆರೆಯಲ್ಲಿ ನೆಲೆಸಿದ್ದ. ವೃತ್ತಿಯಲ್ಲಿ ಬಡಗಿಯಾದ ರವಿ, ಯಶ್‌ ಅವರ ಅಪ್ಪಟ ಅಭಿಮಾನಿಯಾಗಿದ್ದ. ಪ್ರತಿ ವರ್ಷ ಜ.8 ರಂದು ತನ್ನ ಮೆಚ್ಚಿನ ನಟನಿಗೆ ಹುಟ್ಟು ಹಬ್ಬದ ಶುಭ ಕೋರಲು ಅವರ ಮನೆಗೆ ಬರುತ್ತಿದ್ದ. ಆದರೆ ಈ ವರ್ಷ ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಷ್‌ ನಿಧನ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಜನ್ಮ ದಿನ ಆಚರಣೆಗೆ ನಿರಾಕರಿಸಿದ್ದ ಯಶ್‌, ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ಸಂದೇಶ ಮೂಲಕ ತಮ್ಮ ಅಭಿಮಾನಿಗಳಲ್ಲಿ ಶುಭ ಕೋರಲು ಮನೆಗೆ ಬರಬೇಡಿ ಎಂದು ವಿನಂತಿಸಿದ್ದರು.

ಆದರೂ ಪ್ರತಿ ವರ್ಷದಂತೆ ರವಿ ಸೇರಿದಂತೆ ನೂರಾರು ಅಭಿಮಾನಿಗಳು, ಯಶ್‌ ಅವರಿಗೆ ಶುಭಕೋರಲು ಹೊಸಕೆರೆಹಳ್ಳಿಯಲ್ಲಿರುವ ಅವರ ಮನೆ ಮುಂದೆ ಬೆಳಗ್ಗೆಯಿಂದಲೇ ನೆರೆದಿದ್ದರು. ಆದರೆ ತಮ್ಮ ಮಾತಿಗೆ ಬದ್ಧರಾದ ಯಶ್‌, ಜನ್ಮದಿನ ಆಚರಿಸದೇ ತಮ್ಮ ಕುಟುಂಬದ ಸದಸ್ಯರ ಜತೆ ಹೊರ ಹೋಗಿದ್ದರು.

ಚಿಕಿತ್ಸೆ ಫಲಕರಿಯಾಗದೆ ರವಿ ಕೊನೆಯುಸಿರೆಳೆದಿದ್ದಾರೆ

ಈ ವೇಳೆ ಮಧ್ಯಾಹ್ನದವರೆಗೆ ನಟನಿಗೆ ಮನೆ ಮುಂದೆ ಕಾದ ರವಿ, ಕೊನೆಗೆ ಬೇಸತ್ತು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ತಕ್ಷಣವೇ ಅಲ್ಲಿ ಭದ್ರತೆ ನಿಯೋಜಿತರಾಗಿದ್ದ ಪೊಲೀಸರು, ರವಿ ಅವರ ರಕ್ಷಣೆಗೆ ಧಾವಿಸಿದ್ದರು. ನೀರು ಸುರಿದು ಬೆಂಕಿ ನಂದಿಸಿದ ಪೊಲೀಸರು, ಕೂಡಲೇ ಅಂಬ್ಯುಲೆನ್ಸ್‌ನಲ್ಲಿ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಅದರೀಗ ಚಿಕಿತ್ಸೆ ಫಲಕರಿಯಾಗದೆ ರವಿ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ಸಂಬಂಧ ಗಿರಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.