ಗೌರಿ ಹತ್ಯೆಯ ಬಳಿಕ ಹಂತಕರ ಟಾರ್ಗೇಟ್ ಯಾರು ಗೊತ್ತಾ ?

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದ್ದು, ಗೌರಿ ಹತ್ಯೆ ಬೆನ್ನತ್ತಿದ ಎಸ್‌ಐಟಿಗೆ ಕಂಟಕ ಶುರುವಾಗಿದೆ.

ಜೈಲಿನಲ್ಲಿದ್ದರೂ ಹಂತಕರು ಎಸ್‌ಐಟಿ ಅಧಿಕಾರಿಗಳನ್ನೇ ಟಾರ್ಗೇಟ್ ಮಾಡಿದ್ದು, ತನಿಖಾಧಿಕಾರಿಗಳಿಗೆ ಅನಾಮಧೇಯ ಪತ್ರ ಬಂದಿದೆ. ಆ ಪತ್ರದಲ್ಲಿ ತನಿಖಾಧಿಕಾರಿಗೆ ಜೀವ ಬೆದರಿಕೆ ಹಾಕಲಾಗಿದೆ.

ಪರಶುರಾಮ್ ವಾಗ್ಮೋರೆ ಸೇರಿದಂತೆ 18 ಜನರನ್ನು ಎಸ್‌ಐಟಿ ತಂಡ ಬಂಧಿಸಿದ್ದು, ವಿಚಾರಣೆ ವೇಳೆ ಧಾರ್ಮಿಕ ಸಂಘಟನೆಯ ಕೈವಾಡವಿರುವುದು ತನಿಖೆಯಲ್ಲಿ ಸಾಬೀತಾಗಿದೆ.

ಈ ಹಿನ್ನೆಲೆ ಆರೋಪಿಗಳು ತನಿಖಾಧಿಕಾರಿಗಳನ್ನ ಟಾರ್ಗೇಟ್ ಮಾಡಿದ್ದು, ತನಿಖೆ ವೇಳೆ ಆರೋಪಿಗಳ ಚಲನವಲನ ಬೆನ್ನತ್ತಿದ್ದ ಎಸ್‌ಐಟಿಗೆ ಮಾಹಿತಿ ಲಭ್ಯವಾಗಿದೆ.

ಹಿಂದಿ ಭಾಷೆಯಲ್ಲಿ ಮಾತನಾಡಿದ ಆರೋಪಿಗಳು ಗೌರಿ ಹಂತಕರನ್ನು ಬಂಧಿಸಿದವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ಮಾತನಾಡಿಕೊಂಡಿದ್ದಾರೆ. ಈ ಆಡಿಯೋ ಕೇಳಿದ ಎಸ್ಐಟಿ ಅಧಿಕಾರಿಗಳು ಆತ್ಮರಕ್ಷಣೆಗಾಗಿ ಪಿಸ್ತೂಲ್ ಮೊರೆ ಹೋಗಿದ್ದಾರೆ.

ಈ ಕಾರಣಕ್ಕಾಗಿ ಎಸ್‌ಐಟಿಯ ಪ್ರಮುಖ 5 ತನಿಖಾಧಿಕಾರಿಗಳಿಗೆ ಪೊಲೀಸ್ ಇಲಾಖೆಯಿಂದ ಗನ್ ಲೈಸೆನ್ಸ್ ನೀಡಲಾಗಿದೆ. ಇನ್ನು ತನಿಖಾಧಿಕರಿಗಳು ಈಗಾಗಲೇ ಸರ್ವಿಸ್ ಗನ್ ಲೈಸೆನ್ಸ್ ಹೊಂದಿದ್ದಾರೆ. ಆದ್ರೆ ಕರ್ತವ್ಯದಲ್ಲಿದ್ದಾಗ ಮಾತ್ರ ಸರ್ವಿಸ್ ಗನ್ ಬಳಸಲು ಅವಕಾಶ ಕೊಡಲಾಗಿದೆ. ರಜೆಯಲ್ಲಿದ್ದಾಗ ಸರ್ವಿಸ್ ರಿವಾಲ್ವರ್ ಬಳಕೆ ಮಾಡಲು ಪೊಲೀಸರಿಗೆ ಅನುಮತಿ ನೀಡಿಲ್ಲ.

ಅಧಿಕಾರಿಗಳು ಕುಟುಂಬಸ್ಥರ ಜೊತೆ ಇದ್ದಾಗ ಅವರನ್ನು ಟಾರ್ಗೇಟ್ ಮಾಡುವ ಸಂಭವವಿದ್ದು, ಈ ಕಾರಣಕ್ಕಾಗಿ ಆತ್ಮರಕ್ಷಣೆಗಾಗಿ ಪ್ರೈವೆಟ್ ಗನ್ ಲೈಸೆನ್ಸ್ ಕೊಡಲಾಗಿದೆ. ಅಲ್ಲದೇ ಎಸ್‌ಐಟಿ ಅಧಿಕಾರಿಗಳ ಕುಟುಂಬಕ್ಕೂ ರಕ್ಷಣೆ ಒದಗಿಸಲು ಮನವಿ ಮಾಡಲಾಗಿದೆ.