ಯಾಮಾರಿದ್ರೆ ನಡೆದೇ ಬಿಡ್ತಿತ್ತು ಮತ್ತೊಂದು ನಿರ್ಭಯಾ ಪ್ರಕರಣ..!

ಬೆಂಗಳೂರು: ಕೆಲ ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಪ್ರಕರಣ ಬೆಂಗಳೂರಿನಲ್ಲಿ ಮರುಕಳಿಸುವ ಮೊದಲು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಕಾಲೇಜು ಯುವತಿಯನ್ನು ಹಾಡಹಗಲೇ ಕಿಡ್ನ್ಯಾಪ್ ಮಾಡಿದ ಗ್ಯಾಂಗ್, ಯುವತಿಯ ಮಾನಭಂಗಕ್ಕೆ ಯತ್ನಿಸಿದೆ. ಆದರೆ ದಿಟ್ಟ ಯುವತಿ ತನ್ನ ಚಾಣಾಕ್ಷತನದಿಂದ ತನ್ನ ಮಾನ ಕಾಪಾಡಿಕೊಂಡಿದ್ದಾಳೆ.

ಬೆಂಗಳೂರಿನ ದಾಸರಹಳ್ಳಿ ಬಸ್ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದ್ದು, ಮೂರು ಜನ ಕಿಡಿಗೇಡಿಗಳ ಗುಂಪು, ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯನ್ನು ಕಿಡ್ನ್ಯಾಪ್ ಮಾಡಿತ್ತು. ನಂತರ ತುಮಕೂರು ರಸ್ತೆಯ ನೈಸ್ ರಸ್ತೆ ಪಕ್ಕ ನಿಂತಿದ್ದ ಮತ್ತೊಂದು ಕಾರಿಗೆ ಯುವತಿಯನ್ನು ಹತ್ತಿಸಿದೆ.

ಆದ್ರೆ ಇನ್ನೊಂದು ಕಾರಿನಲ್ಲಿದ್ದ ಯುವಕನನ್ನು ಕಂಡು ಯುವತಿ ಬೆರಗಾಗಿದ್ದು, ಆತ ಯುವತಿಯ ಸ್ನೇಹಿತನಾಗಿದ್ದ. ಈ ವೇಳೆ ತನಗೆ ಸಹಾಯ ಮಾಡುವಂತೆ ಯುವತಿ ಕೇಳಿದಾಗ, ಆ ಯುವಕ ನಿನ್ನನ್ನು ಕಿಡ್ನ್ಯಾಪ್ ಮಾಡಿಸಿದ್ದು ನಾನೇ ಎಂದು ಹೇಳಿದ್ದಾನೆ. ತನ್ನನ್ನು ಪ್ರೀತಿಸುವಂತೆ ಪೀಡಿಸಿದ್ದಾನೆ. ಅಲ್ಲದೇ ಸ್ನೇಹಿತ ಸಚಿನ್ ಪೆಪ್ಪರ್ ಸ್ಪ್ರೇ ಉಪಯೋಗಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ.

ಆದ್ರೆ ಪೆಪ್ಪರ್ ಸ್ಪ್ರೇ ಘಾಟು ಜಾಸ್ತಿಯಾಗಿ, ಸಚಿನ್ ತನ್ನ ಕಾರಿನ್ ಗ್ಲಾಸ್ ಓಪೆನ್ ಮಾಡಿದ್ದಾನೆ. ಈ ವೇಳೆ ಕಾರಿನ ಡೋರ್ ತೆಗೆದ ಯುವತಿ ಎಸ್ಕೇಪ್ ಆಗಿದ್ದಾಳೆ. ಆಟೋ ಚಾಲಕನ ನೆರವಿನಿಂದ ಯುವತಿ ತನ್ನ ತಾಯಿಗೆ ಕರೆ ಮಾಡಿದ್ದು, ರಾತ್ರಿ 8.30ಕ್ಕೆ ಪೋಷಕರ ಮಡಿಲು ಸೇರಿದ್ದಾಳೆ. ಇನ್ನು ಪ್ರಕರಣದ ಬಗ್ಗೆ ಯುವತಿ ಪೋಷಕರು ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.