ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಮಯಾಂಕ್ ಅಗರ್​ವಾಲ್

ಮೆಲ್ಬೋರ್ನ್​: ಕನ್ನಡಿಗ ಮಯಾಂಕ್ ಅಗರ್​ವಾಲ್ ಆಡಿದ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಅರ್ಧ ಶತಕ ಬಾರಿಸಿ ಕ್ರಿಕೆಟ್​ ಜಗತ್ತಿನ ಗಮನ ಸೆಳೆದಿದ್ದಾರೆ. ಜೊತೆಗೆ ಪದಾರ್ಪಣೆ ಪಂದ್ಯದಲ್ಲಿ ಹಲವಾರು ದಾಖಲೆಗಳನ್ನ ಬರೆದಿದ್ದಾರೆ.

ಮೆಲ್ಬೋರ್ನ್ ನಲ್ಲಿ ಆರಂಭವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನ ಹನುಮ ವಿಹಾರಿ ಜೊತೆ ಇನ್ನಿಂಗ್ಸ್ ಆರಂಭಿಸಿದ ಮಯಾಂಕ್​ ಅಗರ್ವಾಲ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಕಳೆದ ಎರಡು ಟೆಸ್ಟ್ ಪಂದ್ಯಗಳಿಂದ ತಂಡ ಅನುಭವಿಸಿದ್ದ ಆರಂಭಿಕ ವೈಫಲ್ಯವನ್ನ ಮೆಟ್ಟಿ ನಿಂತ 27 ವರ್ಷದ ಮಯಾಂಕ್ ಆರಂಭದಲ್ಲಿ ನಿಧಾನಗತಿಯಲ್ಲಿ ಇನ್ನಿಂಗ್ಸ್ ಆರಂಭಿಸಿ ನಂತರ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ರು. ಮಯಾಂಕ್ ಒಟ್ಟು 161 ಎಸೆತಗಳನ್ನ ಎದುರಿಸಿ 8 ಬೌಂಡ್ರಿ 1 ಸಿಕ್ಸರ್ ಬಾರಿಸಿ ಅಬ್ಬರಿಸಿದ್ರು. ಇದರೊಂದಿಗೆ ಟೀಂ ಇಂಡಿಯಾದಲ್ಲಿ ಮತ್ತೊಬ್ಬ ಕನ್ನಡಿಗನ ಅಬ್ಬರ ಶುರುವಾಗಿದೆ.

ಮಯಾಂಕ್ ಅಗರ್​ವಾಲ್ ಚೊಚ್ಚಲ ಪಂದ್ಯದಲ್ಲಿ ಅರ್ಧ ಶತಕ ಬಾರಿಸುವ ಮೂಲಕ 71 ವರ್ಷದ ಹಳೆಯ ದಾಖಲೆಯನ್ನ ಅಳಿಸಿ ಹಾಕಿದ್ದಾರೆ. 1947ರಲ್ಲಿ ತಂಡದ ಮಾಜಿ ಆಟಗಾರ ದತ್ತು ಪಾಡಕರ್ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ಪಂದ್ಯದಲ್ಲಿ 51 ರನ್ ಬಾರಿಸಿದ್ರು. ಇವರ ನಂತರ ಹೃಷಿಕೇಶ್ ಕಾನಿಟ್ಕರ್ (45), ಅಬಿದ್ ಅಲಿ (33) ತಮ್ಮ ಚೊಚ್ಚಲ ಪಂದ್ಯದಲ್ಲಿ ರನ್ ಕಲೆ ಹಾಕಿದ ಸಾಧನೆ ಮಾಡಿದ್ದಾರೆ.