ಭಾರತಕ್ಕೆ ಅಲ್ಪ ಮುನ್ನಡೆ: ಉತ್ತಮ ಆರಂಭ

ಅಡಿಲೇಡ್: ಭಾರತಕ್ಕೆ ತಲೆನೋವಾಗಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಟ್ರಾವಿಸ್ ಹೆಡ್ ವಿಕೆಟ್ ಪಡೆಯುವ ಮೂಲಕ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನಿಂಗ್ಸ್ ನಲ್ಲಿ ಮಹತ್ವದ ಮುನ್ನಡೆ ಪಡೆದಿದೆ.
ಅಡಿಲೇಡ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ ಬೆಳಗ್ಗೆ ಆಸ್ಟ್ರೇಲಿಯಾ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 235 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಭಾರತ ಮೊದಲ ಇನಿಂಗ್ಸ್ನಲ್ಲಿ 15 ರನ್ಗಳ ಅಲ್ಪ ಮುನ್ನಡೆ ಪಡೆಯಿತು.
61 ರನ್ ಬಾರಿಸಿ ಆಡುತ್ತಿದ್ದ ಟ್ರಾವಿಸ್ ಹೆಡ್ ಅವರನ್ನು ಮೊಹಮದ್ ಶಮಿ 167 ಎಸೆತಗಳಲ್ಲಿ 6 ಬೌಂಡರಿ ನೆರವಿನೊಂದಿಗೆ 72 ರನ್ ಗಳಿಸಿದ್ದಾಗ ಔಟ್ ಮಾಡಿ ಮಹತ್ವದ ವಿಕೆಟ್ ಪಡೆದರು. ಮಿಚೆಲ್ ಸ್ಟಾರ್ಕ್ (15) ಮತ್ತು ನಾಥನ್ ಲಿಯೊನ್ (24) ತಂಡಕ್ಕೆ ಮುನ್ನಡೆ ದೊರೆಕಿಸಿಕೊಡಲು ಹೋರಾಟ ನಡೆಸಿದ್ದು ಪ್ರಯೋಜನವಾಗಲಿಲ್ಲ.
ಭಾರತದ ಪರ ಜಸ್ ಪ್ರೀತ್ ಬುಮ್ರಾ ಮತ್ತು ಆರ್.ಅಶ್ವಿನ್ ತಲಾ 3 ವಿಕೆಟ್ ಕಬಳಿಸಿದರೆ, ಇಶಾಂತ್ ಶರ್ಮ ಮತ್ತು ಮೊಹಮದ್ ಶಮಿ ತಲಾ 2 ವಿಕೆಟ್ ಗಳಿಸಿದರು.
ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡ ವಿಕೆಟ್ ನಷ್ಟವಿಲ್ಲದೇ 56 ರನ್ ಗಳಿಸುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾದರು. ಮೊದಲ ಇನಿಂಗ್ಸ್ನಲ್ಲಿ ಎಡವಿದ್ದ ಕೆ.ಎಲ್. ರಾಹುಲ್ ಮತ್ತು ಮುರಳಿ ವಿಜಯ್ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದರು.
- ಸಂಕ್ಷಿಪ್ತ ಸ್ಕೋರ್
- ಭಾರತ 250 ಮತ್ತು 2ನೇ ಇನಿಂಗ್ಸ್ ವಿಕೆಟ್ ನಷ್ಟವಿಲ್ಲದೇ 56
- ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 235 (ಹೆಡ್ 72, ಲಿಯೊನ್ 24, ಸ್ಟಾರ್ಕ್ 15, ಬುಮ್ರಾ 47/3, ಶಮಿ 58/2).