ಪ್ಯಾಡ್‌ಮ್ಯಾನ್ ಚಿತ್ರ ನೋಡಿ ಈ ಮಹಿಳೆ ಮಾಡಿದ್ದೇನು..?

ಕನ್ನಡದ ಬಂಗಾರದ ಮನುಷ್ಯ ಸಿನಿಮಾ ನೋಡಿ, ಕೃಷಿಯಿಂದ ದೂರವಾಗಿದ್ದ ಅದೆಷ್ಟೋ ಜನ ಒಕ್ಕಲುತನದತ್ತ ಮುಖ ಮಾಡಿದ್ದರಂತೆ. ಆದ್ರೆ, ಇತ್ತೀಚೆಗೆ ಸಿನಿಮಾ ಹೀರೋಗಳನ್ನ ನೋಡಿ ಹೇರ್ ಸ್ಟೈಲ್ ಬದಲಾಯಿಸಿಕೊಳ್ಳುವವರೇ ಹೆಚ್ಚು. ಆದ್ರೆ, ಇಲ್ಲೊಬ್ಬ ಮಹಿಳೆ, ಕಳೆದ ವರ್ಷ ತೆರೆಕಂಡ ಪ್ಯಾಡ್ ಮ್ಯಾನ್ ಎಂಬ ಹಿಂದಿ ಸಿನಿಮಾ ನೋಡಿ ಬದುಕನ್ನೇ ಬದಲಾಯಿಸಿಕೊಂಡಿದ್ದಾರೆ. ಸಿನಿಮಾ ಕಥೆಯಂತೆ ಸ್ಯಾನಿಟರಿ ಪ್ಯಾಡ್ ಉತ್ಪಾದನಾ ಘಟಕ ಆರಂಭಿಸಿ, ಗ್ರಾಮೀಣ ಮಹಿಳೆಯರಲ್ಲಿ ಪ್ಯಾಡ್ ಬಳಕೆ ಬಗ್ಗೆ ಅರಿವು ಮೂಡಿಸಲು ಮುಂದಡಿ ಇಟ್ಟಿದ್ದಾರೆ.

ಅಕ್ಷಯ್ ಕುಮಾರ ನಟನೆಯ ಈ ಪ್ಯಾಡ್ ಮೆನ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಸದ್ದು ಮಾಡಿದೆಯೋ ಗೊತ್ತಿಲ್ಲ. ಆದ್ರೆ, ಊಟ-ನೀರು, ಬಟ್ಟೆಯಷ್ಟೇ, ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಉತ್ತಮ ಸ್ಯಾನಿಟರಿ ಪ್ಯಾಡ್ ಬಳಕೆ ಮುಖ್ಯ ಅನ್ನೋದನ್ನ ಈ ಚಿತ್ರ ತೋರಿಸಿದೆ.

ಈ ಚಿತ್ರ ನೋಡಿದ ಕೊಪ್ಪಳದ ಮಹಿಳೆಯೊಬ್ಬರು ಗ್ರಾಮೀಣ ಭಾಗದ ಮಹಿಳೆಯರಿಗೆ ಪ್ಯಾಡ್ ಬಳಕೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇವರ ಹೆಸರು ಭಾರತಿ ಗುಡ್ಲಾನೂರು ಅಂತಾ. ಪ್ಯಾಡ್ ಮನ್ ಸಿನಿಮಾದಿಂದ ಪ್ರೇರೇಪಿತವಾಗಿರೋ ಈ ಮಹಿಳೆ ಎಲ್ಲರಂತೆ ಕೇವಲ ಭಾಷಣದ ಮೂಲಕ ಜಾಗೃತಿಗೆ ಸೀಮಿತವಾಗಿಲ್ಲ. ಬದಲಾಗಿ ತಾನೇ ಸ್ವಂತ ಸ್ಯಾನಿಟರಿ ಪ್ಯಾಡ್ ತಯಾರಿಕಾ ಘಟಕ ತೆರೆದಿದ್ದಾರೆ. ಈ ಮೂಲಕ ಸುಮಾರು ಹತ್ತಾರು ಮಹಿಳೆಯರಿಗೆ ಉದ್ಯೋಗ ನೀಡಿ, ಅವರ ಬಾಳಿಗೆ ಬೆಳಕಾಗಿದ್ದಾರೆ.

ಭಾರತಿ ಗುಡ್ಲಾನೂರ ಕೇಂದ್ರ ಸರ್ಕಾರದ ಸ್ತ್ರೀ ಸ್ವಾಭಿಮಾನ ಯೋಜನೆಯಡಿ ಧನ ಸಹಾಯ ಪಡೆದು, ಕೊಪ್ಪಳದ ಗವಿಶ್ರೀನಗರದಲ್ಲಿ ಸಂಘಿನಿ ಪಿಂಕ್ ಪ್ಯಾಡ್ಸ್ ಹೆಸರಿನಲ್ಲಿ ಪ್ಯಾಡ್ ಉತ್ಪಾದನಾ ಘಟಕ ಆರಂಭಿಸಿದ್ದಾರೆ. ಈ ಮೂಲಕ ತಾವು ಮಹಿಳಾ ಉದ್ಯಮಿಯಾಗಿ, ಮಹಿಳೆಯರಿಗೆ ಉದ್ಯೋಗ ಕಲ್ಪಿಸಿ ಯೋಜನೆಯ ಉದ್ದೇಶವನ್ನು ಸಂಪೂರ್ಣವಾಗಿ ಸಾಕಾರಗೊಳಿಸಿದ್ದಾರೆ.

ಇಷ್ಟೇ ಅಲ್ಲದೇ, ಭಾರತಿ ಗುಡ್ಲಾನೂರ ಕೊಪ್ಪಳದ ಜಿಲ್ಲಾಡಳಿತದ ಸಹಕಾರದೊಂದಿಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರು. ಶಾಲೆ-ಕಾಲೇಜು ವಿದ್ಯಾರ್ಥಿನಿಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನ ಭೇಟಿ ಮಾಡಿ, ಮುಟ್ಟಿನ ಸಮಯದಲ್ಲಿ ವಹಿಸುವ ಎಚ್ಚರಿಕೆ ಮತ್ತು ಪ್ಯಾಡ್ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಇನ್ನು ಪ್ರತಿ ದಿನ 1600 ರಿಂದ 2000 ಪ್ಯಾಡ್ ಕಿಟ್ ತಯಾರಿಸುವ ಭಾರತಿ, ಕಡಿಮೆ ಬೆಲೆಗೆ ಪ್ಯಾಡ್ ಮಾರಾಟ ಮಾಡುವ ಜೊತೆಗೆ ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ಉಚಿತ ವಿತರಣೆಯನ್ನೂ ಮಾಡ್ತಿದ್ದಾರೆ. ಈ ಉತ್ಪಾದನಾ ಘಟಕಕ್ಕೆ ಕೇಂದ್ರ ಸರ್ಕಾರದ ಸ್ತ್ರೀ ಸ್ವಾಭಿಮಾನ ಯೋಜನೆಯಿಂದಲೇ ಕಚ್ಚಾ ವಸ್ತು ನೀಡಲಾಗುತ್ತಿದೆಯಂತೆ. ಈ ಕಾರಣಕ್ಕೆ ಮಹಿಳೆಯರು ಕೈಯಿಂದಲೇ ತಯಾರಿಸುವ ಈ ಪ್ಯಾಡ್ ಗಳು ಇತರೇ ನ್ಯಾಪ್ಕಿನ್‌ಗಿಂತ ಹೆಚ್ಚು ಸುರಕ್ಷಿತ ಮತ್ತು ಅಡ್ಡ ಪರಿಣಾಮ ರಹಿತವಾಗಿವೆಯಂತೆ.

ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ಕಂಪನಿಗಳ ನ್ಯಾಪ್ಕಿನ್‌ನಲ್ಲಿ ಪ್ಲಾಸ್ಟಿಕ್ ಹೆಚ್ಚಿದ್ದು, ಇದು ಮಹಿಳೆಯರ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಕರವಂತೆ. ಇದ್ರಿಂದ ಭಾರತಿ ಗುಡ್ಲಾನೂರರ ಪ್ರಯತ್ನ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ, ಸ್ವಚ್ಚ ಭಾರತ್ ಮತ್ತು ಸ್ತ್ರೀ ಸ್ವಾಭಿಮಾನ ಯೋಜನೆಯ ಉದ್ದೇಶದ ಸಾಕಾರವಾಗಿದೆ. ಜೊತೆಗೆ ಈ ಯೋಜನೆಯಡಿ ಘಟಕ ಆರಂಭಿಸಿದ ರಾಜ್ಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಭಾರತಿಗಿದೆ.

ಭಾರತಿ ಗುಡ್ಲಾನೂರ ಒಂದು ಸಿನಿಮಾದಿಂದ ಪ್ರೇರಣೆಗೊಂಡು ಉದ್ಯಮಿಯಾಗಿದ್ದಾರೆ. ಕೇವಲ ವ್ಯವಹಾರ ಮಾತ್ರವಲ್ಲದೇ ಸಾಮಾಜಿಕ ಚಿಂತನೆ ಕಡೆಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೊಪ್ಪಳದ ಭಾರತಿಯಂಥ ನೀರೆಯರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ ಅಂತ ಹಾರೈಸೋಣ.
ಕ್ಯಾಮೆರಾಮೆನ್ ಪ್ರಕಾಶ್ ಗೋಂದಕರ್ ಜೊತೆ ನಾಗರಾಜ್ ವೈ TV5, ಕೊಪ್ಪಳ