ದುನಿಯಾ ವಿಜಿ ವಿರುದ್ಧ ಮತ್ತೆ ಬುಸುಗುಟ್ಟಿದ ನಾಗರತ್ನ.!

ಬೆಂಗಳೂರು: ದುನಿಯಾ ವಿಜಯ್ ವಿರುದ್ಧ ವಿಜಿ ಪತ್ನಿ ನಾಗರತ್ನ ದೂರು ದಾಖಲಿಸಲು ಮುಂದಾಗಿದ್ದಾರೆ. ಮನೆ ಬೇಕೆಂಬ ಕಾರಣಕ್ಕೆ ನಾಗರತ್ನ ದೂರು ನೀಡಲು ಮುಂದಾಗಿದ್ದು, ರಾಜ್ಯ ಮಹಿಳಾ ಆಯೋಗದ ಮೋರೆ ಹೋಗಿದ್ದಾರೆ.
ವಿಜಯ್ ತಮಗೆ ಸರಿಯಾಗಿ ಜೀವನಾಂಶ ನೀಡಿಲ್ಲವೆಂಬ ಕಾರಣಕ್ಕೆ ಮತ್ತು ತಮಗೆ ಸೇರಿದ ಮನೆ ಮಾರಿದ್ದು, ಆ ಮನೆ ತಮಗೆ ಬೇಕೆಂಬ ಕಾರಣಕ್ಕೆ ನಾಗರತ್ನ ವಿಜಿ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ತನಗೆ ಹೇಳದೆ ವಿಜಿ ತಮ್ಮ ಮನೆಯನ್ನು ಮಾರಿದ್ದಾರೆಂದು ನಾಗರತ್ನಾ ಆರೋಪಿಸಿದ್ದು, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿಗೆ ಮೌಖಿಕವಾಗಿ ದೂರು ನೀಡಿದ್ದಾರೆ.
ದುನಿಯಾ ವಿಜಿ ನಾಲ್ಕು ವರ್ಷದ ಹಿಂದೆ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ತಮ್ಮ ಮನೆಯನ್ನ ಸ್ನೇಹಿತ, ನಿರ್ಮಾಪಕ ಸುಂದರಗೌಡಗೆ ಮಾರಿದ್ದರು. ಆದರೆ ಈ ವಿಷಯ ಪತ್ನಿ ನಾಗರತ್ನಗೆ ಗೊತ್ತಿರಲಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಗರಂ ಆದ ನಾಗರತ್ನ ನನ್ನ ಅನುಮತಿಯಿಲ್ಲದೆ ವಿಜಿ ಮನೆ ಮಾರಿದ್ದಾರೆ ಎಂದು ಆರೋಪಿಸಿ, ನನಗೆ ಸರಿಯಾಗಿ ಜೀವನಾಂಶ ತಲುಪಿಲ್ಲ ಎಂದು ಮಹಿಳಾ ಆಯೋಗದ ಮೋರೆ ಹೋಗಲು ಮುಂದಾಗಿದ್ದಾರೆ.