ಶೂಟಿಂಗ್ ನಿಲ್ಲಿಸಿ ಅಭಿಮಾನಿ ಮದುವೆಗೆ ಗೋಲ್ಡನ್ ಸ್ಟಾರ್ ಹಾಜರ್

ಮದುವೆಯಲ್ಲಿ ಮದು ಮಗಳು ಗೋಲ್ಡನ್​ ಸ್ಟಾರ್ ಗಣೇಶ್ ಉಪಸ್ಥಿತಿಯಲ್ಲೇ ತಾಳಿ ಕಟ್ಟಿಸಿಕೊಳ್ಳೋದಾಗಿ ಹಠ ಹಿಡಿದು ಕೂತಿದ್ದು ನಂತರ ನಟ ಗಣೇಶ್ ಬಂದು ಮದುವೆ ಮಾಡಿಸಿರುವ ಘಟನೆ ನಾಯಂಡಳ್ಳಿಯಲ್ಲಿ ನಡೆದಿದೆ.

ಇನ್ನೂ ತಮ್ಮ ಅಭಿಮಾನಿ ಮದುವೆ ಆಗಲ್ಲ ಅಂತ ಹಠ ಹಿಡಿದಿರೋ ಸುದ್ದಿ ಕೇಳಿ, ಗಣೇಶ್ ಕೂಡಲೇ ಶೂಟಿಂಗ್ ನಿಲ್ಲಿಸಿ, ನಾಯಂಡಳ್ಳಿಯ ಮದುವೆ ಮಂಟಪಕ್ಕೆ ಹೋಗಿ ಅಭಿಮಾನಿಯ ಮದುವೆಗೆ ಸಾಕ್ಷಿಯಾಗಿದ್ದಾರೆ. ಗೋಲ್ಡನ್ ಸ್ಟಾರ್ ಮದುಮಗಳಿಗೆ ಬುದ್ಧಿಮಾತು ಹೇಳಿ ತಾವೇ ಮುಂದೆ ನಿಂತು ಮದುವೆಯನ್ನು ನಡೆಸಿಕೊಟ್ಟಿದ್ದಾರೆ. ಇನ್ನೂ ಅಭಿಮಾನಿಯ ಸನ್ಮಾನವನ್ನು ಸ್ವೀಕರಿಸಿ ಬಂದಿದ್ದಾರೆ.

ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಹೊರಹೊಮ್ಮಿದ ನಟ ಗಣೇಶ್. ಮುಂಗಾರು ಮಳೆ ಮತ್ತು ಚೆಲುವಿನ ಚಿತ್ತಾರ ಸಿನಿಮಾಗಳು ಗಣಿಗೆ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿತು. ಅಲ್ಲಿಂದ ಗಣೇಶ್ ಹಿಂತಿರುಗಿ ನೋಡಲೇಯಿಲ್ಲ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳನ್ನು ನಿಭಾಯಿಸುತ್ತಾ ಅಭಿಮಾನಿಗಳನ್ನು ರಂಜಿಸ್ತಾ ಬರ್ತಿದ್ದಾರೆ.

ಅಭಿಮಾನಿಗಳು ಹೀಗೆ ಅಭಿಮಾನದ ಪರಾಕಾಷ್ಠೆಯಲ್ಲಿ ಹಠ ಮಾಡಿರೋ ಸಾಕಷ್ಟು ಘಟನೆಗಳಿವೆ. ಆದರೆ ಮಹಿಳಾ ಅಭಿಮಾನಿಯೊಬ್ಬರು ಹೀಗೆ ನೆಚ್ಚಿನ ನಟ ಬರದೇ ತಾಳಿ ಕಟ್ಟಿಸಿಕೊಳ್ಳಲ್ಲ ಅಂದಿದ್ದು ವಿಶೇಷವಾಗಿದೆ.