ಓವನ್ ಇಲ್ಲದೇ ತಯಾರಿಸಿ ಎಗ್‌ಲೆಸ್ ಕ್ರಿಸ್‌ಮಸ್ ಕೇಕ್(ಪ್ಲಮ್ ಕೇಕ್)

ಡಿಸೆಂಬರ್ ಬಂದ್ರೆ ಸಾಕು. ಕ್ರಿಸ್‌ಮಸ್ ಹಬ್ಬದ ಸಡಗರ ಸಂಭ್ರಮ. ಕ್ರಿಸ್‌ಮಸ್‌ಗೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕೆಂಬುದೇ ಗೃಹಿಣಿಯರಿಗೆ ಟೆನ್ಶನ್. ಮನೆಯಲ್ಲಿ ಓವನ್ ಇಲ್ಲದೇ ಕೇಕ್ ತಯಾರಿಸುವುದು ಹೇಗೆ ಎಂದು ಅಂಗಡಿಯಿಂದಲೇ ಕೇಕ್ ತಂದು ಕ್ರಿಸ್‌ಮಸ್ ಸೆಲೆಬ್ರೇಷನ್ ಮಾಡ್ತಾರೆ. ಆದ್ರೆ ಓವನ್ ಇಲ್ಲದೆನೇ, ಎಗ್, ವೈನ್ ಹಾಕದೇನೆ ಕ್ರಿಸ್‌ಮಸ್ ಕೇಕ್ ಅಂದ್ರೆ ಪ್ಲಮ್ ಕೇಕ್ ತಯಾರಿಸಬಹುದು. ಹಾಗಾದ್ರೆ ಎಗ್‌ಲೆಸ್ ಪ್ಲಮ್ ಕೇಕ್ ತಯಾರಿಸಿವುದು ಹೇಗೆ ಅನ್ನೋದನ್ನ ನೋಡೋಣ ಬನ್ನಿ.

ಬೇಕಾಗುವ ಸಾಮಗ್ರಿ: 1/4 ಕಪ್ ಮಿಕ್ಸಡ್ ಫ್ರೂಟ್‌ ಜ್ಯೂಸ್, 1/2 ಕಪ್ ಹಾಲು, 1 ಸ್ಪೂನ್ ವಿನೇಗರ್, 4 ಸ್ಪೂನ್ ನೀರು, 1/4 ಕಪ್ ಸಕ್ಕರೆ, 1 ಕಪ್ ಮೈದಾ, 1ಸ್ಪೂನ್ ಬೇಕಿಂಗ್ ಪೌಡರ್, 1/2 ಸ್ಪೂನ್ ಬೇಕಿಂಗ್ ಸೋಡಾ, 2 ಸ್ಪೂನ್ ಕಾರ್ನ್ ಪೌಡರ್, 2 ಸ್ಪೂನ್ ಹಾಲಿನ ಪೌಡರ್, 1/4 ಸ್ಪೂನ್ ದಾಲ್ಚಿನಿ, 1/4 ಸ್ಪೂನ್ ಏಲಕ್ಕಿ ಪುಡಿ, 1/4 ಸ್ಪೂನ್ ಶುಂಠಿ ಪೌಡರ್, 1/4 ಕಪ್ ಮೆಲ್ಟೆಡ್ ಬಟರ್, 1 ಸ್ಪೂನ್ ವೆನಿಲ್ಲಾ ಎಸ್ಸೆನ್ಸ್, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಚೆರ್ರಿ ಹಣ್ಣು, ಖರ್ಜೂರ.

ಮಾಡುವ ವಿಧಾನ: ಮಿಕ್ಸಡ್ ಫ್ರೂಟ್ ಜ್ಯೂಸ್‌ಗೆ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಚೆರ್ರಿ ಹಣ್ಣು, ಖರ್ಜೂರ ಸೇರಿಸಿ, ಒಂದು ಗಂಟೆ ನೆನೆಸಿಡಿ. ನಂತರ ಹಾಲಿಗೆ ವಿನೆಗರ್ ಬೆರೆಸಿ, ಪಕ್ಕಕ್ಕಿರಿಸಿ.

ಸಕ್ಕರೆ ಪಾಕ ಮಾಡಿಕೊಳ್ಳಲು 1ಸ್ಪೂನ್ ಸಕ್ಕರೆ ಮತ್ತು 4 ಸ್ಪೂನ್ ನೀರು ಹಾಕಿ ಕುದಿಸಿ. ಸಕ್ಕರೆ ಪಾಕ ತಯಾರಾದ ಮೇಲೆ, ನೆನೆಸಿಟ್ಟಿದ್ದ ಫ್ರೂಟ್ ಜ್ಯೂಸ್ ಮತ್ತು ಒಣಹಣ್ಣಿಗೆ ಈ ಸಿರಪ್ ಹಾಕಿ, ಜೊತೆಗೆ 1/4 ಕಪ್ ಸಕ್ಕರೆ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ 1 ಕಪ್ ಮೈದಾ, 1ಸ್ಪೂನ್ ಬೇಕಿಂಗ್ ಪೌಡರ್, 1/2 ಸ್ಪೂನ್ ಬೇಕಿಂಗ್ ಸೋಡಾ, 2 ಸ್ಪೂನ್ ಕಾರ್ನ್ ಪೌಡರ್, 2 ಸ್ಪೂನ್ ಹಾಲಿನ ಪೌಡರ್, 1/4 ಸ್ಪೂನ್ ದಾಲ್ಚಿನಿ, 1/4 ಸ್ಪೂನ್ ಏಲಕ್ಕಿ ಪುಡಿ, 1/4 ಸ್ಪೂನ್ ಶುಂಠಿ ಪೌಡರ್,ಇವೆಲ್ಲವನ್ನೂ ಚಿಕ್ಕ ಜರಡಿಯಲ್ಲಿ ಹಾಕಿ ಕ್ಲೀನ್ ಮಾಡಿ ಮಿಕ್ಸ್ ಮಾಡಿ. ಇದರ ಜೊತೆ ವಿನೇಗರ್ ಜೊತೆ ಸೇರಿಸಿದ್ದ ಹಾಲು, ಕರಗಿಸಿದ ಬೆಣ್ಣೆ, ವೆನಿಲ್ಲಾ ಎಸ್ಸೆನ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದೀಗ ಕೇಕ್ ಮಿಶ್ರಣ ರೆಡಿ.

ಕೇಕ್ ಬೌಲ್‌ಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಸವರಿ ಅದರ ತಳದಲ್ಲಿ ಬಟರ್ ಪೇಪರ್ ಹಾಕಿ ಅದರ ಮೇಲೆ ಸ್ವಲ್ಪ ಮೈದಾ ಸಿಂಪಡಿಸಿ, ಇದಕ್ಕೆ ಕೇಕ್ ಮಿಶ್ರಣ ಹಾಕಿ. ಓವನ್ ಇಲ್ಲದಿದ್ದರೆ ಒಂದು ಕುಕ್ಕರ್‌ನಲ್ಲಿ 2 ಕಪ್ ಉಪ್ಪು ಹಾಕಿ 15 ನಿಮಿಷ ಬಿಸಿ ಮಾಡಿ ನಂತರ ಇದರ ಮೇಲೆ ಯಾವುದಾದರೂ ಚಿಕ್ಕ ಸ್ಟ್ಯಾಂಡ್ ಇಡಿ. ಇದರ ಮೇಲೆ ಕೇಕ್ ಬೌಲ್ ಇರಿಸಿ. ವಿಸಿಲ್ ಇಲ್ಲದೇ ಕುಕ್ಕರ ಮುಚ್ಚಳ ಮುಚ್ಚಿ, 40ರಿಂದ 45 ನಿಮಿಷ ಮಂದ ಉರಿಯಲ್ಲಿ ಬೇಯಿಸಿ.(ಕುಕ್ಕರ್ ಬದಲು, ದಪ್ಪ ತಳದ ಪಾತ್ರೆ, ಕಡಾಯಿ ಬಳಸಬಹುದು) ನಂತರ ಕೇಕ್‌ನಲ್ಲಿ ಚಾಕು ಅಥವಾ ಚಮಚ ಹಾಕಿ ಕೇಕ್ ಬೆಂದಿರುವುದನ್ನು ಖಚಿತಪಡಿಸಿಕೊಳ್ಳಿ. ಇದರ ಮೇಲೆ ಸಕ್ಕರೆ ಪುಡಿ, ಚೆರ್ರಿ ಹಣ್ಣಿನಿಂದ ಅಲಂಕರಿಸಿದರೆ ಪ್ಲಮ್ ಕೇಕ್ ರೆಡಿ.

ಸೂಚನೆ: ಕೇಕ್ ಮಾಡುವಾಗ ಪದಾರ್ಥಗಳ ಅಳತೆ ಮುಖ್ಯ. ಅಳತೆ ಮೀರಿ ಅಥವಾ ಅಳತೆಗೂ ಕಡಿಮೆ ಪದಾರ್ಥ ಬಳಸಿದಲ್ಲಿ ಕೇಕ್ ತನ್ನ ರುಚಿ ಕಳೆದುಕೊಳ್ಳುತ್ತದೆ. ಅಲ್ಲದೇ ಕೇಕ್ ಆಗುವಲ್ಲಿ ಹಲ್ವಾ ಆಗಿ, ಮಾಡಿದ ಶ್ರಮವೆಲ್ಲ ವ್ಯರ್ಥವಾಗುತ್ತದೆ.