ಕೇಂದ್ರ ಸಚಿವ ಸ್ಥಾನಕ್ಕೆ ಉಪೇಂದ್ರ ರಾಜೀನಾಮೆ! ಪ್ರತಿಪಕ್ಷಗಳ ಸಭೆಗೆ ಹಾಜರು

ರಾಷ್ಟ್ರೀಯ ಲೋಕ ಶಕ್ತಿ ಪಕ್ಷದ (ಆರ್ಎಲ್ಎಸ್ಪಿ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ಕೇಂದ್ರ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಉಪೇಂದ್ರ ಪ್ರತಿಪಕ್ಷಗಳ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಸೀಟು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಉಪೇಂದ್ರ ಕುಶ್ವಾಹ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಮೈತ್ರಿಕೂಟದಿಂದ ಹೊರ ಬಂದಿದ್ದಾರೆ. ಈ ಮೂಲಕ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಎನ್ಡಿ ಮೈತ್ರಿಕೂಟದಿಂದ ಹೊರಬಂದಿತ್ತು. ಇದೀಗ ರಾಷ್ಟ್ರೀಯ ಲೋಕಶಕ್ತಿ ಕೂಡ ಹೊರ ಬಂದಿದೆ.
ಲೋಕಸಭೆಯ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಸಂಜೆ ಎನ್ಡಿಎ ತನ್ನ ಮಿತ್ರಪಕ್ಷಗಳ ಸಭೆ ಆಯೋಜಿಸಲಾಗಿದ್ದು, ಈ ಸಭೆಗೆ ಉಪೇಂದ್ರ ಗೈರಾಗುವ ಸಾಧ್ಯತೆ ಇದೆ.
ಬಿಹಾರದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ ಬಿಜೆಪಿ ಮತ್ತು ಜೆಡಿ (ಯು) ಎರಡು ಪಕ್ಷಗಳು ತಲಾ 17 ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿರುವುದು ಕುಶ್ವಾಹ ಅವರ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ತಾತ್ಕಾಲಿಕವಾಗಿ ಮಾಡಿಕೊಳ್ಳಲಾಗಿರುವ ಒಪ್ಪಂದದ ಪ್ರಕಾರ ಆರ್ಎಲ್ಎಸ್ಪಿಗೆ ಎರಡು ಸ್ಥಾನಗಳನ್ನು ನೀಡಲಾಗಿದೆ. ಇದು 2014ರಲ್ಲಿ ಆರ್ಎಲ್ಎಸ್ಪಿ ಗೆದ್ದ ಸಂಖ್ಯೆಗಿಂತ ಒಂದು ಸ್ಥಾನ ಕಡಿಮೆಯೇ ಇದೆ. ಕುಶ್ವಾಹ ಅವರು ಕಾರಕತ್ ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ. ಇದೇ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದ ಅರುಣ್ ಕುಮಾರ್ ಅವರನ್ನು ಕಳೆದ ಎರಡು ವರ್ಷಗಳ ಹಿಂದೆ ಪಕ್ಷದಿಂದ ಅಮಾನತು ಮಾಡಲಾಗಿದೆ.
ಆರ್ಎಲ್ಎಸ್ಪಿ ಎನ್ಡಿಎ ಮೈತ್ರಿಕೂಟ ತೊರೆದು ವಿರೋಧ ಪಕ್ಷಗಳ ಕೂಟ ಸೇರುವ ಸಾಧ್ಯತೆ ಇದೆ. ಲಾಲೂ ಪ್ರಸಾದ್ ಯಾದವ್ ಅವರ ಆರ್ಜೆಡಿ ಮತ್ತು ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗುತ್ತಿದೆ.