ಪರ್ತ್​ ಟೆಸ್ಟ್​: ಭಾರತದ ಗೆಲುವಿನ ಆಸೆಗೆ ಹಾಜ್ಲೆ, ನಾಥನ್ ಹೊಡೆತ

ಮಧ್ಯಮ ವೇಗಿ ಹಾಜ್ಲೆವುಡ್ ಹಾಗೂ ಸ್ಪಿನ್ನರ್ ನಾಥನ್ ಲಿಯೊನ್ ಅವರ ಮಾರಕ ದಾಳಿಗೆ ತತ್ತರಿಸಿದ ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ವಿಕೆಟ್ ಕೈ ಚೆಲ್ಲಿದ್ದರಿಂದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿನ ಆಸೆಗೆ ದೊಡ್ಡ ಹೊಡೆತ ಬಿದ್ದಿದೆ.

ಪರ್ತ್​ನಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಆಸ್ಟ್ರೇಲಿಯಾ ತಂಡವನ್ನು 283 ರನ್​ಗಳಿಗೆ ನಿಯಂತ್ರಿಸಿದ ಭಾರತ ತಂಡ ಗೆಲ್ಲಲು 287 ರನ್​ ಗಳ ಗುರಿ ಪಡೆಯಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಭಾರತ ತಂಡ ದಿನದಾಂತ್ಯಕ್ಕೆ 114 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿ ತಲುಪಿದೆ.

ಕೆಳ ಕ್ರಮಾಂಕದ ಬ್ಯಾಟ್ಸ್​ಮನ್​ಗಳಾದ ಹನುಮ ವಿಹಾರಿ (24) ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ (9) ವಿಕೆಟ್ ಕಾಯ್ದುಕೊಂಡಿದ್ದು, ಭಾರತದ ಗೆಲುವಿನ ಆಸೆಯನ್ನು ಉಳಿಸಿಕೊಂಡಿದ್ದಾರೆ.

ಭಾರತ ತಂಡ ಮೊದಲ ಓವರ್​ನಿಂದಲೇ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಇದರಿಂದ ತಂಡ ಗೆಲುವಿನ ಭರವಸೆಯನ್ನೇ ಮೂಡಿಸಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ (34) ಮಾತ್ರ ತಕ್ಕ ಉತ್ತರ ನೀಡಲು ಪ್ರಯತ್ನಿಸಿದರೂ ಕೊನೆಯಲ್ಲಿ ಅವರೂ ವಿಕೆಟ್ ಒಪ್ಪಿಸಿದರು.

ಆಸ್ಟ್ರೇಲಿಯಾ ಪರ ನಾಥನ್ ಹಾಜ್ಲೆವುಡ್ ಮತ್ತು ನಾಥನ್ ಲಿಯೊನ್ ತಲಾ 2 ವಿಕೆಟ್ ಪಡೆದು ಭಾರತಕ್ಕೆ ದೊಡ್ಡ ಆಘಾತ ನೀಡಿದರೆ, ಮಿಚೆಲ್ ಸ್ಟಾರ್ಕ್ 1 ವಿಕೆಟ್ ಗಳಿಸಿದರು.

  • ಸಂಕ್ಷಿಪ್ತ ಸ್ಕೋರ್
  • ಆಸ್ಟ್ರೇಲಿಯಾ 326 ಮತ್ತು 243
  • ಭಾರತ 286 ಮತ್ತು 2ನೇ ಇನಿಂಗ್ಸ್ 5 ವಿಕೆಟ್​ಗೆ 112 (ರಹಾನೆ 30, ಹನುಮ 24, ಮುರಳಿ 20, ಹಾಜ್ಲೆವುಡ್ 24/2, ಲಿಯೊನ್ 30/2).