ಕೇಕ್ ಕತ್ತರಿಸಲು ಚಾಕು ಕೇಳಿದ್ದಕ್ಕೆ ವೇಟರ್ ಮಾಡಿದ್ದೇನು ಗೊತ್ತಾ..?

ಮುಂಬೈ: ಎನ್‌ಆರ್‌ಐ ಮಹಿಳೆಯೊಬ್ಬಳು ಮುಂಬೈನ ಹೊಟೇಲ್‌ ಒಂದರಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಸಂದರ್ಭದಲ್ಲಿ, ಕೇಕ್ ಕತ್ತರಿಸಲು ವೇಟರ್ ಬಳಿ ಚಾಕು ಕೇಳಿದ್ದಕ್ಕೆ, ಸಿಟ್ಟಾದ ವೇಟರ್ ಮಹಿಳೆಯ ಕತ್ತು ಕತ್ತರಿಸಲು ಮುಂದಾದ ಘಟನೆ ನಡೆದಿದೆ.

ಫರ್ಜಾನಾ ಮಿರತ್(30) ಎಂಬಾಕೆ ಮೂಲತಃ ಗುಜರಾತ್‌ನವರಾಗಿದ್ದು, ಸೌತ್ ಆಫ್ರಿಕಾದಲ್ಲಿ ವಾಸಿಸುತ್ತಿದ್ದಾರೆ. ಈಕೆ ಕೆಲ ದಿನಗಳ ಹಿಂದೆ ಭಾರತಕ್ಕೆ ಬಂದಿದ್ದು, ವಿವಾಹ ವಾರ್ಷಿಕೋತ್ಸವದ ಹಿನ್ನೆಲೆ, ಮುಂಬೈನ ಅಂಧೇರಿಯಲ್ಲಿರುವ ಹೊಟೇಲ್‌ವೊಂದಕ್ಕೆ ತನ್ನ ತಾಯಿಯೊಂದಿಗೆ ಭೇಟಿ ನೀಡಿದ್ದು, ಚಿಕ್ಕ ಪಾರ್ಟಿಗಾಗಿ ಬೇಕಾದ ತಿಂಡಿಗಳನ್ನ ಆರ್ಡರ್ ಮಾಡಿದ್ದಾರೆ. ಜೊತೆಗೆ ಆನಿವರ್ಸರಿಗಾಗಿ ಕೇಕ್ ಕೂಡ ಆರ್ಡರ್ ಮಾಡಿದ್ದಾರೆ.

ಆದರೆ ಕೇಕ್ ಜೊತೆಗೆ ಚಾಕು ಇರಲಿಲ್ಲವಾದ್ದರಿಂದ, ಅಲ್ಲೇ ಇದ್ದ ನಿಶಾಂತ್ ಗೌಡ(21) ಎಂಬ ವೇಟರ್ ಬಳಿ ಚಾಕು ತರಲು ಹೇಳಿದ್ದಾರೆ. ಇದಕ್ಕೆ ಸಿಟ್ಟಾದ ವೇಟರ್ ಚಾಕು ತೆಗೆದುಕೊಂಡು ಬಂದು, ಮಹಿಳೆಯ ಕುತ್ತಿಗೆಗೆ ಘಾಸಿಗೊಳಿಸಲು ಮುಂದಾಗಿದ್ದಾನೆ.

ಅದೃಷ್ಟವಶಾತ್ ಚಾಕು ಹೆಚ್ಚಿಗೆ ಶಾರ್ಪ್ ಇಲ್ಲವಾದ್ದರಿಂದ ಮಹಿಳೆಗೆ ಹೆಚ್ಚಿನ ಗಾಯಗಳಾಗದೇ, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಘಟನೆಗೂ ಮುನ್ನ ವೇಟರ್ ನಿಶಾಂತ್ ಗೌಡ ಸಿಟ್ಟಿನಲ್ಲಿದ್ದು, ಮಹಿಳೆ ಪದೇ ಪದೇ ಆರ್ಡರ್ ಮಾಡುತ್ತಿದ್ದರಿಂದ ವೇಟರ್‌ ಸಿಟ್ಟಿಗೊಳಗಾಗಿ ಈ ಕೃತ್ಯಕ್ಕೆ ಮುಂದಾಗಿದ್ದಾನೆಂದು ತಿಳಿದು ಬಂದಿದೆ. ಇನ್ನು ನಿಶಾಂತ್‌ನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.