ಬಿಎಸ್ವೈ ಯಾವಾಗ ಉಳುಮೆ ಮಾಡಿದ್ದರು? ಡಿಕೆಶಿ ಪ್ರಶ್ನೆ

ಹಸಿರುಶಾಲು ಹೊದ್ದುಕೊಂಡು ರೈತರ ಪರ ಎಂದು ಪ್ರಮಾಣ ವಚನ ಸ್ವೀಕರಿಸಿದ್ದ ಬಿ.ಎಸ್.ಯಡಿಯೂರಪ್ಪ ಯಾವಾಗ ಉಳುಮೆ ಮಾಡಿದ್ದರು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಆರಂಭಗೊಂಡ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾಗ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಶೋಕಿಗಾಗಿ ಭತ್ತ ಕೊಯ್ಲು ಹಾಗೂ ನಾಟಿ ಮಾಡುತ್ತಿದ್ದಾರೆ ಎಂಬುದಕ್ಕೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರು. ಅವರಿಗೆ ವಿರೋಧ ಮಾಡುವುದು ಬಿಟ್ಟು ಬೇರೇನು ಕೆಲಸ ಇದೆ ಎಂದು ಡಿಕೆಶಿ ಮಾರ್ಮಿಕವಾಗಿ ನುಡಿದರು. ಇದೇ ವೇಳೆ ಸರಕಾರಕ್ಕೆ ಪತನಕ್ಕೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೇ ಸಾಕು ಎಂಬ ಆರ್. ಅಶೋಕ್ ಹೇಳಿಕೆಗೆ ಅವರ ಹೇಳಿಕೆ ಗಮನಿಸಿಲ್ಲ ನೋಡಿ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಇತ್ಯರ್ಥದ ಬಗ್ಗೆ ಅಧಿವೇಶನದಲ್ಲಿ ಆದ್ಯತೆ ನೀಡಲಾಗುವುದು. ಎಲ್ಲಾ ಶಾಸಕರು ಈ ಬಗ್ಗೆ ಗಂಭೀರ ಚರ್ಚೆ ಮಾಡುವ ವಿಶ್ವಾಸವಿದೆ. ಇದೇ ವೇಳೆ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಗಮನಿಸಿದ್ದು, ರಾಜೀ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಚೆನ್ನೈನಲ್ಲಿ ತುಮಕೂರು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿದ ವಿಷಯ ಪ್ರಸ್ತಾಪಿಸಿದ ಅವರು, ಶ್ರೀಗಳು ಆರೋಗ್ಯವಾಗಿ ಲವಲವಿಕೆಯಿಂದ ಇದ್ದಾರೆ ಎಂದು ಡಿಕೆಶಿ ನುಡಿದರು.