10 ನಿಮಿಷದಲ್ಲಿ ಕಿಡ್ನ್ಯಾಪ್, 1ಗಂಟೆಯಲ್ಲಿ ಕೊಲೆ, ಮಂಚದ ಕೆಳಗೆ ಶವಪತ್ತೆ

ಬೆಂಗಳೂರು: ಕಿಡ್ನ್ಯಾಪ್ ಆಗಿದ್ದ ಒಂದು ತಿಂಗಳ ಹಸುಗೂಸು ಮಂಚದ ಕೆಳಗೆ ಶವವಾಗಿ ಪತ್ತೆಯಾದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇಲ್ಲಿನ ವಿವೇಕನಗರದಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ಮಲಗಿದ್ದ ಒಂದು ತಿಂಗಳ ಹಸುಗೂಸು ಕೇವಲ ಹತ್ತು ನಿಮಿಷದಲ್ಲಿ ಕಿಡ್ನ್ಯಾಪ್ ಆಗಿದೆ. ನಂತರ ಒಂದೇ ಗಂಟೆಯಲ್ಲಿ ಶವವಾಗಿ ಪತ್ತೆಯಾಗಿದೆ.

ಕಾರ್ತಿಕ್ ಎಂಬುವವರ ಅವಳಿ ಮಕ್ಕಳಲ್ಲಿ, ಒಂದು ಹಸುಗೂಸು ಕಗ್ಗೊಲೆಯಾಗಿದ್ದು, ಮಗುವನ್ನು ಕಿಡ್ನ್ಯಾಪ್‌ ಮಾಡಿದ ಹಂತಕರು, ಉಸಿರುಗಟ್ಟಿಸಿ ಕೊಂದು, ಟವೆಲ್‌ನಲ್ಲಿ ಸುತ್ತಿದ ಶವವನ್ನ ಮಂಚದ ಕೆಳಗಿರಿಸಿ ಹೋಗಿದ್ದಾರೆ.

ಘಟನೆ ನಡೆದಿದ್ದು ಹೇಗೆ..?
ಇದೇ 21ರಂದು ರಾತ್ರಿ ಮಗು ಜ್ವರದಿಂದ ಬಳಲುತ್ತಿತ್ತು. ಆದ್ದರಿಂದ ಮಗುವನ್ನು ಹಾಲ್‌ನಲ್ಲಿದ್ದ ಬೆಡ್ ಮೇಲೆ ಮಲಗಿಸಿದ್ದ ಕಾರ್ತಿಕ್ ಔಷಧಿ ತರಲು ಹೋಗಿದ್ದಾರೆ. ಈ ವೇಳೆ ಮತ್ತೊಂದು ಮಗುವಿಗೆ ಹಾಲು ಕುಡಿಸಲು ತಾಯಿ ಬೇರೆ ರೂಮಿಗೆ ಹೋಗಿದ್ದಾರೆ.

ಕಾರ್ತಿಕ್ ಹೊರಗಡೆ ಹೋದ 10 ನಿಮಿಷಕ್ಕೆ ಮಗು ನಾಪತ್ತೆಯಾಗಿದೆ. ಈ ಬಗ್ಗೆ ಅಶೋಕನಗರ ಪೊಲೀಸರಿಗೆ ಮಾಹಿತಿ ನೀಡಿದ ಕಾರ್ತಿಕ್, ಅವರೊಂದಿಗೆ ಮನೆಗೆ ಬಂದಿದ್ದಾನೆ. ಕಾರ್ತಿಕ್ ಮತ್ತು ಕುಟುಂಬಸ್ಥರೆಲ್ಲ ಪೊಲೀಸರ ಜೊತೆಗೂಡಿ ಇಡೀ ಏರಿಯಾದಲ್ಲಿ ಹುಡುಕಾಡಿದರೂ ಮಗು ಪತ್ತೆಯಾಗಿರಲಿಲ್ಲ. ಆಗ ಪೊಲೀಸರು ಮನೆಯಲ್ಲಿ ಪರಿಶೀಲನೆ ನಡೆಸಿದಾಗ, ಮಂಚದ ಕೆಳಗೆ ಮಗುವಿನ ಶವ ಪತ್ತೆಯಾಗಿದೆ.

ಇತ್ತೀಚೆಗೆ ಸಹೋದರ ಹಾಗೂ ತಂದೆಯಿಂದ ದೂರವಾಗಿದ್ದ ಕಾರ್ತಿಕ್ ಪತ್ನಿಯೊಡನೆ ವಾಸವಿದ್ದ. ಈ ಕಾರಣಕ್ಕಾಗಿ ಕಾರ್ತಿಕ್ ಸಹೋದರ ಮತ್ತು ಆತನ ತಂದೆ ಮಗುವನ್ನು ಹತ್ಯೆಗೈದಿರುವ ಆರೋಪ ಮಾಡಲಾಗಿದೆ. ಈ ಬಗ್ಗೆ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.