ದೇವೇಗೌಡರ ಮಾತಿಗೆ ಜೆಡಿಎಸ್ ಶಾಸಕರೆಲ್ಲ ಗಪ್ ಚುಪ್..!

ಬೆಂಗಳೂರು: ನಿಗಮ ಮಂಡಳಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಭೆ ನಡೆಸಲಾಗಿದ್ದು, ಶಾಸಕರನ್ನ ಸಮಾಧಾನಪಡಿಸಲು ಹೆಚ್.ಡಿ.ದೇವೇಗೌಡರು ಪ್ರಯತ್ನಿಸಿದ್ದು, ಗೌಡರ ಮಾತಿಗೆ ಬೆಲೆಕೊಟ್ಟ ಶಾಸಕರು ಮೌನವಾಗಿದ್ದರು.

ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಜೆಡಿಎಲ್‌ಪಿ ಮೀಟಿಂಗ್ ನಡೆದಿದ್ದು, ಸಂಕ್ರಾಂತಿಯ ನಂತರ ನಿಗಮ ಮಂಡಳಿ ನೇಮಕಾತಿ ಮಾಡಲು ನಿರ್ಧರಿಸಿದ್ದು, ಈ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಈ ಬಗ್ಗೆ ಮಾತನಾಡಿದ ಹೆಚ್.ಡಿ.ದೇವೇಗೌಡರು, ಮಾಜಿ ಶಾಸಕರಿಗೆ, ಚುನಾವಣೆಯಲ್ಲಿ ಸೋತವರಿಗಾಗಿ ತ್ಯಾಗ ಮಾಡಿ. ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಅನುದಾನ ನೀಡತ್ತೆ. ಉಳಿದವರಿಗೆ ಯಾವುದೇ ರೀತಿಯ ಅಧಿಕಾರ ಸಿಗಲ್ಲ. ಅಂಥವರಿಗಾಗಿ ಶಾಸಕರು ತ್ಯಾಗ ಮಾಡಬೇಕು. ಶಾಸಕರೆಲ್ಲ ಈ ವಿಚಾರದಲ್ಲಿ ದೊಡ್ಡ ಮನಸ್ಸು ಮಾಡಬೇಕು ಎಂದು ಹೇಳಿದರು.

ಅಲ್ಲದೇ ಲೋಕಸಭಾ ಚುನಾವಣೆ ಸೀಟು ಹಂಚಿಕೆ ಸಂಬಂಧ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ಬೇಡ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಮಾತುಕತೆ ಆಗಲಿ . ಮಾಜಿ ಪ್ರಧಾನಿ ದೇವೇಗೌಡರೇ ಮಾತುಕತೆ ನಡೆಸಬೇಕೆಂದು ಜೆಡಿಎಸ್ ಶಾಸಕರು ತಾಕೀತು ಮಾಡಿದ್ದು, ಮೈಸೂರು, ಮಂಡ್ಯ, ಹಾಸನ, ಚಿತ್ರದುರ್ಗ, ಬೆಂಗಳೂರು ಉತ್ತರ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ 12 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ರಾಹುಲ್ ಗಾಂಧಿ ಮೇಲೆ ಒತ್ತಡ ಹೇರುವಂತೆ ಒತ್ತಾಯ ಮಾಡಲಾಗಿದೆ.