Top

ಚಳಿಗಾಲದ ಅಧಿವೇಶನಕ್ಕೆ ಖರ್ಚಾಗಲಿರುವ ಹಣವೆಷ್ಟು ಗೊತ್ತಾ..?

ಚಳಿಗಾಲದ ಅಧಿವೇಶನಕ್ಕೆ ಖರ್ಚಾಗಲಿರುವ ಹಣವೆಷ್ಟು ಗೊತ್ತಾ..?
X

ಈ ಬಾರಿಯ ಚಳಿಗಾಲದ ಅಧಿವೇಶನಕ್ಕೆ ಸರ್ಕಾರ ಬಹುಕೋಟಿ ವೆಚ್ಚ ಭರಿಸಲು ನಿರ್ಧರಿಸಿದೆ. ಸಮಸ್ಯೆಗೆ ಪರಿಹಾರ ಸಿಗದಿದ್ದರೂ, ಅಧಿವೇಶನ ಖರ್ಚು ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, ಜನಸಾಮಾನ್ಯರ ತೆರಿಗೆ ಹಣ ಪೋಲಾಗುತ್ತಿದೆ.

ಈ ಬಾರಿ ಅಧಿವೇಶನಕ್ಕೆ 17ಕೋಟಿ 57 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದ್ದು, ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದೆ.

ಮಂತ್ರಿಗಳಿಗೆ ಊಟ , ವಸತಿ, ಸಾರಿಗೆ ಭದ್ರತೆ ಹಾಗೂ ಇತರೆ ವೆಚ್ಚಕ್ಕಾಗಿ 17.57 ಕೋಟಿ ರೂ ಹಣ ಬಿಡುಗಡೆಗೆ ಸರ್ಕಾರ ಮುಂದಾಗಿದ್ದು, ಅಧಿವೇಶನ ಮುಗಿಯುವುದರೊಳಗೆ ಖರ್ಚು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಏಕೆಂದರೆ ಕಳೆದ ಬಾರಿ ಅಧಿವೇಶನಕ್ಕೆ ಸುಮಾರು 20 ಕೋಟಿ ಖರ್ಚಾಗಿತ್ತು. ಹಾಗಾಗಿ ಈ ಬಾರಿ ಅಧಿವೇಶನದ ಖರ್ಚು 20 ಕೋಟಿ ರೂಪಾಯಿ ಗಡಿ ಮೀರುವ ಸಾಧ್ಯತೆ ಇದೆ.

ಇನ್ನು ಬೆಳಗಾವಿಯಲ್ಲಿ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಮಾಧ್ಯಮಗಳಿಗೆ ದಾಖಲೆ ಬಿಡುಗಡೆ ಮಾಡಿದ್ದು, ಸಿದ್ದರಾಮಯ್ಯ ಸರ್ಕಾರ 2017 ಚಳಿಗಾಲ ಅಧಿವೇಶನಕ್ಕೆ 21 ಕೋಟಿ 57.14 ಲಕ್ಷ ವೆಚ್ಚ ಮಾಡಿದೆ. ಕಳೆದ ಬಾರಿಯ 10 ದಿನಗಳನ್ನು ವಿಧಾನ ಸಭೆ ಕಲಾಪವೂ 40 ಗಂಟೆ 30 ನಿಮಿಷ ನಡೆದಿದೆ. 10 ದಿನಗಳಲ್ಲಿ ವಿಧಾನ ಪರಿಷತ್ ಕಲಾಪ 58 ಗಂಟೆ 08 ನಿಮಿಷ ನಡೆದಿದೆ ಎಂದಿದ್ದಾರೆ.

ಅಲ್ಲದೇ ಶಾಸಕರು, ಗಣ್ಯರ ವಸತಿಗಾಗಿ ಜಿಲ್ಲಾಡಳಿತ ರೂ.4,79,31,366 ಕೋಟಿ ವೆಚ್ಚ ಭರಿಸಿದೆ. ಮಾಧ್ಯಮ ಪ್ರತಿನಿಧಿಗಳಿಗಾಗಿ ಊಟ, ವಸತಿಗಾಗಿ ಹೋಟೆಲ್‌ ಕೀರ್ತಿಗೆ ರೂ.34,42,633 ಲಕ್ಷ ಖರ್ಚಾಗಿದೆ. ಲೋಕೋಪಯೋಗಿ ಇಲಾಖೆ ವಿವಿಧ ಕಾಮಗಾರಿಗೆ ರೂ.2,87,750,00 ಕೋಟಿ ವೆಚ್ಚ ಮಾಡಿದೆ. ಬೆಳಗಾವಿ ಸರ್ಕಿಟ್ ಹೌಸ್‌ನಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಸೇರಿ ನಾಲ್ವರು ಸಚಿವರಿಗೆ ರೂ.24 ಲಕ್ಷ ವೆಚ್ಚ ಮಾಡಲಾಗಿದೆ ಎಂದಿದ್ದಾರೆ.

ಇನ್ನು ಈ ಹಿಂದೆ ಸುವರ್ಣ ಸೌಧದ ಹಸಿರು ಪಾಚಿ ತೊಳೆಯಲು 9ಲಕ್ಷ ವೆಚ್ಚ ಮಾಡಲಾಗಿತ್ತು. 2017ರಲ್ಲಿ 29 ಲಕ್ಷ ವೆಚ್ಚ ಮಾಡಲಾಗಿದೆ.

ಈವರೆಗೂ ಬೆಳಗಾವಿಯಲ್ಲಿ 8 ಚಳಿಗಾಲ ಅಧಿವೇಶನ ನಡೆದಿದ್ದು. ಈ 8 ಅಧಿವೇಶನಕ್ಕೆ 84 ಕೋಟಿ ವೆಚ್ಚ ಮಾಡಲಾಗಿದೆ. ಬೆಳಗಾವಿ ಈಫಾ ಹೋಟೆಲನಲ್ಲಿ ಪಾಂಪ್ಲೇಟ್ ಫಿಶ್ ಮಸಾಲಾಗೆ 1000 ಸಾವಿರ ರೂಪಾಯಿ. ಫಿಶ್ ಕರಿ 1100 ರುಪಾಯಿ ಹೀಗೆ ದುಬಾರಿ ಬೆಲೆಯಲ್ಲಿ ಊಟ ಮಾಡಲಾಗಿದೆ ಎಂದಿದ್ದಾರೆ.

ಇನ್ನು ಬೆಳಗಾವಿ ಅಧಿವೇಶನಕ್ಕೆ ಸ್ಪೀಕರ್ , ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನ, ಪುನರ್ವಸತಿ ಆಯುಕ್ತರಾಗಿರುವ ಉಜ್ವಲ್ ಕುಮಾರ್ ಘೋಷ್‌ರನ್ನ ವಿಶೇಷ ಅಧಿಕಾರಿಯಾಗಿ ನೇಮಿಸಲಾಗಿದೆ. ಈ ಬಾರಿ ಬೆಳಗಾವಿ ಅಧಿವೇಶನ ಖರ್ಚು ವೆಚ್ಚದ ಅಧಿಕಾರವನ್ನ ಘೋಷ್ ನಿರ್ವಹಿಸಲಿದ್ದಾರೆ.

ಒಟ್ಟಾರೆಯಾಗಿ ಗದ್ದಲ, ಗೊಂದಲವೇ ಹೆಚ್ಚಾಗಿರುವ ಅಧಿವೇಶನಕ್ಕೆ ಕೋಟಿ ಕೋಟಿ ಖರ್ಚು ಮಾಡುತ್ತಿರುವುದು ಮಾತ್ರ ಜನಸಾಮಾನ್ಯರ ಅಸಮಾಧಾನಕ್ಕೆ ಕಾರಣವಾಗಿದೆ.

Next Story

RELATED STORIES