Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1. ಸಂಸತ್‌ ಚಳಿಗಾಲ ಅಧಿವೇಶನ ಕಲಾಪದ ಮೂರನೇ ದಿನ ಕೇಂದ್ರದ ಮಾಜಿ ಸಚಿವ ಅಂಬರೀಷ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಮೊದಲ ದಿನವೇ ಎನ್​.ಡಿ ತಿವಾರಿ, ಮದನ್​ ಲಾಲ್​ ಕುರಾನಾ, ಸಿ.ಕೆ.ಜಾಫರ್​ ಷರೀಫ್​, ಗುರುದಾಸ್​ ಕಾಮತ್​ ಸೇರಿದಂತೆ ಇತರರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆದರೆ, ಮಾಜಿ ಸಂಸದರೂ, ಮಾಜಿ ಕೇಂದ್ರ ಸಚಿವರೂ ಆಗಿದ್ದ ಅಂಬರೀಷ್​ ಹೆಸರು ಈ ಪಟ್ಟಿಯಲ್ಲಿ ಇಲ್ಲದೇ ಇರುವುದಕ್ಕೆ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಸ್ಪೀಕರ್ ಸುಮಿತ್ರಾ ಮಹಾಜನ್ ಗಮನಕ್ಕೂ ಈ ವಿಚಾರ ತಂದಿದ್ದರು. ಬಳಿಕ ಎಚ್ಚೆತ್ತುಕೊಂಡಿದ್ದ ಸ್ಪೀಕರ್​ ಬುಧವಾರ ಸಂತಾಪ ಸೂಚಿಸುವುದಾಗಿ ಹೇಳಿದ್ದರು. ಆದರೆ, ಬುಧವಾರವೂ ಸಂತಾಪ ಸೂಚಿಸಲಿಲ್ಲ. ಮೂರನೆ ದಿನವಾದ ಇಂದು ಕಲಾಪ ಆರಂಭವಾಗುತ್ತಿದ್ದಂತೆ ಸುಮಿತ್ರ ಮಹಾಜನ್ ಅವರು ನವೆಂಬರ್ 24ರಂದು ನಿಧನರಾದ ಅಂಬರೀಷ್ ಅವರಿಗೆ ಸಂತಾಪ ಸೂಚಿಸಿ, ರಾಜಕೀಯ ಕ್ಷೇತ್ರಕ್ಕೆ ಅವರು ನೀಡಿದ ಸೇವೆ ಸ್ಮರಿಸಿದರು.

2. ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ವಂಚಿಸಿದ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ವಿರುದ್ಧ ಇಂಟರ್‌ಪೋಲ್‌ ರೆಡ್‌ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಬೇಕೆಂದು ಸಿಬಿಐ ಒತ್ತಾಯಿಸಿತ್ತು. ಹಗರಣ ಬೆಳಕಿಗೆ ಬೆಳಕಿಗೆ ಬಂದ ಬೆನ್ನಲ್ಲೇ ಚೋಕ್ಸಿ ದೇಶದಿಂದ ಪರಾರಿಯಾಗಿದ್ದರು. ಇದೀಗ ಅವರು ಆಂಟಿಗುವಾದಲ್ಲಿ ವಾಸಿಸುತ್ತಿದ್ದಾರೆ. ವಜ್ರ ವ್ಯಾಪಾರಿ ಹಾಗೂ ಸಂಬಂಧಿಯಾಗಿದ್ದ ನೀರವ್ ಮೋದಿ ಜತೆ ಸೇರಿ ಚೋಕ್ಸಿ ಪಿಎನ್‍ಬಿಯಿಂದ ₹13 ಕೋಟಿಗಿಂತಲೂ ಹೆಚ್ಚು ವಂಚನೆ ನಡೆಸಿದ್ದರು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಚೋಕ್ಸಿ ವಿರುದ್ಧ ಮುಂಬೈನಲ್ಲಿ ಆರೋಪ ಪಟ್ಟಿ ಸಲ್ಲಿಸಿತ್ತು.

3. ಹಿಂದಿ ಭಾಷೆಯ ಹೃದಯ ಭಾಗ ಅಂತ ಹೇಳುವ ಮೂರು ರಾಜ್ಯಗಳ ಸಿಎಂ ಆಯ್ಕೆ ಅಂತಿಮವಾಗಿದೆ. ಆಯಾಯ ರಾಜ್ಯಗಳ ಶಾಸಕರ ಅಭಿಪ್ರಾಯ ಸಂಗ್ರಹ ಹಾಗೂ ಆಕಾಂಕ್ಷಿಗಳ ಜೊತೆ ಮಾತುಕತೆ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೆಸರು ಫೈನಲ್‌ ಮಾಡಿದ್ದಾರೆ. ಇದರೊಂದಿಗೆ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡ ಸಿಎಂ ಆಯ್ಕೆ ಕಗ್ಗಂಟು ಬಗೆಹರಿದಿದೆ. ಹಿರಿಯರು ಹಾಗೂ ಕಿರಿಯರಿಗೆ ಮಣೆ ಹಾಕುವ ಮೂಲಕ ತಲೆಮಾರುಗಳ ಧೃವೀಕರಣ ಮಾಡಿದ್ದಾರೆ.

4. ಹಿಂದಿ ಭಾಷಿಕ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಮುಖ್ಯಮಂತ್ರಿಗಳ ಆಯ್ಕೆ ಕಾಂಗ್ರೆಸ್‌ ಹೈಕಮಾಂಡ್‌ಗೆ ತಲೆನೋವಾಗಿದೆ. ಇಂದು ದೆಹಲಿಯಲ್ಲಿ ಆಯಾಯ ರಾಜ್ಯಗಳ ಶಾಸಕರ ಅಭಿಪ್ರಾಯ ಸಂಗ್ರಹ ಮತ್ತು ಸಿಎಂ ಆಕಾಂಕ್ಷಿಗಳ ಜೊತೆ ಪ್ರತ್ಯೇಕವಾಗಿ ಚರ್ಚಿಸಿದ ರಾಹುಲ್‌ ಗಾಂಧಿ, ಹಿರಿಯರು ಮತ್ತು ಕಿರಿಯರಿಗೆ ಮಣೆ ಹಾಕುವ ಸಾಧ್ಯತೆ ಇದೆ.

5. ತೆಲಂಗಾಣ.ದೇಶದ ಯಂಗೆೆಸ್ಟ್‌ ಸ್ಟೇಟ್‌. ಈ ರಾಜ್ಯದ ನೆಚ್ಚಿನ ಮುಖ್ಯಮಂತ್ರಿ ಕೆಸಿಆರ್‌. ಸರ್ವಧರ್ಮ ಜನಪರ ಕಲ್ಯಾಣ ಕಾರ್ಯಕ್ರಮಗಳ ಮೂಲಕವೇ ಮತ್ತೊಂದು ಅವಧಿಗೆ ಅವರ ದರ್ಬಾರ್‌ ಶುರುವಾಗಿದೆ.

ತೀವ್ರ ಹೋರಾಟದ ಬಳಿಕ 2014ರಲ್ಲಿ ಅಖಂಡ ಆಂಧ್ರಪ್ರದೇಶದಿಂದ ತೆಲಂಗಾಣ ಎಂಬ ಕೂಸು ಜನ್ಮತಾಳಿತು. ಇಲ್ಲಿವರೆಗೂ ಈ ಕೂಸಿನ ಕೇರ್‌ಟೇಕರ್‌ ಆಗಿದ್ದವರು ಕೆಸಿಆರ್‌. ಇದೀಗ ಮತ್ತೊಂದು ಅವಧಿಗೆ ಕೇರ್‌ಟೇಕರ್‌ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವಧಿಗೂ ಮೊದಲೇ ಜನರ ಮುಂದೆ ಹೋದ ಕೆಸಿಆರ್‌ ಮಾಸ್ಟರ್ ಪ್ಲಾನ್‌ ಸಕ್ಸಸ್‌ ಆಗಿದೆ.

6. ಅಪ್ಪ - ಮಕ್ಕಳ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ವೆಂಕಟೇಶ್‌ ಕಿಡಿಕಾರಿದ್ದಾರೆ. ಸಂಪೂರ್ಣ ಸಾಲಮನ್ನಾ ಮಾಡುತ್ತೇವೆ ಅಂತ ಕುಮಾರಸ್ವಾಮಿ ರೈತರ ಮೂಗಿಗೆ ತುಪ್ಪ ಸವರುತ್ತಿದ್ದಾರೆ ಅಂತ ಟೀಕಿಸಿದ್ದಾರೆ. ಲೋಕಸಭೆ ಚುನಾವಣೆವರೆಗೆ ತಳ್ಕೊಂದು ಹೋಗ್ಬೇಕು ಅನ್ನೋಂಡಿದ್ದಾರೆ. ಈಗ ಕೇಂದ್ರ ಸರ್ಕಾರ ಸಾಲಮನ್ನಾ ಮಾಡುತ್ತದೆ. ರಾಜ್ಯದ ರೈತರು ಧೃತಿಗೆಡಬೇಡಿ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಆಕಸ್ಮಿಕವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಬಂದಿದ್ದಾರೆ ಎಂದು ಅವರು ಟೀಕಿಸಿದರು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ತಾರೆ ಅಂತ ಗೊತ್ತಿರಲಿಲ್ಲ. ಅವ್ರಿಗೆ ಗೊತ್ತಿತ್ತು, 25-30 ಸೀಟ್ ಮೇಲೆ ಗೆಲ್ಲೋಲ್ಲ ಅಂತ. ಅದಕ್ಕೆ ಎಷ್ಟು ಸುಳ್ಳು ಹೇಳ್ಕೋಬೇಕೋ ಹೇಳಿ ಎಲ್ಲ ಭರವಸೆ ಕೊಟ್ರು. ನಾವು ಅಧಿಕಾರಕ್ಕೆ ಬಂದ್ರೆ 24ಗಂಟೆಯಲ್ಲಿ ಸಾಲಮನ್ನಾ ಮಾಡ್ತೀವಿ ಅಂದ್ರು. ಈಗ ಅಧಿಕಾರಕ್ಕೆ ಬಂದು ಎಷ್ಟು ತಿಂಗಳಾಯ್ತು? ನಾವು ಕಾಂಗ್ರೆಸ್ ಪಕ್ಷದವ್ರು, ಅವ್ರು ಜನತಾದಳದವ್ರು. ನಾವೇ ಮಾಡಿಯಪ್ಪ, ಅದೇನ್ ಮಾಡ್ತೀರಾ ಮಾಡಿ ಅಂತ ಬಿಟ್ಟಿದ್ದೇವೆ. ನಾವು ಯಾವುದೇ ತಕರಾರು ಸಹ ಮಾಡಿಲ್ಲ. ಆದ್ರೆ ಅವ್ರು ಯಾವುದೇ ಯೋಜನೆ ಮಾಡ್ದೆ ಸುಮ್ಮನಿದ್ದಾರೆ ಅಂತ ಕಿಡಿಕಾರಿದ್ದಾರೆ.

7. ಟಿಪ್ಪು ಜಯಂತಿ ವಿಚಾರ ಪರಿಷತ್ ನ ಮಧ್ಯಾಹ್ನದ ಕಲಾಪವನ್ನೇ ನುಂಗಿ ಹಾಕಿದೆ. ಉತ್ತರ ಕರ್ನಾಟಕ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸೋದನ್ನ ಬಿಟ್ಟು, ಆಡಳಿತ ಮತ್ತು ವಿಪಕ್ಷ ಟಿಪ್ಪು ವಿಚಾರವನ್ನ ಪ್ರತಿಷ್ಟೆಯಾಗಿ ತೆಗೆದುಕೊಂಡು ಸದನದ ಸಮಯವನ್ನೇ ವ್ಯರ್ಥ ಮಾಡಿದ್ದಾರೆ. ಇದಲ್ಲದೇ ಪ್ರಶ್ನೋತ್ತರ ಅವಧಿಯಲ್ಲಿ ನಡೆದ ಕೆಲವೊಂದು ಚರ್ಚೆ ಗಮನ ಸೆಳೆಯಿತು.

8. ಮೇಕೆದಾಟು ವಿಚಾರವಾಗಿ ಚರ್ಚಿಸಲು ಪುದುಚೇರಿ ಸರ್ಕಾರವು ನಾಳೆ ವಿಶೇಷ ಅಧಿವೇಶನ ಕರೆದಿದೆ. ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟೆಗೆ ತಡೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಅನುಮೋದಿಸಲು ಸರ್ಕಾರ ನಿರ್ಧರಿಸಿದೆ. ವಿಶೇಷ ಅಧಿವೇಶನ ಕರೆಯುವಂತೆ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ಪ್ರತ್ಯೇಕವಾಗಿ ಮಾಡಿದ್ದ ಮನವಿಗಳನ್ನು ಪುದುಚೇರಿ ವಿಧಾನಸಭೆ ಸ್ಪೀಕರ್ ವಿ.ವೈದ್ಯಲಿಂಗಂ ಪುರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ. ಕಾವೇರಿ ಜಲಾನಯನ ಪ್ರದೇಶದ ಮೇಕೆದಾಟುವಿನಲ್ಲಿ ಅಣೆಕಟ್ಟೆ ನಿರ್ಮಿಸುವುದರಿಂದ ಪುದುಚೇರಿ ಸೇರಿದಂತೆ ನದಿಯ ಕೆಳಭಾಗದ ರಾಜ್ಯಗಳಲ್ಲಿ ನೀರಿನ ಕೊರತೆ ಉಂಟಾಗುತ್ತದೆ ಎಂಬ ಆತಂಕವನ್ನು ಎರಡೂ ಪಕ್ಷಗಳು ವ್ಯಕ್ತಪಡಿಸಿದ್ದವು. ಯೋಜನೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದವು. ತಮಿಳುನಾಡು ಸರ್ಕಾರ ಕೂಡಾ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ. ಅಣೆಕಟ್ಟು ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿ ತಯಾರಿಸುವಂತೆ ಕೇಂದ್ರ ಜಲ ಆಯೋಗವು ಕಳೆದ ತಿಂಗಳು ಕರ್ನಾಟಕ ಸರ್ಕಾರಕ್ಕೆ ಅನುಮತಿ ನೀಡಿತ್ತು.

9. ಚಳಿಗಾಲ ಅಧಿವೇಶನದ ನಾಲ್ಕನೇಯ ದಿನವಾದ ಇಂದು ಕೆರೆಗಳ ಹೂಳೆತ್ತುವ ವಿಚಾರ ಸದನದಲ್ಲಿ ಪ್ರತಿಧ್ವನಿಸಿತು. ಈ ವೇಳೆ ಸ್ಪೀಕರ್ ರಮೇಶ್ ಕುಮಾರ್ ಗದ್ಗದಿತರಾದ್ರು. ಅದ್ರಲ್ಲೂ ಕೋಲಾರ ಜಿಲ್ಲೆಯ ಕೆರೆಗಳ ಹೂಳೆತ್ತುವ ಮಾತು ಕೇಳಿ ಕಣ್ಣೀರು ಹಾಕಿದರು.

10. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಕೈಗಾರಿಕ ಪ್ರದೇಶ, ಹೆಬ್ಬಗೋಡಿ ನಗರ ಸಭೆ, ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಏಷ್ಯಾದಲ್ಲೇ ಗ್ರಾನೈಟ್ ಉದ್ಯಮದಲ್ಲಿ ಜಿಗಣಿ ಕೈಗಾರಿಕ ಪ್ರದೇಶ ದ್ವಿತೀಯ ಸ್ಥಾನದಲ್ಲಿದೆ. ಲಕ್ಷಾಂತರ ಮಂದಿ ಕಾರ್ಮಿಕರು ಜೀವನ ಕಂಡುಕೊಂಡಿದ್ದಾರೆ. ಆದ್ರೆ ವಲಸಿಗರೇ ಹೆಚ್ಚಾಗಿರುವ ಇಲ್ಲಿ ಕೊಲೆ ಸುಲಿಗೆ ದರೋಡೆ ಪ್ರಕರಣಗಳು ಹೆಚ್ಚಾದ ಕಾರಣ ಜಿಗಣಿ ಪೊಲೀಸರು ಸಿಸಿ ಟಿವಿ ಮೊರೆ ಹೋಗಿದ್ದಾರೆ.

11. ರಾಮಲಿಂಗಾರೆಡ್ಡಿ ಗರಡಿಯಲ್ಲಿ ಬೆಳೆದಿದ್ದ ಬೈರಸಂದ್ರ ವಾರ್ಡ್‌ನ ಬಿಜೆಪಿ ಕಾರ್ಪೊರೇಟರ್‌ ನಾಗರಾಜ್‌ ವಿಧಾನಸಭಾ ಚುನಾವಣೆ ವೇಳೆ ಸೌಮ್ಯ ರಾಮಲಿಂಗಾರೆಡ್ಡಿ ಪರ ಬ್ಯಾಟಿಂಗ್‌ ಮಾಡಿದ್ರು. ಅಷ್ಟೇ ಅಲ್ಲದೆ ಈ ಬಾರಿ ಮೇಯರ್ ಚುನಾವಣೆ ಸಮಯಲ್ಲಿ ಕೈಪರ ನಾಗರಾಜ್ ಕೆಲಸ ಮಾಡಿದ್ರು. ಕಾಂಗ್ರೆಸ್​ಗೆ ಫೇವರ್ ಆಗಿರುವ ನಾಗರಾಜ್ ಕೆಲಸವನ್ನು ಕಂಡ ಬಿಜೆಪಿ ಅಮಾನತು ಮಾಡಿತ್ತು.

12. ದೊಡ್ಡಬಳ್ಳಾಪುರ ನಗರದ ಮೊದಲನೇ ವಾರ್ಡ್ ಸುಭಾಷ್ ನಗರದಲ್ಲಿ ರಸ್ತೆಯನ್ನ ಖಾಸಗಿಯವರು ಒತ್ತುವರಿ ಮಾಡಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದು, ಇದೀಗ ಮನೆಯನ್ನು ಕಟ್ಟುತ್ತಿದ್ದಾರೆ. ಅಲ್ದೇ, ಮನೆ ಕಟ್ಟುತ್ತಿರುವುದ್ರಿಂದ ಈ‌ ರಸ್ತೆ ಕಿರಿದಾಗಿದ್ದು, ಓಡಾಡಲು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

13. ಖ್ಯಾತನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮೀಟು ಕೇಸ್ ಸ್ಯಾಂಡಲ್‌ವುಡ್‌ ಅನ್ನೇ ತಲ್ಲಣಗೊಳಿಸುವಂತೆ ಮಾಡಿತ್ತು. ಈ ಬಗ್ಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಶ್ರುತಿ ಹರಿಹರನ್‌ ಲೈಂಗಿಕ ಕಿರುಕುಳದ ಕೇಸ್ ದಾಖಲಿಸಿದ್ರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡ ತನಿಖೆಗೆ ಬೇಕಾದ ಎಲ್ಲಾ ಆಯಾಮಗಳಿಂದ ತನಿಖೆ ಮಾಡಿ ಸ್ಪಾಟ್ ಮಜರ್ ಮಾಡಿದ್ರು. ನಂತ್ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರ್ಜುನ್ ಸರ್ಜಾ ಸೇರಿದಂತೆ ಕೇಸ್ ಸಂಬಂಧ ಹತ್ತಕ್ಕೂ ಹೆಚ್ಚು ಸಾಕ್ಷಿಗಳನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದರು.

14. ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಎಲ್ಲಾ ಅಂಡರ್ ಪಾಸ್‌ಗಳಲ್ಲೂ, ಮಳೆಗಾಲ ಕಳೆದು ಬೇಸಿಗೆ ಆರಂಭದಲ್ಲಿಯೂ ನೀರು ನಿಂತು ಕಶ್ಮಲದಿಂದ ಕೂಡಿದೆ. ಪತ್ರಿನಿತ್ಯ ಈ ಅಂಡರ್ ಪಾಸ್‌ಗಳಲ್ಲಿ ನಡೆಯಬಾರದಾದ ಎಲ್ಲಾ ಕೆಲಸಗಳು ನಡೆಸುತ್ತಿದ್ದು, ಮಹಿಳೆಯರು, ಮಕ್ಕಳು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆ ಇತ್ತ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಲು ನಾಗರೀಕರು ಆಗ್ರಹಿಸಿದ್ದಾರೆ.

15.ಪಂಚ ರಾಜ್ಯಗಳ ಅಚ್ಚರಿಯ ಫಲಿತಾಂಶದಿಂದ ತತ್ತರಿಸಿರುವ ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡುತ್ತೆ ಅನ್ನೋ ಮಾತುಗಳು ನಿನ್ನೆ ಕೇಳಿ ಬಂದಿತ್ತು.. ಇದೀಗ ಕೇಂದ್ರ ಸರ್ಕಾರ ಅಧಿಕೃತವಾಗಿ ಮಾಹಿತಿ ನೀಡಿದೆ. ಯಾವುದೇ ಕಾರಣಕ್ಕೂ ರೈತರ ಸಾಲ ಮನ್ನಾ ಮಾಡೋದಿಲ್ಲ ಅಂತ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಪುರುಷೋತ್ತಮ ರೂಪಾಲ ಕಲಾಪದಲ್ಲೇ ಸ್ಪಷ್ಟನೆ ನೀಡಿದ್ದಾರೆ. ರೈತರ ಸಾಲಮನ್ನಾ ವಿಚಾರವಾಗಿ ಲೋಕಸಭೆಯಲ್ಲಿ ಶಿವಸೇನೆ ಸಂಸದ ಭಾವನ ಗವಾಳಿ ಪಾಟೀಲ್​ ಪ್ರಶ್ನೆಗೆ ಉತ್ತರಿಸಿದ ಪುರುಷೋತ್ತಮ, ಕೇಂದ್ರ ಸರ್ಕಾರದ ಮುಂದೆ ರೈತರ ಸಾಲಮನ್ನಾ ವಿಚಾರವಿಲ್ಲ.. ದೇಶಾದ್ಯಂತ ರೈತರ ಸಾಲಮನ್ನಾದಿಂದ ಆರ್ಥಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಲಿದೆ ಅಂತ ಹೇಳಿದ್ದಾರೆ..

16. ತಿಂಗಳಿನಿಂದ ಕುಡಿಯಲು ಸಮರ್ಪಕ ನೀರು ಸರಬರಾಜು ಮಾಡದ ಪಟ್ಟಣ ಪಂಚಾಯತ ವರ್ತನೆ ಖಂಡಿಸಿ ಮುಖ್ಯಾಧಿಕಾರಿಗೆ ಪಂಚಾಯತ ಎದುರಲ್ಲೆ ದಿಗ್ಬಂಧನಗೊಳಿಸಿದ ಘಟನೆ ಬೀದರ್ ಜಿಲ್ಲೆಯ ಔರಾದ್ ಪಟ್ಟಣ ಪಂಚಾಯತ ಕಚೇರಿಯಲ್ಲಿ ನಡೆದಿದೆ,.ವಾರ್ಡ್ ನಂಬರ್ ೧೧ ರ ಸದಸ್ಯೆ ಸರಸ್ವತಿ ಘೂಳೆ,ದಯಾನಂದ ಘೂಳೆ, ಬಂಟಿ ದರ್ಬಾರೆ ಹಾಗೂ ರಾಮಣ್ಣ ವಡಿಯಾರ ನೇತೃತ್ವದಲ್ಲಿ ಕಚೇರಿ ಎದುರು ಮುಖ್ಯದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆ ಮಾಡಿದರು. ಈ ವೇಳೆಯಲ್ಲಿ ಕಚೇರಿಗೆ ಬಂದ ಮುಖ್ಯಾಧಿಕಾರಿ ಸವಿತಾ ಅವರನ್ನು ದಿಗ್ಬಂಧನಗೊಳಿಸಿ ತರಾಟೆಗೆ ತೆಗೆದುಕೊಂಡರು. ಕುಡಿಯಲು ನಮಗೆ ಹನಿ ನೀರು ಸಿಗ್ತಿಲ್ಲ. ಸಾಕಷ್ಟು ಜನರ ಹನಿ‌ ನೀರಿಗಾಗಿ ಪರದಾಡುತ್ತಿದ್ದಾರೆ. ಆದ್ರೆ ಜನರ ಗೋಳು ಆಲಿಸದೆ ಮೌನವಹಿಸಿರುವುದನ್ನ ಖಂಡಿಸಿ ಪಟ್ಟಣ ಪಂಚಾಯತ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

17.ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ ಮತದಾರರ ಪಟ್ಟಿ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ಈ ಹಿನ್ನಲೆ ರಾಜ್ಯ ವಸತಿ ಇಲಾಖೆ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ವೀಕ್ಷಕರಾದ ಡಾ. ಜೆ ರವಿಶಂಕರ್ ಅವರು ಇಂದು ಯಾದಗಿರಿ ಜಿಲ್ಲೆಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಚುನಾವಣಾ ಸಮೀಪಿಸುತ್ತಿರುವ ಹಿನ್ನಲೆ ಜಿಲ್ಲೆಯ ಮತದಾರರ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಮೃತ ಪಟ್ಟವರ ಹಾಗೂ ಊರಿ ಬಿಟ್ಟು ಬೇರ ಜಿಲ್ಲೆಯ, ಗ್ರಾಮದಲ್ಲಿ ವಾಸವಿದ್ದರೆ ಅಂತವರ ಹೆಸರು ಡಬಲ್ ಆಗದಂತೆ ನೋಡಿಕೊಳ್ಳಬೇಕಾಗಿದೆ.

18.ಎತ್ತಿನಹೊಳೆ ಯೋಜನೆಗೆ ಆರಂಭವಾದಾಗಿನಿಂದ ಈವರೆಗೆ ಒಂದಲ್ಲಾ ಒಂದು ವಿಘ್ನಗಳು ಕೇಳಿ ಬರುತ್ತಿದೆ‌. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಜೆಡಿಎಸ್ ತವರು ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ಯೋಜನೆಗೆ ಸಮ್ಮಿಶ್ರ ಸರ್ಕಾರದ ಒಂದು ಭಾಗವಾದ ಜೆಡಿಎಸ್ ಅಡ್ಡಗಾಲು ಹಾಕುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಕಾಂಗ್ರೆಸ್ ನ ಮಾಜಿ ಸಚಿವರೇ ಸಮ್ಮಿಶ್ರ ಸರ್ಕಾರದ ವಿರುದ್ದ ಆರೋಪ ಮಾಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯಗೆ ಹೆಸರು ಬರುತ್ತದೆ ಎಂದು ಜೆಡಿಎಸ್ ಅಡ್ಡಗಾಲು ಹಾಕುತ್ತಿದ್ದು, ಯೋಜನೆ ಸಂಪೂರ್ಣ ವಿಳಂಬವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಎತ್ತಿನಹೊಳೆ ಯೋಜನೆ ಈಗ ರಾಜಕೀಯ ಅಸ್ತ್ರವಾಗಿದೆ.

19. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಹಿಂದಿ ಸಿನಿಮಾದ ಐಟಂ ಸಾಂಗ್ ರಿಲೀಸ್ ಆಗಿದೆ.. ವಿಶೇಷ ಅಂದ್ರೆ ಯಶ್ ಹೆಜ್ಜೆ ಹಾಕಿರೋ ಫಸ್ಟ್​​ ಸ್ಟ್ರೈಲ್ ಬಾಲಿವುಡ್ ನಂಬರ್ ಇದು..​ ತನಿಷ್ಕ್​ ಬಾಗ್ಚಿ ಮ್ಯೂಸಿಕ್​ನಲ್ಲಿ ನೇಹಾ ಕಕ್ಕರ್ ಹಾಡಿರೋ ಈ ಹಾಡಿನಲ್ಲಿ ಬಾಲಿವುಡ್​ ಬ್ಯೂಟಿ ಮೌನಿ ರಾಯ್ ಜೊತೆ ರೆಟ್ರೋ ಲುಕ್​ನಲ್ಲಿ ಯಶ್ ಸ್ಟೆಪ್ಸ್ ಹಾಕಿದ್ದಾರೆ.. 80ರ ದಶಕದ ಸೂಪರ್ ಹಿಟ್ ತ್ರಿದೇವ್ ಸಿನಿಮಾದ ಗಲಿ ಗಲಿ ಸಾಂಗ್​ನ ರೀಕ್ರಿಯೇಟ್ ಮಾಡಿದ್ದು, ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ.. ಕೆಜಿಎಫ್ ಸಿನಿಮಾ ಮುಂದಿನ ವಾರ ತೆರೆಗೆ ಅಪ್ಪಳಿಸಲಿದೆ..

20.ಸೋಮವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್, ರೋರಿಂಗ್ ಸ್ಟಾರ್ ಶ್ರೀಮುರಳಿ ಒಂದೇ ವೇದಿಕೆಯಲ್ಲಿ ಕಾಣಸಿಕೊಳ್ಳಲಿದ್ದಾರೆ.. ಅಂದು ಶ್ರೀಮುರಳಿ ಹುಟ್ಟುಹಬ್ಬ.. ಇದೇ ಸಂಭ್ರಮದಲ್ಲಿ ರೋರಿಂಗ್ ಸ್ಟಾರ್ ಅಭಿನಯದ ಭರಾಟೆ ಸಿನಿಮಾ ಟೀಸರ್​ನ ದರ್ಶನ್ ಲಾಂಚ್ ಮಾಡಲಿದ್ದಾರೆ.. ಅಷ್ಟೆ ಅಲ್ಲ ಶ್ರೀಮುರಳಿ ಅಭಿನಯದ ಮತ್ತೊಂದು ಸಿನಿಮಾ ಟೈಟಲ್​ನ ಸಹ ದಚ್ಚು ರಿವೀಲ್ ಮಾಡಲಿದ್ದಾರೆ.. ಒಂದರ್ಥದಲ್ಲಿ ಅಂದು ಅಭಿಮಾನಿಗಳಿಗೆ ಡಬಲ್ ಧಮಾಕ..

21.ಡಾ. ರಾಜ್​ಕುಮಾರ್ ಮೊಮ್ಮಗ ಧೀರೇನ್ ರಾಮ್​ಕುಮಾರ್ ಅಭಿನಯದ ದಾರಿತಪ್ಪಿದ ಮಗ ಚಿತ್ರಕ್ಕೆ ಮಾನ್ವಿತಾ ಹರೀಶ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.. ರಾಮ್ ಕುಮಾರ್‌ ಹಾಗೂ ಪೂರ್ಣಿಮಾ ದಂಪತಿಯ ಪುತ್ರ ಧೀರೇನ್, ತಾತನ ಸೂಪರ್ ಹಿಟ್ ಸಿನಿಮಾ ಟೈಟಲ್​ನಲ್ಲೇ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ.. ಜಯಣ್ಣ ಕಂಬೈನ್ಸ್ ಬ್ಯಾನರ್​ನಲ್ಲಿ ನಿರ್ಮಾಣವಾಗ್ತಿರೋ ದಾರಿ ತಪ್ಪಿದ ಮಗ ಚಿತ್ರಕ್ಕೆ ದಿಲ್ ವಾಲಾ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ.. ಅಭಿನಯದ ಪಟ್ಟುಗಳನ್ನ ಕರಗತ ಮಾಡ್ಕೊಂಡು ಚಿತ್ರರಂಗಕ್ಕೆ ಧೀರೇನ್​ ಎಂಟ್ರಿ ಕೊಡ್ತಿದ್ದು, ಟಗರು ಪುಟ್ಟಿ ಮಾನ್ವಿತಾ ಸಾಥ್ ಕೊಡ್ತಿದ್ದಾರೆ..

22.ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಪೆಟ್ಟಾ ಸಿನಿಮಾ ಟೀಸರ್​ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.. ರಜಿನಿ ಬರ್ತ್​ಡೇ ಸ್ಪೆಷಲ್ಲಾಗಿ ನಿನ್ನೆ ರಿಲೀಸ್ ಆದ ಟೀಸರ್, ಕೇವಲ 24 ಗಂಟೆಗಳಲ್ಲಿ 7.2 ಮಿಲಿಯನ್ ವೀವ್ಸ್ ಸಾಧಿಸಿದೆ.. ಕಾರ್ತಿಕ್​ ಸುಬ್ಬರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ಸಿಮ್ರನ್, ತ್ರಿಶಾ ರಜಿನಿಗೆ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ.. ಒನ್ಸ್ ಅಗೇನ್​ ತಲೈವಾ ತಮ್ಮ ಸ್ಟೈಲ್​ನಿಂದ ಕಮಾಲ್ ಮಾಡೋಕೆ ಬರ್ತಿದ್ದು, ಪೆಟ್ಟಾ ಸಿನಿಮಾ ಸಂಕ್ರಾಂತಿಗೆ ತೆರೆಗೆ ಬರಲಿದೆ..

23. 2018ರಲ್ಲಿ ಗೂಗಲ್​ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೆಲೆಬ್ರಿಟಿ ಅನ್ನೊ ಹೆಗ್ಗಳಿಕೆಗೆ ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್​ ಪಾತ್ರರಾಗಿದ್ದಾರೆ.. ಕಳೆದ ಎರಡು ಮೂರು ವರ್ಷಗಳಿಂದ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಮೊದಲ ಸ್ಥಾನ ಉಳಿಸಿಕೊಂಡಿದ್ರು.. ಒರು ಆಡಾರ್ ಲವ್ ಸಿನಿಮಾದ ಸಣ್ಣ ಟೀಸರ್​​ನಲ್ಲಿ ಕಣ್​​ ಹೊಡೆದು, ಪಡ್ಡೆಗಳ ಹೃದಯಕ್ಕೆ ಪ್ರೀತಿಯ ಬುಲೆಟ್ ಹಾರಿಸಿ, ರಾತ್ರೋರಾತ್ರಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಟಿ ಪ್ರಿಯಾ ಪ್ರಕಾಶ್ ವಾರಿಯರ್.. ಸಲ್ಮಾನ್​ ಖಾನ್, ಪ್ರಿಯಾಂಕ ಚೋಪ್ರಾನ ಕೂಡ ಹಿಂದಿಕ್ಕಿದ್ದಾಳೆ ಮಲೆಯಾಳಿ ಕುಟ್ಟಿ.

24.ಸ್ಯಾಂಡಲ್​ವುಡ್​ ನಿರ್ದೇಶಕ ಜೋಗಿ ಪ್ರೇಮ್ , ಇತ್ತೀಚೆಗೆ ಒಂದಲ್ಲ ಒಂದು ವಿವಾದಗಳಿಂದ ಸುದ್ದಿ ಮಾಡ್ತಾನೇ ಇದ್ದಾರೆ..ಇದೀಗ ನಿರ್ಮಾಪಕ ಕನಕಪುರ ಶ್ರೀನಿವಾಸ್ , ಜೋಗಿ ಪ್ರೇಮ್​ ವಿರುದ್ಧ ಕಿಡಿಕಾರ್ತಿದ್ದಾರೆ..ಪ್ರೇಮ್​ ಆಫೀಸ್ ಮುಂದೆ ಧರಣಿ ಕೂತಿದ್ದಾರೆ..12 ವರ್ಷಗಳ ಹಿಂದೆ ಸಿನಿಮಾ ಮಾಡಿ ಕೊಡ್ತಿನಿ ಅಂತ ಪ್ರೇಮ್​ 9 ಲಕ್ಷ ಅಡ್ವಾನ್ಸ್​ ಪಡೆದಿದ್ದು, ಈವರೆಗೂ 4 ವರೆ ಲಕ್ಷ ಹಿಂದಿರುಗಿಸಿದ್ದಾರೆ..ಉಳಿದ ಹಣ ಕೇಳಿದ್ರೆ ಇಂದು, ನಾಳೆ ಅಂತ ಕಾಲ ತಳ್ತಿದ್ದಾರಂತೆ..ಇತ್ತ ಹಣವನ್ನು ವಾಪಸ್ಸು ಕೊಡದೇ,ಸಿನಿಮಾನೂ ಮಾಡಿ ಕೊಡದೇ , ನಿರ್ಮಾಪಕರನ್ನ ಆಟ ಆಡಿಸ್ತಿದ್ದಾರೆ.ಈ ಬಗ್ಗೆ ಫಿಲ್ಮ್​ ಚೇಂಬರ್ ನಲ್ಲಿ ದೂರು ನೀಡಿಲಾಗಿದ್ದು, ಫಿಲ್ಮ್ ಚೇಂಬರ್​ನ ಯಾವುದೇ ಕರೆಗಳನ್ನು ಪ್ರೇಮ್​ ಸ್ವೀಕರಿಸ್ತಾ ಇಲ್ವಂತೆ.ಇದೇ ಕಾರಣಕ್ಕೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಇಂದು ತನ್ನ ಹಣ ವಾಪಸ್ಸು ಬೇಕೇ ಬೇಕು ಅಂತ ಧರಣಿ ಕೂತಿದ್ದಾರೆ.

25.ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಹಿಂದಿ ಸಿನಿಮಾದ ಐಟಂ ಸಾಂಗ್ ರಿಲೀಸ್ ಆಗಿದೆ.. ವಿಶೇಷ ಅಂದ್ರೆ ಯಶ್ ಹೆಜ್ಜೆ ಹಾಕಿರೋ ಚೊಚ್ಚಲ ಸ್ಟ್ರೈಲ್ ಬಾಲಿವುಡ್ ನಂಬರ್ ಇದು..​ ಬಾಲಿವುಡ್​ ಬ್ಯೂಟಿ ಮೌನಿ ರಾಯ್ ಜೊತೆ ರೆಟ್ರೋ ಲುಕ್​ನಲ್ಲಿ ಯಶ್ ಸ್ಟೆಪ್ಸ್ ಹಾಕಿದ್ದಾರೆ.. ತನಿಷ್ಕ್​ ಬಾಗ್ಚಿ ಮ್ಯೂಸಿಕ್​ನಲ್ಲಿ ನೇಹಾ ಕಕ್ಕರ್ ಹಾಡನ್ನ ಹಾಡಿದ್ದಾರೆ.. ಕೆಜಿಎಫ್ ಕನ್ನಡ ಚಿತ್ರಕ್ಕೆ ಪರೋಪಕಾರಿ ಚಿತ್ರದ ಜೋಕೆ ಹಾಡನ್ನ ಬಳಸಿಕೊಂಡಿದ್ದು ತಮನ್ನಾ ಹೆಜ್ಜೆ ಹಾಕಿದ್ದಾರೆ.. ಆದ್ರೆ ಹಿಂದಿ ವರ್ಷನ್​ಗೆ ಮಾತ್ರ ತ್ರಿದೇವ್ ಸಿನಿಮಾದ ಗಲಿ ಗಲಿ ಸಾಂಗ್​ನ್ನ ಬಳಸಿಕೊಳ್ಳಲಾಗಿದೆ.. ಕೆಜಿಎಫ್ ಸಿನಿಮಾ ಮುಂದಿನ ವಾರ ತೆರೆಗೆ ಅಪ್ಪಳಿಸಲಿದೆ.

26.ಸ್ಯಾಂಡಲ್​ವುಡ್​ನ ಹಿರಿಯ ನಿರ್ಮಾಪಕ ದ್ವಾರಕೀಶ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ..ಚೆಕ್​ ಬೌನ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಮತ್ತೊಬ್ಬ ನಿರ್ಮಾಪಕ ಕೆಸಿಎನ್​ ಚಂದ್ರಶೇಖರ್ ದ್ವಾರಕೀಶ್ ವಿರುದ್ಧ ದೂರು ನೀಡಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮ್ಯಾಜಿಸ್ಟೇಟ್ ನ್ಯಾಯಾಲಯವು ವಿಚಾರಣೆ ನಡೆಸಿ, ದ್ವಾರಕೀಶ್​ ವಿರುಧ್ದ ತೀರ್ಪು ನೀಡಿದೆ..ಚಾರುಲತಾ ಸಿನಿಮಾ ನಿರ್ಮಾಣಕ್ಕಾಗಿ, ಕೆಸಿಎನ್​ ಅವ್ರ ಬಳಿ 50 ಲಕ್ಷ ಸಾಲ ಪಡಿದಿದ್ದ, ದ್ವಾರಕೀಶ್ 52 ಲಕ್ಷದ ಚೆಕ್​ ನೀಡಿದ್ದರು..ಇದೀಗ ಚೆಕ್​ ಬೌನ್ಸ್ ಆಗಿದ್ದು, ಮುಂದಿನ 30 ದಿನಗಳ ಒಳಗೆ ದ್ವಾರಕೀಶ್ ಹಣ ವಾಪಸ್ಸು ನೀಡದಿದ್ದಲ್ಲಿ, 1 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿ ಕೋರ್ಟ್ ಆದೇಶ ನೀಡಿದೆ.

27.ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟ ಎನಿಸಿಕೊಂಡಿರೋ ಎಸ್​ ಎಸ್​ ಎಲ್​ ಸಿ ಪರೀಕ್ಷಾ ದಿನಾಂಕ ಪ್ರಕಟವಾಗಿದೆ.. 2019 ರ ಮಾರ್ಚ್​ 21 ರಿಂದ ಎಪ್ರಿಲ್​ 4 ರವರೆಗೆ ಪರೀಕ್ಷೆ ನಡೆಯಲಿದ್ದು ಎಸ್​ ಎಸ್​ ಎಲ್​ ಸಿ ಬೋರ್ಡ್​ನಿಂದ ವೇಳಾಪಟ್ಟಿ ಪ್ರಕಟ ಮಾಡಲಾಗಿದೆ.. ಮಾರ್ಚ್​ 21 ರಂದು ಪ್ರಥಮ ಭಾಷೆ ಪರೀಕ್ಷೆ ನಡೆಯಲಿದ್ದು 23, 25, 29 ಹಾಗೂ ಎಪ್ರಿಲ್​ 2 ರಂದು ಕೋರ್​ ಸಬ್ಜೆಕ್ಟ್​ ನಡೆಯಲಿದೆ.. ಮಾರ್ಚ್​ 27 ರಂದು ದ್ವೀತೀಯ ಭಾಷೆ ಹಾಗೂ 4 ರಂದು ತೃತೀಯ ಭಾಷೆ ಹಾಗೂ ಎನ್​, ಎಸ್​, ಕ್ಯೂಎಫ್​ ಪರೀಕ್ಷೆಗಳು ನಡೆಯಲಿವೆ ಎಂದು ಪಿಯು ಬೋರ್ಡ್​ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

28.ಹೆತ್ತ ತಾಯಿ‌ ಎರಡು ಮಕ್ಕಳನ್ನ ಚರಂಡಿಗೆ ಬಿಸಾಡಿರೋ‌ ಘಟನೆ ಬೀದರ್ ನಲ್ಲಿ ನಡೆದಿದೆ.. ನಗರದ ಸಂಗಮ್‌ ಸಿನಿಮಾ‌ ಮಂದಿರ ಬಳಿಯ ಚರಂಡಿಯಲ್ಲಿ ಎರಡು ನವಜಾತ ಶಿಶುಗಳು ಪತ್ತಯಾಗಿವೆ..

ಎರಡು ಕಂದಮ್ಮಗಳನ್ನ ಬಟ್ಟೆಯಲ್ಲಿ ಸುತ್ತಿ ಹುಟ್ಟಿದ ಶಿಶುಗಳನ್ನ ಚರಂಡಿಯಲ್ಲಿ ಬಿಸಾಡಿದ್ದು ಒಂದು‌ ಶಿಶುವನ್ನ ನಾಯಿಗಳು ತಿಂದು ಹಾಕಿದ್ದು ಗುರುತು ಪತ್ತೆಯಾಗದಂತಾಗಿದ್ದು,ಸುದ್ದಿ ತಿಳಿದ ಮಾರ್ಕೇಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ನಡೆಸಿದ್ದು ಎರಡು ಶಿಶುಗಳು ಸಾವನ್ನಪ್ಪಿದ್ದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.. ಅವಳಿ ಮಕ್ಕಳಿಗೆ ಜನ್ಮ ನೀಡಿರ ಬಹುದು ಎನ್ನಲಾಗಿದೆ. ಸದ್ಯ ಸಾವನ್ನಪ್ಪಿದ‌ಶಿಶುಗಳು ಯಾವ ಆಸ್ಪತ್ರೆಯಿಂದ ತರಲಾಗಿದೆ‌ಎನ್ನುವ ಬಗ್ಗೆ ಪೊಲೀಸರು‌ತನಿಖೆ ಮುಂದುವರೆಸಿದ್ದಾರೆ.

29.ಬೆಳಗಾವಿ ಚಳಿಗಾಲ ಅಧಿವೇಶನದ ನಾಲ್ಕನೇ ದಿನ ದೋಸ್ತಿ ಸರ್ಕಾರಕ್ಕೆ ರೈತರು ಹೋರಾಟದ ಬಿಸಿ ಮುಟ್ಟಿಸಿದೆ.. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಿಂದ ಶಕ್ತಿ ಸೌಧದತ್ತ ಪಾದಯಾತ್ರೆ ಆರಂಭಿಸಿದ ರೈತರನ್ನ ಅರ್ಧಕ್ಕೆ ತಡೆದ ಪೊಲೀಸರು, ವಶಕ್ಕೆ ಪಡೆದು, ಪೂರ್ವ ನಿಗದಿತ ಪ್ರತಿಭಟನಾ ಸ್ಥಳಕ್ಕೆ ತಂದು ಬಿಟ್ಟರು. ರೈತರ ಹೋರಾಟಕ್ಕೆ ಸಿಎಂ ಕುಮಾರಸ್ವಾಮಿ ಸ್ಪಂದಿಸದಿದ್ದಾಗ ರೈತರ ಆಕ್ರೋಶ ಸ್ಫೋಟವಾಗಿ, ಸುವರ್ಣಸೌಧ ಮುತ್ತಿಗೆ ಯತ್ನಿಸಿದರು.

30.ಕಳೆದ ವಾರದಿಂದ ಮಂತ್ರಾಲಯ ಮಠದಲ್ಲಿ ನೂತನವಾಗಿ ಅಧಿಕಾರವನ್ನು ವಹಿಸಿಕೊಂಡಿರುವ ಮುಜರಾಯಿ ಕಮೀಷನರ್ ಮಠಕ್ಕೆ ಭೇಟಿ ನೀಡಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಅಂಥಾ ಬಳ್ಳಾರಿಯಲ್ಲಿ ಮಂತ್ರಾಲಯ ರಾಯರ ಮಠದ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದರು ಹೇಳಿದರು. ಇನ್ನೂ ಹುಬ್ಬಳ್ಳಿಯಲ್ಲಿ ಇರುವ ಭಾವದೀಪ ಶಾಲೆಯಲ್ಲಿ ಶಿಕ್ಷಕರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದಾರೆ. ಮಕ್ಕಳು ಹಾಗೂ ಅವರ ಪೋಷಕರ ಜೋತೆಗೆ ಶ್ರೀಮಠದ ಸಿಬ್ಬಂದಿಗಳು ಸಂಪರ್ಕದಲ್ಲಿದ್ದು ವಿದ್ಯಾರ್ಥಿಗಳಿಗೆ ಯಾವದೇ ಅನಾನುಕೂಲ ಆಗದ ಹಾಗೇ ಕ್ರಮ ಕೈಗೊಂಡಿದೆ ಅಂಥಾ ಹೇಳಿದರು. ಇನ್ನೂ ಸುಧಾಮೂರ್ತಿ ಅವರು ನಮ್ಮ ಭಾವದೀಪ ಟ್ರಸ್ಟನಿಂದ ಹೊರಗಡೆ ಬಂದಿಲ್ಲ.ಅವರು ಹೊರಗಡೆ ಬಾರದಂತೆ ನಾವು ಕೂಡಾ ಮನವಿ ಮಾಡಿದ್ದೇನೆ ಅಂಥಾ ಇದೇ ವೇಳೆ ಹೇಳಿದರು. ಇನ್ನೂ ಹಂಪಿಯಲ್ಲಿ ಪತ್ತೆಯಾದ ವೃಂದಾವನದ ಪೂಜೆಗಾಗಿ ಕೇಂದ್ರ ಸರ್ಕಾರದ ಜೋತೆಗೆ ಸಂಪರ್ಕದಲ್ಲಿದ್ದೇವೆ.ಅಂಥಾ ಹೇಳಿದ ಅವರು ಮಂತ್ರಾಲಯದಲ್ಲಿರುವ ಗೋ ಶಾಲೆಯಲ್ಲಿ ನೀರು ಹಾಗೂ ಮೇವಿನ ಸಮಸ್ಯೆಯಿಲ್ಲ ಅಂಥಾ ಹೇಳಿದರು. ಶ್ರೀ ಮಠದ ವತಿಯಿಂದ ಹಲವಾರು ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಂಡಿದೆ ಅಂಥಾ ತಿಳಿಸಿದರು.

31.ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನಿವಾಸಿ ಪಶು ವೈದ್ಯ ಜಯಸಿಂಹ ಎಂಬುವರು ಗುಜರಾತ್ ಮೂಲದ ಗೀರ್ ತಳಿ ಹಸುಗಳಿಗೆ ಮನ ಸೋತಿದ್ದು, ಹೈನುಗಾರಿಕೆ ಮಾಡಲೆಂದು ತಮ್ಮ ವೃತ್ತಿಗೆ ಜೊತೆ ಹಸು ಸಾಕಣಿಕೆ ಮಾಡಿಕೊಂಡಿದ್ದಾರೆ. ಸುಮಾರು 70ಕ್ಕೂ ಹೆಚ್ಚು ಗೀರ್ ತಳಿಯ ಹಸುಗಳನ್ನು ಕೊಂಡು ಸಮೃದ್ಧಿ ಜೀವನ ಸಾಗಿಸುತ್ತಿದ್ದಾರೆ. ಗುಜರಾತ್ ರಾಜ್ಯದಿಂದ ಈ ಹಸುಗಳನ್ನು ಖರೀದಿಸಲಾಗಿದ್ದು, ಅವುಗಳ ಪೋಷಣೆಗಾಗಿ ಉತ್ತರ ಪ್ರದೇಶ ಮೂಲದ ಮೂರು ಜನ ಯುವಕರನ್ನು ನೇಮಿಸಿದ್ದಾರೆ. ದಿನನಿತ್ಯ ನೀಡುವ ಹಾಲು ನಾಟಿ ಔಷಧಕ್ಕೆ ಸಮಾನ ಎಂದು ತಿಳಿದ ಜಯಸಿಂಹ ಅವರು, ಮೂರ್ನಾಲ್ಕು ವರ್ಷಗಳ ಹಿಂದೆ ಕೇವಲ 70 ಹಸುಗಳನ್ನು ತಂದಿದ್ದರು. ಇದೀಗ ಹಸುಗಳ ಸಂಖ್ಯೆ 90ಕ್ಕೆ ತಲುಪಿವೆ. ದಿನಕ್ಕೆ ಒಂದು ಹಸು 4 ರಿಂದ 5 ಲೀಟರ್ ಹಾಲನ್ನು ನೀಡುತ್ತದೆ. ಎಲ್ಲಾ ಹಸುಗಳ ಹಾಲು ಸೇರಿಸಿ ದಿನಕ್ಕೆ ಸುಮಾರು 40 ಲೀಟರ್ ಹಾಲು ಶೇಖರಣೆಯಾಗುತ್ತದೆ.

32.ದಾವಣಗೆರೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಅಶ್ವಥಿ ವಿರುದ್ದ ಕೊಟ್ಯಾಂತರ ರೂಪಾಯಿ ಬ್ರಷ್ಟಾಚಾರದ ಆರೋಪ ಕೇಳಿ ಬಂದಿದೆ....ಸ್ವತಃ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್.ಜಯಶೀಲಾ ಸಿಇಓ ಮೇಲೆ ಆರೋಪ ಮಾಡಿದ್ದು ಇದೀಗ ಎಸಿಬಿಗೆ ದೂರು ನೀಡಿದ್ದಾರೆ...ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ನಾಲ್ಕು ತಿಂಗಳ ಅವಧಿಯಲ್ಲಿ ಸಿಇಓ ಅಶ್ವಥಿ ಹಾಗೂ ಉಪನಿರ್ದೇಶಕ ಷಡಾಕ್ಷರಪ್ಪ ಮೇಲೆ ಬ್ರಷ್ಟಾಚಾರದ ಆರೋಪ ಮಾಡಿರುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಜಯಶೀಲಾ ಇದೀಗ ಎಸಿಬಿ ದೂರು ನೀಡಿದ್ದಾರೆ...ಜಿಲ್ಲೆಯಲ್ಲಿ 182 ಗ್ರಾಮಪಂಚಾಯಿಯಲ್ಲಿ ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಣಾಧಿಕಾರಿ, ಉಪಕಾರ್ಯದರ್ಶಿ ಸೇರಿಕೊಂಡು ಸರ್ಕಾರದ ವಿವಿಧ ಯೋಜನೆಗಳ ಹಣವನ್ನು ಲೂಟಿ ಹೊಡೆದಿದ್ದು ಈ ಬಗ್ಗೆ ನಿಸ್ಪಕ್ಷಪಾತ ತನಿಖೆಯಾಗ ಬೇಕು, ಈ ನಿಟ್ಟಿನಲ್ಲಿ ಸ್ವತಃ ನಾನೇ ನನ್ನ ಜಿಲ್ಲಾ ಪಂಚಾಯಿತಿಯನ್ನು ತನಿಖೆಗೆ ಒಳ ಪಡಿಸಿಕೊಂಡಿದ್ದಾನೆ... ಅಷ್ಟೇ ಅಲ್ಲದೇ ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ದ ಕ್ರಮ ಕೈಗೊಂಡು ಸರ್ಕಾರದ ಹಣ ವಾಪಸ್ಸು ಖಜಾನೆಗೆ ಬರಲಿ ಎಂಬುದು ನನ್ನ ಉದ್ದೇಶಾ ಅಂತಾರೆ,ಜಿಲ್ಲಾ ಪಂಚಾಯಿತಿ ಅಧ್ಯಕ್ಷರು.

33.ನಾಲ್ಕನೇ ದಿನದ ಬೆಳಗಾವಿ ಆಧಿವೇಶನ ಹಿನ್ನೆಲೆಯಲ್ಲಿ ಸುವರ್ಣಸೌಧದ ಎದುರು ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೆಳಗಾವಿಯ ಸುವರ್ಣಸೌಧದ ಬಳಿ ಇರುವ ಸುವರ್ಣ ಗಾರ್ಡನ್ ನಲ್ಲಿ, ಸೇವಾ ಭದ್ರತೆ, ವೇತನ ಹೆಚ್ಚಳಕ್ಕಾಗಿ AIUTC ಸಹಯೋಗದಲ್ಲಿ ಕಸ್ತೂರಭಾ ಗಾಂಧಿ ಬಾಲಿಕಾ ವಿದ್ಯಾಲಯ ಗುತ್ತಿಗೆ ನೌಕರರ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ಕಡ್ಡಾಯ ವರ್ಗಾವಣೆ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಇನ್ನು ಇದೇ ವೇಳೆ ೧೯೯೫ ನಂತರ ಆರಂಭವಾದ ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ-ಕಾಲೇಜುಗಳಿಗೆ ಅನುದಾನ‌ ನೀಡಲು ಆಗ್ರಹಿಸಿ ಶಿಕ್ಷಕರು ಪ್ರತಿಭಟನೆ ಮಾಡಿದರು. ಬೀದರ್ ಜಿಲ್ಲೆಯ ಕಾರಂಜಾ ಡ್ಯಾಂ ಹಿನ್ನೀರಿನಲ್ಲಿನ ಬಾಧಿತ ಜನರು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದಲೂ ಪ್ರತಿಭಟನೆ ನಡೆಸಿ, ಕಾರಂಜಾ ಡ್ಯಾಂ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರಕ್ಕಾಗಿ ಒತ್ತಾಯಿಸಿದರು. ಅನುದಾನದ ನೀತಿ ಸಂಹಿತೆ ಅಡಿಯಲ್ಲಿ ೧೩೮ ಶಾಲಾ ಸಿಬ್ಬಂದಿಗಳಿಗೆ ಸೇವಾ ಭದ್ರತೆ ನೀಡಲು ಒತ್ತಾಯಿಸಿ ವಿಕಲಚೇತನರು ಪ್ರತಿಭಟನೆ ನಡೆದರು. ಅಲ್ಲದೇ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ‌ ನೌಕರರ ಸಂಘದಿಂದ ಬಸವರಾಜ ಹೊರಟ್ಟಿ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

34.‘ದಕ್ಷಿಣ ಕಾಶಿ’ ಕಳಕಪ್ಪನ ಗುಡ್ಡವೆಂದೇ ಜನಜನಿತ ವಾಗಿದೆ. ಈ ಗುಡ್ಡಕ್ಕೆ ಜಾಲೇಂದ್ರ ಪರ್ವತವೆಂದೂ ಕರೆಯು ತ್ತಾರೆ.ಗಜಾಸುರನೆಂಬ ಅಸುರನನ್ನು ವಿಶ್ವೇಶ್ವರನು ಈ ಜಾಲೀಂದ್ರ ಗಿರಿಯಲ್ಲಿ ಕಾಲಭೈರವನ ರೂಪ ದಿಂದ ಸಂಹರಿಸಿ, ಶಿವನಾಗಿ ನೆಲೆ ನಿಂತ ಲೀಲೆಯ ಚರಿತ್ರೆಯಿದೆ ಎಂದು ಹೇಳಲಾಗುತ್ತದೆ. ‘ದಕ್ಷಿಣ ಕಾಶಿ’ ಎಂದೇ ಕರೆಯಲಾಗುವ ಇಲ್ಲಿನ ಸ್ವಯಂಭೂ ಶ್ರೀ ಕಾಲಕಾಲೇಶ್ವರ ದೇವಾಲಯವು ಈ ಭಾಗದಲ್ಲಿ ಕಳಕಪ್ಪನ ಗುಡ್ಡವೆಂದೇ ಜನಜನಿತ ವಾಗಿದೆ. ಈ ಏಕ ಶಿಲಾ ಬಂಡೆಯ ತಾಣ ಮಕ್ಕಳಿಗೆ ಕೌತುಕದ ಅನುಭವ ನೀಡುತ್ತದೆ. ಮೆಟ್ಟಿಲು ಏರುತ್ತ ಸಾಗಿದಾಗ ಎರಡು ದೀಪ ಸ್ಥಂಭಗಳು ದೇವಸ್ಥಾನ ಸೌಂದರ್ಯವನ್ನು ಹೆಚ್ಚಿಸುತ್ತವೆ. ಅಷ್ಟೇಯಲ್ಲ ಆ ದ್ವೀಪದ ಕಂಬಗಳು ತನ್ನಷ್ಟಕ್ಕೆ ತಾವೇ ಬಣ್ಣವನ್ನು ಬಳಿದುಕೊಳ್ಳುತ್ತವೆ,.

35.ಭಾರತ ವಿಕಾಸ ಸಂಗಮದ ವತಿಯಿಂದ 5ನೇ ಭಾರತೀಯ ಸಂಸ್ಕೃತಿ ಉತ್ಸವವನ್ನು ಡಿ. 24 ರಿಂದ 31 ರ ವರೆಗೆ ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ‌ಮಾತನಾಡಿದ ಅವರು ಈ ಭಾರತ ವಿಕಾಸ ಸಂಗಮವು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಮಾಜಮುಖಿ ವ್ಯಕ್ತಿಗಳ, ಸ್ವಯಂಸೇವಾ ಸಂಘಗಳ ಒಂದು ಸಾಮಾಜಿಕ ವೇದಿಕೆ. ರಾಷ್ಟ್ರೀಯ ಸಂಸ್ಕೃತಿಯನ್ನು ಹಾಗೂ ಪರಂಪರೆಯನ್ನು ಉಳಿಸುವ ಸದುದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಈ ಉತ್ಸವ ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಒಂದು ಪ್ರಯತ್ನವಾಗಿದೆ. ಈ ಕಾರ್ಯಕ್ರಮಕ್ಕೆ ಸುಮಾರು 20 ಲಕ್ಷ ಜನರು ಆಗಮಿಸಲಿದ್ದಾರೆ, ಅಲ್ಲದೇ 150 ಜನ ಮಹಾಸಾಧಕರು ಪಾಲ್ಗೊಳ್ಳಲಿದ್ದಾರೆ. ಉತ್ಸವದ ಉದ್ಘಾಟನೆಗಾಗಿ ಭಾರತದ ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಭಾರತದ ರಕ್ಷಣಾ ಮಂತ್ರಿಗಳು, ಕರ್ನಾಟಕ ಮುಖ್ಯಮಂತ್ರಿ ಭಾಗಿಯಾಗುವ ಸಾಧ್ಯತೆ ಇದೆ ಎಂದರು.

36.ಕೋಲಾರದ ನರಸಾಪುರ ಕೆರೆಯಿಂದ ದೊಡ್ಡವಲ್ಲಬ್ಬಿ ಕೆರೆಗೆ ಕೆಸಿ ವ್ಯಾಲಿ ನೀರು ಹರಿದ 20 ದಿನದಲ್ಲಿ ಕಾಲುವೆಗಳು ಪಾಚಿಕಟ್ಟಿವೆ ಎಂಬ ವಿಡಿಯೋಗಳು ಎರಡು ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು ಇದರ ಕುರಿತು ಮಾದ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಕೋಲಾರ ಜಿಲ್ಲಾದಿಕಾರಿಗಳಾದ ಜೆ ಮಂಜುನಾಥ ರವರು ಇಂದು ನರಸಾಪುರ ಮತ್ತು ದೊಡ್ಡವಲ್ಲಬ್ಬಿ ಕೆರೆಗಳಿಗೆ ಬೇಟಿ ನೀಡಿ ಪರಿಶೀಲಿಸಿದರು , ರಾಜ ಕಾಲುವೆಯಲ್ಲಿ ಪಾಚಿ ಕಟ್ಟಲು ಮುಖ್ಯ ಕಾರಣ ಕೆಸಿ ವ್ಯಾಲಿ ನೀರಲ್ಲ ಬದಲಿಗೆ ನರಸಾಪುರ ಗ್ರಾಮದ ಕೆಲವು ವಸತಿ ಪ್ರದೇಶಗಳ ಯುಜಿಡಿ ನೀರನ್ನು ರಾಜ ಕಾಲುವೆಗೆ ಬಿಟ್ಟಿರುವ ಕಾರಣ ಹಾಗೂ ಕೆಲವು ಸ್ಥಳೀಯರು ಟಮೋಟೋ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ರಾಜ ಕಾಲುವೆಗೆ ಎಸೆದಿರುವುದರಿಂದ ಪಾಚಿ ಕಟ್ಟಿದೆ , ಕಳೆದ ಮೂರು ದಿನಗಳಿಂದ ಕೆಸಿ ವ್ಯಾಲಿ ನೀರು ಹರಿದಿಲ್ಲ ವಸತಿ ಪ್ರದೇಶಗಳಿಂದ ಬಂದ ನೀರನ್ನು ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳ್ಲಲಿ ಹರಿಬಿಟ್ಟಿದ್ದಾರೆ , ಅದನ್ನು ಸಹ ಗಮನದಲ್ಲಿಟ್ಟು ವಸತಿ ಪ್ರದೇಶದ ನೀರು ರಾಜಕಾಲುವೆಗೆ ಸೇರದಂತೆ ಕ್ರಮ ತೆಗೆದು ಕೊಳ್ಳುವಂತೆ ನರಸಾಪುರ ಗ್ರಾಮಪಂಚಾಯಿತಿ ಸೇರಿದಂತೆ ಸಂಬಂದ ಪಟ್ಟ ಇಲಾಖೆಗೆ ಸೂಚಿಸಿದ್ದು ಕೆಸಿ ವ್ಯಾಲಿ ನೀರಿಗೂ ಪಾಚಿ ಕಟ್ಟಿರುವುದಕ್ಕೆ ಯಾವುದೇ ಸಂಬಂದ ವಿಲ್ಲ ಎಂದು ಸ್ಪಷ್ಡೀಕರಣ ನೀಡಿದ್ದಾರೆ .

37. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಬಳಿ ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಅಭಿವೃದ್ದಿ ಮಾಡಿ ಕಾವೇರಿ ಪ್ರತಿಮೆ ಸ್ಥಾಪನೆಗೆ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಆ ಪ್ರಕಾರವಾಗಿ ಸಿದ್ದತೆಗಳನ್ನು ನಡೆಸಿಕೊಂಡು ಕಳೆದ ಶನಿವಾರ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಹ ಅಣೆಕಟ್ಟೆಗೆ ಭೇಟಿ ಕೊಟ್ಟು ಅಣೆಕಟ್ಟೆ ಮತ್ತು ಕಾವೇರಿ ನದಿಯನ್ನು ಸಂಪೂರ್ಣ ವೀಕ್ಷಿಸಿದ್ರು. ಈ ಸಂದರ್ಭದಲ್ಲಿ ನೀರಾವರಿ, ಪ್ರವಾಸೋದ್ಯಮ, ಸಾರಿಗೆ ಇಲಾಖೆಯ ಮಂತ್ರಿಗಳು ಹಾಗೂ ಅಧಿಕಾರಿಗಳು ಡಿಕೆಶಿಗೆ ಸಾಥ್ ಕೊಟ್ಟಿದ್ರು. ಇದೀಗ ಯೋಜನೆಗೆ ಮತ್ತೆ ರೈತರು ತಗಾದೆ ತೆಗೆದಿದ್ದಾರೆ. ಇಷ್ಟು ದಿನ ಕಾವೇರಿ ನದಿ ನೀರಿಗಾಗಿ ಹೋರಾಟ ಮಾಡಿದ್ದೆವು. ಇದೀಗ ಅಣೆಕಟ್ಟೆ ಉಳಿವಿಗಾಗಿ ಹೋರಾಡಬೇಕಿದೆ. ಡಿಸ್ನಿ ಲ್ಯಾಂಡ್ ಮಾದರಿ ಅಭಿವೃದ್ಧಿಗೆ ನಮ್ಮ ತಗಾದೆ ಇಲ್ಲ. ಆದ್ರೆ ಅಣೆಕಟ್ಟೆ ಬಳಿ ಬೇಡ. ಬೇರೆಡೆ ಈ ಯೋಜನೆಯನ್ನ ಮಾಡಲಿ. ಇದರಿಂದ ಅಣೆಕಟ್ಟೆಗೆ ಸಮಸ್ಯೆ ಆಗಬಹುದೆಂಬುದು ರೈತರ ವಾದವಾಗಿದೆ.

38.ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಸಂಭ್ರಮದಿಂದ ನಡೆಯಿತು. ರಥಾರೂಢರಾಗಿ ರಥಬೀದಿಯಲ್ಲಿ ಸಂಚರಿಸಿದ ಕುಕ್ಕೆ ಸುಬ್ರಹ್ಮಣ್ಯ ದೇವರು, ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದ ಬ್ರಹ್ಮರಥೋತ್ಸವದಲ್ಲಿ ರಾರಾಜಿಸಿದ್ರು..ಬೆಳಿಗ್ಗೆ 7 ಗಂಟೆಯ ಲಗ್ನದಲ್ಲಿ ನಡೆದ ಚಂಪಾ ಷಷ್ಠಿ ಬ್ರಹ್ಮರಥೋತ್ಸವ ಈ ಭಾರೀ ಹಲವು ವಿಶೇಷತೆಗೂ ಸಾಕ್ಷಿಯಾಯಿತು..ಸುಮಾರು 500 ವರ್ಷಕ್ಕೂ ಹಳೆಯದಾದ ಬ್ರಹ್ಮರಥಕ್ಕೆ ಈ ಬಾರೀ ಕೊನೆಯ ಚಂಪಾ ಷಷ್ಠಿಯಾಗಿತ್ತು..ಅಲ್ದೆ ಈ ರಥೋತ್ಸವ ಇತಿಹಾಸದ ಪುಟವನ್ನು ಕೂಡ ಸೇರಿತು..ಆದರೆ ಮುಂದಿನ ವರ್ಷದಿಂದ ಕುಕ್ಕೆ ಸುಬ್ರಹ್ಮಣ್ಯ ದೇವರು ನೂತನ ಬ್ರಹ್ಮರಥದಲ್ಲಿ ರಾರಾಜಿಸಲಿದ್ದಾರೆ.

39.ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಆಲ್ದರ್ತಿ ಗ್ರಾಮದ ಬಳಿ ನಾರಾಯಣಪುರ ಬಲೆದಂಡೆಯ ೧೭ ನೇ ಉಪ ಕಾಲುವೆ ಹೊಡೆದ ಪರಿಣಾಮ ಕೆಳ ಭಾಗದ ರೈತರು ಮತ್ತೆ ನೀರಿಲ್ಲದೇ ಬೆಳೆ ಒಣಗುತ್ತಿವೆ.ಇನ್ನೂ ಕಾಲುವೆ ದುರಸ್ತಿಯ ನೆಪಹೊಡ್ಡಿ ನಾರಯಣಪೂರ ಬಲದಂಡೆಗೆ ಬಿಟ್ಟ ನೀರನ್ನು ಕೃಷ್ಣಭಾಗ್ಯ ಜಲ ನಿಗಮದ ಅಧಿಕಾರಿಗಳು ನೀರನ್ನು ಮರಳಿ ಬಂದ್ ಮಾಡಿದ್ದಾರೆ. ಆದ್ರೆ ಕೆಳ ಭಾಗದ ಸುಂಕೇಶ್ವರಹಾಳ್ ಗಬ್ಬೂರು ಸುತ್ತಮುತ್ತಲಿನ ಸುಮಾರು ೧೫ ಗ್ರಾಮಗಳ ರೈತರು ಹತ್ತಿ, ತೊಗರಿ, ಮೆಣಸಿನಕಾಯಿ ಬೆಳೆದ ಬೆಳೆಗೆ ನೀರಿಲ್ಲದೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಹೀಗಾಗಿ ಹೇಗಾದರು ಮಾಡಿ ನಮಗೆ ನೀರು ಕೊಡಿ ಅಂತಾ ಸಮಾಜಿಕ ಜಾಲತಾಣದ ಮೂಲಕ ಸುಂಕೇಶ್ವರಹಾಳ ಗ್ರಾಮದ ಗುರು ಸ್ವಾಮಿ ಎಂಬ ಯುವ ರೈತ ರಾಯಚೂರಿನ ಸಂಸದ ಬಿ.ವಿ. ನಾಯಕ್ ಮತ್ತು ದೇವದುರ್ಗದ ಶಾಸಕ ಕೆ ಶಿವನಗೌಡ ನಾಯಕ್ ಗೆ ಕೈ ಮುಗಿದು ಬೇಡಿ ತರಾಟೆಗೆ ತೆಗೆದುಕೊಂಡಿದ್ದಾನೆ. ಇನ್ನು ಶಾಸಕ ಶಿವನಗೌಡ ನಾಯಕ್ ಮತ್ತು ಸಂಸದ ಬಿವಿ ನಾಯಕ್ ಇಬ್ಬರೂ ದೇವದುರ್ಗ ಕ್ಷೇತ್ರದ ಹುಲಿ ಸಿಂಹಗಳಿದ್ದಂತೆ. ಕಾಡನ್ನು ಆಳುವ ಹುಲಿ ಸಿಂಹಗಳಂತಿರುವ ಇಬ್ಬರೂ ತಾಲ್ಲೂಕನ್ನ ಕಡೆಗಾಣಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಓಟಿಗಾಗಿ ಚಪ್ಪಲಿ ಹರಿಯುವ ತನಕ ಓಡಾಡುವ ಇವರು ಗೆದ್ದನಂತರ ಇತ್ತ ಗಮನ ಹರಿಸುತ್ತಿಲ್ಲ ಎಂದು ಆಕ್ರೋಷ ಹೊರ ಹಾಕಿದ್ದಾನೆ.

40.ಹಾಸನ ಜಿಲ್ಲೆಯ ಸಕಲೇಶಪುರದ ಬಳಿ ರೈತರ ಜಮೀನಿಗೆ ನುಗ್ಗಿ ಬೆಳೆಗಳನ್ನ ಹಾಳು ಮಾಡುತ್ತಿದ್ದ ದೃಷ್ಠಿ ಹೀನ ಕಾಡಾನೆ ಸೆರೆಹಿಡಿದು ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತಂದು ಒಂದು ತಿಂಗಳು ಆಗಿದೆ, ಸೆರೆಹಿಡಿದಾಗಲೇ ತನ್ನ 2 ಕಣ್ಣುಗಳ ದೃಷ್ಠಿಯನ್ನ ಕಳೆದುಕೊಂಡಿದ್ದ ಕಾಡಾನೆಗೆ ಬಿಡಾರದ ವೈದ್ಯಾಧಿಕಾರಿಳಾದ ಡಾ,ವಿನಯ್ ರವರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ, ಕಾರ್ನಿಯಲ್ ಓಪೆಸಿಟಿ ಯಿಂದ ಬಳಲುತ್ತಿದ್ದ ಕಾಡಾನೆಯನ್ನು ಸರಿಯಾದ ಸಮಯಕ್ಕೆ ಅರಣ್ಯ ಇಲಾಖೆಯವರು ಸರೆಹಿಡಿದು ಬಿಡಾರಕ್ಕೆ ತಂದಿದ್ದರಿಂದ ಕಾಡಾನೆಗೆ ಮತ್ತೆ ದೃಷ್ಠಿ ಬರುವ ಸಾಧ್ಯತ ಇದೆ ಎಂದಿದ್ದಾರೆ, ಇನ್ನು ಕಾಡಾನೆಯನ್ನು ಸೆರಹಿಡಿಯದೆ ಬಿಟ್ಟಿದರೆ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ದೃಷ್ಠಿ ಕಳೆದುಕೊಳ್ಳುವ ಸಾಧ್ಯತೆ ಇತ್ತು.ಈಗಾಗಲೇ ಆನೆಯ ದೃಷ್ಠಿಯನ್ನ ಉಳಿಸುವ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳು ಹಾಗೂ ಇಲಾಖೆಯವರು ಸವಾಲ್ ಆಗಿ ತೆಗೆದುಕೊಂಡು ಆನೆಗೆ ಚಿಕಿತ್ಸೆ ನೀಡುತ್ತಿದ್ದಾರೆ, ಬಿಡಾರಕ್ಕೆ ಬಂದ ದಿನವೇ ಆನೆಯನ್ನ ತಪಾಸೆಣೆಗೊಳಿಸಿ, ಆನೆಯ ರಕ್ತ ಹಾಗೂ ಆನೆಯ ಕಣ್ಣಿನ ಭಾಗದಲ್ಲಿನ ಸಮಸ್ಯೆಯನ್ನು ಗುರುತಿಸಿ ಮೆಡಿಕಲ್ ಕಾಲೇಜಿಗೆ ಟೆಸ್ಟ್ ಗೆ ಕಳುಹಿಸಿ ಚಿಕಿತ್ಸೆಯನ್ನ ಮುಂದುವರೆಸಿದ್ದಾರೆ, ಮೊದಲ ದಿನ ಆನೆಯ ಕಣ್ಣುಗಳು ಪೂರ್ಣ ಬಿಳಿ ಬಣ್ಣದಿಂದ ಕೂಡಿತ್ತು, ಚಿಕಿತ್ಸೆ ನೀಡಿದ ಬಳಿಕ ಇದೀಗ ಕಪ್ಪುಬಣ್ಣಕ್ಕೆ ತಿರುಗುತ್ತಿದೆ ಅಂತಾರೆ ವೈದ್ಯರು.

41.ಇಬ್ಬರು ಸಾಮಾನ್ಯ ವ್ಯಕ್ತಿಗಳ ಭೂ ವಿವಾದ ಈಗ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಪ್ರತಿಷ್ಠೆಯಾಗಿದೆ. ಜಮೀನಲ್ಲಿ ರಸ್ತೆಗಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಶಾಸಕ ಗೌರಿಶಂಕರ್ , ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವೈ.ಎಚ್.ಹುಚ್ಚಯರ ಬೆಂಬಲಿಗರ ನಡುವೆ ಶೀತಲ ಸಮರಕ್ಕೂ ಕಾರವಾಗಿದೆ. ಅಲ್ಲದೆ ರಾಜಕೀಯ ಮುಖಂಡರ ಕೆಸರೆರಚಾಟಕ್ಕೂ ವೇದಿಕೆಯಾಗಿದೆ. ತುಮಕೂರು ತಾಲೂಕಿನ ಹುಚ್ಚಬಸವನಹಳ್ಳಿಯಲ್ಲಿ ಪರಮಶಿವಯ್ಯ ಸರ್ವೆ ನಂ.20ರಲ್ಲಿ 8.5 ಕುಂಟೆ ಜಮೀನು ಇತ್ತು. ತಮ್ಮ ಜಮೀನಿಗೆ ಓಡಾಡಲು 1985ರಲ್ಲಿ ಪಾಲಿರಂಗಯ್ಯ ಅವರಿಂದ ಪೂರ್ವಕ್ಕೆ ಸರ್ವೆ ನಂ 82ನ 30 ಕುಂಟೆ ಜಾಗವನ್ನ ಖರೀದಿ ಮಾಡಿದ್ರು. 1991ರಲ್ಲಿ ಅದನ್ನ ತಮ್ಮ ಹೆಸರಿಗೆ ಖಾತೆ ಪಾಣಿ ಮಾಡಿಸಿಕೊಂಡಿದ್ದಾರೆ. ಬಳಿಕ ಪರಮಶಿಯವಯ ಅವರ ಸಹೋದರ ರಾಜಣ್ಣ 5 ಕುಂಟೆ ಹಾಗೂ ಪರಮಶಿವಯ್ಯ 25 ಕುಂಟೆ ಜಾಗವನ್ನ ಭಾಗ ಮಾಡಿಕೊಂಡಿದ್ದಾರೆ.

42.ಆತ ಪ್ರತಿಷ್ಠಿತ ಹೋಟೆಲ್ ಉದ್ಯಮಿ, ಸಣ್ಣ ವಯಸ್ಸಿನಲ್ಲಿ ಸಾಕಷ್ಟು ಹೆಸರು ಮಾಡಿದ್ದ, ಹಣವನ್ನು ಮಾಡಿದ್ದ ಆತ. ಆದ್ರೆ ಆ ಉದ್ಯಮಿ ನಿನ್ನೆ ರಾತ್ರಿ ಇದಕ್ಕಿಇದಂತೆ ಸಾವನ್ನಪ್ಪಿದ್ದಾನೆ. ಆತನ ಸಾವಿನ ಸುತ್ತ ಹಲವು ಅನುಮಾನ ಹುಟ್ಟಿಕೊಂಡಿವೆ. ಉದ್ಯಮಿಯನ್ನ ಹೆಣ್ಣಿನ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

43. ಛತ್ತೀಸ್​ಗಢ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರೈತರ ಸಾಲಮನ್ನಾ ಘೋಷಿಸಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಏರಿದ ಹತ್ತೇ ದಿನದಲ್ಲಿ ಸಾಲಮನ್ನಾ ಮಾಡೋದಾಗಿ ಪ್ರಚಾರ ಮಾಡಿದ್ದರು. ಇದ್ರಿಂದಾಗಿ ಛತ್ತೀಸ್​ಗಢ ಮತ್ತು ಮಧ್ಯಪ್ರದೇಶದಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರವನ್ನು ಸೋಲಿಸಿ ಕಾಂಗ್ರೆಸ್​​ಗೆ ಮತದಾರ ಜೈ ಎಂದಿದ್ದ. ಈ ಕಾರಣಕ್ಕೆ ಕೇಂದ್ರ ಸರ್ಕಾರ ಕೂಡ ಮುಂಬರೋ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡುದ ದೇಶದ ಸುಮಾರು 50 ಕೋಟಿ ರೈತರ ಸಾಲಮನ್ನಾ ಮಾಡಲು ನಿರ್ಧರಿಸಿದೆ ಅಂತ ಹೇಳಲಾಗಿತ್ತು.. ಇದಕ್ಕೆ ಲೋಕಸಭೆಯಲ್ಲಿ ಕೃಷಿ ಖಾತೆ ರಾಜ್ಯ ಸಚಿವ ಪುರುಷೋತ್ತಮ ಸ್ಪಷ್ಟನೆ ನೀಡಿದ್ದಾರೆ.

44.ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಾಲ್ಕನೇ ದಿನವಾದ ಗುರುವಾರ ಬರ, ಕೆರೆಗೆ ನೀರು, ಫ್ಲೆಕ್ಸ್ ತೆರವು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.ವಿಧಾನಸಭೆಯಲ್ಲಿಂದು ರಾಜ್ಯದ ಸಣ್ಣ ಕೆರೆಗಳ ಹೂಳೆತ್ತುವ ವಿಚಾರ ಪ್ರಸ್ತಾಪದ ವೇಳೆ ಸ್ಪೀಕರ್ ರಮೇಶ್ ಕುಮಾರ್ ಗದ್ಗದಿತರಾದರು. ಕೆರೆಗಳಲ್ಲಿ ಅರಣ್ಯ ಇಲಾಖೆ ಜಾಲಿ,ನೀಲಗಿರಿ ಮರ ನೆಟ್ಟಿದೆ..ಮರ ಇರೋದ್ರಿಂದ ನಾವು ಹೂಳೆತ್ತುವುದು ಕಷ್ಟ ಅಂತ ಸಣ್ಣ ನೀರಾವರಿ ಸಚಿವ ಪುಟ್ಟರಾಜು ಅಸಹಾಯಕತೆ ತೋಡಿಕೊಂಡರು.

45.ಬೆಂಗಳೂರಿನ ಕೆ.ಆರ್.ಪುರದ ಶೀಗೆಹಳ್ಳಿ ಗೇಟ್ ಬಳಿ ಹೋಲ್ ಸೇಲ್ ಗೋಡೌನ್ ನ ಯಾರ್ಕ್​ ಕುಸಿದಿದ್ದು,ಇನ್ನೂ ಗೋಡಾನ್ ನಲ್ಲಿದ್ದ ಐವರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.ಕಬ್ಬಿಣದ ಶೀಟ್ ಗಳಿಂದ ನಿರ್ಮಿಸಿದ್ದ ಹಳೆಯ ಗೋಡಾನ್ ಒಳಭಾಗದ ರ್ಯಾಕ್ ಗಳು ಕುಸಿದ ಪರಿಣಾಮ ಗೋಡೌನ್ ನಲ್ಲಿ ಕೆಲಸ ಮಾಡುತ್ತೀದ್ದ ಹಲವು ಕಾರ್ಮಿಕರ ಮೇಲೆ ಬಿದ್ದಿದ್ದು, ನಂತರ ಸ್ಥಳೀಯರು ಮತ್ತು ಪೊಲೀಸರ ನೆರವಿನಿಂದ ರಕ್ಷಣೆ ಮಾಡಲಾಗಿದೆ. ಇನ್ನೂ ಬಟ್ಟೆ , ಆಹಾರ, ಗೃಹೊಪಯೋಗಿ ವಸ್ತುಗಳನ್ನು ಶೇಖರಿಸಿಟ್ಟಿದ್ದ ವೇರ್ ಹೌಸ್ ಎಂದು ತಿಳಿದು ಬಂದಿದೆ.

46.ಕಬ್ಬು ಬಾಕಿ ಪಾವತಿ ಹಾಗೂ ದರ ನಿಗದಿಗೆ ಆಗ್ರಹಿಸಿ ಕಳೆದ 6 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು ಬೆಳಗಾವಿ ಸುವರ್ಣಸೌಧಕ್ಕೆ ನುಗ್ಗಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಕಳೆದ 6 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು ಯಾವುದೇ ಭರವಸೆ ದೊರೆಯದ ಹಿನ್ನೆಲೆಯಲ್ಲಿ ಮುತ್ತಿಗೆ ಹಾಕಲು ಯತ್ನಿಸಿದರು.

47.ಮೊದಲು ನೀರಾವರಿ ಯೋಜನೆಗೆ ಆದ್ಯತೆ ನೀಡಿ. ದುಡ್ಡು ಹೆಚ್ಚಿದ್ದಾಗ ಡಿಸ್ನಿಲ್ಯಾಂಡ್ ಬೇಕಾದರೆ ಮಾಡಿ ಎಂದು ಸರ್ಕಾರಕ್ಕೆ ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ಹೇಳಿದ್ದಾರೆ.ದೋಸ್ತಿ ಸರ್ಕಾರದ ಯೋಜನೆಯಾದ ಕೆಆರ್‌ಎಸ್‌ ಡಿಸ್ನಿಲ್ಯಾಂಡ್‌ ವಿಚಾರವನ್ನು ಇಂದು ವಿಧಾನಸಭೆಯಲ್ಲಿ ಯಡಿಯೂರಪ್ಪ ಪ್ರಸ್ತಾಪಿಸಿದರು. ರೈತರು ಸಂಕಷ್ಟದಲ್ಲಿದ್ದಾರೆ ಈ ಸಂದರ್ಭದಲ್ಲಿ ನಾವು ಕೆಆರ್​ಎಸ್ ಡಿಸ್ನಿಲ್ಯಾಂಡ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಮೊದಲು ರೈತರ ಬಗ್ಗೆ ಗಮನ ಹರಿಸೋಣ ನಂತರ ಬೇರೆ ವಿಚಾರ ಎಂದು ಡಿ ಕೆ ಶಿವಕುಮಾರ್​ಗೆ ತಿರುಗೇಟು ನೀಡಿದರು.

48.ಸ್ಯಾಂಡಲ್​ವುಡ್ ಅಂಗಳದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ದಂಡಯಾತ್ರೆ ಶುರುವಾಗಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ಕೊಡ್ತಿರೋ ಈ ಒಂಟಿಸಲಗ, ಸದ್ಯ ಗಾಂಧಿನಗರದ ಸೆನ್ಸೇಷನಲ್ ಸ್ಟಾರ್. ಈ ಮಫ್ತಿ ಸ್ಟಾರ್ ಬರ್ತ್‌ಡೇಗೆ ಕೌಂಟ್​ಡೌನ್ ಶುರುವಾಗಿದ್ದು, ಈ ಬಾರಿ ಫ್ಯಾನ್ಸ್​ಗೆ ತ್ರಿಬಲ್ ಧಮಾಕಾ ಸಿಗಲಿದೆ.ಕನ್ನಡ ಚಿತ್ರರಂಗದ ಸ್ಫುರದ್ರೂಪಿ ಮಾಸ್ ಹೀರೋಗಳ ಸಾಲಿನಲ್ಲಿ ದರ್ಶನ್, ಯಶ್ ಜೊತೆ ನಿಲ್ಲೋ ಮತ್ತೊಬ್ಬ ನಟ ಅಂದ್ರೆ ಅದು ರೋರಿಂಗ್ ಸ್ಟಾರ್ ಶ್ರೀಮುರಳಿ. ಚಂದ್ರಚಕೋರಿ ಅಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಶ್ರೀಮುರಳಿಗೆ ಉಗ್ರಂ ಒಂಥರಾ ರೀ- ಲಾಂಚ್ ಮಾಡಿತ್ತು.

49.ಸ್ಪಿನ್ನರ್ ಆರ್​.ಅಶ್ವಿನ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ರೋಹಿತ್ ಶರ್ಮ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಭಾರತ ತಂಡದಿಂದ ಹೊರಗುಳಿಯಲಿದ್ದಾರೆ.ಅಡಿಲೇಡ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 32 ರನ್​ಗಳಿಂದ ರೋಚಕವಾಗಿ ಗೆದ್ದುಕೊಂಡಿದ್ದ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ತಂಡದಲ್ಲಿ ಗಾಯದ ಸಮಸ್ಯೆ ಕಾಣಿಸಿಕೊಂಡಿದ್ದು, ಇಬ್ಬರು ಪ್ರಮುಖ ಆಟಗಾರರನ್ನು ಕೈಬಿಡಲಾಗಿದೆ.

50.ಕಂಬದಲ್ಲಿ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರದಲ್ಲಿ ಆಗಿರುವ ವ್ಯತ್ಯಯ ಇನ್ನೂ ಒಂದು ವಾರ ಮುಂದುವರಿಯಲಿದ್ದು, ಬೆಳಗ್ಗೆ ಮತ್ತು ಸಂಜೆ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.ನಮ್ಮ ಮೆಟ್ರೋ ನಿಲ್ದಾಣದ ಬಳಿ ಆಧಾರಸ್ತಂಭದಲ್ಲಿ ಬಿರುಕು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು. ಇದರ ದುರಸ್ತಿ ಕಾರ್ಯ ನಡೆದಿದ್ದು, ಇದು ಪೂರ್ಣಗೊಳ್ಳಲು ಕನಿಷ್ಠ ಒಂದು ವಾರ ಅಗತ್ಯವಿದೆ ಎಂದು ಹೇಳಲಾಗಿದೆ.ಬೆಂಗಳೂರಿನ ಟ್ರಿನಿಟಿ ವೃತ್ತದ ಬಳಿಯ ನಿಲ್ದಾಣದ ಕಂಬದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಒಂದು ವಾರ ಕಾಲ ದುರಸ್ತಿ ಕಾರ್ಯ ನಡೆಯಲಿದ್ದು, ಅಲ್ಲಿಯವರೆಗೂ ಪ್ರಯಾಣಿಕರಿಗೆ ಕಿರಿಕಿರಿ ತಪ್ಪಿದ್ದಲ್ಲ.

Next Story

RELATED STORIES