ಪರ್ತ್ ಟೆಸ್ಟ್: ಆಸ್ಟ್ರೇಲಿಯಾಗೆ ಕೊಹ್ಲಿ-ರಹಾನೆ ತಿರುಗೇಟು!

ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರ ಭರ್ಜರಿ ಜೊತೆಯಾಟದ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾಗೆ ತಿರುಗೇಟು ನೀಡಿದೆ.
ಪರ್ತ್ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ 6 ವಿಕೆಟ್ಗೆ 277 ರನ್ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಾ ತಂಡ 326 ರನ್ಗಳಿಗೆ ಆಲೌಟ್ ಆಯಿತು. ನಂತರ ಇನಿಂಗ್ಸ್ ಆರಂಭಿಸಿದ ಭಾರತ ತಂಡ ದಿನದಾಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿದೆ. ಸಮಬಲ ಸಾಧಿಸಬೇಕಾದರೆ ಭಾರತಕ್ಕೆ 154 ರನ್ ಅಗತ್ಯವಿದ್ದು, ಕೈಯಲ್ಲಿ 7 ವಿಕೆಟ್ ಹೊಂದಿದೆ.
ನಾಯಕ ಕೊಹ್ಲಿ 181 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ 82 ರನ್ ಬಾರಿಸಿ ಔಟಾಗದೇ ಉಳಿದರೆ, ರಹಾನೆ 103 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಂತೆ 51 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಇವರಿಬ್ಬರು ಮುರಿಯದ ನಾಲ್ಕನೇ ವಿಕೆಟ್ಗೆ 90 ರನ್ ಜೊತೆಯಾಟ ನಿಭಾಯಿಸಿದ್ದಾರೆ.
ಇನಿಂಗ್ಸ್ ಆರಂಭಿಸಿದ ಭಾರತ ತಂಡ ಮುರಳಿ ವಿಜಯ್ (0) ಮತ್ತು 2 ರನ್ ಗಳಿಸಿದ ಕೆ.ಎಲ್. ರಾಹುಲ್ ಅವರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು.
ನಂತರ ಚೇತೇಶ್ವರ್ ಪೂಜಾರ ಜೊತೆಗೂಡಿದ ವಿರಾಟ್ ಕೊಹ್ಲಿ ಮೂರನೇ ವಿಕೆಟ್ಗೆ 74 ರನ್ ಪೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಆದರೆ ತಾಳ್ಮೆಯಿಂದ ಆಡುತ್ತಿದ್ದ ಪೂಜಾರ 103 ಎಸೆತಗಳಲ್ಲಿ 1 ಬೌಂಡರಿಯೊಂದಿಗೆ 24 ರನ್ ಗಳಿಸಿದ್ದಾಗ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಎಡವಿ ವಿಕೆಟ್ ಒಪ್ಪಿಸಿದರು.
ನಂತರ ಬಂದ ಅಜಿಂಕ್ಯ ರಹಾನೆ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಕೊಹ್ಲಿ ಮತ್ತು ರಹಾನೆ ಮುರಿಯದ ನಾಲ್ಕನೇ ವಿಕೆಟ್ಗೆ 90 ರನ್ ಪೇರಿಸಿ ತಂಡವನ್ನು ಮುನ್ನಡೆಸಿದರು. ಇಬ್ಬರೂ ದಿನದಾಟದ ಅಂತ್ಯಕ್ಕೆ ಅರ್ಧಶತಕ ಬಾರಿಸಿದ್ದೂ ಅಲ್ಲದೇ ವಿಕೆಟ್ ಉಳಿಸಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿದರು.
- ಸಂಕ್ಷಿಪ್ತ ಸ್ಕೋರ್
- ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 326 (ಪೇನ್ 38, ಇಶಾಂತ್ 41/4)
- ಭಾರತ ಮೊದಲ ಇನಿಂಗ್ಸ್ 3 ವಿಕೆಟ್ಗೆ 172 (ಕೊಹ್ಲಿ ಅಜೇಯ 82, ರಹಾನೆ ಅಜೇಯ 51, ಸ್ಟಾರ್ಕ್ 42/2).