ಬೆಳಗಾವಿ ಅಧಿವೇಶನಕ್ಕೆ ಸಿದ್ಧತೆ: `ಚಳಿ’ ಬಿಡಿಸಲು ಬಿಜೆಪಿ ಸಜ್ಜು

ಸೋಮವಾರದಿಂದ ಬೆಳಗಾವಿಯಲ್ಲಿ 10 ದಿನಗಳ ಚಳಿಗಾಲದ ಅಧಿವೇಶನಕ್ಕೆ ಸಿದ್ದತೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಸರಕಾರಕ್ಕೆ ಚಳಿ ಬಿಡಿಸಲು ಪ್ರತಿಪಕ್ಷ ಬಿಜೆಪಿ ತಯಾರಿ ಮಾಡುತ್ತಿದೆ. ಇದರಿಂದ ಸದನ ಮೊದಲ ದಿನವೇ ಕಾವೇರುವ ಸಾಧ್ಯತೆ ಇದೆ.
ಬೆಳಗಾವಿ ಸುವರ್ಣಸೌಧದಲ್ಲಿ ನಡೆಯಲಿರುವ ಅಧಿವೇಶನ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದಲ್ಲಿ ನಡೆಯಲಿರುವ ಮೊದಲ ಪೂರ್ಣ ಪ್ರಮಾಣದ ಅಧಿವೇಶನವಾಗಿದೆ. ರೈತರ ಸಂಪೂರ್ಣ ಸಾಲ ಮನ್ನಾ, ಕಬ್ಬು ಬೆಳೆಗಾರರ ಸಮಸ್ಯೆಗಳು, ಬರಗಾಲ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಬಿಜೆಪಿ ಮುಖಂಡರು ಈಗಾಗಲೇ ಹಲವು ತಂಡಗಳಾಗಿ ವಿವಿಧ ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸಿದ್ದು, ಅದರ ವರದಿಯನ್ನು ಸದನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಇದೇ ವೇಳೆ 2016-17ರ ಸಿಎಜಿ ವರದಿ ಕುರಿತು ಪ್ರಸ್ತಾಪ ಮಾಡಲು ಸಭಾಧ್ಯಕ್ಷರ ಮೇಲೆ ಒತ್ತಡ ಹೇರಲು ಬಿಜೆಪಿ ಸಿದ್ಧತೆ ನಡೆಸಿದೆ.
ಸಿದ್ದರಾಮಯ್ಯ ಸರಕಾರದಲ್ಲಿ 35 ಸಾವಿರ ಕೋಟಿ ರೂ. ಲೆಕ್ಕ ನೀಡದೇ ಇರುವ ಬಗ್ಗೆ ಚರ್ಚೆಗೆ ಆಗ್ರಹಿಸಲಿದ್ದು, ಸದನ ಸಮಿತಿ ರಚನೆಗೆ ಬಿಜೆಪಿ ಒತ್ತಾಯಿಸಲಿದೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ 1 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಅಧಿವೇಶನದ ವೇಳೆ ಸೇರಿಸಿ ಹೋರಾಟ ನಡೆಸಲಾಗುವುದು ಎಂದು ಹೇಳಿಕೆ ನೀಡಿರುವುದು ಅಧಿವೇಶನ ಕುತೂಹಲ ಮೂಡಿಸಿದೆ.