ಚತುಷ್ಕೋನ ಚುನಾವಣೆಗೆ ದಿನಗಣನೆ: ಯಾರಿಗೆ ಯಾವ ರಾಜ್ಯ?

ಪಂಚರಾಜ್ಯ ಚುನಾವಣೆಯ ಪೈಕಿ ಛತ್ತೀಸ್ಗಢದಲ್ಲಿ ಮತದಾನ ಮುಗಿದಿದೆ. ಇನ್ನು ಉಳಿದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ಅದರಲ್ಲೂ ಅತೀ ದೊಡ್ಡ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಹೋರಾಟ ನಡೆಸಿದ್ದರೆ, ಕಾಂಗ್ರೆಸ್ ದೀರ್ಘಕಾಲದ ನಂತರ ಮರಳಿ ಅಧಿಕಾರ ಪಡೆಯುವ ಗುರಿ ಹೊಂದಿದೆ.
ಮುಂದಿನ ಲೋಕಸಭಾ ಚುನಾವಣೆಗೆ ಮುನ್ನುಡಿ ಎಂದೇ ಭಾವಿಸಲಾಗಿರುವ ಈ 5 ರಾಜ್ಯಗಳ ಚುನಾವಣೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಅದರಲ್ಲೂ ಬಿಜೆಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದರೆ, ಮತ್ತೊಂದೆಡೆ ಪಕ್ಷದೊಳಗೆ ಭುಗಿಲೆದ್ದಿರುವ ಬಂಡಾಯದಿಂದ ತತ್ತರಿಸಿದೆ.
- ಮಧ್ಯಪ್ರದೇಶ
- ಸ್ಥಾನ- 230, ಮ್ಯಾಜಿಕ್ ನಂಬರ್- 116
- ರಾಜಸ್ಥಾನ
- ಸ್ಥಾನ- 200, ಮ್ಯಾಜಿಕ್ ನಂಬರ್-101
- ಛತ್ತೀಸ್ಗಢ
- ಸ್ಥಾನ-90, ಮ್ಯಾಜಿಕ್ ನಂಬರ್-46
- ಮಿಜೊರಾಂ
- ಸ್ಥಾನ-40, ಮ್ಯಾಜಿಕ್ ನಂಬರ್-21
- ತೆಲಂಗಾಣ
- ಸ್ಥಾನ-119, ಮ್ಯಾಜಿಕ್ ನಂಬರ್-60
ಇದೇ ವೇಳೆ ಕಾಂಗ್ರೆಸ್ ಈ ಅವಕಾಶವನ್ನು ಎಷ್ಟರಮಟ್ಟಿಗೆ ಸಮರ್ಥವಾಗಿ ಬಳಸಿಕೊಳ್ಳುತ್ತದೆ ಎಂಬುದು ಕುತೂಹಲದ ವಿಷಯವಾಗಿದೆ. ಮಹಾಮೈತ್ರಿ ಹೆಸರಿನಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಕಾಂಗ್ರೆಸ್ ಕೈ ಜೋಡಿಸುತ್ತಿದೆ. ಆದರೆ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಲು ಬಿಎಸ್ಪಿ ನಿರಾಕರಿಸಿದೆ. ತೆಲಂಗಾಣದಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದಿದೆ.
ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್ಗಢ, ಮಿಜೊರಾಂ ಹಾಗೂ ತೆಲಂಗಾಣ ಸೇರಿದಂತೆ ಒಟ್ಟಾರೆ 679 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ವಿವಿಧ ಹಂತಗಳಲ್ಲಿ ನಡೆಯಲಿರುವ ಚುನಾವಣೆಯ ಫಲಿತಾಂಶ ಡಿಸೆಂಬರ್ 11ರಂದು ಹೊರಬೀಳಲಿದೆ.
2014 ಜೂನ್ನಲ್ಲಿ ತೆಲಂಗಾಣ ಹೊರ ರಾಜ್ಯವಾಗಿ ಉದಯಿಸಿದ ನಂತರ ಮೊದಲ ಬಾರಿ ಟಿಆರ್ಎಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಉಳಿದ ನಾಲ್ಕು ರಾಜ್ಯಗಳಲ್ಲಿ ಒಟ್ಟು 66 ಲೋಕಸಭಾ ಕ್ಷೇತ್ರಗಳು ಇವೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಮಹತ್ವದ್ದಾಗಿದೆ.
ಛತ್ತೀಸ್ಗಢದಲ್ಲಿ ಎರಡು ಹಂತದಲ್ಲಿ ಚುನಾವಣೆ ಮುಗಿದಿದೆ. ಮಧ್ಯಪ್ರದೇಶ ಮತ್ತು ಮಿಜೊರಾಂನಲ್ಲಿ ನವೆಂಬರ್ 28ರಂದು, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಡಿಸೆಂಬರ್ 7ರಂದು ಚುನಾವಣೆ ನಡೆಯಲಿದೆ.