ಕಮರಿಗೆ ಬಿದ್ದ ಶಾಲಾಬಸ್: ಡ್ರೈವರ್ ಸೇರಿ 6 ವಿದ್ಯಾರ್ಥಿಗಳು ಸಾವು

ಶಾಲೆಗೆ ಹೋಗುತ್ತಿದ್ದ ಬಸ್ ಕಮರಿಗೆ ಬಿದ್ದು, 6 ವಿದ್ಯಾರ್ಥಿಗಳ ಜೊತೆ ಬಸ್ ಡ್ರೈವರ್ ಸಾವನ್ನಪ್ಪಿದ ಘಟನೆ ಹಿಮಾಚಲಪ್ರದೇಶದ ಸಿರಮಾರ್ ಜಿಲ್ಲೆಯಲ್ಲಿ ನಡೆದಿದೆ.

ಡಿಎವಿ ಶಾಲೆಗೆ ಮಕ್ಕಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, 6 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 12 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದುರಂತಕ್ಕೆ ಚಾಲಕ ರಾಮ್ ಸ್ವರೂಪ್(40) ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದ್ದು, ರಾಮ್ ಸ್ವರೂಪ್‌ ಕೂಡ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಸಮೀರ್(5), ಆದರ್ಶ(7), ಕಾರ್ತಿಕ್(14) ಸ್ಥಳದಲ್ಲೇ ಸಾವನ್ನಪ್ಪಿದರೆ, ಅಭಿಷೇಕ್ ಮತ್ತು ಆತನ ಸಹೋದರಿ ಸಂಜನಾ ಮತ್ತು ನೈತಿಕ್ ಚೌಹಾಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಗಾಯಗೊಂಡ 12 ಮಕ್ಕಳಲ್ಲಿ 10 ಮಕ್ಕಳನ್ನು ಗುರುತಿಸಲಾಗಿದ್ದು, ಗಾಯಾಳುಗಳು ಸಂಧ್ಯಾ, ರಕ್ಷಿತಾ, ಅಂಜಲಿ, ರಾಜೀವ್, ಆಯುಷ್, ವೈಷ್ಣವಿ, ಧ್ರುವಾ, ಮನ್ನತ್, ಆರುಷಿ, ಸುಂದರ್ ಸಿಂಗ್ ಎನ್ನಲಾಗಿದೆ.