ಕಿರುತೆರೆ ಅಸಿಸ್ಟೆಂಟ್ ಡೈರೆಕ್ಟರ್ ಅಪಘಾತದಲ್ಲಿ ಸಾವು

ಬೆಂಗಳೂರು: ಕಿರುತೆರೆಯ ಅಸಿಸ್ಟೆಂಟ್ ಡೈರೆಕ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ನಾಗರಭಾವಿ ರಿಂಗ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ರಾಜೇಶ್(32) ಮೃತ ದುರ್ದೈವಿಯಾಗಿದ್ದಾರೆ.

ಕೃಷ್ಣ ತುಳಸಿ ಧಾರಾವಾಹಿಯಲ್ಲಿ ರಾಜೇಶ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ರಾತ್ರಿ ಸೆಟ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಹೊರಟಾಗ, ನಾಗರಭಾವಿ ರಸ್ತೆಯಲ್ಲಿ ಟಿಟಿಯಿಂದ ಡ್ರಾಪ್ ತೆಗೆದುಕೊಂಡ ವೇಳೆ, ಹಿಂಬದಿಯಿಂದ ಬಂದ ಡ್ಯೂಕ್ ಬೈಕ್ ಸವಾರ ರಾಜೇಶ್‌ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ರಾಜೇಶ್ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಡ್ಯೂಕ್ ಬೈಕ್ ಸವಾರನಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜೇಶ್ ಮೂಲತಃ ಕುಣಿಗಲ್‌ನವರಾಗಿದ್ದು, ಹಲವು ಧಾರಾವಾಹಿಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಇನ್ನು ಈ ಬಗ್ಗೆ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.