ಮಕ್ಕಳನ್ನ ಸಾವಿನ ಮನೆಗೆ ದೂಡಿದ ತಾಯಿಯ ಪಾರ್ಟಿ ಹುಚ್ಚು: 40 ವರ್ಷ ಜೈಲು ಶಿಕ್ಷೆ

ಮಹಿಳೆಯೊಬ್ಬಳು ತನ್ನ ಮಕ್ಕಳನ್ನ ರಾತ್ರಿಯಿಡೀ ಕಾರಿನಲ್ಲಿ ಕೂಡಿ ಹಾಕಿ, ಪಾರ್ಟಿಗೆ ಹೋಗಿದ್ದು, ಮಕ್ಕಳು ಕಾರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಜೂನ್ 7, 2017ರಂದು ಟೆಕ್ಸಾಸ್ ಎಂಬಲ್ಲಿ ಈ ಘಟನೆ ನಡೆದಿದ್ದು, ಅಮಂಡಾ ಹಾವ್ಕಿನ್ಸ್ ಎಂಬಾಕೆ ರಾತ್ರಿ ವೇಳೆ ತನ್ನ 1 ಮತ್ತು 2 ವರ್ಷದ ಹೆಣ್ಣು ಮಕ್ಕಳನ್ನು ಕರೆದುಕೊಂಡು ಪಾರ್ಟಿ ಮಾಡಲು ಹೋಗಿದ್ದಾಳೆ.

ಪಾರ್ಟಿಗೆ ಮಕ್ಕಳು ಬಂದರೆ ತೊಂದರೆಯಾಗಬಹುದೆಂದು, ಮಕ್ಕಳನ್ನು ಕಾರಿನಲ್ಲಿ ಕೂಡಿ ಹಾಕಿ ಹೋಗಿದ್ದಾಳೆ. ಇತ್ತ ಕಾರಿನಲ್ಲಿ ಮಕ್ಕಳು ಅಳುವುದನ್ನು ಕಂಡವರೊಬ್ಬರು, ಮಕ್ಕಳನ್ನ ಒಳತರುವಂತೆ ಹೇಳಿದರೂ, ಮಕ್ಕಳು ಅಳುತ್ತಾ ಅಳುತ್ತಾ ನಿದ್ದೆ ಮಾಡುತ್ತಾರೆ ಎಂದು ನಿರ್ಲಕ್ಷಿಸಿದ್ದಾಳೆ.

ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದು ಮಜಾ ಮಾಡಿದ ಅಮಂಡಾಗೆ ಬೆಳಗ್ಗಿನ ಜಾವ ಮಕ್ಕಳ ನೆನಪಾಗಿದೆ. ಕಾರ್ ಬಳಿ ಹೋಗಿ ನೋಡಿದಾಗ, ಮಕ್ಕಳು ಕಾರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಇಷ್ಟಾದರೂ ಕೂಡ ಮಹಿಳೆ ತನ್ನ ಮೇಲೆ ಕೊಲೆ ಆರೋಪ ಬರಬಾರದೆಂದು ಮಕ್ಕಳನ್ನು ಆಸ್ಪತ್ರೆಗೆ ಸಾಗಿಸುವ ಪ್ಲಾನ್ ಮಾಡಿದ್ದಾಳೆ. ಅಲ್ಲದೇ ಕೋರ್ಟಿನಲ್ಲಿ ಮಕ್ಕಳ ಸಾವಿನ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದಳು. ಆದರೆ ಕೋರ್ಟ್, ಮಕ್ಕಳ ಸಾವಿಗೆ ತಾಯಿಯೇ ಕಾರಣವೆಂದು ತೀರ್ಪು ನೀಡಿ, ಆಕೆಗೆ 40 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.