ಬಯೋಪಿಕ್​ ಹೆಸರಲ್ಲಿ ನಡೀತಿದೆಯಾ ಭರ್ಜರಿ ಪಾಲಿಟಿಕ್ಸ್​..!?

ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಪಾಲಿಟಿಕ್ಸ್​ ಅನ್ನೋದು ಇದೀಗ ಸಿನಿ ದುನಿಯಾಗೂ ಎಂಟ್ರಿಕೊಟ್ಟಿದೆ. ಸಿನಿಮಾಗಳ ಮೂಲಕವೂ ರಾಜಕೀಯ ಮಾಡಲು ರಾಜಕಾರಣಿಗಳು ಸಜ್ಜಾಗಿದ್ದಾರೆ. ಬಯೋಪಿಕ್​ ಹೆಸರಲ್ಲಿ ಭರ್ಜರಿ ಪಾಲಿಟಿಕ್ಸ್​ ಶುರುವಾಗಿದೆ. ಆಕ್ಸಿಡೆಂಟಲ್​ ಪಿಎಂ ಮೂವಿ, ಪಿಎಂ ನರೇಂದ್ರ ಮೋದಿ ಮೂವಿ ಮತ್ತು ಸೌತ್​ ಇಂಡಿಯಾದ ಪವರ್​ಪುಲ್​ ಲೀಡರ್​ ಎನ್​ಟಿಆರ್​ ಜೀವನ ಚರಿತ್ರೆಯ ಸಿನಿಮಾಗಳು ಸದ್ಯದಲ್ಲೇ ರಿಲೀಸ್​ ಆಗಲು ಸಜ್ಜಾಗಿವೆ.

ಕಾಂಗ್ರೆಸ್​ “ಕೈ” ಮುರಿಯಲು- ಆಕ್ಸಿಡೆಂಟಲ್​ ಪಿಎಂ..!
ಕಮಲ ಅರಳಿಸಲು – ಪಿಎಂ ನರೇಂದ್ರ ಮೋದಿ..!
ಆಂಧ್ರದಲ್ಲಿ ಎನ್​ಟಿಆರ್​ ಬಯೋಪಿಕ್​ ವಾರ್​​..!
ಚುನಾವಣೆ ಹೊಸ್ತಿಲಲ್ಲೇ ಜೋರಾಯ್ತು ಸಿನಿ ರಾಜಕೀಯ..!
2019ರ ಆರಂಭದಲ್ಲೇ ಸಿನಿ ವಾರ್​​ ಶುರುವಾಗಿದೆ. ಇದು ಮಾಮೂಲಿ ಫಿಲ್ಮ್​ ಫೈಟ್​ ಅಲ್ಲ. ಪಾಲಿಟಿಕ್ಸ್​ ಮಿಶ್ರಿತ ಫಿಲ್ಮ್​ ವಾರ್. ​ಒಂದು ಆಕ್ಸಿಡೆಂಟಲ್​ ಪಿಎಂ ಅನ್ನೋ ಮೂವಿ. ಮತ್ತೊಂದು ಪಿಎಂ ನರೇಂದ್ರ ಮೋದಿ ಅನ್ನೋ ಸಿನಿಮಾ. ಇನ್ನೊಂದು ದಕ್ಷಿಣ ಭಾರತದ ಖ್ಯಾತ ನಟ ಮತ್ತು ಪೊಲಿಟಿಷಿಯನ್​ ಆಂಧ್ರದ ಮಾಜಿ ಸಿಎಂ ನಂದನಮೂರಿ ತಾರಕರಾಮರಾವ್​​ ಕುರಿತ ಎನ್​ಟಿಆರ್​ ಬಯೋಪಿಕ್​ ಹೆಸರಲ್ಲಿ ಎರಡು ಮೂವಿ. ಈ ನಾಲ್ಕು ಸಿನಿಮಾಗಳು ಭಾರೀ ಸಂಚಲನ ಮೂಡಿಸಿವೆ.

ಈ ನಾಲ್ಕು ಸಿನಿಮಾಗಳು ಸಿನಿಮಾಗಿಂತ ಹೆಚ್ಚಾಗಿ ಪಾಲಿಟಿಕ್ಸ್​ ಮೂಲಕವೇ ಸದ್ದು ಮಾಡ್ತಿವೆ. ಯಾಕಂದ್ರೆ ಈ ಚಿತ್ರಗಳು ರಾಜಕೀಯ ನಾಯಕರ ಸುತ್ತಲೇ ತಿರುಗುವುದರಿಂದ ವಿವಾದವೂ ಸುತ್ತಿಕೊಂಡಿದೆ. ಬಯೋಪಿಕ್​ ಹೆಸರಲ್ಲಿ ಯಾರದ್ದೋ ರಾಜಕೀಯ ಲಾಭಕ್ಕಾಗಿ ಮತ್ತು ಸ್ವಯಂ ಪ್ರತಿಷ್ಟೆಗಾಗಿ ಸಿನಿಮಾಗಳನ್ನ ಮಾಡಲಾಗ್ತಿದೆಯಾ ಅನ್ನಿಸುತ್ತಿದೆ. ಅದ್ರಲ್ಲೂ ಲೋಕಸಭಾ ಚುನಾವಣೆಗೆ ಇನ್ನು ಕೇವಲ 2 ತಿಂಗಳು ಬಾಕಿ ಇದ್ದು ಇಂಥ ಟೈಮ್​ನಲ್ಲೇ ಬಯೋಪಿಕ್​ ಸಿನಿಮಾಗಳು ತೆರೆಗೆ ಅಪ್ಪಳಿಸುತ್ತಿವೆ. ಇದು ನಾನಾ ಚರ್ಚೆಗೂ ಕಾರಣವಾಗುತ್ತಿದೆ.

ಪಿಎಂ ಮೋದಿ ಬಯೋಪಿಕ್​ ಸಿನಿಮಾದಲ್ಲಿ ವಿವೇಕ್..!
ಕನ್ನಡ ಸೇರಿ 23 ಭಾಷೆಗಳಲ್ಲಿ ಪಿಎಂ ಮೋದಿ ಮೂವಿ..!
ಲೋಕಸಭೆ ಚುನಾವಣೆಗೂ ಮುನ್ನವೇ ರಿಲೀಸ್​ ಆಗುತ್ತಾ..!?
ಪ್ರಧಾನಿ ಮೋದಿ ಬದುಕಿನ ಪಯಣ ಕುರಿತು ಬಾಲಿವುಡ್​ ಮೂವಿಯೊಂದು ಸೆಟ್ಟೇರಿದೆ. ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಲನಚಿತ್ರದ ಫಸ್ಟ್ ಲುಕ್ ಸೋಮವಾರ ಬಿಡುಗಡೆಯಾಗಿದ್ದು ಬಾಲಿವುಡ್ ನಟ ವಿವೇಕ್ ಒಬೇರಾಯ್ ಮೋದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಿಎಂ ನರೇಂದ್ರ ಮೋದಿ” ಹೆಸರಿನ ಚಿತ್ರದ ಮೊದಲ ಪೋಸ್ಟರ್ ಮುಂಬೈನಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್​ ಸಮ್ಮುಖದಲ್ಲಿ ಬಿಡುಗಡೆಯಾಗಿದೆ. ನಟ ವಿವೇಕ್​ ಒಬೆರಾಯ್​ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಮೋದಿ ಮೂವಿ ಪೋಸ್ಟರ್​ ರಿವೀಲ್​ ಆಗಿದೆ.

ದೊಡ್ಡ ಮಟ್ಟದ ಯಶಸ್ಸಿಗೆ ಕಾಯುತ್ತಿರುವ ವಿವೇಕ್‌ಗೆ ಈ ಚಿತ್ರ ದೊಡ್ಡ ನೆರವಾಗಲಿದೆ ಅಂತ ಹೇಳಲಾಗಿದ್ದು, ಸಿನಿಮಾ ಮಾರುಕಟ್ಟೆ ವಿಶ್ಲೇಷಕರಾದ ತರಣ್ ಆದರ್ಶ್ ಫಸ್ಟ್ ಲುಕ್ ಅನ್ನ ಹಂಚಿಕೊಂಡಿದ್ದಾರೆ. ಇದರಲ್ಲಿ ಒಬೇರಾಯ್‌ಗೆ ವಯಸ್ಸಾದವರಂತೆ ಮೇಕಪ್ ಮಾಡಲಾಗಿದ್ದು ಬಿಳಿ ಕೂದಲು, ಗಡ್ಡ, ಜತೆಗೆ ಚಿನ್ನದ ಬಣ್ಣವಿರುವ ಕುರ್ತಾ ಧರಿಸಿರುವುದನ್ನ ಕಾಣುತ್ತೇವೆ. ಜತೆಗೆ ಹಿನ್ನೆಲೆಯಾಗಿ ಭಾರತ್ ರಾಷ್ಟ್ರಧ್ವಜ, ಸೂರ್ಯೋದಯವಾಗುವ ದೃಶ್ಯವಿದ್ದು ಮೇಲೆ ಹಾಗೂ ಕೆಳಗೆ ಸಿನಿಮಾ ಹೆಸರು, ನಿರ್ಮಾಣ ಸಂಸ್ಥೆಯ ವಿವರಗಳು ಇದೆ. ಇದು ಭಾರತೀಯ ಚಿತ್ರರಂಗಕ್ಕೇ ಒಂದು ಹೆಮ್ಮೆಯ ಚಿತ್ರ ಅನ್ನೋದು ಮಹಾರಾಷ್ಟ್ರ ಸಿಎಂ ಫಡ್ನವಿಸ್​ ಅಭಿಮತ.

ಮತ್ತೊಮ್ಮೆ ಮೋದಿ ಅಂತಿರೋ ಬಿಜೆಪಿಗೆ ಬಲ..!
ಬಾಲಿವುಡ್​ ಮೂವಿ ಮೂಲಕ ಮೋದಿ ಹವಾ..!
ವಿಶೇಷ ಅಂದ್ರೆ ಪಿಎಂ ನರೇಂದ ಮೋದಿ ಚಿತ್ರ ಕನ್ನಡ ಸೇರಿ 23 ಭಾಷೆಗಳಲ್ಲಿ ತೆರೆ ಕಾಣಲಿದೆ. ಈ ಚಿತ್ರವನ್ನ “ಮೇರಿ ಕೋಮ್” ಚಿತ್ರದ ಖ್ಯಾತಿಯ ಒಮಂಗ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಸುರೇಶ್ ಒಬೆರಾಯ್ ಮತ್ತು ಸಂದೀಪ್ ಸಿಂಗ್ ಚಿತ್ರಕ್ಕೆ ಬಂಡವಾಳ ತೊಡಗಿಸಿದ್ದಾರೆ. ಈ ಸಿನಿಮಾದಲ್ಲಿ ಮೋದಿ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಅಂತ ನಟ ವಿವೇಕ್​ ಒಬೆರಾಯ್​ ಖುಷಿ ಹಂಚಿಕೊಂಡಿದ್ದಾರೆ.

ಎಲ್ಲೋ ಗುಜರಾತ್​ನ ಹಳ್ಳಿಯಲ್ಲಿ ರೈಲ್ವೆ ಸ್ಟೇಷನ್​ನಲ್ಲಿ ಚಾಯ್​ ವಾಲಾನಾಗಿದ್ದ ಹುಡುಗ ದೇಶದ ಪ್ರಧಾನಿಯಾಗಿದ್ದು ಮೋದಿ ಪರಿಶ್ರಮವೇ ಸರಿ. ಇದು ಇಡೀ ವಿಶ್ವಕ್ಕೇ ಗೊತ್ತಿರೋ ಸತ್ಯ. ಸಾಮಾನ್ಯ ಹುಡುಗನೊಬ್ಬ ದೇಶದ ಪ್ರಧಾನಿಯಾಗೋ ಪ್ರಜಾಪ್ರಭುತ್ವದ ಭಾರತದಲ್ಲಿ ಮಾತ್ರ ಸಾಧ್ಯ ಅಂತ ಈಗಾಗಲೇ ಬಿಜೆಪಿ ಬಿಂಬಿಸಿದೆ. ಇದೇ ಚಾಯ್​ ವಾಲಾ ಮೋದಿಯನ್ನ ಮುಂದಿಟ್ಟುಕೊಂಡು ಮತ್ತೊಮ್ಮೆ ಕೇಸರಿ ಸಾಮ್ರಾಜ್ಯ ಸ್ಥಾಪಿಸಲು ಸಜ್ಜಾಗಿದೆ. ಲೋಕಸಭಾ ಚುನಾವಣೆಗೆ ಇನ್ನು ಕೇವಲ 2 ತಿಂಗಳು ಮಾತ್ರ ಬಾಕಿ ಇದೆ. ಇಷ್ಟರಲ್ಲೇ ಸಿಗೋ ಎಲ್ಲಾ ಅವಕಾಶಗಳನ್ನ ಬಳಸಿಕೊಳ್ಳುತ್ತಿದ್ದು ಮೋದಿ ಹವಾ ಬಿಂಬಿಲಸು ಬಾಲಿವುಡ್​ ಮೂವಿಯನ್ನೇ ಮಾಡಿಸಲಾಗುತ್ತಿದೆ. ಇದಕ್ಕೆ ವಿವೇಕ್​ ಒಬೆರಾಯ್​ ಮೂಲಕ ಮೋದಿ ಮೋಡಿ ಮಾಡಲಾಗ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಮೋದಿ ಹವಾ ಬಿಂಬಿಸಲು ಮತ್ತೊಮ್ಮೆ ಮೋದಿ ಪ್ರಧಾನಿ ಮಾಡಲು ಬಾಲಿವುಡ್​ ಸಿನಿಮಾ ಸೆಟ್ಟೇರಿದ್ರೆ, ಇದೇ ಬಾಲಿವುಡ್​ನಲ್ಲಿ ಮತ್ತೊಂದು ಮೂವಿ ಸೆಟ್ಟೇರಿದೆ. ಅದು 50 ವರ್ಷಗಳ ಕಾಂಗ್ರೆಸ್​ ಆಳ್ವಿಕೆಯನ್ನೇ ಬುಡಮೇಲು ಮಾಡೋ ಸಾಧ್ಯತೆ ಇದೆ. ಹೌದು, ಆಕ್ಸಿಡೆಂಟಲ್​ ಪಿಎಂ ಅನ್ನೋ ಮೂವಿ ಟ್ರೈಲರ್​ ಕೂಡ ರಿಲೀಸ್​ ಆಗಿದ್ದು, ಮನಮೋಹನ್​ ಸಿಂಗ್​ ಬಯೋಪಿಕ್​ನ ಈ ಮೂವಿ ಭಾರೀ ವಿವಾದಕ್ಕೂ ಕಾರಣವಾಗಿದೆ.

ದಿ ಆಕ್ಸಿಡೆಂಟಲ್​ ಪಿಎಂ – ಡಾ.​ ಸಿಂಗ್​ ಬಯೋಪಿಕ್​
ಕಾಂಗ್ರೆಸ್​​ಗೆ ಆಕ್ಸಿಡೆಂಟ್​ ಮಾಡುತ್ತಾ ಈ ಮೂವಿ..!?
ನೆಹರು ಕುಟುಂಬ ರಾಜಕಾರಣದ ವಿರುದ್ಧ ಸಿನಿ ಅಸ್ತ್ರ..!?
ದಿ ಆಕ್ಸಿಡೆಂಟಲ್‌ ಪಿಎಂ.. ಬಾಲಿವುಡ್​ನ ಮೋಸ್ಟ್​ ಎಕ್ಸ್​ಪೆಕ್ಟೆಡ್​​​ ಮೂವಿ.. ಇಡೀ ದೇಶದಲ್ಲಿ ಸಂಚಲನ ಮೂಡಿಸಿರೋ ಸಿನಿಮಾ. ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಜೀವನಧಾರಿತ ಈ ಚಿತ್ರ ಭಾರೀ ವಿವಾದಕ್ಕೂ ಕಾರಣವಾಗಿದೆ. ಮನಮೋಹನ್​ ಸಿಂಗ್​ ಮಾಧ್ಯಮ ಸಲಹೆಗಾರ ಸಂಜಯ್‌ ಬಾರು ಬರೆದ ‘ದಿ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌: ದಿ ಮೇಕಿಂಗ್‌ ಆಂಡ್‌ ಅನ್‌ಮೇಕಿಂಗ್‌ ಆಫ್‌ ಮನಮೋಹನ್‌ ಸಿಂಗ್‌’ ವಿವಾದಾತ್ಮಕ ಪುಸ್ತಕ ಆಧರಿಸಿ ಈ ಚಿತ್ರ ಮಾಡಲಾಗುತ್ತಿದೆ.

ನಿರೀಕ್ಷೆಯಂತೆ ಅನುಪಮ್‌ ಖೇರ್‌ ಅಭಿನಯದ ‘ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರ ಬಿಡುಗಡೆಯಾಗುವ ಮುಂಚೆಯೇ ವಿವಾದಕ್ಕೆ ತುತ್ತಾಗಿದೆ. ಟ್ರೇಲರ್‌ ಬಿಡುಗಡೆಯಾಗುತ್ತಿದ್ದಂತೆ ಈ ಚಿತ್ರ ನಿಷೇಧಿಸಬೇಕೆಂದು ಕಾಂಗ್ರೆಸ್‌ ಒತ್ತಾಯಿಸಿದರೆ, ಬಿಜೆಪಿಯು ಪ್ರದರ್ಶನಕ್ಕೆ ಬೆಂಬಲ ನೀಡುತ್ತಿದೆ. ಅಂದಹಾಗೆ, 2004ರಿಂದ 2008ರವರೆಗೆ ಅಂದಿನ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಸುತ್ತವೇ ಈ ಚಿತ್ರ ತಿರುಗುತ್ತೆ. ವಿಜಯ್‌ ರತ್ನಾಕರ್‌ ಗುಟ್ಟೆ ನಿರ್ದೇಶಿಸುತ್ತಿದ್ದು, ನಟ ಅನುಪಮ್‌ ಖೇರ್‌, ಡಾ.ಸಿಂಗ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್​ 28ರಂದು ಈ ಚಿತ್ರದ ಟ್ರೇಲರ್‌ ಬಿಡುಗಡೆಯಾದ ಗಂಟೆಯೊಳಗೇ ದೇಶಾದ್ಯಂತ ವಿವಾದದ ಕಿಡಿ ಹೊತ್ತಿಕೊಡಿದೆ.

“ಎಪಿಎಂ” ಫಿಲ್ಮ್​ನಿಂದ ಕಾಂಗ್ರೆಸ್ಸಿಗರಿಗೆ ಇರಿಸುಮುರಿಸು..!
50 ವರ್ಷಗಳ ಕಾಂಗ್ರೆಸ್​ ಆಳ್ವಿಕೆಯನ್ನೇ ಅಲುಗಾಡಿಸುತ್ತಾ..!?
ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಸಿನಿಮಾದಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಹಾಲಿ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾರನ್ನ ಕೆಟ್ಟದಾಗಿ ಬಿಂಬಿಸಲಾಗಿದೆ ಅಂತ ವಿವಾದಕ್ಕೆ ಕಾರಣವಾಗಿದೆ. ಕುಟುಂಬವೊಂದು ಇಡೀ ದೇಶವನ್ನ ಹೇಗೆ ತನ್ನ ಅಂಗೈಯಲ್ಲಿಟ್ಟುಕೊಂಡಿತ್ತು ಮತ್ತು ಡಾ.ಸಿಂಗ್‌ ಅವರನ್ನ ಹೇಗೆ ತಮ್ಮ ಕೈಗೊಂಬೆಯಾಗಿಸಿಕೊಂಡಿದ್ರು ಅನ್ನೋದೇ ಸಿನಿಮಾದ ಕಥಾವಸ್ತುವಾಗಿದೆ. ಈಗ ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ಕೂಡ ಸೋನಿಯಾ, ರಾಹುಲ್‌, ಪ್ರಿಯಾಂಕಾ ವಿರುದ್ಧ ಹೇಳಿಕೆಗಳಿವೆ. ಇದರಿಂದಾಗಿಯೇ ಭಾರಿ ವಿವಾದಕ್ಕೂ ಕಾರಣವಾಗಿದೆ.

ನಿರೀಕ್ಷೆಯಂತೆ ಕಾಂಗ್ರೆಸ್‌ ಈ ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸಿದೆ. ಜನವರಿ 11ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲು ಚಿತ್ರವನ್ನ ಕಾಂಗ್ರೆಸ್‌ ನಾಯಕರಿಗೆ ತೋರಿಸಬೇಕು ಅಂತ ಒತ್ತಾಯಿಸಿದೆ. ಅದ್ರಲ್ಲಿ ಆಕ್ಷೇಪಾರ್ಹ ದೃಶ್ಯಗಳನ್ನ ತೆಗೆಯಬೇಕು ಅಂತಾನೂ ಕಾಂಗ್ರೆಸ್ಸಿಗರು ಒತ್ತಾಯಿಸಿದ್ದಾರೆ. ಆದರೆ ಈ ಬಗ್ಗೆ ಸೋನಿಯಾ ಆಗಲಿ, ರಾಹುಲ್‌ ಗಾಂಧಿಯಾಗಲಿ ಅಥವಾ ಹಿರಿಯ ನಾಯಕರಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ. ಈ ಮಧ್ಯೆ ಬಿಜೆಪಿ- ಕಾಂಗ್ರೆಸ್ಸಿಗರು ಜಗಳಕ್ಕಿಳಿದಿದ್ದಾರೆ. ಸಿನಿಮಾ ಮಾಧ್ಯಮ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿದೆ ಅಂತ ಬಿಜೆಪಿಯವರು ಪ್ರತಿಪಾದಿಸಿದ್ರೆ, ಇದು ಮಾನನಷ್ಟ ಸಿನಿಮಾ ಅಂತ ಕಾಂಗ್ರೆಸ್ಸಿಗರು ಕಿಡಿಕಾರುತ್ತಿದ್ದಾರೆ.

“ದಿ ಆಕ್ಸಿಡೆಂಟಲ್ ಪಿಎಂ” ನಿಷೇಧಕ್ಕೆ ಕೋರ್ಟ್​ ನಕಾರ..!
ದೆಹಲಿ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದವರಿಗೆ ಹಿನ್ನಡೆ..!
ಈ ಮಧ್ಯೆ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ವಿವಾದಿತ ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಟ್ರೇಲರ್‌ ಅನ್ನೇ ನಿಷೇಧಿಸಬೇಕು ಅಂತ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ದೆಹಲಿ ಹೈಕೋರ್ಟ್‌ ನಿರಾಕರಿಸಿದೆ. ಪ್ರಧಾನಿ ಕಚೇರಿಯ ಘನತೆಗೆ ಧಕ್ಕೆ ತರುವ ಮೂಲಕ ವಾಣಿಜ್ಯ ಲಾಭ ಗಳಿಸಬೇಕು ಎನ್ನುವ ಉದ್ದೇಶ ನಿರ್ಮಾಪಕರಿಗೆ ಇದ್ದಂತಿದೆ. ಜೀವಂತ ವ್ಯಕ್ತಿಯ ಚಾರಿತ್ರ್ಯಹರಣ ಮಾಡುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ ಅಂತ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.. ಅಲ್ಲದೆ ಚಲನಚಿತ್ರದಲ್ಲಿ ಪ್ರಧಾನಮಂತ್ರಿ ಕಚೇರಿಯನ್ನ ಬಳಸಿಕೊಳ್ಳಲಾಗಿದೆ ಅಂತ ಡಿವಿಷನ್​ ಬೆಂಚ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಬಹುದು ಅಂತ ಅರ್ಜಿದಾರರಿಗೆ ತಿಳಿಸಿದೆ.

ಚಿತ್ರದ ಬಗ್ಗೆ ದೊಡ್ಡ ವಿವಾದವೇ ಹುಟ್ಟಿಕೊಂಡಿದ್ರೂ ಚಿತ್ರತಂಡ ಹೇಳೋದು ಮಾತ್ರ ಬೇರೆ.. ಮನಮೋಹನ್‌ ಸಿಂಗ್‌ ಅವರ ಒಂದು ದಶಕದ ಆಡಳಿತದ ಬಗ್ಗೆ ಈ ಚಿತ್ರ ಬೆಳಕು ಚೆಲ್ಲಲಿದೆ. ಪ್ರಧಾನಿ ಕಚೇರಿ ನಿಜವಾಗಿ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಅಂತ ತೋರಿಸಲಾಗುವುದು. ದೇಶದ ರಾಜಕೀಯ ಚಿತ್ರಣವನ್ನ ಬದಲಿಸಿದ ಆ 10 ವರ್ಷಗಳಲ್ಲಿ ಆಗಿದ್ದೇನು ಅನ್ನೋದನ್ನ ಜನತೆಯ ಮುಂದಿಡಲು ಬಯಸಿದ್ದೇವೆ ಅಂತಾರೆ ಪ್ರಶಸ್ತಿ ವಿಜೇತ ಸಿನಿಮಾಗಳು ಸೇರಿದಂತೆ ಹಲವು ಚಿತ್ರಗಳನ್ನ ನಿರ್ಮಿಸಿರುವ ಸುನೀಲ್‌ ಬೊಹ್ರಾ. ಮನಮೋಹನ್​ ಸಿಂಗ್​ ಪಾತ್ರದಲ್ಲಿ ನಟಿಸೋದು ಅಷ್ಟು ಸುಲಭವಲ್ಲ. ಕಷ್ಟವಾದ್ರೂ ಇಷ್ಟಪಟ್ಟು ಮಾಡಿದ್ದೇನೆ ಅಂತಾರೆ ನಟ ಅನುಪಮ್​ ಖೇರ್​.

ಅನುಪಮ್​ ಖೇರ್​ ಏನೇ ಹೇಳಿದ್ರೂ ಇವ್ರು ಬಿಜೆಪಿಯ ಮುಖವಾಡ. ಅನುಪಮ್​ ಖೇರ್​ ಪತ್ನಿ ಬಿಜೆಪಿ ಸಂಸದೆ. ಮತ್ತೊಮ್ಮೆ ಮೋದಿಯನ್ನ ಪ್ರಧಾನಿ ಮಾಡಲು ಕಾಂಗ್ರೆಸ್ಸಿಗರ ಮುಖಕ್ಕೆ ಮಸಿ ಬಳಿಯಲು ಆಕ್ಸಿಡೆಂಟಲ್​ ಪಿಎಂ ಮೂವಿ ಮಾಡಲಾಗುತ್ತಿದೆ ಅನ್ನೋದು ಕಾಂಗ್ರೆಸ್ಸಿಗರ ಆರೋಪ. ಮೋದಿಗೋಸ್ಕರ ಮನಮೋಹನ್​ ಸಿಂಗ್ ಅಂತ ಅತ್ಯುತ್ತಮ ಪ್ರಧಾನಿಯನ್ನ ಕೆಟ್ಟದಾಗಿ ತೋರಿಸಲಾಗುತ್ತಿದೆ ಅಂತ ಕಾಂಗ್ರೆಸ್ಸಿಗರು ಕಿಡಿಕಾರುತ್ತಿದ್ದಾರೆ.
ಕಾಂಗ್ರೆಸ್​ಗೆ ಆಕ್ಸಿಡೆಂಟ್​ ಮಾಡಲು ಆಕ್ಸಿಡೆಂಟಲ್​ ಪಿಎಂ ಮೂವಿ ಮಾಡ್ತಿದ್ರೆ, ಮೋದಿ ಹವಾ ಬಿಂಬಿಸಲು ಪಿಎಂ ನರೇಂದ್ರ ಮೋದಿ ಮೂವಿ ಮಾಡಲಾಗಿದೆ. ಇದಿಷ್ಟು ರಾಷ್ಟ್ರ ರಾಜಕಾರಣದ ಸುತ್ತ ತಿರುಗುವ ಸಿನಿಮಾ ಪಾಲಿಟಿಕ್ಸ್ ಆದ್ರೆ ಇತ್ತ ದಕ್ಷಿಣ ಭಾರತದಲ್ಲೂ ಬಯೋಪಿಕ್​ ವಾರ್​ ಜೋರಾಗಿಯೇ ಇದೆ. ಆಂಧ್ರದಲ್ಲಿ ಎನ್​ಟಿಆರ್​ ಹೆಸರಲ್ಲಿ ತೆರೆಕಾಣುತ್ತಿರುವ ಎರಡು ಸಿನಿಮಾಗಳ ಅಸಲಿ ಕಥೆಯೇ ಬೇರೆ ಇದೆ.

ತೆಲುಗು ಖ್ಯಾತ ನಟ ಎನ್​​ಟಿಆರ್​​ ಬಯೋಪಿಕ್​ ವಾರ್​..!
ಎನ್​ಟಿಆರ್​ ಜೀವನಚರಿತ್ರೆಯಲ್ಲೇ ಎರಡು ಸಿನಿಮಾ..!
ಆಂಧ್ರದಲ್ಲಿ ಸಖತ್​ ಸದ್ದು ಮಾಡ್ತಿದೆ ಫಿಲ್ಮ್​ ಪಾಲಿಟಿಕ್ಸ್..!
ಎನ್‌ಟಿಆರ್‌ ಬಯೋಪಿಕ್ ಸಾಂಗ್ ಆಂಧ್ರಪ್ರದೇಶದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದೇ ಚಿತ್ರದ ಹಾಡು ಆಂಧ್ರ ರಾಜ್ಯ ರಾಜಕೀಯವನ್ನೇ ಅಲುಗಾಡಿಸುತ್ತಿದೆ. ಅಂದಹಾಗೆ ತೆಲುಗು ಲೆಜೆಂಡ್​ ಸೂಪರ್​ ಸ್ಟಾರ್​ ಮಾಜಿ ಸಿಎಂ ದಿವಂಗತ ನಂದಮೂರಿ ತಾರಕ ರಾಮರಾವ್​ ಜೀವನಧಾರಿತ ಸಿನಿಮಾದ ಸಾಂಗ್​ ಇದು.. ಕಾಂಟ್ರವರ್ಸಿ ಕಿಂಗ್​ ಡೈರೆಕ್ಟರ್​ ರಾಮ್​ ಗೋಪಾಲ್​ ವರ್ಮ ನಿರ್ದೇಶಿಸುತ್ತಿರುವ “ಲಕ್ಷ್ಮಿಸ್​​ ಎನ್​​ಟಿಆರ್​” ಅನ್ನೋ ಎನ್​ಟಿಆರ್​ ಬಯೋಪಿಕ್​ ಕುರಿತ ಸಿನಿಮಾದ ಸಂಚಲನಕಾರಿ ಸಾಂಗ್​ ಇದು.

ಆಂಧ್ರ ಸಿಎಂ ಚಂದ್ರಬಾಬು ನಾಯ್ಡುರನ್ನೇ ಟಾರ್ಗೆಟ್​ ಮಾಡಿ ರಾಮ್​ ಗೋಪಾಲ್​ ವರ್ಮ ಲಕ್ಷ್ಮೀಸ್​ ಎನ್​ಟಿಆರ್​ ಸಿನಿಮಾ ಮಾಡಿದ್ದಾರೆ. ಇವ್ರರಿಗೆ ಬಿಜೆಪಿಯವರ ಸಪೋರ್ಟ್​ ಇದೆ ಅನ್ನೋದು ಚಂದ್ರಬಾಬು ನಾಯ್ಡು ಆರೋಪ. ಮೇಲ್ನೋಟಕ್ಕೆ ರಾಮ್​ ಗೋಪಾಲ್​ ವರ್ಮ ಬಿಡುಗಡೆ ಮಾಡಿರೋ ಹಾಡು, ಟ್ರೈಲರ್​ ಕೂಡ ಇದನ್ನೇ ಚಂದ್ರಬಾಬು ನಾಯ್ಡು ವಿರುದ್ಧವೇ ಇರೋದು ಎತ್ತಿ ತೋರಿಸುತ್ತೆ. ಮಾಜಿ ಸಿಎಂ ತೆಲುಗು ಖ್ಯಾತ ನಟ ಎನ್​ಟಿಆರ್​ ಬಗ್ಗೆ ನನಗೆ ಸಾಕಷ್ಟು ಅಭಿಮಾನವಿದೆ. ಅವ್ರ ಜೀವನಚರಿತ್ರೆ ಇಡೀ ವಿಶ್ವಕ್ಕೆ ತೋರಿಸುತ್ತೇನೆ ಅಂತಿರೋ ರಾಮ್​ ಗೋಪಾಲ್​ ವರ್ಮ, ಇದೇ ಜನವರಿ 24ರಂದು ಸಿನಿಮಾ ಬಿಡುಗಡೆ ಮಾಡೋದಾಗಿ ಘೋಷಿಸಿದ್ದಾರೆ.

ಟಿಡಿಪಿ ಪಕ್ಷದ ಸಂಸ್ಥಾಪಕ ಎನ್​ಟಿಆರ್​ ಆಂಧ್ರದಲ್ಲಿ ಸ್ಥಳೀಯ ಪಕ್ಷವನ್ನೇ ಅಧಿಕಾರಕ್ಕೆ ತಂದಿದ್ರು. ಇದೇ ಪಕ್ಷದಲ್ಲಿ ಗುರುತಿಸಿಕೊಂಡ ಅವ್ರ ಅಳಿಯ ಚಂದ್ರಬಾಬು ನಾಯ್ಡು ಎನ್​ಟಿಆರ್​ ನಂತರ ಪಕ್ಷದ ಮುಖ್ಯಸ್ಥರಾಗಿದ್ದಾರೆ. ಎನ್​ಟಿಆರ್‌ಗೆ ಇಬ್ಬರು ಪತ್ನಿಯರು. 2ನೇ ಪತ್ನಿ ಲಕ್ಷ್ಮಿ ಪಾರ್ವತಿ ಎನ್​ಟಿಆರ್​ ಬದುಕಿನಲ್ಲಿ ಬಂದ ಸುತ್ತವೇ ರಾಮ್​ ಗೋಪಾಲ್​ ವರ್ಮ ಸಿನಿಮಾ ಇರಲಿದೆ. ಹೀಗಾಗಿ ಇಲ್ಲಿ ಚಂದ್ರಬಾಬು ನಾಯ್ಡು ಮತ್ತು ಅವ್ರ ಸಹೋದರಿ ಎನ್​ಟಿಆರ್​ 2ನೇ ಪತ್ನಿ ಲಕ್ಷ್ಮಿ ಪಾರ್ವತಿಗೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲೇ ಸಿನಿಮಾ ಮಾಡಲಾಗಿದೆ ಅನ್ನೋದು ಚಂದ್ರಬಾಬು ನಾಯ್ಡು ಬೆಂಬಲಿಗರ ಆರೋಪ.

ವರ್ಮಗೆ ಸೆಡ್ಡು ಹೊಡೆಲು ಎನ್​ಟಿಆರ್​​​ ಮತ್ತೊಂದು ಫಿಲ್ಮ್​..!
ಸಿಎಂ ಬಾಬು ಪರವಾಗಿ ನಿಂತ್ರು ನಟ, ಶಾಸಕ ಬಾಲಕೃಷ್ಣ..!
ಇದು ಎನ್​ಟಿಆರ್​ ಕುರಿತ ಆಂಧ್ರದಲ್ಲಿ ತೆರೆಕಾಣುತ್ತಿರೋ 2ನೇ ಚಿತ್ರ.. ಅದ್ಯಾವಾಗ ರಾಮ್​ ಗೋಪಾಲ್​ ವರ್ಮ, ಸಿಎಂ ಚಂದ್ರಬಾಬು ನಾಯ್ಡುರನ್ನೇ ಟಾರ್ಗೆಟ್​ ಮಾಡಿ ಲಕ್ಷ್ಮಿ ಎನ್​ಟಿಆರ್​ ಮೂವಿ ಮಾಡಿದ್ರೋ ಇದಕ್ಕೆ ವಿರೋಧವಾಗಿ ಎನ್​ಟಿಆರ್​ ಪುತ್ರ ಟಿಡಿಪಿ ಶಾಸಕ ಬಾಲಕೃಷ್ಣ ನಾಯಕ ನಟನಾಗಿ ಎನ್​​​ಟಿಆರ್​ ಬಯೋಪಿಕ್​ ಸಿನಿಮಾ ಮಾಡಿಯೇ ಬಿಟ್ರು.. ಎನ್​ಟಿಆರ್​ ಕಥನಾಯಕಡು ಮತ್ತು ಎನ್​ಟಿಆರ್​ ಮಹಾನಾಯಕಡು ಅಂತ ಭಾಗ 1 ಮತ್ತು ಭಾಗ 2 ಸಿನಿಮಾಗಳಲ್ಲಿ ಬಾಲಕೃಷ್ಣ ತಮ್ಮ ತಂದೆ ಎನ್​ಟಿಆರ್​​​​ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕಥಾನಾಯಕಡು ಅನ್ನೋದು ಎನ್​ಟಿಆರ್​ ಸಿನಿಮಾ ಜರ್ನಿ ತೋರಿಸಲಿದ್ದು, ಮಹಾನಾಯಕಡು ಅನ್ನೋದು ರಾಜಕೀಯ ಜರ್ನಿ ಬಿಂಬಿಸಲಿದೆ.

ಆಂಧ್ರದಲ್ಲೂ ಲೋಕಸಭಾ ಚುನಾವಣೆಗೆ ಜೊತೆಯಲ್ಲೇ ವಿಧಾನಸಭಾ ಚುನಾವಣೆಯೂ ನಡೆಯೋ ಸಾಧ್ಯತೆ ಇದ್ದು, ರಾಜಕೀಯದಾಟ ಜೋರಾಗಿದೆ. ಪ್ರತಿಪಕ್ಷ ವೈಎಸ್​ಆರ್​ ಜಗನ್​ ಮತ್ತು ಈ ಬಾರಿ ನಟ ಜನಸೇನಾ ಪಕ್ಷದ ಸ್ಥಾಪಕ ಪವನ್​ ಕಲ್ಯಾಣ್​ ಕೂಡ ಸಿಎಂ ರೇಸ್​ನಲ್ಲಿದ್ದು ಅಬ್ಬರಿಸುತ್ತಿದ್ದಾರೆ. ವಿಶೇಷ ಅಂದ್ರೆ ಚಂದ್ರಬಾಬು ನಾಯ್ಡು ಒಟ್ಟಿಗೇ ಇದ್ದ ಪ್ರಧಾನಿ ಮೋದಿ ಕೂಡ ಇದೀಗ ದೂರವಾಗಿದ್ದು, ಇದೇ ಚಂದ್ರಬಾಬು ನಾಯ್ಡು ವಿರುದ್ಧ ಮೋದಿ ಕತ್ತಿ ಮಸೆಯುತ್ತಿದ್ದಾರೆ. ಆಂಧ್ರದಲ್ಲಿ ಕಮಲ ಅರಳಿಸಲು ಪ್ಲಾನ್​ ಮಾಡ್ತಿದ್ದಾರೆ . ಇವರೆಲ್ಲಾ ಸೇರಿ ಸಿಎಂ ಚಂದ್ರಬಾಬು ನಾಯ್ಡುಗೆ ಕೆಟ್ಟ ಹೆಸರು ತರಲು ನಿರ್ದೇಶಕ ರಾಮ್​ ಗೋಪಾಲ್​ ವರ್ಮ ಮೂಲಕ ಎನ್​ಟಿಆರ್​ ಬಯೋಪಿಕ್​ ಹೆಸರಲ್ಲಿ ಸಿನಿಮಾ ಮಾಡಿಸುತ್ತಿದ್ದಾರೆ ಅನ್ನೋ ಆರೋಪವೂ ಇದೆ.

ಏನೇ ಆದ್ರೂ ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಅಷ್ಟರಲ್ಲೇ ರಾಜಕಾರಣಿಗಳು ನಾನಾ ಕಸರತ್ತು ಮಾಡ್ತಿದ್ದಾರೆ. 50 ವರ್ಷಗಳ ಕಾಂಗ್ರೆಸ್​ ಆಳ್ವಿಕೆಗೆ ಮಸಿ ಬಳಿಯಲು ಅನುಪಮ್​ ಖೇರ್‌ರನ್ನ ಮುಂದಿಟ್ಟುಕೊಂಡು ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​ ಮೂವಿ ಮಾಡಲಾಗ್ತಿದೆ. ಸೋನಿಯಾ ಗಾಂಧಿ ಸೇರಿ ನೆಹರು ಕುಟುಂಬದವರು ರಾಷ್ಟ್ರ ರಾಜಕಾರಣವನ್ನೇ ಹಿಡಿತದಲ್ಲಿಟ್ಟುಕೊಂಡಿದ್ರು ಅನ್ನೋದನ್ನ ಬಿಂಬಿಸಲಾಗ್ತಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದ್ರ ಮಧ್ಯೆ ಪ್ರಧಾನಿ ಮೋದಿ ಹವಾ ಬಿಂಬಿಸಲು ಮತ್ತೊಮ್ಮೆ ಪ್ರಧಾನಿ ಮಾಡಲು ಅವ್ರ ಜೀವನಾಧಾರಿತ ಸಿನಿಮಾದಲ್ಲಿ ನಟ ವಿವೇಕ್​ ಒಬೇರಾಯ್​ ನಟಿಸುತ್ತಿದ್ದು ಸಖತ್​ ಸದ್ದು ಮಾಡ್ತಿದೆ. ಇವೆಲ್ಲಾ ಖಂಡಿತ ಚುನಾವಣೆಗಾಗಿಯೇ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತೇ ಇದೆ.

ರಾಷ್ಟ್ರ ರಾಜಕಾರಣದಲ್ಲಿ ಇದೀಗ ಫಿಲ್ಮ್​ ಪಾಲಿಟಿಕ್ಸ್​ ಕೂಡ ಸಖತ್​ ಸದ್ದು ಮಾಡ್ತಿದೆ. ಕಾಂಗ್ರೆಸ್​​ಗೆ ಮಸಿ ಬಳಿಯಲು ಆಕ್ಸಿಡೆಂಟಲ್​ ಪಿಎಂ ಮೂವಿ ಬಂದ್ರೆ, ಮೋದಿ ಹವಾ ಬಿಂಬಿಸಲು ಪಿಎಂ ನರೇಂದ್ರ ಮೋದಿ ಸಿನಿಮಾ ಮಾಡಲಾಗ್ತಿದೆ. ಇತ್ತ ಆಂಧ್ರದಲ್ಲಿ ಚಂದ್ರಬಾಬು ನಾಯ್ಡುಗೆ ಕೆಟ್ಟ ಹೆಸರು ತರಲು ಎನ್​ಟಿಆರ್​ ಬಯೋಪಿಕ್​​ ಬಳಸಿಕೊಳ್ಳಲಾಗ್ತಿದೆ. ಒಟ್ಟನ್ನಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಫಿಲ್ಮ್​ ಪಾಲಿಟಿಕ್ಸ್​ ಸದ್ದು ಮಾಡ್ತಿದೆ.
ಮಂಜು ಪಾವಗಡ, ಟಿವಿ5 ಕನ್ನಡ

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.