ಓವನ್ ಇಲ್ಲದೆಯೂ ತಯಾರಿಸಬಹುದು ಪನೀರ್ ಪಿಜ್ಜಾ

ಬೇಕಾಗುವ ಸಾಮಗ್ರಿ:1 ಕಪ್ ಮೈದಾ, 1/4 ಕಪ್ ಮೊಸರು, 1 ಸ್ಪೂನ್ ಸಕ್ಕರೆ, 1/2 ಸ್ಪೂನ್ ಬೇಕಿಂಗ್ ಪೌಡರ್, 1/2 ಬೇಕಿಂಗ್ ಸೋಡಾ, 2 ಸ್ಪೂನ್ ಕಡಲೆಹಿಟ್ಟು,1 ಸ್ಪೂನ್ ಗರಮ್ ಮಸಾಲಾ, 1 ಸ್ಪೂನ್ ಸಾಸಿವೆ ಎಣ್ಣೆ, 1 ಸ್ಪೂನ್ ಖಾರದ ಪುಡಿ, 1 ಚಿಕ್ಕ ನಿಂಬೆಹಣ್ಣು, 2 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್,ಚಿಲ್ಲಿ ಪ್ಲೇಕ್ಸ್, ಈರುಳ್ಳಿ, ಕ್ಯಾಪ್ಸಿಕಂ, ಪಿಜ್ಜಾ ಸಾಸ್, ಪನೀರ್ ಕ್ಯೂಬ್ಸ್, ಚೀಸ್, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:1 ಕಪ್ ಮೈದಾ, 1/4 ಕಪ್ ಮೊಸರು, 1 ಸ್ಪೂನ್ ಸಕ್ಕರೆ, 1/2 ಸ್ಪೂನ್ ಬೇಕಿಂಗ್ ಪೌಡರ್, 1/2 ಬೇಕಿಂಗ್ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು, 3-4 ಸ್ಪೂನ್ ನೀರು ಹಾಕಿ ಚೆನ್ನಾಗಿ ಕಲಿಸಿ, ಅದಕ್ಕೆ 1/2 ಸ್ಪೂನ್ ಎಣ್ಣೆ ಸೇರಿಸಿ ಹಿಟ್ಟು ತಯಾರಿಸಿ. ಇದನ್ನ ಒಂದು ಬೌಲ್‌ನಲ್ಲಿರಿಸಿ ಅದಕ್ಕೆ ಬಟ್ಟೆಯಿಂದ ಕವರ್ ಮಾಡಿ ಪಕ್ಕಕ್ಕಿರಿಸಿ.

ಇನ್ನೊಂದು ಬೌಲ್‌ನಲ್ಲಿ 1/4 ಕಪ್ ಮೊಸರು, 2 ಸ್ಪೂನ್ ಕಡಲೆಹಿಟ್ಟು, 1 ಸ್ಪೂನ್ ಗರಮ್ ಮಸಾಲಾ, 1 ಸ್ಪೂನ್ ಸಾಸಿವೆ ಎಣ್ಣೆ, 1 ಸ್ಪೂನ್ ಖಾರದ ಪುಡಿ, 1 ಚಿಕ್ಕ ನಿಂಬೆಹಣ್ಣಿನ ರಸ, 2 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ 8-10 ಪನೀರ್ ಕ್ಯೂಬ್ಸ್ ಮಿಕ್ಸ್ ಮಾಡಿಕೊಳ್ಳಿ. ಒಂದು ಪ್ಯಾನ್‌ನಲ್ಲಿ ಈ ಮಿಶ್ರಣ ಹಾಕಿ ಚೆನ್ನಾಗಿ ಹುರಿಯಿರಿ.

ಪಿಜ್ಜಾ ಬೇಸ್ ಮಾಡಲು ರೆಡಿ ಮಾಡಿಟ್ಟುಕೊಂಡಿದ್ದ ಹಿಟ್ಟನ್ನು ಎರಡು ತುಂಡುಗಳನ್ನಾಗಿ ವಿಂಗಡಿಸಿ, ಸ್ವಲ್ಪ ದಪ್ಪವಾಗಿ ಚಪಾತಿ ರೀತಿಯಲ್ಲಿ ಲಟ್ಟಿಸಿ. ಪಿಜ್ಜಾ ಬೇಸ್ ಸ್ವಲ್ಪ ದಪ್ಪವಾಗಿರಲಿ. ಇದನ್ನ ಸ್ವಲ್ಪ ಎಣ್ಣೆ ಸವರಿದ ಪಿಜ್ಜಾ ಪ್ಲೇಟ್ ಮೇಲೆ ಹಾಕಿ, ಅದರ ಮೇಲೆ, ತುಪ್ಪ ಅಥವಾ ಎಣ್ಣೆ ಸವರಿ, ಪಿಜ್ಜಾ ಸಾಸ್ ಸ್ಪ್ರೆಡ್ ಮಾಡಿಕೊಳ್ಳಿ. ಅದರ ಮೇಲೆ ಚೀಸ್, ಹುರಿದಿಟ್ಟುಕೊಂಡ ಪನೀರ್, ಕ್ಯಾಪ್ಸಿಕಂ, ಈರುಳ್ಳಿ, ಚಿಲ್ಲಿ ಫ್ಲೇಕ್ಸ್ ಹಾಕಿ.

ಓವನ್ ಇಲ್ಲದಿದ್ದರೆ ಒಂದು ಕುಕ್ಕರ್‌ನಲ್ಲಿ 2 ಕಪ್ ಉಪ್ಪು ಹಾಕಿ 15 ನಿಮಿಷ ಬಿಸಿ ಮಾಡಿ ನಂತರ ಇದರ ಮೇಲೆ ಯಾವುದಾದರೂ ಚಿಕ್ಕ ಸ್ಟ್ಯಾಂಡ್ ಇಡಿ. ಇದರ ಮೇಲೆ ಪಿಜ್ಜಾ ಪ್ಲೇಟ್ ಇರಿಸಿ. ವಿಸಿಲ್ ಇಲ್ಲದೇ ಕುಕ್ಕರ ಮುಚ್ಚಳ ಮುಚ್ಚಿ, 8-10 ನಿಮಿಷ ದೊಡ್ಡ ಉರಿಯಲ್ಲಿ ಬೇಯಿಸಿ.(ಕುಕ್ಕರ್ ಬದಲು, ದಪ್ಪ ತಳದ ಪಾತ್ರೆ, ಕಡಾಯಿ ಬಳಸಬಹುದು).