Top

ಅಡಿಲೇಡ್ ಟೆಸ್ಟ್​: ಆಸ್ಟ್ರೇಲಿಯಾಗೆ 323 ರನ್ ಗುರಿ ಒಡ್ಡಿದ ಭಾರತ

ಅಡಿಲೇಡ್ ಟೆಸ್ಟ್​: ಆಸ್ಟ್ರೇಲಿಯಾಗೆ 323 ರನ್ ಗುರಿ ಒಡ್ಡಿದ ಭಾರತ
X

ಸ್ಪಿನ್ನರ್ ನಾಥನ್ ಲಿಯೊನ್ ಮಾರಕ ದಾಳಿಗೆ ಕುಸಿದರೂ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ 323 ರನ್​ಗಳ ಸ್ಪರ್ಧಾತ್ಮಕ ಮೊತ್ತದ ಗುರಿ ಒಡ್ಡುವಲ್ಲಿ ಯಶಸ್ವಿಯಾಗಿದೆ.

ಅಡಿಲೇಡ್ ನಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಭಾನುವಾರ 3 ವಿಕೆಟ್​ಗೆ 151 ರನ್​ಗಳಿಂದ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡ 307 ರನ್​ಗಳಿಗೆ ಆಲೌಟಾಯಿತು. ಮೊದಲ ಇನಿಂಗ್ಸ್​ನಲ್ಲಿ 15 ರನ್​ಗಳ ಅಲ್ಪ ಹಿನ್ನಡೆ ಅನುಭವಿಸಿದ್ದ ಆಸ್ಟ್ರೇಲಿಯಾ ಗೆಲ್ಲಲು 323 ರನ್ ಗಳಿಸಬೇಕಿದೆ.

ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ವೈಯಕ್ತಿಕ ಅರ್ಧಶತಕಗಳನ್ನು ಬಾರಿಸಿ ತಂಡವನ್ನು ಆಧರಿಸಿದ್ದು ಹೊರತುಪಡಿಸಿದರೆ ಉಳಿದ ಆಟಗಾರರು ಅಲ್ಪ ಮೊತ್ತಕ್ಕೆ ನಿರ್ಗಮಿಸಿದ್ದರಿಂದ ತಂಡ ಬೃಹತ್ ಮೊತ್ತ ದಾಖಲಿಸುವ ಅವಕಾಶವನ್ನು ಕಳೆದುಕೊಂಡಿತು.

40 ರನ್ ಗಳಿಸಿದ್ದ ಪೂಜಾರ ಮತ್ತು 1 ರನ್ ನೊಂದಿಗೆ ಖಾತೆ ತೆರೆದಿದ್ದ ಅಜಿಂಕ್ಯ ರಹಾನೆ ವೈಯಕ್ತಿಕ ಅರ್ಧಶತಕ ಬಾರಿಸಿದ್ದೂ ಅಲ್ಲದೇ ನಾಲ್ಕನೇ ವಿಕೆಟ್​ಗೆ 87 ರನ್​ ಜೊತೆಯಾಟ ನಿಭಾಯಿಸಿದರು.

ಪೂಜಾರ 204 ಎಸೆತಗಳಲ್ಲಿ 9 ಬೌಂಡರಿ ಸೇರಿದ 71 ರನ್ ಗಳಿಸಿ ಔಟಾದರೆ, ರಹಾನೆ 147 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 70 ರನ್ ಬಾರಿಸಿ ನಿರ್ಗಮಿಸಿದರು. ಇವರಿಬ್ಬರನ್ನೂ ಔಟ್ ಮಾಡಿದ ಸ್ಪಿನ್ನರ್ ನಾಥನ್ ಲಿಯೊನ್ ಆಸ್ಟ್ರೇಲಿಯಾಗೆ ಮೇಲುಗೈ ತಂದುಕೊಟ್ಟರು.

ನಂತರ ರಿಷಭ್ ಪಂತ್ 16 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 24 ರನ್ ಗಳಿಸಿ ತಂಡದ ಮೊತ್ತ 300ರ ಗಡಿ ದಾಟಿಸಿದರು. ಉಳಿದಂತೆ ಯಾವುದೇ ಆಟಗಾರರು ಹೆಚ್ಚು ಹೊತ್ತು ನಿಲ್ಲಲಿಲ್ಲ.

ಸ್ಪಿನ್ನರ್ ನಾಥನ್ ಲಿಯೊನ್ 6 ವಿಕೆಟ್ ಪಡೆದು ಭಾರತದ ಕೆಳ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಮುರಿದರೆ, ಮಿಚೆಲ್ ಸ್ಟಾರ್ಕ್ 3 ವಿಕೆಟ್ ಗಳಿಸಿದರು.

  • ಸಂಕ್ಷಿಪ್ತ ಸ್ಕೋರ್
  • ಭಾರತ 250 ಮತ್ತು ಎರಡನೇ ಇನಿಂಗ್ಸ್ 307 (ಪೂಜಾರ 71, ರಹಾನೆ 70, ರಿಷಭ್ 24, ಲಿಯೊನ್ 122/6, ಸ್ಟಾರ್ಕ್ 40/3).
  • ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 235

Next Story

RELATED STORIES