ಕೆಜಿಎಫ್ ಟಿಕೇಟ್ ಸಿಗದಿದ್ದಕ್ಕೆ ಥಿಯೇಟರ್‌ ಸಿಬ್ಬಂದಿ ಬೆರಳು ಕಟ್

ಎಲ್ಲೆಲ್ಲೂ ಕೆಜಿಎಫ್ ಸಿನಿಮಾದ್ದೇ ಹವಾ. ದೇಶಾದ್ಯಂತ 5 ಭಾಷೆಗಳಲ್ಲಿ ರಿಲೀಸ್ ಆಗ್ತಿರೋ ಕೆಜಿಎಫ್‌ ಚಿತ್ರವನ್ನ, ಕೆಜಿಎಫ್‌ ಹಬ್ಬ ಅಂತಾನೇ ಯಶ್ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಆದ್ರೆ ಇಂಥ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಕೆಜಿಎಫ್ ಸಿನಿಮಾದ ಬ್ಲಾಕ್ ಟಿಕೆಟ್ ಕೊಡದಿದ್ದಕ್ಕೆ, ಥಿಯೇಟರ್‌ನ ಸಿಬ್ಬಂದಿ ಬೆರಳನ್ನೇ ಕತ್ತರಿಸಿ, ವಿಕೃತಿ ಮೆರೆದಿದ್ದಾನೆ.

ಮಾಗಡಿ ರಸ್ತೆಯ ವಿರೇಶ್ ಥಿಯೇಟರ್ ಬಳಿ ಡಿ.17ರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಥಿಯೇಟರ್ ಸಿಬ್ಬಂದಿ ಅರವಿಂದ್ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಪರಿಣಾಮವಾಗಿ ಅರವಿಂದ್‌ರ ಎರಡೂ ಕೈಗಳಿಗೆ ಗಂಭೀರ ಗಾಯವಾಗಿದ್ದು, ಎಡಗೈ ಬೆರಳು ಕಟ್ ಆಗಿದೆ. ಈ ಹಿನ್ನೆಲೆ ಅರವಿಂದ್ ಪೋಷಕರ ಮೇಲೆ ಅವಲಂಬಿತರಾಗಿದ್ದಾರೆ.

ಇನ್ನು ಆರೋಪಿ ಹಲವು ದಿನಗಳಿಂದ ಥಿಯೇಟರ್ ಬಳಿ ಬ್ಲಾಕ್ ಟಿಕೇಟ್ ಮಾರಾಟ ಮಾಡುತ್ತಿದ್ದು, ಕೆಜಿಎಫ್‌ನ ಬ್ಲಾಕ್ ಟಿಕೇಟ್ ಕೊಡಿಸುವಂತೆ ದುಂಬಾಲು ಬಿದ್ದಿದ್ದ. ಆದರೆ ಯಾವುದೇ ಕಾರಣಕ್ಕೂ ಬ್ಲಾಕ್ ಟಿಕೇಟ್ ಕೊಡಿಸುವುದಿಲ್ಲವೆಂದು ಅರವಿಂದ್ ತಿಳಿಸಿದ್ದು, ಈ ಕಾರಣಕ್ಕಾಗಿ ಆರೋಪಿ ಬೆರಳು ಕತ್ತರಿಸಿ, ವಿಕೃತಿ ಮೆರೆದಿದ್ದಾನೆ.

ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಟೋರಿಯಸ್ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.