Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1.ಆಸ್ತಿಗಾಗಿ ಎರಡು ಗುಂಪುಗಳ ಮಧ್ಯ ಮಾರಾಮಾರಿ ನಡೆದು ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವನ್ನಪ್ಪಿದ ಘಟನೆ ಬಿದರ್ ಜಿಲ್ಲೆಯ ಗುಂಪಾ ರಿಂಗ್ ರೋಡ್ ಬಳಿ ಘಟನೆ ನಡೆದಿದೆ. ಎರಡು ಗುಂಪುಗಳ ಮಧ್ಯ ಮಾರಾಮಾರಿಯಾಗಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು,ಇನ್ನು ಈ ಪ್ರಕರಣದ ಕುರಿತು ನಿರ್ಮಲಾ ಸೇರಿದಂತೆ ಮೂವರ ಗಾಂಧೀಗಂಜ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

2.ಬಾಗಲಕೋಟೆ ನಗರ ಮಾತ್ರವಲ್ಲದೇ ಜಿಲ್ಲೆಯ ಸುತ್ತಮುತ್ತಲಿನ ಜನರ ಪಾಲಿನ ಆರಾಧ್ಯ ದೈವವಾಗಿ ಕೊತ್ತಲೇಶ್ವರ ನೆಲೆ ನಿಂತಿದ್ದಾನೆ. ನಿತ್ಯ ತನ್ನ ಬಳಿ ಬರುವ ಜನರ ಕಷ್ಟ ಕಾರ್ಪಣ್ಯಗಳನ್ನ ನಿವಾರಿಸುವ ಜಾಗೃತ ದೇವರಾಗಿದ್ದಾನೆ. 600 ವರ್ಷಗಳಷ್ಟು ಹಿಂದಿನಿಂದಲೂ ತನ್ನದೇ ಆದ ಹಿನ್ನಲೆ ಹೊಂದಿರುವ ಈ ದೇವಸ್ಥಾನದಲ್ಲಿ ಹಲವಾರು ವಿಶೇಷತೆಗಳು, ಪವಾಡಗಳು ನಡೆದಿರುವ ಉದಾಹರಣೆಗಳಿವೆ. ಅದರಲ್ಲೂ ಪ್ರಮುಖವಾದ ವಿಷಯ ಅಂದ್ರೆ, ಆಂಜಿನೇಯನ ಅವತಾರದಲ್ಲಿರುವ ಈ ಕೊತ್ತಲೇಶ್ವರನ ಉದ್ಭವ ಮೂರ್ತಿ. ಹೌದು ಇದು ಶಿಲ್ಪಿಗಳಿಂದ ಕೆತ್ತನೆ ಮಾಡಿರುವ ಮೂರ್ತಿಯಲ್ಲ. ಕೋಟೆಯ ಕೊತ್ತಲುಗಳಲ್ಲಿ ಉದ್ಭವಿಸಿರುವ ಈ ಕೊತ್ತಲೇಶ್ವರನ ಉದ್ಭವ ಮೂರ್ತಿ ಅಗಾಧ ಶಕ್ತಿಯನ್ನ ಹೊಂದಿದೆ.

3.ಐದನೇ ದಿನದ ಬೆಳಗಾವಿ ಚಳಿಗಾಲದ ಆಧಿವೇಶನ ಹಿನ್ನೆಲೆಯಲ್ಲಿ ಸುವರ್ಣಸೌಧದ ಎದುರು ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೆಳಗಾವಿಯ ಸುವರ್ಣಸೌಧದ ಬಳಿ ಇರುವ ಸುವರ್ಣ ಗಾರ್ಡನ್ ನಲ್ಲಿ, ಪೌರ ಕಾರ್ಮಿಕರು,ವಿದ್ಯುತ್ ಗುತ್ತಿಗೆ ಕಾರ್ಮಿಕರು, ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಜೆಓಡಿಸಿ ವಿಲೀನ ನೌಕರರು ಹಾಗೂ ಕರ್ನಾಟಕ ರಾಜ್ಯ ಡಿಪ್ಲೋಮಾ ಕೃಷಿ ಪದವೀಧರರು, ಐಟಿಐ ಕಾಲೇಜು ವಿದ್ಯಾರ್ಥಿಗಳು, ನಿವೃತ್ತ ಯೋಧರು ಸೇರಿದಂತೆ ಹಲವು ಸಂಘಟನೆಗಳು, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬೆಳಗಾವಿ ಜಿಲ್ಲಾಡಳಿತದಿಂದ ಹಾಕಲಾಗಿರುವ ಟೆಂಟ್ ನಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ಮೇಲೆ ಒತ್ತಡ ಹೇರಿದರು.

4.ಚಿಕ್ಕೋಡಿ ಜಿಲ್ಲಾ ಘೋಷಣೆಗೆ ಒತ್ತಾಯಿಸಿ ಸ್ಥಬ್ದಗೊಂಡಿದ್ದ ಚಿಕ್ಕೋಡಿ ಪಟ್ಟಣ... ಬೆಳಗಾವಿಯ ಚಳಿಗಾಲ ಅಧಿವೇಶನ ಪೂರ್ಣಗೊಳ್ಳುವದರೊಳಗಾಗಿ ಜಿಲ್ಲಾ ಘೋಷಣೆಗೆ ಗಡುವು... ಚಿಕ್ಕೋಡಿ ಜಿಲ್ಲೆಗಾಗಿ ಟೈರ್ ಗೆ ಬೆಂಕಿ, ಮುಚ್ಚಿದ್ದ ಅಂಗಡಿ ಮುಂಗಟ್ಟು. ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಚಿಕ್ಕೋಡಿ, ಅಥಣಿ, ರಾಯಬಾಗ, ಹುಕ್ಕೇರಿ ತಾಲೂಕುಗಳನ್ನೊಳಗೊಂಡ ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವನ್ನಾಗಿಸಿ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡುವಂತೆ ಒತ್ತಾಯಿಸಿ ಇಂದು ಚಿಕ್ಕೋಡಿ ಪಟ್ಟಣ ಬಂದ್ ಕರೆ ನೀಡಲಾಗಿತ್ತು. ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ವ್ಯಾಪಾರಸ್ಥರ‌ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಗೊಂಡಿತು.

5.ಕೋಟೆ ನಗರಿ ಚಿತ್ರದುರ್ಗದ ಕೂಗಳತೆಯಲ್ಲಿರುವ ತಿಮ್ಮಣ್ಣನಾಯಕನ ಕೆರೆ. ಇದೀಗ ಆ ಕೆರೆ ಅವನತಿಯತ್ತ ಸಾಗಿದೆ. ಒಂದು ಹನಿ ನೀರಿಲ್ಲದೆ ಜಾಳಿ ಸೇರಿದಂತೆ ಅನ್ಯ ಮರಗಿಡಗಳು ಬೆಳೆದು ಭಣಗುಡಿತಿದೆ. ಅಂದು ಅರಸ ಮದಕರಿನಾಯಕನ ಆಡಳಿತದವಧಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಕೆರೆ, ತಮ್ಮ ಸೈನಿಕರಿಗೆ, ಆನೆ, ಕುದುರೆಗಳಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ನೆರವಾಗಲಿ ಎಂಬ ಉದ್ದೇಶದಿಂದ ನಿರ್ಮಾಣವಾಗಿತ್ತು, ‌ಅದ್ರೇ ಅದೀಗ ನೀರಿಲ್ಲದ್ದೆ ಜನಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಅವನತ್ತಿಯತ್ತ ಸಾಗಿದೆ. ಈ ಕೆರೆಯ ಅಕ್ಕಪಕ್ಕದಲ್ಲಿರುವ ಬೆಟ್ಟ ಗುಡ್ಡಗಳಿಂದ ಮಳೆ ಬಂದಾಗ ಬರುವ ನೀರು ಈ ಕೆರೆ ಸೇರುವಂತೆ ನಾಯಕ ಅರಸರು ಮಾಡಿದ್ದರು.

  1. ಚಿತ್ರದುರ್ಗ ತಾಲೂಕಿನ ಹುಲ್ಲೇಹಾಳ್ ನಿವಾಸಿ ನಟರಾಜ್, ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿ 4ರ ದಾವಣಗೆರೆ ಸಮೀಪದ ಹೆಬ್ಬಾಳ ಟೋಲ್ ನಲ್ಲಿ ಸೂಪರ್ ವೈಸರ್ ಆಗಿರು ನಟರಾಜನಿಗೆ ಈಗಾಗಲೇ ಮದುವೆಯಾಗಿದ್ದು, ಎರಡು ಹೆಣ್ಣು ಮಕ್ಕಳಿದ್ದಾರೆ. ಆದರೂ ಚಿತ್ರದುರ್ಗ ತಾಲೂಕು ಹಾಯ್ಕಲ್ ಗ್ರಾಮದ ವಿವಾಹಿತ ಮಹಿಳೆಯೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದ ನಟರಾಜ್, ನಿನ್ನೆ ಸಂಜೆ ಹಾಯ್ಕಲ್ ಹೊರವಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

7.ಚಳಿಗಾಲದ ಅಧಿವೇಶನದ 4ನೇ ದಿನವಾದ ಇಂದು ಮೂರು ವಿಧೇಯಕಗಳು ಅಂಗೀಕಾರವಾಗಿವೆ. ಶಾಸಕರಿಗೆ ಸದನದಲ್ಲಿ ಮಾತನಾಡುವ ಬಗ್ಗೆ ಸ್ಪೀಕರ್‌ ರಮೇಶ್ ಕುಮಾರ್‌ ಪಾಠ ಮಾಡಿದ್ರು. ಸಂಜೆವರೆಗೆ ಕಲಾಪ ನಡೆಸಬಹುದಾಗಿದ್ದರೂ ಊರಿನ ಕಡೆ ತೆರಳುವ ಉತ್ಸಾಹದಲ್ಲಿ ಶಾಸಕರು ಸದನ ಮುಂದುವರಿಕೆಗೆ ನಿರುತ್ಸಾಹವನ್ನೂ ತೋರಿದರು.

8.ಅವರೆಲ್ಲ ಮಾರಮ್ಮನ ಪ್ರಸಾದ ಸೇವಿಸಿ ದೇವಿಯ ಕೃಪೆಗೆ ಪಾತ್ರರಾಗಲು ಹೋಗಿದ್ದವರು. ಆದ್ರೆ, ವಿಧಿಯ ಆಟವೇ ಬೇರೆಯಾಗಿತ್ತು. ಅವರಿಗೆ ದೇವಿಯ ಪ್ರಸಾದವೇ ವಿಷವಾಗಿದೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ.ಮನಸ್ಸನ್ನು ತಲ್ಲಣಗೊಳಿಸುವ ಹೃದಯ ವಿದ್ರಾವಕ ಘಟನೆ ಇದು. ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದಲ್ಲಿ ಇಂತಹ ಘೋರ ದುರಂತ ಸಂಜೆ ಸಂಭವಿಸಿದೆ. ಇವತ್ತು ಗ್ರಾಮದಲ್ಲಿ ಕಿಚ್ಚುಗುತ್ತಿ ಮಾರಮ್ಮ ದೇವಾಸ್ಥಾನ ಗೋಪುರದ ಶಂಕುಸ್ಥಾಪನೆ ಕಾರ್ಯಕ್ರಮ ಇತ್ತು. ಇದಕ್ಕಾಗಿ ಗ್ರಾಮವೂ ಸಿಂಗಾರಗೊಂಡಿತ್ತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲು ತರಕಾರಿ ರೈಸ್‌ಬಾತ್‌ ತಯಾರಿಸಲಾಗಿತ್ತು. ಆದ್ರೆ, ಈ ಪ್ರಸಾದವೇ ಭಕ್ತರ ಪಾಲಿಗೆ ವಿಷವಾಗಿದೆ.

9.ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೆ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ, ಆರೋಪಗಳೆಲ್ಲ ಕಾಲ್ಪನಿಕ ಬರವಣಿಗೆ ಎಂದಿದ್ದಾರೆ. ರಫೇಲ್​ ಯುದ್ಧ ವಿಮಾನ ಖರೀದಿಗೆ ಅಡ್ಡಿಪಡಿಸುತ್ತಿದ್ದವರು ಈಗ ಎಲ್ಲವನ್ನೂ ಕಳೆದುಕೊಂಡಂತಾಗಿದೆ. ಕೇಂದ್ರ ಸರ್ಕಾರ ನೀಡಿದ್ದ ಅಂಕಿ ಅಂಶ ಸತ್ಯವಾಗಿದ್ದು, ರಾಹುಲ್​ ಗಾಂಧಿ ಒದಗಿಸಿದ್ದ ಅಂಕಿ ಅಂಶ ಸುಳ್ಳು ಎಂದು ಸಾಬೀತಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ. ಸತ್ಯಕ್ಕೆ ಕೇವಲ ಒಂದೇ ರೂಪವಿರುತ್ತದೆ. ಆದರೆ, ಸುಳ್ಳಿಗೆ ಹಲವು ಮುಖಗಳಿರುತ್ತವೆ. ಅದಕ್ಕಾಗಿಯೇ ರಾಹುಲ್ ಗಾಂಧಿ​ ವಿಭಿನ್ನ ಅಂಕಿ ಅಂಶಗಳನ್ನು ನೀಡಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ. ರಕ್ಷಣೆ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. 2012ರಲ್ಲಿ ಯುಪಿಎ ಅವಧಿಯಲ್ಲಿ ನಡೆದಿದ್ದ ಯುದ್ಧ ವಿಮಾನಕ್ಕಿಂತ ಸಾಕಷ್ಟು ಪಟ್ಟು ಉತ್ತಮ ಗುಣಮಟ್ಟದ ಏರ್‌ಕ್ರಾಫ್ಟ್‌ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಹಾಗೆಯೇ, ನಿರ್ಮಲಾ ಸೀತಾರಾಮನ್‌ ಮಾತನಾಡಿ, ರಫೇಲ್​ ಹಗರಣ ಆರೋಪ ಸುಪ್ರೀಂಕೋರ್ಟ್ ತೀರ್ಪಿನೊಂದಿಗೆ ವಿಶ್ರಾಂತಿ ಪಡೆದಿದೆ ಎಂದು ವ್ಯಂಗ್ಯವಾಡಿದ್ದಾರೆ.

10.ಮಧ್ಯಪ್ರದೇಶ ಹಿಂದಿ ಭಾಷೆಯ ಹೃದಯ ಭಾಗ..ಕಳೆದ 15 ವರ್ಷಗಳಿಂದ ಬಿಜೆಪಿ ಆಡಳಿತ ಇತ್ತು. ಇದೀಗ ಕಾಂಗ್ರೆಸ್‌ ಅಧಿಕಾರಕ್ಕೇರಿದೆ. ಇದರ ಮುಖ್ಯಮಂತ್ರಿಯಾಗಿ 72 ವರ್ಷದ ಹಿರಿಯ ಸಂಸದ ಕಮಲನಾಥ್‌ ಆಯ್ಕೆಯಾಗಿದ್ದಾರೆ. ಸಾಕಷ್ಟು ಬೆಳವಣಿಗೆ ನಂತರ ರಾಹುಲ್‌ ಗಾಂಧಿ ಅಳೆದು ತೂಗಿ ಹಿರಿಯರಿಗೆ ಮಣೆ ಹಾಕಿದ್ದಾರೆ. ಕಮಲನಾಥ್‌ ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಕಮಲನಾಥ್‌ಗೆ ತೀವ್ರ ಪೈಪೋಟಿವೊಡ್ಡಿದ್ದ ಜ್ಯೋತಿರಾಧ್ಯ ಸಿಂಧ್ಯಾ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗುತ್ತೆ ಅಂತಲೇ ವದಂತಿ ಇತ್ತು. ಆದ್ರೆ, ಅದ್ಯಾಕೋ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಕಾಂಗ್ರೆಸ್‌ ಅಧ್ಯಕ್ಷರು ಆಸಕ್ತಿ ತೋರಿಸಿಲ್ಲ. ಇದರಿಂದ ಮಧ್ಯಪ್ರದೇಶದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ. ಹೀಗಾಗಿ, ಸಿಂಧ್ಯಾಗೆ ನಿರಾಸೆ ಆಗಿದೆ.

11.ಅನ್ನದಾತನ ಬೆಂಬಲಕ್ಕೆ ನಿಲ್ಲಲು ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಖಾಸಗಿ ಲೇವಾದೇವಿಗಾರರಿಗೆ ಕಡಿವಾಣ ಹಾಕಲು ಚಿಂತಿಸಿರುವ ಸರ್ಕಾರ ಮಿತಿ ಮೀರಿದ ಬಡ್ಡಿ ವಿಧಿಸುವಿಕೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಬೆನ್ನಿಗೆ ನಿಲ್ಲಲು ಮುಂದಾಗಿದೆ. ಇದೇ ಅಧಿವೇಶನದಲ್ಲಿ ಈ ಕಾಯ್ದೆ ಅನುಮೋದನೆ ಗೊಳ್ಳುವ ಸಾಧ್ಯತೆ ಇದೆ.

12.ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣ ಆರೋಪದಲ್ಲಿ ಪ್ರಧಾನಿ ಮೋದಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ತಿರಸ್ಕರಿಸಿರುವ ಸುಪ್ರೀಂಕೋರ್ಟ್‌, ಖರೀದಿ ಪ್ರಕ್ರಿಯೆಯಲ್ಲಿ ಸರ್ಕಾರ ಪಕ್ಷಪಾತ ಮಾಡಿದೆ ಎಂಬ ಆರೋಪಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ. ಯುದ್ಧವಿಮಾನಗಳ ಖರೀದಿ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಕಾರಣಗಳಿಲ್ಲ ಅಂತ ಹೇಳಿದೆ. ಇದರಿಂದ ಕಾಂಗ್ರೆಸ್‌ಗೆ ತೀವ್ರ ಮುಖಂಗ ಎದುರಾಗಿದೆ.

13.ರಫೇಲ್‌ ಡೀಲ್‌ ಹಗರಣ ಆರೋಪ ಸಂಬಂದ ಯಾವುದೇ ಬಲವಾದ ಸಾಕ್ಷ್ಯಾಧಾರಗಳಿಲ್ಲ ಅಂತ ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಬೆನ್ನಲ್ಲ ರಾಹುಲ್‌ ಗಾಂಧಿ, ನಾನು ಅವ್ಯವಹಾರವನ್ನು ಸಾಬೀತುಪಡಿಸುತ್ತೇನೆ ಅಂತ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚೌಕಿದಾರ ಕಳ್ಳ. ರಿಲಯನ್ಸ್‌ ಸಂಸ್ಥೆಯ ಅನಿಲ್‌ ಅಂಬಾನಿಗೆ ಪ್ರಧಾನಿ ಮೋದಿ ಸಹಾಯ ಮಾಡಿರುವುದನ್ನು ನಾನು ಸಾಬೀತುಪಡಿಸುತ್ತೇನೆ. ಒಂದು ರಫೇಲ್‌ ಯುದ್ಧ ವಿಮಾನದ ಬೆಲೆ 526 ಕೋಟಿಯಿಂದ 1,600 ಕೋಟಿ ರೂಪಾಯಿಗೆ ಹೇಗೆ ಹೆಚ್ಚಳವಾಯ್ತು ಅನ್ನೋದು ನಮ್ಮ ಮೂಲ ಪ್ರಶ್ನೆ ಅಂತ ಹೇಳಿದ್ದಾರೆ. ಸಿಎಜಿ ವರದಿ ಆಧಾರದ ಮೇಲೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿಗೂ ಆಕ್ಷೇಪ ವ್ಯಕ್ತಪಡಿಸಿರುವ ರಾಹುಲ್‌, ಸಿಎಜಿ ವರದಿ ಸಾರ್ವಜನಿಕ ಆಸ್ತಿ. ಆದ್ರೆ, ಯಾರೊಬ್ಬರೂ ಅದನ್ನು ನೋಡಿಲ್ಲ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾದ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕೂಡ ನೋಡಿಲ್ಲ. ಹೀಗಿರುವಾಗ ಅದರ ಆಧಾರದ ಮೇಲೆ ಸುಪ್ರೀಂಕೋರ್ಟ್‌ ಹೇಗೆ ತೀರ್ಪು ನೀಡಿದೆ ಅಂತ ಪ್ರಶ್ನಿಸಿದ್ದಾರೆ.

14.ರಾಜಕೀಯ ತಂತ್ರಗಾರ ಅಶೋಕ್‌ ಗೆಹ್ಲೋಟ್‌ ಈಗ ರಾಜಸ್ಥಾನದ ರಾಜ. 67 ವರ್ಷದ ಅನುಭವಿ ರಾಜಕಾರಣಿಗೆ ಕಾಂಗ್ರೆಸ್‌ ಹೈಕಮಾಂಡ್‌ ಮಣೆ ಹಾಕಿದೆ. ಇದಕ್ಕೆಲ್ಲಾ ಕಾರಣ 2019ರ ಲೋಕಸಭಾ ಚುನಾವಣೆ.2019ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಕಾಂಗ್ರೆಸ್‌ಗೆ ಇವರೆಲ್ಲಾ ಆಸರೆ ಆಗ್ತಾರೆ ಎಂಬುದು ರಾಹುಲ್‌ ಅಭಿಲಾಸೆ..ಇದಕ್ಕಾಗಿಯೇ ಹಿರಿಯರಿಗೆ ಪಟ್ಟ ಕಟ್ಟಲಾಗಿದೆ.ಹಾಗೆಯೇ ಮುಖ್ಯಮಂತ್ರಿ ರೇಸ್‌ನಲ್ಲಿದ್ದ 41 ವರ್ಷದ ಸಚಿನ್‌ ಪೈಲಟ್‌ ಅವರನ್ನೂ ಕಡೆಗಣಿಸಿಲ್ಲ. ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಲೆಯಲ್ಲಿ ಕೊಚ್ಚಿಹೋಗಿದ್ದ ಕಾಂಗ್ರೆಸ್‌ ಪಡೆಯನ್ನು ಈ ಬಾರಿ ಗೆಲುವಿನ ದಡ ಹತ್ತಿಸಿದ ಕೀರ್ತಿ ಪೈಲಟ್‌ ಬೆನ್ನಿಗಿದೆ. 2013ರಲ್ಲಿ ಕೇವಲ 20 ಕಾಂಗ್ರೆಸ್‌ ಶಾಸಕರ ಗೆದ್ದಿದ್ದರು. ಆದ್ರೆ ಈ ಬಾರಿ 99 ಮಂದಿ ಜಯಗಳಿಸಿದ್ದಾರೆ.

15.ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ ಪುತ್ರ ಹಾಗೂ ಸಿರಿಸಿಲ್ಲಾ ಕ್ಷೇತ್ರದ ಶಾಸಕ ಕೆ.ಟಿ.ರಾಮರಾವ್ ಅವರು ಟಿಆರ್‌ಎಸ್‌ ಕಾರ್ಯಾಧ್ಯಕ್ಷರಾಗಿ ಇಂದು ನೇಮಕವಾಗಿದ್ದಾರೆ. ಬಾಕಿಯಿರುವ ನಿರ್ಮಾಣ ಕಾಮಗಾರಿಗಳು ಹಾಗೂ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಂದಾಲೋಚನೆಯುಳ್ಳ, ನಂಬಿಕಸ್ಥ ಹಾಗೂ ಸಮರ್ಥ ವ್ಯಕ್ತಿಯನ್ನು ಪಕ್ಷದ ಜವಾಬ್ದಾರಿಯುತ ಹುದ್ದೆಗೆ ಆಯ್ಕೆ ಮಾಡಲು ಕೆಸಿಆರ್‌ ಬಯಸಿದ್ದರು ಎಂದು ಟಿಆರ್‌ಎಸ್‌ ತಿಳಿಸಿದೆ. ಪಕ್ಷದ ಸದಸ್ಯತ್ವ ಹೆಚ್ಚಳ ಹಾಗೂ ಜಿಲ್ಲೆಗಳಲ್ಲಿ ಪಕ್ಷದ ಕಚೇರಿ ನಿರ್ಮಿಸುವುದರ ಜೊತೆಗೆ ಹಲವು ಜವಾಬ್ದಾರಿಗಳತ್ತ ರಾಮರಾವ್‌ ಗಮನಹರಿಸಲಿದ್ದಾರೆ. ಕೆಸಿಆರ್‌ ಅವರು ಪ್ರತ್ಯೇಕ ತೆಲಂಗಾಣ ಹೋರಾಟದ ರಾಜಕೀಯ ವೇದಿಕೆಯಾಗಿ ಟಿಆರ್‌ಎಸ್‌ ಪಕ್ಷವನ್ನು 2001ರಲ್ಲಿ ಸ್ಥಾಪಿಸಿದ್ದರು. ಹೋರಾಟವು ತಾರ್ಕಿಕ ಅಂತ್ಯ ಕಾಣುವಲ್ಲಿ ಟಿಆರ್‌ಎಸ್‌ ಮಹತ್ವದ ಪಾತ್ರ ನಿರ್ವಹಿಸಿತ್ತು.

16.ಉತ್ತರ ಕರ್ನಾಟಕ ಪ್ರಸಿದ್ದ ಶ್ರೀ ಸೂಗೂರೇಶ್ವರ ಜೋಡು ರಥೋತ್ಸವ ಲಕ್ಷಾಂತರ ಭಕ್ತ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ರಾಯಚೂರು ತಾಲೂಕಿನ ದೇವಸೂಗೂರು ಗ್ರಾಮದಲ್ಲಿ ನೆಲೆಸಿರುವ ಶ್ರೀ ಸೂಗೂರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸಕಲ ಭಕಗತ್ತಾದಿಗಳು ಹಾಗೂ ವಿವಿಧ ಕಲಾತಂಡಗಳೊಂದಿಗೆ ಎರಡು ರಥಗಳನ್ನ ಭಕ್ತಿ ಭಾವದಿಂದ ಎಳೆಯುವ ಮೂಲಕ ಜಾತ್ರಾ ಮಹೋತ್ಸವವನ್ನ ವಿಜಭೃಣೆಯಿಂದ ಆಚರಿಸಿದರು.ಈ ಜಾತ್ರೆಗೆ ರಾಜ್ಯದ ನಾನಾ ಜಿಲ್ಲೆಗಳು ಹಾಗು ಪಕ್ಕದ ತೆಲಂಗಾಣ, ಸೀಮಾಂಧ್ರ, ಮಹಾರಾಷ್ಟ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತ ಲಕ್ಷಾಂತರ ಭಕ್ತರು ಆಗಮಿಸಿದರು. ಇನ್ನು ಜಾತ್ರ ಮಹೋತ್ಸವ ಹಿನ್ನಲೆಯಲ್ಲಿ ಬೆಳಗ್ಗೆಯಿಂದ ಶ್ರೀಸೂಗೂರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮಹಾಪೂಜೆ, ಎಲೆಪೂಜೆ, ಪಲ್ಲಕ್ಕಿ ಉತ್ಸವ ಸೇರಿದಂತೆ ವಿಶೇಷ ಪೂಜೆಗಳಿಗೆ ನಡೆದವು. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

17.ಸುವರ್ಣ ಸೌಧದಲ್ಲಿ ಕಲಾಪ ಆರಂಭಕ್ಕೂ ಮುನ್ನ ಕೆಶಿಫ್ ವತಿಯಿಂದ ರಸ್ತೆ ಸುರಕ್ಷತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.. ಕಾರ್ಯಕ್ರಮ ರೇವಣ್ಣ ಸಾಹೇಬ್ರು ಪ್ರಕಾರ ಬರೊಬ್ಬರಿ 10 ಗಂಟೆಗೆ ಚಾಲನೆ ನೀಡಬೇಕಿತ್ತು. ಕಾರ್ಯಕ್ರಮಕ್ಕೆ ಬೆಳಗಾವಿ ಪೊಲೀಸ್ ಮೈದಾನಕ್ಕೆ ಆಗಮಿಸಿದ ಸಚಿವ ರೇವಣ್ಣ ಬರೊಬ್ಬರಿ 9.40ಕ್ಕೆ ಆಗಮಿಸಿದರು. ರೇವಣ್ಣ ಸಾಹೇಬ್ರು ಕಾರ್ಯಕ್ರಮ ಸ್ಥಳಕ್ಕೆ ಬಂದ್ರೂ ವಾಹನದಿಂದ ಕೇಳ ಇಳಿಯಲೇ ಇಲ್ಲ.ಯಾವಾಗ ರಾಹುಕಾಲ ಹೋಗಿ ಗುಳಿಕಕಾಲ ಬಂತೋ ರೇವಣ್ಣ ಸಾಹೇಬ್ರು ತಮ್ಮ ವಾಹನದಿಂದ ಕೆಳಗಿಳಿದರು.

18.ಚಿಕ್ಕಮಗಳೂರು ಜಿಲ್ಲೆ ಹೇಳಿ ಕೇಳಿ ಮಲೆನಾಡು. ಭೂರಮೆಯ ತೋಟವೆಂದೇ ಪ್ರಸಿದ್ದವಾಗಿರುವ ಇಲ್ಲಿನ ಪ್ರದೇಶ ಮಂಗಳಮುಖಿಯರನ್ನೂ ಸಹಾ ಕೃಷಿ ಮಾಡುವಂತೆ ಮಾಡಿದೆ. ತರೀಕೆರೆ ತಾಲೂಕಿನ ಹುಲಿ ತಿಮ್ಮಾ ಪುರ ಗ್ರಾಮದಲ್ಲಿ ಅಪ್ಪಟ ಕೃಷಿ ಕಾಯಕದಲ್ಲಿ ತೊಡಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ತಮ್ಮ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ, ಟೋಮಟೋ, ಆಲೂಗೆಡ್ಡೆ, ಬದನೆ, ರಾಗಿ, ಅವರೆ, ತೊಗರಿ ಸೇರಿದಂತೆ ಬಗೆ ಬಗೆಯ ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅಲ್ಲದೆ ಮನೆಗಳಲ್ಲಿ ಹಸು ಸಾಕುವ ಮೂಲಕವೂ ಹೈನುಗಾರಿಕೆಗೂ ಸೈ ಎನಿಸಿಕೊಂಡಿದ್ದಾರೆ.

19.ದೇವರಿಗೆ ಅರ್ಚನೆ, ಪೂಜೆ, ನೈವೇದ್ಯ ಅರ್ಪಣೆ ಎಲ್ಲವೂ ಸರಿಯಾಗಿಯೇ ಇತ್ತು.. ಭಕ್ತರಿಗೆ ಮಾತ್ರ ಮಂಗಳಾರತಿ, ತೀರ್ಥ ಮತ್ತು ಪ್ರಸಾದ ವಿತರಣೆಯಾಗಿಲ್ಲ. ಹೀಗಾಗಿ ಮೈಸೂರಿನ ಪ್ರಸಿದ್ಧ ಚಾಮುಂಡಿಬೆಟ್ಟದಲ್ಲಿ ಭಾರೀ ಜಟಾಪಟಿಯೇ ನಡ್ದು ಹೋಯ್ತು.. ನೌಕರರ ಖಾಯಮಾತಿ ಸೇರಿ ಪ್ರಮುಖ ಏಳು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಾಮುಂಡಿ ಬೆಟ್ಟದಲ್ಲಿ 183 ಮಂದಿ ಖಾಯಂ ಹಾಗೂ 37 ಮಂದಿ ಗುತ್ತಿಗೆ ಆಧಾರಿತ ನೌಕರರು ಪ್ರತಿಭಟನೆ ಆರಂಭಿಸಿದ್ದಾರೆ.

20.ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಲ್ಲಿಗೌಡನದೊಡ್ಡಿ ಗ್ರಾಮದ ನಿನ್ನೆ ಸಿದ್ದರಾಜು ಹಾಗೂ , ಸಾಕಮ್ಮ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ದಂಪತಿಗಳ ಸಾವು ಆತ್ಮಹತ್ಯೆಯಲ್ಲ ಇಬ್ಬರನ್ನು ಕೊಲೆ ಮಾಡಲಾಯಿಗೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಇದು ಮರ್ಯಾದೆ ಹತ್ಯೆಯಾಗಿದ್ದು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪೋಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಚಿಂತಿಸಿದ್ದರು ಆದರೆ ಪೋಲೀಸರು ಮೃತರ ಸಂಬಂಧಿಕರಿಗೆ ದಾರಿ ತಪ್ಪಿಸುವ ಮೂಲಕ ಶವಗಳನ್ನು ಗ್ರಾಮಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಶವಗಳನ್ನು ಸ್ವೀಕರಿಸದೆ ಪೋಲೀಸರೇ ಅಂತ್ಯ ಸಂಸ್ಕಾರ ನಡೆಸಲಿ ಎಂದು ಸಂಭಂದಿಗಳು ಶವಗಳನ್ನು ಪಡೆಯದೆ ರಸ್ತೆಯಲ್ಲಿ ಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

21.ಸ್ಯಾಂಡಲ್​ವುಡ್​ನಲ್ಲಿ ನಿನ್ನೆಯಿಂದ ಶುರುವಾದ ನಿರ್ದೇಶಕ ಪ್ರೇಮ್​ ಮತ್ತು ನಿರ್ಮಾಪಕ ಕನಕಪುರ ಶ್ರೀನಿವಾಸ್ ಜಟಾಪಟಿ ಇಂದು ಮುಂದುವರೆದಿದೆ..ಸದ್ಯ ಈ ಪ್ರಕರಣ ಫಿಲ್ಮ್​ ಚೇಂಬರ್​ ಮೆಟ್ಟಿಲೇರಿದ್ದು,ಇತ್ತ ನಿರ್ಮಾಪಕ ಶ್ರೀನಿವಾಸ್, ಪ್ರೇಮ್​ ವಿರುದ್ಧ ಚೇಂಬರ್​ನಲ್ಲಿ ದೂರು ದಾಖಲಿಸಿದ್ದಾರೆ,,ಮತ್ತೊಂದ್ಕಡೆ ನಿರ್ದೇಶಕ ಪ್ರೇಮ್​ ಸಂಗಡಿಗರು ಪ್ರೇಮ್​ ಪರವಾಗಿ ಇಂದು ಫಿಲ್ಮ್ ಚೇಂಬರ್​ಗೆ ಕಂಪ್ಲೇಟ್​ ಕೊಟ್ಟಿದ್ದಾರೆ..ಪ್ರೇಮ್​ ತನ್ನ ಹಣ ವಾಪಸ್ಸು ನೀಡಬೇಕು ಅಂತ ಶ್ರೀನಿವಾಸ್ ಪಟ್ಟು ಹಿಡಿದಿದ್ದಾರೆ..2 ವರ್ಷಗಳ ಕಾಲ ನನ್ನ ಶ್ರಮ, ಸಮಯ ವ್ಯರ್ಥವಾಗಿರೋದ್ರಿಂದ ಅವರೇ ನನಗೆ ಹಣ ನೀಡಬೇಕು ಪ್ರೇಮ್​ ಹೇಳ್ತಿದ್ದಾರೆ..ಇನ್ನು ಸೋಮವಾರ ಈ ವಿಷಯವಾಗಿ ಫಿಲ್ಮ್​ಚೇಂಬರ್ ಮತ್ತು ನಿರ್ಮಾಪಕರ ಸಂಘ ಚರ್ಚಿಸಿ ಈ ವಿವಾದಕ್ಕೆ ತೆರೆ ಎಳೆಯೋ ಸಾಧ್ಯತೆ ಇದೆ.

22.ಬಾಲಿವುಡ್​ನಲ್ಲೀಗ ಕೆಜಿಎಫ್ ವರ್ಸಸ್​​ ಜೀರೋ ಅಂತ ಚರ್ಚೆ ನಡೀತಿದೆ.. ಎರಡೂ ಸಿನಿಮಾಗಳು ಡಿಸೆಂಬರ್ 21ಕ್ಕೆ ತೆರೆಗೆ ಬರ್ತಿವೆ.. ಜೀರೋ ಸಿನಿಮಾ ಎದುರು ಕೆಜಿಎಫ್ ರಿಲೀಸ್ ಆಗ್ತಿರೋದ್ರ ಬಗ್ಗೆ ಶಾರೂಖ್ ಮಾತನಾಡಿದ್ದು, ಕೆಜಿಎಫ್ ಟ್ರೈಲರ್ ನೋಡಿದ್ದೇನೆ.. ಸಿನಿಮಾ ಬಗ್ಗೆ, ಮೇಕಿಂಗ್ ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ.. ಚಿತ್ರಕ್ಕಾಗಿ ತಂಡದವರು 3 ವರ್ಷ ಶ್ರಮ ಹಾಕಿದ್ದಾರೆ ಎಂದು ತಿಳಿಯಿತು.. ಯಶ್ ಮುಂಬೈಗೆ ಬಂದಾಗ ಖಂಡಿತಾ ಭೇಟಿಯಾಗುತ್ತೇನೆ, ಕೆಜಿಎಫ್ ಚಿತ್ರಕ್ಕೆ ಆಲ್ ದಿ ಬೆಸ್ಟ್ ಅಂದಿದ್ದಾರೆ ಶಾರುಕ್ ಖಾನ್..

23.ಡಾ. ರಾಜ್​ಕುಮಾರ್ ಮೊಮ್ಮಗ ಧೀರೇನ್ ರಾಮ್​ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ ಮುಹೂರ್ತ ಸದ್ದಿಲ್ಲದೇ ನೆರವೇರಿದೆ.. ನಟ ರಾಮ್​ಕುಮಾರ್​, ಪೂರ್ಣಿಮಾ ಮಗನಾದ ಧೀರೇನ್​ ರಾಮ್​ಕುಮಾರ್ ದಾರಿ ತಪ್ಪಿದ ಮಗ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.. ಜಯಣ್ಣ ಕಂಬೈನ್ಸ್​​​​ ಬ್ಯಾನರ್​ನಲ್ಲಿ ದಿಲ್​ವಾಲ ಖ್ಯಾತಿಯ ಅನಿಲ್ ಕುಮಾರ್ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ.. ದಾರಿತಪ್ಪಿದ ಮಗ ಚಿತ್ರದಲ್ಲಿ ಧೀರೇನ್ ಜೋಡಿಯಾಗಿ ಮಾನ್ವಿತಾ ಹರೀಶ್ ನಟಿಸ್ತಿದ್ದಾರೆ..

24.ಬೆಳ್ಳಂದೂರು ಕೆರೆ ಬಳಿ ಒಂದು ವಿಶೇಷ ಫೋಟೋಶೂಟ್​​ನಲ್ಲಿ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದು, ಆ ಫೋಟೋಸ್ ಈಗ ವೈರಲ್ಲಾಗಿದೆ.. ಕೆರೆಯಲ್ಲಿ ಜಲ ಮಾಲಿನ್ಯದ ಅರಿವು ಮೂಡಿಸುವ ಕುರಿತು ಡಾಕ್ಯುಮೆಂಟರಿ ಮಾಡುತ್ತಿದ್ದು, ರಶ್ಮಿಕಾ ಅದರ ಫೋಟೋಶೂಟ್​​​​ನಲ್ಲಿ ಪಾಲ್ಗೊಂಡಿದ್ದಾರೆ.. ಮಾಲಿನ್ಯ ಮತ್ತು ನೊರೆಯ ಕಾರಣದಿಂದ ಬೆಳ್ಳಂದೂರು ಕೆರೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು ಗೊತ್ತೇಯಿದೆ.. ರಶ್ಮಿಕಾ, ಬೆಳ್ಳಂದೂರು ಕೆರೆಯ ದುಸ್ಥಿತಿ ನೋಡಿ ಮರುಗಿದ್ದಾರೆ..

25.ನೀನಾಸಂ ಸತೀಶ್, ಶ್ರದ್ಧಾ ಶ್ರೀನಾಥ್ ಅಭಿನಯದ ಗೋಧ್ರಾ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ.. ನಂದೀಶ್ ನಿರ್ದೇಶನದ ನಕ್ಸಲೈಟ್ ಹಿನ್ನೆಲೆಯ ಈ ಸಿನಿಮಾದಲ್ಲಿ ಸತೀಶ್​ ನಕ್ಸಲ್​ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಶ್ರದ್ದಾ ಅವ್ರ ಜೋಡಿಯಾಗಿ ಮಿಂಚಿದ್ದಾರೆ.. ಆಂಧ್ರಪ್ರದೇಶದಲ್ಲಿ ಹಾಡೊಂದನ್ನ ಪೂರ್ಣಗೊಳಿಸಿ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದಿದೆ ಚಿತ್ರತಂಡ.. ಗೋಧ್ರಾ ಸತೀಶ್ ಕರಿಯರ್​​ನ ಸ್ಪೆಷಲ್ ಸಿನಿಮಾ ಅಂತೆ..

26.ಈ ವರ್ಷ ಜೈಲು, ಕೋರ್ಟ್, ಪೊಲೀಸ್​ ಸ್ಟೇಷನ್ ಅಂತ ಕಂಗೆಟ್ಟಿದ್ದ ದುನಿಯಾ ವಿಜಿ ಹೊಸವರ್ಷವನ್ನ ಹೊಸ ಹುರುಪಿನೊಂದಿಗೆ ಆರಂಭಿಸಲು ಸಂಕಲ್ಪ ತೊಟ್ಟಿದ್ದಾರೆ.. ಹೊಸ ವರ್ಷದ ದಿನ ವಿಜಿ ಹೊಸ ಸಿನಿಮಾ ಮಾಡೋದಾಗಿ ಸೋಷಿಯಲ್​ ಮೀಡಿಯಾದಲ್ಲಿ ದುನಿಯಾ ವಿಜಿ ಬರೆದುಕೊಂಡಿದ್ದಾರೆ.. ಅಂದ್ಹಾಗೆ ಸದ್ಯ ಕುಸ್ತಿ ಚಿತ್ರಕ್ಕೆ ಬ್ರೇಕ್ ಹಾಕಿರೋ ವಿಜಿ ಮುಂದಿನ ದಿನಗಳಲ್ಲಿ ಕುಸ್ತಿಗೆ ಮುಹೂರ್ತ ಫಿಕ್ಸ್​ ಮಾಡೋದಾಗಿ ಹೇಳಿದ್ದಾರೆ.. ಅವರ ಹೊಸ ಸಿನಿಮಾ ಯಾವ್ದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.

27.ಈ ವರ್ಷ ಜೈಲು, ಕೋರ್ಟ್, ಪೊಲೀಸ್​ ಸ್ಟೇಷನ್ ಅಂತ ಕಂಗೆಟ್ಟಿದ್ದ ದುನಿಯಾ ವಿಜಿ ಹೊಸವರ್ಷವನ್ನ ಹೊಸ ಹುರುಪಿನೊಂದಿಗೆ ಆರಂಭಿಸೋ ಸಂಕಲ್ಪ ತೊಟ್ಟಿದ್ದಾರೆ.. ಹೊಸ ವರ್ಷದ ದಿನ ವಿಜಿ ತಮ್ಮ ಹೊಸ ಸಿನಿಮಾ ಅನೌನ್ಸ್ ಮಾಡೋದಾಗಿ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.. ಅಂದ್ಹಾಗೆ ಸದ್ಯ ಕುಸ್ತಿ ಚಿತ್ರಕ್ಕೆ ಬ್ರೇಕ್ ಹಾಕಿರೋ ವಿಜಿ ಮುಂದಿನ ದಿನಗಳಲ್ಲಿ ಕುಸ್ತಿಗೆ ಮುಹೂರ್ತ ಫಿಕ್ಸ್​ ಮಾಡೋದಾಗಿ ಹೇಳಿದ್ದಾರೆ.. ಕುಸ್ತಿ ಸಿನಿಮಾ ಮಾಡಬೇಕಿದ್ದ ರಾಘು ಶಿವಮೊಗ್ಗ ನಿರ್ದೇಶನದಲ್ಲೇ ಹೊಸ ಸಿನಿಮಾ ಶುರುವಾಗಲಿದ್ದು, ಅಭಿಮಾನಿಗಳನ್ನ ರಂಜಿಸಲಿದೆ ಅಂತ ಹೇಳಿದ್ದಾರೆ..ಅವರ ಹೊಸ ಸಿನಿಮಾ ಯಾವ್ದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.

28.ಹನೂರು ತಾಲೂಕಿನ ಸೂಲವಾಡಿ ಬಿಚ್ಚುಕತ್ತಿ ಮಾರಮ್ಮನ ದೇಗುಲದ ಪ್ರಸಾದ ಸೇವಿಸಿ 7 ಮಂದಿ ಮೃತಪಟ್ಟಿರುವ ಘಟನೆಗೆ ವಿಷ ಪ್ರಾಶನವೇ ಕಾರಣ ಎನ್ನಲಾಗಿದೆ.ಇಂದು ಬೆಳಗ್ಗೆ 10 30 ಕ್ಕೆ ಈ ದೇವಾಲಯದ ಶಂಕುಸ್ಥಾಪನೆಯ ಪೂಜಾ ಕಾರ್ಯಕ್ರಮದ ಬಳಿಕ ಪ್ರಸಾದ ವಿನಿಯೋಗ ಮಾಡಲಾಗಿದೆ. ಪ್ರಸಾದ ಸೇವಿಸಿ 60 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.ಈ ಕುರಿತು ಡಿಹೆಚ್ ಒ ಪ್ರಸಾದ್ ಮಾತನಾಡಿದ್ದು, ಅಸ್ವಸ್ಥರಾದ ಕಣ್ಣುಗಳು ನೀಲಿ ಬಣ್ಣಕ್ಕೆ ತಿರುಗುತ್ತಿದೆ. ಘಟನೆಗೆ ವಿಷ ಪ್ರಾಶನವೇ ಕಾರಣ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಸಾದ ಸ್ವೀಕರಿಸುವ ಮೊದಲು ಸೀಮೆಎಣ್ಣೆ ವಾಸನ ಬರುತ್ತಿತ್ತಂತೆ.

29.ಚೆನ್ನೈನ ರೇಲಾ ಇನ್ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗ ಶ್ರೀಗಳನ್ನು ವಾರ್ಡಿನಿಂದ ಐಸಿಯುಗೆ ಶಿಫ್ಟ್ ಮಾಡಲಾಗಿದೆ.ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆ ಅವರನ್ನು ನಿನ್ನೆ ಸಂಜೆ ಐಸಿಯುನಿಂದ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಶ್ರೀಗಳನ್ನು ಭೇಟಿ ಮಾಡುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂದು ಕೂಡ ಮಾಜಿ ಸಿಎಂ ಎಸ್ ಎಂ ಕೃಷ್ಣ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ. ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವರು ಶ್ರೀಗಳನ್ನು ಭೇಟಿ ಮಾಡಿದ್ದರು. ಅಲ್ಲದೇ ಭೇಟಿಯಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಶ್ರೀಗಳನ್ನು ಸ್ಪೆಷಲ್ ವಾರ್ಡ್ ನಿಂದ ಐಸಿಯುಗೆ ಶಿಫ್ಟ್ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

30.ಇದೇ ತಿಂಗಳ 2 9 ರಂದು ಟ್ರಾಯ್ ಜಾರಿಗೆ ತರಲು ಹೊರಟಿರುವ ಕೇಬಲ್ ನೂತನ ದರಪಟ್ಟಿ ಯೋಜನೆಯನ್ನ ವಿರೋಧಿಸಿ ತುಮಕೂರಿನಲ್ಲಿ ಜಿಲ್ಲಾ ಕೇಬಲ್ ಆರಪರೇಟರ್ಸ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಟೌನ್ ಹಾಲ್ ವೃತ್ತದಿಂದ ಜಿಲ್ಲಾಧಕಾರಿ ಕಚೇರಿ ವರೆಗೆ ಕೇಂದ್ರ ಸರ್ಕಾರದ ಹಾಗೂ ಟ್ರಾಯ್ ನ ವರ್ತನೆಯನ್ನ ಖಂಡಿಸಿದ್ರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲಸ ಸಮಯ ಪ್ರತಿಭಟನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಪತ್ರ ಸಲ್ಲಿಸಿದ್ರು. ಯೋಜನೆಯಿಂದ ಕೇಬಲ್ ನಿವಾರ್ಹಕರು ನಿರುದ್ಯೋಗಿಗಳಾಗಲಿದ್ದಾರೆ.

31.ತುಮಕೂರು ಜಿಲ್ಲೆ ಕುಣಿಗಲ್ ಕ್ಷೇತ್ರದಲ್ಲಿ ಕೈ ಶಾಸಕನ ವಿರುದ್ದ ಜೆಡಿಎಸ್ ಮಾಜಿ ಶಾಸಕ ಡಿ.ನಾಗರಾಜಯ್ಯರ ಪುತ್ರ ಜಗದೀಶ್ ವಾಗ್ದಾಳಿ ನಡೆಸಿದ್ದಾರೆ. ಶಾಸಕ ರಂಗನಾಥ್ ಕುಣಿಗಲ್ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ. ನೂರಾರು ಜನ ಅಮಾಯಕ ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳುಕೇಸನ್ನು ದಾಖಲಿಸಿದ್ದಾರೆ ಎಂದು ಜಗದೀಶ್ ವಾಗ್ದಾಳಿ ನಡೆಸಿದ್ದಾರೆ. ತಾಲೂಕಿನಲ್ಲಿ ಕಾಂಗ್ರೆಸ್ಗೆ ಜೆಡಿಸ್ನ ಬೆಂಬಲ ಅವಶ್ಯಕತೆ ಇಲ್ಲ ಎಂದು ಶಾಸಕರು ಹೇಳಿದ್ದು, ಜೆಡಿಎಸ್ ಗೂ ಕೂಡಾ ಕಾಂಗ್ರೆಸ್ ನ ಅವಶ್ಯಕತೆ ಇಲ್ಲ ಎಂದು ಜೆಡಿಎಸ್ನ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ಜಗದೀಶ್ ಹರಿಹಾಯ್ದಿದ್ದಾರೆ. ಈಗಾಗಲೇ ಶಾಸಕ ರಂಗನಾಥ್ ವಿರುದ್ದ ಕ್ಷೇತ್ರದ ಜನತ ಅಸಮಾಧಾನಗೊಂಡಿದ್ದಾರೆ.

32.ಭದ್ರಾವತಿ ತಾಲೂಕು ಬಾಳೆ ಮಾರನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದವರ ಮೇಲೆ ಸವರ್ಣಿಯರು ಗುಡಿಸಲುಗಳನ್ನು ಧ್ವಂಸ ಮಾಡಿ ಹಲ್ಲೆ ನಡೆಸಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ(ಸಂಯೋಜಕ) ಜಿಲ್ಲಾ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಬಾಳೆ ಮಾರನಹಳ್ಳಿ ಗ್ರಾಮದ ಸರ್ವೆ ನಂ. 4ರಲ್ಲಿ ಒಟ್ಟು 5ಎಕರೆ 32ಗುಂಟೆ ನೆಡುತೋಪು ಜಮೀನಿದ್ದು, ಇದರಲ್ಲಿ ಭದ್ರಾವತಿ ಆಕಾಶವಾಣಿ ಕೇಂದ್ರದ ಉಪಯೋಗಕ್ಕಾಗಿ ಸರ್ಕಾರವು 20ಗುಂಟೆ ಜಮೀನು ಮಂಜೂರು ಮಾಡಿತ್ತು. ಉಳಿದ 5 ಎಕರೆ 12ಗುಂಟೆ ಜಮೀನಿನಲ್ಲಿ ಗ್ರಾಮದ ಸವರ್ಣಿಯ ಪ್ರಭಾವಿ ವ್ಯಕ್ತಿಗಳು 2 ಎಕರೆ 12ಗುಂಟೆ ಜಮೀನಿನಲ್ಲಿ ಅಡಿಕೆ ತೋಟ ನಿರ್ಮಾಣ ಮಾಡಿಕೊಂಡು ಆದಾಯ ಪಡೆಯುತ್ತಿದ್ದಾರೆ.

33.ಕೇಂದ್ರ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸದ ಪರಿಣಾಮ ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯನ್ನು ರೈತರು ಸೋಲಿಸುವುದರ ಮೂಲಕ ತಕ್ಕ ಪಾಠ ಕಲಿಸಿದ್ದಾರೆ ಎಂದು ರೈತರಸಂಘದ ರಾಜ್ಯ ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರರು. ಪಂಚರಾಜ್ಯದ ಸೋಲಿನಿಂದಾಗಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ರೈತರ ಪರವಾಗಿ ಕೆಲವು ನಿರ್ಣಯಗಳನ್ನು ಮಾಡಲು ಮುಂದಾಗಿರುವುದು ಸ್ವಾಗತರ್ಹ ಎಂದರು. ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು ರೈತರ ಪರ ಮಾತನಾಡುತ್ತಿರುವುದು ಸ್ವಾಗತಾರ್ಹ. ಆದರೆ ಸಾಲಮನ್ನಾದ ಗೊಂದಲ ಮುಂದುವರೆಯಬಾರದು. ಸಾಲ ಪಡೆದ ಎಲ್ಲಾ ರೈತರಿಗೂ ಸಾಲಮನ್ನಾ ಲಾಭ ದೊರೆಯಬೇಕು. ಈಗ ತೆಗೆದುಕೊಂಡಿರುವ ಸಾಲಮನ್ನಾ ತೀರ್ಮಾನದಿಂದ ಕೆಲ ರೈತರನ್ನು ಹೊರಗುಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

34.ಬೆಂಗಳೂರು, ಡಿಸೆಂಬರ್14- ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಸಂಜೆ ಚೆನ್ನೈನಿಂದ ವಾಪಸಾದ ತಕ್ಷಣ ವಿಮಾನ ನಿಲ್ದಾಣದಲ್ಲಿಯೇ ಚಾಮರಾಜನಗರ ಜಿಲ್ಲೆಯ ಸುಲ್ವಾಡಿ ಗ್ರಾಮದ ಘಟನೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.ಮೃತ ಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.ಮುಖ್ಯಮಂತ್ರಿಗಳು ಕೂಡಲೇ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆರಳಿ ಕೆ.ಆರ್. ಆಸ್ಪತ್ರೆ ಹಾಗೂ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಅಸ್ವಸ್ಥರನ್ನು ಭೇಟಿ ಮಾಡಲಿದ್ದಾರೆ.

ಮೈಸೂರಿನಿಂದ 15 ಅಂಬ್ಯುಲೆನ್ಸ್ ಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ.ಈ ಘಟನೆಯಲ್ಲಿ ಅಸ್ವಸ್ಥಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಗಳಿಗೆ ಸೂಚಿಸಿದ್ದಾರೆ.

35. ಉತ್ತರ ಕರ್ನಾಟಕ ಪ್ರಸಿದ್ದ ಶ್ರೀ ಸೂಗೂರೇಶ್ವರ ಜೋಡು ರಥೋತ್ಸವ ಲಕ್ಷಾಂತರ ಭಕ್ತ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ರಾಯಚೂರು ತಾಲೂಕಿನ ದೇವಸೂಗೂರು ಗ್ರಾಮದಲ್ಲಿ ನೆಲೆಸಿರುವ ಶ್ರೀ ಸೂಗೂರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸಕಲ ಭಕಗತ್ತಾದಿಗಳು ಹಾಗೂ ವಿವಿಧ ಕಲಾತಂಡಗಳೊಂದಿಗೆ ಎರಡು ರಥಗಳನ್ನ ಭಕ್ತಿ ಭಾವದಿಂದ ಎಳೆಯುವ ಮೂಲಕ ಜಾತ್ರಾ ಮಹೋತ್ಸವವನ್ನ ವಿಜಭೃಣೆಯಿಂದ ಆಚರಿಸಿದರು.ಈ ಜಾತ್ರೆಗೆ ರಾಜ್ಯದ ನಾನಾ ಜಿಲ್ಲೆಗಳು ಹಾಗು ಪಕ್ಕದ ತೆಲಂಗಾಣ, ಸೀಮಾಂಧ್ರ, ಮಹಾರಾಷ್ಟ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತ ಲಕ್ಷಾಂತರ ಭಕ್ತರು ಆಗಮಿಸಿದರು. ಇನ್ನು ಜಾತ್ರ ಮಹೋತ್ಸವ ಹಿನ್ನಲೆಯಲ್ಲಿ ಬೆಳಗ್ಗೆಯಿಂದ ಶ್ರೀಸೂಗೂರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮಹಾಪೂಜೆ, ಎಲೆಪೂಜೆ, ಪಲ್ಲಕ್ಕಿ ಉತ್ಸವ ಸೇರಿದಂತೆ ವಿಶೇಷ ಪೂಜೆಗಳಿಗೆ ನಡೆದವು. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

36.ಐದು ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗ್ತಿರೋ ಕೆಜಿಎಫ್, ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯನ್ನೆಬ್ಬಿಸಿದೆ. ಕೆಜಿಎಫ್ ಸುನಾಮಿಗೆ ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳು ಉಡೀಸ್ ಆಗ್ತಿವೆ. ನೂರು ಕೋಟಿ ಭಾರೀ ಬಜೆಟ್​ನಲ್ಲಿ ತಯಾರಾದ ಈ ಸಿನಿಮಾ, ಪ್ರೀ ರಿಲೀಸ್ ಬ್ಯುಸಿನೆಸ್​ನಲ್ಲೇ ಹೆಚ್ಚೂ ಕಡಿಮೆ 150ಕೋಟಿ ಜೇಬಿಗಿಳಿಸಿದೆ.

37. ಕನ್ನಡದ ಜೊತೆ ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲೂ ತೆರೆ ಕಾಣ್ತಿರೋ ಕೆಜಿಎಫ್ ಚಿತ್ರವನ್ನ ಪ್ರತಿಷ್ಠಿತ ಡಿಸ್ಟ್ರಿಬ್ಯೂಷನ್ ಕಂಪೆನಿಗಳು ವಿತರಿಸುತ್ತಿವೆ. ಇನ್ನು ಕೆಜಿಎಫ್ ಯುನಿವರ್ಸಲ್ ಸಬ್ಜೆಕ್ಟ್ ಆಗಿರೋದ್ರಿಂದ, ಎಲ್ಲಾ ಭಾಷೆಯಲ್ಲೂ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಅಷ್ಟೇ ಅಲ್ಲ, ಪ್ರಮೋಷನ್ಸ್ ಕೂಡ ಅದ್ಧೂರಿಯಾಗಿ ನಡೀತಿದ್ದು, ಡಿಸ್ಟ್ರಿಬ್ಯೂಷನ್ ಮತ್ತು ಓವರ್​ಸೀಸ್ ರೈಟ್ಸ್​ನಲ್ಲೇ ಹೆಚ್ಚೂ ಕಡಿಮೆ 150ಕೋಟಿ ಬ್ಯುಸಿನೆಸ್ ಮಾಡಿದೆ ಎನ್ನಲಾಗ್ತಿದೆ.

38. 2018ರಲ್ಲಿ ಸತತ ಆರೋಪಗಳಿಂದ ಕಂಗೆಟ್ಟಿದ್ದ ದುನಿಯಾ ವಿಜಿ ಹೊಸವರ್ಷವನ್ನ ಹೊಸ ಹುರುಪಿನೊಂದಿಗೆ ಆರಂಭಿಸಲು ಸಂಕಲ್ಪ ತೊಟ್ಟಿದ್ದಾರೆ..2019ರಲ್ಲಿ ದುನಿಯಾ ವಿಜಿ ಹೊಸ ಸಿನಿಮಾ ಮಾಡ್ತಿದ್ದಾರಂತೆ ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರೋ ವಿಜಿ ಜನವರಿ ಒಂದರಂದು ತಮ್ಮ ಹೊಸ ಸಿನಿಮಾ ಅನೌನ್ಸ್​​ ಮಾಡೋದಾಗಿ ಹೇಳಿದ್ದಾರೆ. ಅಂದ್ಹಾಗೆ ಸದ್ಯ ಕುಸ್ತಿ ಚಿತ್ರಕ್ಕೆ ಬ್ರೇಕ್ ಹಾಕಿರೋ ವಿಜಿ ಮುಂದಿನ ದಿನಗಳಲ್ಲಿ ಕುಸ್ತಿಗೆ ಮುಹೂರ್ತ ಫಿಕ್ಸ್​ ಮಾಡೋದಾಗಿ ಹೇಳಿದ್ದಾರೆ.

39. ಕವಚ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್ ಮೊದಲ ಬಾರಿ ಅಂಧನ ಪಾತ್ರದಲ್ಲಿ ಅಭಿನಯಿಸಿರೋ ಚಿತ್ರ. ಟ್ರೈಲರ್​ ಹಾಗೂ ಹಾಡುಗಳಲ್ಲಿ ಟಗರು ಶಿವನ ನಟನೆಗೆ ಫಿದಾ ಆಗಿರೋ ಸಿನಿಮಾ ಪ್ರೇಮಿಗಳು ಕವಚವನ್ನ ಬಿಗಿದಪ್ಪಿಕೊಂಡಿದ್ದು ಸಿನಿಮಾ ರಿಲೀಸ್​ ಆಗೋದನ್ನೇ ಎದುರು ನೋಡುತ್ತಿದ್ರು..ಇದೀಗ ಕವಚ ಆಗಮನಕ್ಕೆ ಡೇಟ್ ಫಿಕ್ಸ್​ ಆಗಿದೆ.

40. ಸೀತಾರಾಮ ಕಲ್ಯಾಣ ಫ್ಯಾಮಿಲಿ ಎಂಟರ್​ಟೈನರ್​ ಚಿತ್ರ ಆಗಿರೋದ್ರಿಂದ, ಬಹು ದೊಡ್ಡ ಸ್ಟಾರ್​ ಕಾಸ್ಟ್ ಈ ಚಿತ್ರದಲ್ಲಿದೆ..ಸುಮಾರು 130 ಕ್ಕೂ ಹೆಚ್ಚು ಕಲಾವಿದರು ಸೀತಾರಾಮ ಕಲ್ಯಾಣಕ್ಕೆ ಸಾಕ್ಷಿಯಾಗಿದ್ದಾರೆ.. ನಿಖಿಲ್​ ಕುಮಾರ್​​, ರಚಿತಾ ರಾಮ್, ಸೇರಿದಂತೆ ಭಾಗ್ಯಶ್ರೀ, ಮಧುಬಾಲಾ, ಶರತ್ ಕುಮಾರ್, ಆದಿತ್ಯ ಮೆನನ್, ಕಾಮಿಡಿ ಕಿಲಾಡಿಗಳಾದ ನಯನ, ಶಿವರಾಜ್​ ಕೆ.ಆರ್ ಪೇಟೆ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

41.ಸಿಲಿಕಾನ್ ಸಿಟಿಯ ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಹೆಸರುವಾಸಿ ಎನ್ನುವಾಗಿದೆ. ಈ ಪ್ರದೇಶದ ಹಲವು ಕಾರ್ಖಾನೆಗಳ ರಾಸಾಯನಿಕ ಕಲುಷಿತ ನೀರು ಹಾಗು ಇತರೇ ತ್ಯಾಜ್ಯಗಳು ಬೆಳ್ಳಂದೂರು ಕೆರೆಗೆ ಬಂದು ಸೇರುವುದರಿಂದ ಕೆರೆಯ ನೀರು ಹೆಚ್ಚು ಮಲಿನವಾಗಿದೆ. ಆದರಿಂದ ಜನರಲ್ಲಿ ಜಲ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯಲ್ಲಿ ಅಂಡರ್ವಾಟರ್ ಫೋಟೋಶೂಟ್ ಮಾಡಿಸಿದ್ದಾರೆ.

42.ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಇಂದು ಹೋಗುವ ಪ್ಲಾನ್ ಮಾಡಿದ್ರೆ ಅದನ್ನ ಕ್ಯಾನ್ಸಲ್ ಮಾಡಿದ್ರೆ ಒಳ್ಳೆಯದು. ಯಾಕಂದ್ರೆ ಇಂದು ಚಾಮುಂಡಿ ದೇವಿಯ ದರ್ಶನ ಸಿಗುವುದು ಕಷ್ಟ ಸಾಧ್ಯ.ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಲ್ಲಿನ ನೌಕರರು ಅನಿರ್ಧಿಷ್ಟಾವಧಿ ಧರಣಿ ನಡೆಸಿದ್ದು, ದೇವಾಲಯದ 183 ಮಂದಿ ಖಾಯಂ ನೌಕರರು ಹಾಗೂ 37 ಮಂದಿ ಗುತ್ತಿಗೆ ನೌಕರರು ಪ್ರತಿಭಟನೆಗಿಳಿದಿದ್ದಾರೆ.

43.ಸಿಗ್ನಲ್‌ನಲ್ಲಿ ಟ್ರಾಫಿಕ್ ಜಾಮ್ ಆಗುತ್ತೆ ಎಂದು ಬಸ್ ಮುಂದೆ ನಿಲ್ಲಿಸಿದ್ದಕ್ಕೆ, ಹೆಲ್ಮೆಟ್‌ನಿಂದ ಕೆಎಸ್‌ಆರ್‌ಟಿಸಿ ಬಸ್ ಗ್ಲಾಸ್ ಪುಡಿ ಪುಡಿ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಗ್ಲಾಸ್ ಯಾಕೆ ಹೊಡೆದ್ರಿ ಸರ್ ಅಂದಿದ್ದಕ್ಕೆ, ಹೋಗಿ ಕಂಪ್ಲೇಂಟ್ ಕೊಡು ಆವಾಜ್ ಹಾಕಿದ್ದಾರಂತೆ ಮಡಿವಾಳ ಟ್ರಾಫಿಕ್ ಠಾಣೆ ಎ.ಎಸ್.ಐ ಗಿರಿಯಪ್ಪ ಅಲ್ಲದೇ ನಾವು ಕೈ ಹಾಕ್ತಿದ್ದಾಗೆ, ನಿಲ್ಸು ಅಂದ್ರೆ ನಿಲ್ಲಿಸ್ಬೇಕು, ಟ್ರಾಫಿಕ್ ಜಾಮ್ ಆದ್ರೆ ಆಗ್ಲಿ ಅಂತಾ ಹೇಳಿ ದರ್ಪ ತೋರಿದ್ದು, ಮಡಿವಾಳ ಸಿಗ್ನಲ್ ಬಳಿ ಈ ಘಟನೆ ನಡೆದಿದೆ.

44.100 ರೂ.ನಾಣ್ಯವನ್ನ ಹೊಸದಾಗಿ ಬಿಡುಗಡೆ ಮಾಡುತ್ತಿದ್ದು, ಅದರಲ್ಲಿ ಮಾಜಿ ಪ್ರಧಾನಮಂತ್ರಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಭಾವಚಿತ್ರವಿರುವುದಾಗಿ ಅಧಿಕೃತವಾಗಿ ಹೇಳಿಕೆ ನೀಡಲಾಗಿದೆ.ಈ ನಾಣ್ಯ 35 ಗ್ರಾಂನದ್ದಾಗಿದ್ದು, ನಾಣ್ಯದ ಒಂದು ಭಾಗದಲ್ಲಿ ವಾಜಪೇಯಿಯರ ಭಾವಚಿತ್ರದೊಂದಿಗೆ ದೇವನಾಗರಿ ಮತ್ತು ಇಂಗ್ಲೀಷ್‌ನಲ್ಲಿ ಅಟಲ್‌ ಹೆಸರು ಬರೆಯಲಾಗಿದೆ. ಅಲ್ಲದೇ ಅವರ ಜನನ ಮತ್ತು ಮರಣದ ಇಸವಿಯನ್ನೂ ಕೂಡ ನಮೂದಿಸಲಾಗಿದೆಯಂತೆ.

45. ರಫೆಲ್ ಹಗರಣ ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ತೀರ್ಪು ನೀಡಿದ್ದು, ಕೇಂದ್ರ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.ರಫೆಲ್ ಯುದ್ಧ ವಿಮಾನದಲ್ಲಿ ಅವ್ಯವಹಾರ ಆರೋಪ ಹಿನ್ನೆಲೆ, ರಫೆಲ್ ಒಪ್ಪಂದ ಸಂಬಂಧ ಸಲ್ಲಿಸಿದ್ದ ಎಲ್ಲಾ ಅರ್ಜಿಗಳು ವಜಾ ಆಗಿದ್ದು, ಈ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ತಿರಸ್ಕರಿಸಿದೆ.ರಫೇಲ್ ಯುದ್ಧ ವಿಮಾನ ನಮ್ಮ ಅಗತ್ಯ ಮತ್ತು ಅವಶ್ಯಕತೆಯಾಗಿದೆ ಎಂದ ಸುಪ್ರೀಂಕೋರ್ಟ್, ರಕ್ಷಣಾ ಇಲಾಖೆಯ ವಿವಾದವನ್ನ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದಿದೆ.

46. ನೇಪಾಳದಲ್ಲಿ ಹೊಸತಾಗಿ ಚಲಾವಣೆಗೆ ಬಂದ ಭಾರತೀಯ 200, 2000, 500 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ. ಭಾರತೀಯ 100 ರೂಪಾಯಿ ನೋಟನ್ನ ಮಾತ್ರ ನೇಪಾಳದಲ್ಲಿ ಬಳಸಬಹುದಾಗಿದೆ.ಕಳೆದ ಎರಡು ವರ್ಷಗಳಿಂದ ನೇಪಾಳದಲ್ಲಿ ಭಾರತದ ಹೊಸ ನೋಟುಗಳನ್ನ ಬಳಕೆ ಮಾಡಲಾಗುತ್ತಿದ್ದು,ಈಗ ಹಠಾತ್ ಆಗಿ ಈ ರೀತಿ ನೋಟ್ ಬ್ಯಾನ್ ಮಾಡಿದ್ದು, ನೇಪಾಳಕ್ಕೆ ಹೋಗುವ ಭಾರತೀಯರ ಮೇಲೆ ಮತ್ತು ನೇಪಾಳದಿಂದ ಭಾರತಕ್ಕೆ ಬರುವ ವ್ಯಾಪಾರಸ್ಥರ ಮೇಲೆ ಪರಿಣಾಮ ಬೀರುವ ಸಂಭವವಿದೆ.

47. ಕಳೆದೆರಡು ದಿನದಿಂದ ಸಾಕಷ್ಟು ಕುತೂಹಲ ಮೂಡಿಸಿದ್ದ ಮಧ್ಯಪ್ರದೇಶದ ಸಿಎಂ ಪಟ್ಟ ಗೊಂದಲಕ್ಕೆ ತೆರೆ ಬಿದ್ದಿದ್ದು, ನೂತನ ಮುಖ್ಯಮಂತ್ರಿಯಾಗಿ ಕಮಲ್ ನಾಥ್ ಆಯ್ಕೆಯಾಗಿದ್ದಾರೆ.ಪಕ್ಷದ ಗೆಲುವಿನಲ್ಲಿ ಬಹಳ ಶ್ರಮ ವಹಿಸಿದ್ದ ಹಿರಿಯ ನಾಯಕ ಕಮಲ್​ನಾಥ್ ಹಾಗೂ ಯುವ ನಾಯಕ ಜ್ಯೋತಿರಾಧಿತ್ಯ ಸಿಂಧ್ಯಾ ಸಿಎಂ ಪಟ್ಟದ ರೇಸ್​ನಲ್ಲಿದ್ದರು.ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಂಡ ಕಾಂಗ್ರೆಸ್ ಹೈಕಮಾಂಡ್, ಎಲ್ಲ ಗೊಂದಲ ಬಗೆಹರಿಸಿ, ಕಮಲ್‌ನಾಥ್‌ರನ್ನ ಸಿಎಂ ಆಗಿ ಘೋಷಣೆ ಮಾಡಿದೆ.

48.ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಧೀರೇನ್ ರಾಜ್‌ಕುಮಾರ್ ನಟಿಸುತ್ತಿರುವ ದಾರಿ ತಪ್ಪಿದ ಮಗ ಸಿನಿಮಾ ಸದ್ದಿಲ್ಲದೇ ಸೆಟ್ಟೇರಿದೆ.ಸ್ಯಾಂಡಲ್‌ವುಡ್ ನಟ ರಾಮ್‌ಕುಮಾರ್ ಮಗನಾಗಿರುವ ಧೀರೇನ್ ದಾರಿ ತಪ್ಪಿದ ಮಗ ಸಿನಿಮಾದಲ್ಲಿ ನಟಿಸುತ್ತಿದ್ದು, ಬಸವೇಶ್ವರನಗರದ ವಿನಾಯಕನ ಸನ್ನಿಧಿಯಲ್ಲಿ ಚಿತ್ರ ಸೆಟ್ಟೇರಿದೆ.

49.ವಿಷಾಹಾರ ಸೇವನೆಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ಸಂಭವಿಸಿರುವ ದುರಂತದ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಸಿದ್ದರಾಮಯ್ಯ ಅವರು, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಪುಟ್ಟರಂಗ ಶೆಟ್ಡಿ, ಹನೂರು ಕ್ಷೇತ್ರದ ಶಾಸಕರಾದ ನರೇಂದ್ರ ಅವರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ಘಟನೆ ಕುರಿತು ಮಾಹಿತಿ ಪಡೆದುಕೊಡರು.ದುರಂತದಲ್ಲಿ ಮೃತರಾದವರ ಕುಟುಂಬದವರಿಗೆ ಪರಿಹಾರ ಒದಗಿಸುವ, ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವವರಿಗೆ ಚಿಕಿತ್ಸೆ ಕೊಡಿಸುವತ್ತ ಗಮನ ಹರಿಸುವಂತೆ ಸಚಿವರು ಹಾಗೂ ಶಾಸಕರಿಗೆ ಸಿದ್ದರಾಮಯ್ಯ ಅವರು ಸೂಚಿಸಿದರು.ಚಾಮರಾಜನಗರ ಜಿಲ್ಲಾಧಿಕಾರಿಗಳ ಜೊತೆಗೂ ಸಿದ್ದರಾಮಯ್ಯ ಅವರು ಮಾತನಾಡಿ ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಪ್ರಕರಣದ ಬಗ್ಗೆ ಕೂಡಲೇ ತನಿಖೆ ಆಗಬೇಕು ಎಂದರು.

50.ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಸಂಜೆ ಚೆನ್ನೈನಿಂದ ವಾಪಸಾದ ತಕ್ಷಣ ವಿಮಾನ ನಿಲ್ದಾಣದಲ್ಲಿಯೇ ಚಾಮರಾಜನಗರ ಜಿಲ್ಲೆಯ ಸುಲ್ವಾಡಿ ಗ್ರಾಮದ ಘಟನೆಗೆ ಸಂಬಂಧಿಸಿದಂತೆಹಿರಿಯ ಅಧಿಕಾರಿಗಳ ಸಭೆ ನಡೆಸಿದರು.ಮೃತ ಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.

ಮುಖ್ಯಮಂತ್ರಿಗಳು ಕೂಡಲೇ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆರಳಿ ಕೆ.ಆರ್. ಆಸ್ಪತ್ರೆ ಹಾಗೂ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಅಸ್ವಸ್ಥರನ್ನು ಭೇಟಿ ಮಾಡಲಿದ್ದಾರೆ.ಮೈಸೂರಿನಿಂದ 15 ಅಂಬ್ಯುಲೆನ್ಸ್ ಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ.ಈ ಘಟನೆಯಲ್ಲಿ ಅಸ್ವಸ್ಥಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಗಳಿಗೆ ಸೂಚಿಸಿದ್ದಾರೆ.

ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದರು.

Next Story

RELATED STORIES