ವಿಮಾನದಲ್ಲಿ ಫ್ರಾನ್ಸ್ ಪ್ರಜೆ ಪ್ರಾಣ ಉಳಿಸಿದ ಮೈಸೂರಿನ ವೈದ್ಯ!

ವೈದ್ಯೋ ನಾರಾಯಣ ಹರಿ ಅನ್ನುತ್ತಾರೆ. ಯಾಕೆಂದರೆ ಸಾವು-ನೋವಿನ ನಡುವೆ ಹೋರಾಡುತ್ತಿದ್ದಾಗ ನೆರವಿಗೆ ಬಂದು ಜೀವ ಉಳಿಸುತ್ತಾನೆ ಎಂಬ ಕಾರಣಕ್ಕೆ ವೈದ್ಯರನ್ನು ದೇವರಿಗೆ ಹೋಲಿಸುತ್ತರೆ. ಮೈಸೂರಿನ ವೈದ್ಯರೊಬ್ಬರು ವಿಮಾನ ಪ್ರಯಾಣದ ವೇಳೆ ಕೂಡಲೇ ಚಿಕಿತ್ಸೆ ನೀಡಿ ಜೀವ ಉಳಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನವೆಂಬರ್ 13ರಂದು ಫ್ರಾನ್ಸ್ ರಾಜಧಾನಿ ಪ್ಯಾರಿಸ್​ನಿಂದ ಬೆಂಗಳೂರಿಗೆ AF-194 ಏರ್ ಫ್ರಾನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಸಮಸ್ಯೆ ಅರಿತುಕೊಂಡು ಕೂಡಲೇ ಚಿಕಿತ್ಸೆ ನೀಡಿ ಫ್ರಾನ್ಸ್ ಪ್ರಜೆಯ ಜೀವ ರಕ್ಷಿಸಿದ ಮೈಸೂರು ಮೂಲದ ವೈದ್ಯ ಡಾ. ಪ್ರಭುಲಿಂಗಸ್ವಾಮಿ ತುರ್ತು ಪರಿಸ್ಥಿತಿಯಲ್ಲಿ ಕರ್ತವ್ಯಪ್ರಜ್ಞೆ ಮೆರೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಫ್ರಾನ್ಸ್ ಪ್ರಜೆಗೆ ಸಿಂಕೊಪಾಲ್ ಸಮಸ್ಯೆ ಕಾಣಿಸಿಕೊಂಡಿತ್ತು.  ಮಕ್ಕಳ ತಜ್ಞರಾಗಿರುವ ಪ್ರಭುಲಿಂಗಸ್ವಾಮಿ, ಕೂಡಲೇ ಸ್ಪಂದಿಸಿ 5 ನಿಮಿಷದಲ್ಲಿ ಚಿಕಿತ್ಸೆ ನೀಡಿದರು. ಇದರಿಂದ ಫ್ರಾನ್ಸ್ ಪ್ರಜೆ ಬದುಕುಳಿದಿದ್ದಾರೆ.

ಡಾ. ಪ್ರಭುಲಿಂಗಸ್ವಾಮಿ ಕಾರ್ಯಕ್ಕೆ ಏರ್ ಫ್ರಾನ್ಸ್ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದೂ ಅಲ್ಲದೇ ವಿಶ್ವದ ಅತ್ಯುನ್ನತ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಸ್ಥೆಯಿಂದ 100 ಯುರೋ ಬಹುಮಾನ ನೀಡಿ ಗೌರವಿಸಿದೆ.