ಪ್ರಧಾನಿ ಮೋದಿಗೆ ಖಡಕ್ ಎಚ್ಚರಿಕೆ ಕೊಟ್ಟ ಮಹಿಳೆ..!

ಬೆಂಗಳೂರು: ಭಾರತ ಬಂದ್ ಹಿನ್ನೆಲೆ ಇಂದು ಹಲವಾರು ಸಂಘಟನೆ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅಂಗನವಾಡಿ ಫೆಡರೇಷನ್ ಜನರಲ್ ಸೆಕ್ರೆಟರಿಯೊಬ್ಬರು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

43 ವರ್ಷದ ಹಿಂದೆ ಕೇಂದ್ರ ಸರ್ಕಾರದಿಂದ ಈ ಯೋಜನೆ ಬಂದಿದ್ದು, ನಮಗೆ ಇಎಸ್‌ಐ, ಪಿಎಫ್, ಜಾಬ್ ಸೆಕ್ಯೂರಿಟಿ ಇಲ್ಲ. ಅನಾರೋಗ್ಯಕ್ಕೀಡಾದಾಗ ರಜೆಯಾಗಲಿ, ಸರಿಯಾದ ಸಂಬಳವಾಗಲಿ ಕೊಡುವುದಿಲ್ಲವೆಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಮೋದಿಯವರಾಗಲಿ, ಮನೇಕಾ ಗಾಂಧಿಯವರಾಗಲಿ ನಮ್ಮ ಬಗ್ಗೆ ಯಾವುದೇ ಚಕಾರವೆತ್ತುತ್ತಿಲ್ಲ. ಹಲವಾರು ಹೋರಾಟಗಳನ್ನು ಮಾಡಿದರೂ ಕೂಡ ನಮ್ಮ ಸಮಸ್ಯೆ ಏನೆಂದು ಕೇಳುತ್ತಿಲ್ಲ. ಗೌರವ ಧನವೆಂದು ನಮ್ಮನ್ನು ಶೋಷಿಸುವುದು ಬಿಟ್ಟು, ನಮ್ಮನ್ನ ಕಾರ್ಮಿಕರನ್ನಾಗಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಮಹಿಳೆ, ಮೋದಿ ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ರೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಿಮಗೆ ಬುದ್ಧಿ ಕಲಿಸುತ್ತೇವೆ. ನೀನಾಗೇ ಅಲ್ಲಿ ಹೋಗಿ ಕೂತಿಲ್ಲ, ನಾವು ಮತಹಾಕಿ ಅಲ್ಲಿ ಕಳುಹಿಸಿದ್ದೇವೆ. ಪ್ರತಿಭಟನೆ ಮಾಡಿದ್ರೆ ಮಾಡ್ಕೊಳ್ಳಿ ಎಂದು ಧೋರಣೆ ಮಾಡೋದು ಸರಿಯಲ್ಲ. ಕಾರ್ಮಿಕರ ಸಮಸ್ಯೆ ಆಲಿಸಬೇಕೆಂದು ಆಗ್ರಹಿಸಿದ್ದಾರೆ.