Top

ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಮಧ್ಯಪ್ರದೇಶ ಮತ ಎಣಿಕೆ!

ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಮಧ್ಯಪ್ರದೇಶ ಮತ ಎಣಿಕೆ!
X

ಪಂಚರಾಜ್ಯಗಳ ಚುನಾವಣೆಗಳ ಪೈಕಿ ಮಧ್ಯಪ್ರದೇಶದ ಫಲಿತಾಂಶ ಇಡೀ ದೇಶ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಬದ್ಧವೈರಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಒಂದೊಂದು ಸ್ಥಾನಕ್ಕೂ ಹೋರಾಟ ನಡೆಸುತ್ತಿದ್ದವು. ಒಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಬಿಜೆಪಿ ಬಹುಮತದತ್ತ ಸಾಗುತ್ತಿದ್ದಂತೆ ಹಿಂದೆ ಸರಿಯುತ್ತಿದ್ದುದು ಕುತೂಹಲ ಮೂಡಿಸಿತ್ತು.

ಪಂಚ ರಾಜ್ಯಗಳ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಹುತೇಕ ಒಂದು ಪಕ್ಷಕ್ಕೆ ಮತದಾರರು ಒಲವು ತೋರಿದರೆ ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪರ ಸಮಬಲದ ಒಲವು ವ್ಯಕ್ತವಾಯಿತು. ಇದರಿಂದ ಮತ ಎಣಿಕೆ ಕಾರ್ಯ ಟಿ-20 ಕ್ರಿಕೆಟ್ ಮ್ಯಾಚ್​ಗಿಂತಲೂ ರೋಚಕತೆಯಿಂದ ಕೂಡಿತ್ತು ಎಂದರೂ ತಪ್ಪಿಲ್ಲ.

ಹೌದು, ಮಂಗಳವಾರ ನಡೆದ ಮತದಾನದ ವೇಳೆ ತೀವ್ರ ಕುತೂಹಲ ಮೂಡಿಸಿದ್ದು ಮಧ್ಯಪ್ರದೇಶ ಚುನಾವಣೆಯ ಫಲಿತಾಂಶ. ಮತ ಎಣಿಕೆ ಆರಂಭವಾದ ಬೆನ್ನಲ್ಲೇ ಕಾಂಗ್ರೆಸ್ ಮುನ್ನಡೆಯ ಖಾತೆ ತೆರೆಯುತ್ತಿದ್ದಂತೆ, ಬಿಜೆಪಿ ಕೂಡ ಹಿಂಬಾಲಿಸಿತು.

ಆರಂಭದಲ್ಲೇ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡರೂ ಹೆಚ್ಚು ಅಂತರ ಬಿಟ್ಟುಕೊಡದೇ ಬಿಜೆಪಿ ಕೂಡ ಪೈಪೋಟಿ ನೀಡಲು ಆರಂಭಿಸಿತು. ಆರಂಭದಲ್ಲಿ ಸುಮಾರು 10 ಸ್ಥಾನಗಳ ಅಂತರ ಇದ್ದಿದ್ದು, ನಂತರ ಕೇವಲ 2ರಿಂದ 5 ಸ್ಥಾನಗಳಿಗೆ ಇಳಿಯಿತು.

ಕಾಂಗ್ರೆಸ್ 100 ದಾಟಿ ಸರಳ ಬಹುಮತದತ್ತ ದಾಪುಗಾಲಿರಿಸಲಿದೆ ಎಂದು ಭಾವಿಸಿರುವಾಗಲೇ ಬಿಜೆಪಿ ತನ್ನ ಮುನ್ನಡೆ ಹೆಚ್ಚಿಸಿಕೊಂಡಿದ್ದೂ ಅಲಲ್ದೇ ಕಾಂಗ್ರೆಸ್ ಹಿಂದಿಕ್ಕಿತು. ಒಂದು ಹಂತದಲ್ಲಿ ನಾಲ್ಕು ಸ್ಥಾನಗಳ ಮುನ್ನಡೆ ಪಡೆದು ಬಹುಮತಕ್ಕೆ ಅಗತ್ಯವಿದ್ದ 116 ಸ್ಥಾನಗಳನ್ನು ಮುಟ್ಟಿತು.

ನಂತರ ಕಾಂಗ್ರೆಸ್ 108 ಸ್ಥಾನಗಳಲ್ಲಿ ಮುನ್ನಡೆ ಪಡೆಯುತ್ತಿದ್ದಂತೆ ಬಿಜೆಪಿ 105 ಸ್ಥಾನಕ್ಕೆ ಕುಸಿದು ಮತ್ತೆ 2ನೇ ಸ್ಥಾನಕ್ಕಿಳಿಯಿತು. ನಂತರ ಎರಡೂ ಪಕ್ಷಗಳು ಒಂದು ಬಾರಿ ಒಂದು ಸ್ಥಾನ ಹೆಚ್ಚು ಪಡೆದು ಮೇಲುಗೈ ಪಡೆದರೆ ಮರು ನಿಮಿಷದಲ್ಲಿಯೇ ಎರಡನೇ ಸ್ಥಾನಕ್ಕೆ ಕುಸಿಯುತ್ತಿತ್ತು. ಆದರೆ ಎರಡೂ ಪಕ್ಷಗಳು 100ರ ಗಡಿ ದಾಟಿದರೂ ಮ್ಯಾಜಿಕ್ ನಂಬರ್​ಗೆ ಅಗತ್ಯವಾದ 116 ಸ್ಥಾನ ಮುಟ್ಟಲು ಪರದಾಡಿದವು.

Next Story

RELATED STORIES