Top

ಕನ್ನಡಿಗರನ್ನ ಕೆರಳಿಸ್ತಾ ಸಲಾಂ ರಾಕಿಭಾಯ್ ಹಾಡು..?

ಕನ್ನಡಿಗರನ್ನ ಕೆರಳಿಸ್ತಾ ಸಲಾಂ ರಾಕಿಭಾಯ್ ಹಾಡು..?
X

ಭಾರಿ ನಿರೀಕ್ಷೆ ಹುಟ್ಟಾಕೋ ಸಿನಿಮಾಗಳು ವಿವಾದಗಳನ್ನ ಮೈಗಂಟಿಸಿಕೊಂಡಿರ್ತಾವೆ. ಸದ್ಯ ಕನ್ನಡದಲ್ಲಿ ಕೆಜಿಎಫ್ ಎಬ್ಬಿಸಿರುವ ಹವಾದ ಮುಂದೆ ಬರೀ ಕನ್ನಡ ಅಲ್ಲಾ ಪರಭಾಷಾ ಸಿನಿಮಾನೂ ಸೌಂಡ್​ ಲೆಸ್​. ಹಾಗಿದೆ ಕೋಲಾರದ ಚಿನ್ನದ ಮಣ್ಣಿನ ಕಥೆ. ಕೆಜಿಎಫ್ ಹಾಡು ಹೆಂಗಿರತಪ್ಪಾ ಎಂದು ಆಕಾಶ ನೋಡ್ತಿದ್ದ ಅಭಿಮಾನಿಗಳ ನಡುವೆ ವಿವಾದ ಹೊಗೆಯಾಡುತ್ತಿದೆ. ಏನದು ವಾದ, ವಿವಾದ..? ಹಾಡು ಜಬರ್​ದಸ್ತ್ ​​ಆಗಿದೆ ..ಆದ್ರೂ ಏನಿದು ಕಾಂಟ್ರವರ್ಸಿ...? ಇಲ್ಲಿದೆ ನೋಡಿ ಆ ಬಗ್ಗೆ ಸಂಪೂರ್ಣ ವರದಿ.

‘ಸಲಾಂ ರಾಕಿ ಭಾಯ್’ ಹಾಡಿನೊಳಗಿದ್ಯಾ ವಿವಾದದ ಕಿಡಿ..!?

ಕನ್ನಡ ಕೇಳುಗರನ್ನು ಕೆರಳಿಸಿದ್ಯಾ ಹಿಂದಿ ಭಾಷೆ ನುಡಿ..!?

ಚಲ್ನೇಕಾ ಹುಕುಂ.. ರುಕ್ನೇಕಾ ಹುಕುಂ..ಜಿಂದಗಿ ಪೆ ಹುಕುಂ..ಮೌತ್ ಪೆ ಹುಕುಂ.. ಬಂದೂಕ ಪೆ ಹುಕುಂ..ದುಷ್ಮನ್ ಪೆ ಹುಕುಂ.. ಲೆಹೆರೋ ಪೆ ಹುಕುಂ.. ಮುಂಬೈ ಪೆ ಹುಕುಂ.. ಜಾನು ಬೊಂಬೈ ಕಾ ಜಾನು ಬೊಂಬೈ ಕಾ ಜಾನು ರೇ, ಇವನ್ನ ಕಣ್ಣಲ್ಲಿ ಕಣ್ಣು ಇಡಬೇಡ ಸಿಡಿಲು ಬಡಿಯುತ್ತೆ ಭಾಗರೇ.. ಈ ರೀತಿ ಹಿಂದಿ ಪದಗಳ ಸರಮಾಲೆಯನ್ನು, ಸಂಗೀತದ ದಾರದಲ್ಲಿ ಪೊಣಿಸಿರುವ ಹಾಡೇ ಸಲಾಂ ರಾಕಿ ಭಾಯ್​.. ಪೋಸ್ಟರ್ , ಟೀಸರ್ ಹಾಗೂ ಟ್ರೈಲರ್​​ನಿಂದ ಹಲ್​ಚಲ್ ಎಬ್ಬಿಸಿದ್ದ ಕೆಜಿಎಫ್ ಹಾಡಿಗಾಗಿ ಪ್ರೇಕ್ಷಕಗಣ ಕಣ್ಣನೇ ಕಿವಿಗಳನ್ನಾಗಿಸಿಕೊಂಡು ಕಾಯುತ್ತಿತ್ತು. ಹಾಡು ಬಂದಿದೇ ಬಂದಿದ್ದು ಯೂಟ್ಯೂಬ್​ನಲ್ಲಿ ದಾಂಧಲೇ ಎಬ್ಬಿಸಿ ಬಿಡ್ತು. ಆಗಿನ ಜಮಾನದ ರೀತಿ ಕೆಸಿಟ್ ಅಥವಾ ಸಿಡಿಗಳ ಟ್ರೆಂಡ್ ಇವಾಗ ಇದ್ದಿದ್ರೆ ಇವತ್ತು ಆಡಿಯೋ ಅಂಗಡಿಗಳ ಮುಂದೆ ಕೆಜಿಎಫ್​​ಗಾಗಿ ಕ್ಯೂ ನಿಲ್ತಿದ್ರೇನೋ ಜನ.

ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್​ ಹಾಡಿನದ್ದೇ ಸದ್ದು..!!

ವಿವಾದ ಎಬ್ಬಿಸುತ್ತಿರುವವರಿಗೆ ಸಿಗುತ್ತಾ ಸೂಕ್ತ ಚುಚ್ಚು ಮದ್ದು..!!

ಒಂದು ಕನ್ನಡದ ಮಣ್ಣಲಿ ಅರಳಿದ ಸಿನಿಮಾದ ಹಾಡಿಗೆ ಈ ಪರಿ ಎಲ್ಲಾ ಭಾಷೆಗಳಲ್ಲಿಯೂ ಬೇಡಿಕೆ ಬಂದಿರುವುದು ದಿಟ್ಟ ಕನ್ನಡಿಗನ ಎದೆ ಉಬ್ಬಿಸುವಂತಹ ಹೆಮ್ಮೆಯ ವಿಷಯ. ಆದ್ರೂ ಮೊಸರಲ್ಲಿ ಕಲ್ಲು ಹುಡ್ಕೊರು ಇದ್ದೇ ಇರ್ತಾರಲ್ಲ. ಕವಿರತ್ನ ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿಬಂದಿರುವ ಸಲಾಂ ರಾಕಿ ಭಾಯ್ ಹಾಡಿನಲ್ಲಿ ಹೆಚ್ಚು ಮೊಗಲ್​ ಅಥವಾ ಹಿಂದಿ ಭಾಷೆಯ ಪದಗಳು ಬೆಸೆದುಕೊಂಡಿದೆ. ಈ ವಿಚಾರ ಕೆಲ ಕನ್ನಡಿಗರನ್ನು ಕೆರಳಿಸಿದೆ.

ಕೆಜಿಎಫ್ ಸಿನಿಮಾದ ಮೊದಲ ಹಾಡಿನಲ್ಲಿ ಹೆಚ್ಚು ಹಿಂದಿ ಪದಗಳೇ ತುಂಬಿ ತುಳುತ್ತಿವೆ. ಇದು ಸರಿಯಲ್ಲ ಎಂದು ಕೆಲವರ ವಾದ. ಇನ್ನು ಕೆಜಿಎಫ್ ಸಿನಿಮಾದ ಈ ಸಲಾಂ ರಾಕಿ ಭಾಯ್ ಹಾಡು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿಲ್ಲ, ತಮಿಳು,ತೆಲುಗು,ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಿದೆ. ತೆಲುಗು , ಮಲಯಾಳಂ ಭಾಷೆಯಲ್ಲಿ ಹಿಂದಿ ಮಿಶ್ರಿತ ಸಾಹಿತ್ಯವಿದೆ. ಆದ್ರೆ ತಮಿಳಿನಲ್ಲಿ ಹಾಗಿಲ್ಲ. ಪೂರ್ತಿ ತಮಿಳು ಸಾಹಿತ್ಯವೇ ತಮಿಳು ಕೆಜಿಎಫ್ ಹಾಡಿನಲ್ಲಿದೆ. ತಮಿಳು ರೀತಿಯೆ ನಮ್ಮ ಕನ್ನಡದಲ್ಲಿಯೂ ಯಾಕೆ ಪೂರ್ತಿ ಕನ್ನಡ ಸಾಹಿತ್ಯವಿಲ್ಲ ಅನ್ನೋದು ಸೋಷಿಯಲ್ ಮಿಡಿಯಾದಲ್ಲಿ ವಾದ ಮಾಡುತ್ತಿರುವವರ ಪ್ರಶ್ನೆ.

ಇದಕ್ಕೆ ಚಿತ್ರತಂಡದವರು ಹೆಚ್ಚು ತಲೆ ಕೆಡಿಸಿಕೊಳೋದಕ್ಕೆ ಹೋಗಿಲ್ಲ. ಒಂದು ಸಿನಿಮಾದ ಚಿತ್ರಕಥೆ ಮುಂಬೈ ಮತ್ತು ಕೋಲಾರದಲ್ಲಿ ನಡೆಯುತ್ತದೆ ಅಂದ್ಮೇಲೆ ಅಲ್ಲಿ ಆಯಾ ಭಾಷೆಗಳು ಕಥೆಗೆ ತಕ್ಕಂತೆ ಬಳಕೆಯಾಗುವುದು ಮಾಮೂಲಿ. ಹಂಗೆ ಇಲ್ಲೂ ಕೂಡ ಆಗಿರಬಹುದು. ಚಿತ್ರತಂಡ ಕೂಡ ಕಥೆಗೆ ತಕ್ಕಂತೆ ಮುಂಬೈನಲ್ಲಿ ಬರೋ ಹಾಡು. ಹಾಗಾಗಿ ಹಿಂದಿ ಪದಗಳಿವೆ ಅಂತ ಹೇಳಿದೆ. ಕನ್ನಡದ ಎಷ್ಟು ಸಿನಿಮಾದಲ್ಲಿ ಇಂಗ್ಲೀಷ್ ಭಾಷೆ ಮಿಶ್ರಿತ ಹಾಗೂ ಸೂಫಿ ಪದಗಳು ಬೆರೆತ್ತಿರುವ ಹಾಡುಗಳು ಬಂದಿಲ್ಲ ಹೇಳಿ..? ಅನ್ನೋದು ತಿಳಿದವರ ಮರುಪ್ರಶ್ನೆ.

ತಮಿಳು ‘ಮಾರಿ’ಗೆ ಮಾರ್ಗದರ್ಶಕನಾದ್ರಾ ಕನ್ನಡದ ರಾಕಿ..!?

ಯಶ್ ಹೊಡೆದ ಡೈಲಾಗ್ ಧನುಷ್ ಚಿತ್ರದಲ್ಲಿ ಪಟಾಕಿ..!!

ಈಗಾಗಲೇ ಕೆಜಿಎಫ್ ಸಿನಿಮಾದ ಟ್ರೈಲರ್ ಹಾಗೂ ಸಾಂಗ್ಸ್​​​ಗಳು ಸೋಷಿಯಲ್ ಮೀಡಿಯಾದಲ್ಲಿ ಕುಣಿದಾಡುತ್ತಿವೆ. ಕೆಜಿಎಫ್ ನ ಒಂದು ಡೈಲಾಗ್ ಧನುಷ್ ನಟನೆಯ ಮಾರಿ-2 ಚಿತ್ರದಲ್ಲಿ ಝೇಂಕರಿಸಿದೆ.. ಆ ಡೈಲಾಗೇ if you are bad, i am your dad.. ಈ ಎಕ್ಸ್​​ಕ್ಲೂಸೀವ್ ಕೆಜಿಎಫ್ ಡೈಲಾಗ್​​ನ ಯಶ್ ನಿಮ್ಮ ಟಿವಿ5 ವಿಶೇಷ ಸಂದರ್ಶನದಲ್ಲಿ ಹೇಳಿದ್ರು. ಇದೇ ಡೈಲಾಗ್ ಧನುಷ್ ನಟನೆ ಮಾರಿ-2 ಚಿತ್ರದಲ್ಲಿ ಕೇಳಿಸುತ್ತಿದೆ..

ಒಂದು ಕಾಲದಲ್ಲಿ ಕನ್ನಡ ಸಿನಿಮಾವನ್ನು ನೋಡಿದ ಮಂದಿ, ಇದು ಆ ತಮಿಳು ಸಿನಿಮಾ ಕಾಪಿ, ಈ ಸೀನು ತೆಲುಗು ಸಿನ್ಮಾದ ಕಾಪಿ ಅಂತೆಲ್ಲ ಹೇಳುತ್ತಿದ್ರು. ಆದ್ರೆ ಈಗ ಬದಲಾವಣೆ ಚಂದನವನದಲ್ಲಿಯೂ ಆಗುತ್ತಿದೆ.ಆದ್ರೆ, ಇದು ಕಾಪಿ ರೀತಿ ಕಾಣಿಸ್ತಿಲ್ಲ. ಚಿತ್ರಕಥೆಯ ಸಂದರ್ಭಕ್ಕೆ ತಕ್ಕಂತೆ ಎರಡೂ ಸಿನಿಮಾಗಳಲ್ಲಿ ಈ ಡೈಲಾಗ್ ಬಂದಿದೆ. ಹಾಗಾಗಿ ಇದನ್ನ ಕಾಪಿ ಅನ್ನೋಕೆ ಸಾಧ್ಯವಿಲ್ಲ. ಫೈನಲ್​​ಆಗಿ ಹೇಳಬೇಕಂದ್ರೆ ಇಡೀ ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಹವಾ ಮತ್ತು ಹವಮಾನ ಮೂಡಿದ್ದು ನಿರೀಕ್ಷೆಯಂತೆ ಯಶಸ್ಸಿನ ಮೇಘಮಾಲೆ ಕನ್ನಡ ನೆಲದಲ್ಲಿ ಹರಿದ್ರೆ ಸಾಕು.

ಶ್ರೀಧರ್ ಶಿವಮೊಗ್ಗ_ಎಂಟರ್​​​​​​ಟೈನ್ಮೆಂಟ್ ಬ್ಯೂರೋ_ಟಿವಿ5

Next Story

RELATED STORIES