ಸ್ಯಾಂಡಲ್‌ವುಡ್ ಮೇಲೆ ದಾಳಿಗೆ ಮತ್ತೊಂದು ಇಲಾಖೆ ಸಜ್ಜು..!?

ಬೆಂಗಳೂರು: ಸ್ಯಾಂಡಲ್‌ವುಡ್ ನಟ, ನಿರ್ಮಾಪಕರ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐಟಿ ಅಧಿಕಾರಿಗಳು ಈಗಾಗಲೇ ಇಡಿ ಅಧಿಕಾರಿಗಳಿಗೆ ಸುಳಿವು ನೀಡಿದ್ದು, ಐಟಿ ಬಳಿಕ ಇಡಿ ಸ್ಯಾಂಡಲ್‌ವುಡ್‌ ಸ್ಟಾರ್ಸ್ ಮೇಲೆ ದಾಳಿಗೆ ಸಜ್ಜಾಗುವ ಲಕ್ಷಣ ಕಾಣುತ್ತಿದೆ.

ನಟರು ಮತ್ತು ನಿರ್ಮಾಪಕರಿಂದ ಮನಿ ಲ್ಯಾಂಡ್ರಿಂಗ್ ನಡೆಯುತ್ತಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ಮನಿ ಲ್ಯಾಂಡ್ರಿಂಗ್ ಪ್ರಕರಣದ ಬಗ್ಗೆ ಐಟಿ ಇಡಿ ಅಧಿಕಾರಿಗಳಿಗೆ ದಾಖಲೆ ಸಮೇತ ಸುಳಿವು ನೀಡಿದೆ. ಈ ಕಾರಣಕ್ಕೆ ಇಡಿ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಲಿದ್ದು, ದಾಳಿ ನಡೆಸಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗುವುದು.

ಮನಿ ಲ್ಯಾಂಡ್ರಿಂಗ್ ಎಂದರೇನು..?
ಮನಿ ಲ್ಯಾಂಡ್ರಿಂಗ್ ಎಂದರೆ, ಕಾಳಧನವನ್ನು ವೈಟ್ ಮನಿಯನ್ನಾಗಿ ಮಾರ್ಪಡಿಸುವ ಪ್ರಕ್ರಿಯೆ. ಅಪರಾಧ, ಭ್ರಷ್ಟಾಚಾರ ಹೀಗೆ ಹಲವು ರೀತಿಯಲ್ಲಿ ಹಣ ಸಂಗ್ರಹವಾಗಿದ್ದು, ಕಾಳಧನವನ್ನು ಬೇರೆ ಬೇರೆ ಉದ್ಯಮಗಳಿಗೆ ಹೂಡಿಕೆ ಮಾಡಿ ವೈಟ್ ಮನಿಯಾಗಿ ಮಾರ್ಪಡಿಸಲಾಗುತ್ತದೆ. ಇಂತಹ ಕಾಳಧನ ಸಂಗ್ರಹ ಬೆಳಕಿಗೆ ಬಂದ್ರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೇರವಾಗಿ ಪ್ರಕರಣದಲ್ಲಿ ಪ್ರವೇಶಿಸಬಹುದಾಗಿದೆ.

ನಟ, ನಿರ್ಮಾಪಕರ ಮನೆಗೆ ನುಗ್ಗಲು ರೆಡಿಯಾಯ್ತಾ ಇಡಿ..?
ರಾಕ್ ಲೈನ್, ಮನೋಹರ್, ಯಶ್, ಪುನೀತ್ ಸೇರಿದಂತೆ ಐಟಿ ರೈಡ್ ನಡೆದ ಮನೆಮಾಲೀಕರು ಕದ ತಟ್ಟಲು ಇಡಿ ಸಿದ್ಧತೆ ಮಾಡ್ತಿದೆಯಂತೆ. ವಿಚಾರಣೆಗೆ ಹಾಜರಾಗುವಂತೆ ನಟ, ನಿರ್ಮಾಪಕರಿಗೆ ನೊಟೀಸ್ ಜಾರಿ ಮಾಡಲಾಗಿದ್ದು, ತನಿಖೆಯಲ್ಲಿ ತೆರಿಗೆ ವಂಚನೆ ಸಾಬೀತಾದ್ರೆ ಇಡಿ ಅಧಿಕಾರಿಗಳು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.