Top

ದಿಢೀರನೆ ಮಂಡ್ಯದ ಮನೆ ಖಾಲಿ ಮಾಡಿದ ರಮ್ಯಾ

ದಿಢೀರನೆ ಮಂಡ್ಯದ ಮನೆ ಖಾಲಿ ಮಾಡಿದ ರಮ್ಯಾ
X

ನಟ ಅಂಬರೀಶ್ ಅಂತಿಮ ದರ್ಶನಕ್ಕೆ ಬಾರದೇ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿರುವ ಮಾಜಿ ಸಂಸದೆ ರಮ್ಯಾ, ರಾತ್ರೋ ರಾತ್ರಿ ಮಂಡ್ಯದಿಂದ ಮನೆ ಖಾಲಿ ಮಾಡಿದ್ದಾರೆ. ಈ ಮೂಲಕ ರಾಜಕೀಯವಾಗಿಯೂ ಮಂಡ್ಯದಿಂದ ದೂರ ಸರಿದ್ರಾ ಎಂಬ ಊಹಾಪೋಹ ಕೇಳಿಬರುತ್ತಿದೆ.

ಭಾನುವಾರ ತಡರಾತ್ರಿ ಮಂಡ್ಯದ ವಿದ್ಯಾನಗರದಲ್ಲಿರುವ ರಮ್ಯಾ ಅವರ ಮನೆಗೆ ಬಂದ ಎರಡು ಲಾರಿಗಳಲ್ಲಿ ರಮ್ಯಾ ಅವರ ಮನೆಯ ವಸ್ತುಗಳನ್ನು ತುಂಬುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ರಮ್ಯಾ ಮಂಡ್ಯವನ್ನು ಶಾಶ್ವತವಾಗಿ ತೊರೆಯುತ್ತಿದ್ದಾರೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.

ರಮ್ಯಾ ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಂಡ್ಯದಲ್ಲಿ ಮನೆ ಮಾಡಿ, ಇಲ್ಲೇ ಇದ್ದು ಮಂಡ್ಯ ಜನರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದರು. ನಂತರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲನುಭವಿಸಿದ ರಮ್ಯಾ, ಸದ್ದಿಲ್ಲದೆ ಮಂಡ್ಯದಿಂದ ಮನೆ ಖಾಲಿ ಮಾಡಿ ವರ್ಷಗಟ್ಟಲೆ ಮಂಡ್ಯ ಕಡೆ ತಲೆ ಹಾಕಲೇ ಇಲ್ಲ.

ಇದೀಗ ದಿಢೀರನೆ ಮಂಡ್ಯಕ್ಕೆ ಆಗಮಿಸಿದ ರಮ್ಯಾ ನಾನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಿದ್ದೆ. ಈಗ ವಿದ್ಯಾಭ್ಯಾಸ ಮುಗಿಸಿ ವಾಪಸ್ ಬಂದಿದ್ದೇನೆ. ಇನ್ನು ಮುಂದೆ ನಾನು ನಿಮ್ಮ ಜೊತೆಯೇ ಇರುತ್ತೇನೆ ಎಂದು ಮಂಡ್ಯದಲ್ಲಿ ಎರಡನೇ ಬಾರಿಗೆ ಬಾಡಿಗೆ ಮನೆ ಮಾಡಿದ್ದರು.

ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕನಸು ಕಂಡಿದ್ದ ರಮ್ಯಾಗೆ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಿಸಿತುಪ್ಪವಾಗಿ ಪರಿಣಮಿಸಿತ್ತು. ಇತ್ತೀಚೆಗೆ ನಡೆದ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿ, ಕಾಂಗ್ರೆಸ್ ಪಕ್ಷ ಜೆಡಿಎಸ್ಗೆ ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟುಕೊಟ್ಟಿತ್ತು. ಅದರಂತೆ ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲೂ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಜೆಡಿಎಸ್ಗೆ ಬಿಟ್ಟುಕೊಡುವುದು ಬಹುತೇಕ ಖಚಿತವಾಗಿದೆ.

ಹೀಗಿದ್ದಾಗ ಮಂಡ್ಯದಲ್ಲಿ ನನಗೆ ರಾಜಕೀಯ ನೆಲೆಯಿಲ್ಲ ಎಂದು ಯೋಚಿಸಿದ ರಮ್ಯಾ ಈ ಹಿಂದೆಯೇ ಮಂಡ್ಯ ತೊರೆಯುವ ಯೋಚನೆ ಮಾಡಿದ್ರು. ಇದೇ ವೇಳೆ ಅಂಬರೀಷ್ ಅವರು ಮೃತಪಟ್ಟಾಗಲೂ ಅವರ ಅಂತಿಮ ದರ್ಶನ ಪಡೆಯಲು ರಮ್ಯಾ ಮಂಡ್ಯಕ್ಕೆ ಬರಲಿಲ್ಲ. ಇದ್ರಿಂದ ಆಕ್ರೋಷಗೊಂಡ ಅಂಬಿ ಅಭಿಮಾನಿಗಳು ರಮ್ಯಾ ನಮ್ಮ ಪಾಲಿಗೆ ಸತ್ತಂತೆ ಎಂದು ಆಕ್ರೋಷ ಹೊರಹಾಕಿದ್ರು.

ಈ ಎಲ್ಲ ಬೆಳವಣಿಗೆ ನಡುವೆಯೇ ರಾತ್ರೋರಾತ್ರಿ ರಮ್ಯಾ ಅವರ ಮನೆಯಲ್ಲಿದ್ದ ವಸ್ತುಗಳನ್ನು ಎರಡು ಲಾರಿಗಳ ಮೂಲಕ ಹೊರಗೆ ಸಾಗಿಸಲಾಗುತ್ತಿದೆ. ಇದೆಲ್ಲವನ್ನು ನೋಡಿದ್ರೆ ಮಂಡ್ಯದಲ್ಲಿ ನನಗಿನ್ನು ರಾಜಕೀಯವಾಗಿ ಭವಿಷ್ಯವಿಲ್ಲ ಎಂದು ಶಾಶ್ವತವಾಗಿ ರಮ್ಯಾ ಮಂಡ್ಯ ತೊರೆಯುತ್ತಿದ್ದಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ಶುರುವಾಗಿದೆ.

Next Story

RELATED STORIES