Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1.ಪಾಕಿಸ್ತಾನದ ಕರ್ತಾರಪುರದಲ್ಲಿರುವ ಗುರುದ್ವಾರ ದರ್ಬಾರ್‌ ಸಾಹಿಬ್‌ ಮಂದಿರದಿಂದ, ಭಾರತದ ಪಂಜಾಬ್‌ನಲ್ಲಿರುವ ದೇರಾ ಬಾಬಾ ನಾನಕ್‌ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರಪುರ ಕಾರಿಡಾರ್‌ ನಿರ್ಮಾಣದ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನ ಸರ್ಕಾರ ನಡೆಸಿದ ‍ಪ್ರಯತ್ನವನ್ನು ಚೀನಾ ಸ್ವಾಗತಿಸಿದೆ. ಎರಡು ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳ ಕುರಿತಂತೆ ಮಾತುಕತೆ ನಡೆದರೆ, ಜಾಗತಿಕ ಶಾಂತಿ ಹಾಗೂ ಅಭಿವೃದ್ಧಿಗೂ ನೆರವಾಗಲಿದೆ ಎಂದು ತಿಳಿಸಿದೆ.

2.ವಾಯುಮಾಲಿನ್ಯ ಸಮಸ್ಯೆ ನಿಯಂತ್ರಣಕ್ಕೆ ಬಾರದಿದ್ದರಿಂದ ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ₹25 ಕೋಟಿಯನ್ನು ದಂಡದ ರೂಪದಲ್ಲಿ ಠೇವಣಿ ಇಡುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸಿದೆ. ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯಲ್‌ ಅವರ ನೇತೃತ್ವದ ಪೀಠವು, ಆಮ್‌ ಆದ್ಮಿ ಪಕ್ಷದ ಸರ್ಕಾರಕ್ಕೆ ಈ ಸೂಚನೆ ನೀಡಿದೆ. ಈ ಮೊದಲೇ ಸ್ಪಷ್ಟ ನಿರ್ದೇಶನ ನೀಡಿದ ನಡುವೆಯೂ, ಈ ನಾಲ್ಕೂವರೆ ವರ್ಷಗಳಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.

3.ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ವಿಧಾನಸಭೆಗೆ 2019ರ ಲೋಕಸಭೆ ಚುನಾವಣೆ ಜತೆಯಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ನಾಲ್ಕು ರಾಜ್ಯಗಳ ವಿಧಾನಸಭೆ ಅವಧಿಯು 2019ರ ಮೇ, ಜೂನ್‌ನಲ್ಲಿ ಕೊನೆಯಾಗಲಿದೆ. ಇನ್ನು, ಅವಧಿಗೆ ಮೊದಲೇ ವಿಸರ್ಜನೆಯಾದ ಜಮ್ಮು - ಕಾಶ್ಮೀರ ವಿಧಾನಸಭೆಗೂ ಸಾರ್ವತ್ರಿಕ ಚುನಾವಣೆ ಜತೆಜತೆಗೇ ಮತದಾನ ನಡೆಯಲಿದೆ. ವಿಧಾನಸಭೆ ವಿಸರ್ಜನೆಯಾದ ಆರು ತಿಂಗಳ ಒಳಗೆ ಚುನಾವಣೆ ನಡೆಸಬೇಕು.

4.ತಮಿಳುನಾಡು ವಿರೋಧದ ನಡುವೆಯೂ ಮೇಕೆದಾಟು ಯೋಜನೆ ಜಾರಿಗೊಳಿಸಲು ಕರ್ನಾಟಕ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಒಂದು ಕಡೆ ಕಾನೂನು ಹೋರಾಟ ಮತ್ತೊಂದು ಕಡೆ ಯೋಜನೆ ಕುರಿತಂತೆ ಸ್ಥಳ ಪರಿಶೀಲನೆಗೂ ಮುಂದಾಗಿದೆ. ಸಿಲಿಕಾನ್ ಸಿಟಿಯ ನೀರಿನ ಬವಣೆ ತಪ್ಪಿಸಲು ಯೋಜನೆಗೆ ವೇಗದ ಚಾಲನೆ ನೀಡಿದೆ.

5.2002ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಗೋದ್ರಾ ಹತ್ಯಾಕಾಂಡ ನಂತರದ ಗಲಭೆಗೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿ ವ್ಯಕ್ತಪಡಿಸಿದ್ದು, ಜನವರಿ ಮೂರನೇ ವಾರದಲ್ಲಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಗಲಭೆಗಳಿಗೆ ಸಂಬಂಧಿಸಿದಂತೆ ಮೋದಿಗೆ ವಿಶೇಷ ತನಿಖಾ ತಂಡ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಝಾಕಿಯಾ ಜಫ್ರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಗಲಭೆ ವೇಳೆ ಮೃತಪಟ್ಟ ಮಾಜಿ ಸಂಸದ ಇಶಾನ್ ಜಫ್ರಿ ಅವರ ಪತ್ನಿ ಝಾಕಿಯಾ, ಎನ್‌ಐಟಿ ನಿರ್ಧಾರ ಪ್ರಶ್ನಿಸಿ ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

6.ತನ್ನೂರಿಗೆ ಬಂದು ಆವಾಜ್‌ ಹಾಕಿ ಹೋಗಿದ್ದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಓವೈಸಿ ತಿರುಗೇಟು ನೀಡಿದ್ದಾರೆ. ಭಾರತ ನನ್ನಪ್ಪನ ದೇಶ, ಯಾರೊಬ್ಬರೂ ನನ್ನನ್ನು ಇಲ್ಲಿಂದ ಬಲವಂತವಾಗಿ ಓಡಿಸಬೇಕಾಗಿಲ್ಲ ಅಂತ ಹೇಳಿದ್ದಾರೆ.

7.ಉತ್ತರಪ್ರದೇಶದಲ್ಲಿ ಇಂದು ಹಿಂಸಾಚಾರ ಸಂಭವಿಸಿದ್ದು, ಪೊಲೀಸ್‌ ಇನ್‌ಸ್ಪೆಕ್ಟರ್‌ ಸೇರಿದಂತೆ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಅಕ್ರಮ ಕಸಾಯಿಖಾನೆ ವಿರುದ್ಧ ಭುಗಿಲೆದ್ದ ಆಕ್ರೋಶ ಕೊಲೆಯಲ್ಲಿ ಅಂತ್ಯವಾಗಿದೆ.

8.ಈ ಬಾರಿ ಹಂಪಿ ಉತ್ಸವ ರದ್ದಾಗಿರುವುದಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹಂಪಿ ಉತ್ಸವ ನಾಡಿನ ಹೆಮ್ಮೆಯ ಪ್ರತೀಕ. ನೆಪ ಹೆಮ್ಮೆಯ ಪ್ರತೀಕ ನೆಪ ಹೇಳಿ ಉತ್ಸವ ಮುಂದೂಡುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಟ್ವೀಟ್ಟರ್‌ ಆಕ್ರೋಶ ಹೊರ ಹಾಕಿದ್ದಾರೆ.

9.ಹಿಂದುತ್ವ ಪಾಠ ಮಾಡಿದ್ದ ರಾಹುಲ್ ಗಾಂಧಿಗೆ ತಿರುಗೇಟು ಕೊಟ್ಟಿರುವ ಮೋದಿ, ಹಿಂದುತ್ವದ ಬಗ್ಗೆ ಎಲ್ಲವೂ ಗೊತ್ತು ಎಂದು ನಾನಂತೂ ಎಂದೂ ಹೇಳಿಕೊಂಡಿಲ್ಲ. ನಾಮಧಾರಿಗಳು ಈ ಕೆಲಸ ಮಾಡುತ್ತಾರೆ ಎಂದು ಅವರು ವ್ಯಂಗ್ಯ ಮಾಡಿದ್ದಾರೆ. ಹಾಗೆಯೇ ಕಾಂಗ್ರೆಸ್ ಸುಳ್ಳುಹೇಳುವುದರಲ್ಲಿ ವಿಶ್ವವಿದ್ಯಾಲಯ ಇದ್ದಂತೆ ಎಂದು ಟೀಕಿಸಿದ್ದಾರೆ.

10.ಪಂಜಾಪ್‌ ಸಚಿವ ನವಜೋತ್‌ ಸಿಂಗ್‌ ಸಿಧು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಪಾಕಿಸ್ತಾನಕ್ಕೆ ಹೋಗಿ ಬಂದು ಬಂದ ಬಳಿಕ ರಾಹುಲ್ ಗಾಂಧಿಯೇ ನಮ್ಮ ಕ್ಯಾಪ್ಟನ್‌ ಅಂತ ಹೇಳಿದ್ದರು. ಇದರಿಂದ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರ ಸ್ಥಾನಮಾನದ ಬಗ್ಗೆ ಪ್ರಶ್ನೆ ಎದ್ದಿದೆ. ತಮ್ಮ ಹೇಳಿಕೆ ಬಗ್ಗೆ ಅಮರಿಂದರ್‌ ಸಿಂಗ್‌ ಬಳಿ ಕ್ಷಮೆ ಕೋರುವಂತೆ ಕಾಂಗ್ರೆಸ್ ಸಂಸದ ರವ್ನೀತ್ ಸಿಂಗ್ ಬಿಟ್ಟು ಆಗ್ರಹಿಸಿದ್ದಾರೆ. ಇದು ಜನರ ನಂಬಿಕೆ ಹಾಗೂ ಭಾವನೆಗಳಿಗೆ ಸಂಬಂಧಿಸಿದ್ದು, ಸಿಧು ಮುಖ್ಯಮಂತ್ರಿಗಳನ್ನು ತಮ್ಮ ತಂದೆಯೆಂದು ಪರಿಗಣಿಸುವುದೇ ಆದರೆ, ತಮ್ಮ ಹೇಳಿಕೆ ಕುರಿತಂತೆ ಕೂಡಲೇ ಕ್ಷಮೆಯಾಚಿಸಬೇಕೆಂದು ಹೇಳಿದ್ದಾರೆ.

11.ಸಿಲಿಕಾನ್‌ ಸಿಟಿಯಲ್ಲಿ ವಿದ್ಯುತ್‌ ಚಾಲಿಕ ಬಸ್‌ಗಳನ್ನು ಓಡಿಸಬೇಕು ಅನ್ನೋ ಬಿಎಂಟಿಸಿಗೆ ದೊಸ್ತಿ ಸರ್ಕಾರ ಬಿಗ್‌ ಶಾಕ್‌ ನೀಡಿದೆ. ಸಾರಿಗೆ ಸಚಿವ ಹಾಗೂ ಎಂಡಿ ನಡುವಿನ ಗುದ್ದಾಟದಿಂದಾಗಿ ದೇಶದಲ್ಲೇ ಮೊದಲ ಬಾರಿಗೆ ಹೈಟೆಕ್ ಬಸ್ ಖರೀದಿಗೆ ಮುಂದಾಗಿದ್ದ ನಿಗಮಕ್ಕೆ ಮೊದಲ ಪ್ರಯತ್ನದಲ್ಲೇ ಕೊಕ್ಕೆ ಹಾಕಲಾಗಿದೆ.

12.ಬೆಂಗಳೂರು ಉತ್ತರ ತಾಲ್ಲೂಕಿಗೆ ಸೇರಿದ ಸಾತನೂರು ಗ್ರಾಮ ಪಂಚಾಯಿತಿ ಕಚೇರಿ ಬಳಿ ಇವತ್ತು ಮಾತಿನ ಜಟಾಪಟಿಯೇ ನಡೀತು. ಪಂಚಾಯಿತಿ ಅಧ್ಯಕ್ಷ ಬಚ್ಚಪ್ಪ ಮತ್ತು PDO ರಮೇಶ್ ಸರ್ಕಾರಿ ಅನುದಾನವನ್ನ ದುರುಪಯೋಗ ಮಾಡ್ತಿದ್ದಾರೆ ಅಂತ ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ರು. ಕಚೇರಿಯೊಳಗೆ ಸಿಬ್ಬಂದಿಯನ್ನ ಕೂಡಿ ಹಾಕಿದರು.

13.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೆರೆ ಬಳಿ ಇವತ್ತು ಜೆಸಿಬಿಗಳ ಘರ್ಜನೆ ಜೋರಾಗಿತ್ತು. ಕೆರೆ ಭೂಮಿಯನ್ನೇ ನುಂಗಲು ಯತ್ನಿಸಿದ್ದ ನಂಗಬಾಕರಿಗೆ, ಗ್ರಾಮಾಂತರ ನೂತನ ಡಿಸಿಯಾಗಿ ಬಂದಿರುವ ಕರೀಗೌಡ ಅಖಾಡಕ್ಕಿಳಿದಿದ್ದು ಬೆಂಗಳೂರು ಗ್ರಾಮಾಂತ ಜಿಲ್ಲೆಯ ಒತ್ತುವರಿಯಾಗಿದ್ದ 15ಕ್ಕೂ ಹೆಚ್ಚು ಕೆರೆಗಳ ತೆರವು ಮಾಡಿದ್ರು. ಹೂಳು ತುಂಬಿದ್ದ ಕೆರೆಗಳಲ್ಲಿ ಹೂಳು ತೆಗೆಸಿದರು.

14. ಇತಿಹಾಸ ಪ್ರಸಿದ್ಧ ಬೆಂಗಳೂರು ಬಸವನಗುಡಿ ಕಡಲೇಕಾಯಿ ಪರಿಷೆ ಸೋಮವಾರದಿಂದ ಆರಂಭವಾಗಿದೆ. ಬೆಳಿಗ್ಗೆ ಬಸವಣ್ಣ ಮೂರ್ತಿಗೆ ತುಲಾಭಾರ ಮಾಡುವ ಮೂಲಕ ಕಡಲೇಕಾಯಿ ಪರಿಷೆಗೆ ಚಾಲನೆ ನೀಡಲಾಗುತ್ತದೆ.ಕಾರ್ತಿಕ ಮಾಸದ ಕಡೇ ಸೋಮವಾರ ಬಂದರೆ ಸಾಕು ಎರ್ಲಿಗೂ ಬಸವನಗುಡಿ ನೆನಪಾಗುತ್ತೆ. ಏಕೆಂದರೆ ಬಸವನಗುಡಿಯಲ್ಲಿ ಕಡಲೇಕಾಯಿ ಪರಿಷೆ ಅಷ್ಟು ಫೇಮಸ್‌ ಆಗಿದ್ದು, ಇಂದು ಕಡಲೇಕಾಯಿ ಪರಿಷೆ​ಗೆ ಚಾಲನ ಸಿಕ್ಕಿದೆ. ಪರಿಷೆಗೆ ಬರುವವರು ತಪ್ಪದೆ ಕೈ ಚೀಲ ತರುವುದರೊಂದಿಗೆ ನಗರದ ಪರಿಸರವನ್ನು ಕಾಪಾಡಲು ಸಹಕರಿಸಬೇಕೆಂದು ಪಾಲಿಕೆ ಜನರಲ್ಲಿ ಮನವಿ ಮಾಡಿದೆ.

15.ಪ್ರೀತಿಸು ಎಂದು ಯುವಕರಿಬ್ಬರು ಬೆನ್ನು ಬಿದ್ದಿದ್ದರಿಂದ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ‌ಜಿಲ್ಲೆಯಲ್ಲಿ ನಡೆದಿದೆ.ಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ವಿವಾಹಿತ ಸೇರಿದಂತೆ ಇಬ್ಬರು ಯುವಕರು ಪೀಡಿಸುತ್ತಿದ್ದರು. ಇದರಿಂದ 14 ವರ್ಷದ ಬಾಲಕಿಯ ಪ್ರಾಜಕ್ತಾ ಬಲಭೀಮ ನರಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರೀತಿ ವಿಷಯ ತಿಳಿಸಿದ್ದಕ್ಕಾಗಿ ಮಗಳನ್ನು ಶಾಲೆ ಬಿಡಿಸಿ ಮನೆಯಲ್ಲೇ ಇರಿಸಿದ್ದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

16.ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣಾ ದಿನಾಂಕ ಹತ್ರ ಬರ್ತಿದ್ದಂತೆ, ಸಮಿತಿ ಛೇರಮನ್​ಗಿರಿಗಾಗಿ ಸಖತ್‌​ ಫೈಟ್​ ಶುರುವಾಗಿದೆ. ಇನ್ನೂ ಯಾವ ಪಕ್ಷಕ್ಕೆ ಎಷ್ಟು ಸಮಿತಿ ಅಧ್ಯಕ್ಷ ಸ್ಥಾನ ಅನ್ನೋದು ಫೈನಲ್‌ ಆಗಿಲ್ಲ. ಆದ್ರೆ ಸದಸ್ಯರುಗಳ ಲಾಬಿ ಫುಲ್ ಜೋರಾಗಿದೆ.

17.ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.. ಕಳೆದ 2 ದಿನಗಳಿಂದ BGS ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಶತಾಯುಶಿ ಶ್ರೀಗಳು.. ಡಿಸ್ಚಾರ್ಜ್​ ಆಗಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಹಿಂದಿರುಗಿದ್ದಾರೆ.

18.ಸಿದ್ದರಾಮಯ್ಯಗೆ ಧೈರ್ಯ ಇದ್ದರೆ ಅಯೋಧ್ಯೆಯಲ್ಲಿ ಬಾಬ್ರಿಮಿಸಿದಿ ಕಟ್ಟಲಿ ನೋಡಣ ಎಂದು ಬೀದರ್ ನಲ್ಲಿ ಕೆಎಸ್ ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ. ಬೀದರ್ ಗೆ ಆಗಮಿಸಿದ್ದ ಕೆಎಸ್ ಈಶ್ವರಪ್ಪ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೀದರ್ ಜಿಲ್ಲೆಯ ಬರದ ಬಗ್ಗೆ ಚರ್ಚೆ ನಡೆಸಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಹಾಗೂ ರಾಹೂಲ್ ಗಾಂಧಿಯವರಿಗೆ ಈಗ ಹಿಂದೂ ನೆನಪಾಗಿದೆ ಎಂದು ಹೇಳೀದರು.

19.ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆ ಬೀಗ ಮುರಿದು ಕನ್ನ ಹಾಕಿರುವ ಖದೀಮರು, ಮದುವೆಗಾಗಿ ಖರೀದಿಸಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹಾಲಪ್ಪ ಮತ್ತು ರಾಜಪ್ಪ ಎಂಬ ಸಹೋದರರ ಮನೆಯಲ್ಲಿ ಒಂದೇ ದಿನ ಕಳ್ಳತನ ನಡೆದಿದೆ. ಹಾಲಪ್ಪ ಎಂಬುವರ ಮಗಳ ಮದುವೆ ಇದೇ ತಿಂಗಳ 17ಕ್ಕೆ ನಿಶ್ಚಯವಾಗಿದ್ದು, ಮದುವೆಗಾಗಿ ಖರೀದಿ ಮಾಡಲಾಗಿದ್ದ 100ಗ್ರಾಂ ಚಿನ್ನಾಭರಣ ಹಾಗು 70ಸಾವಿರ ರೂಪಾಯಿ ನಗದನ್ನ ಕಳ್ಳರು ದೋಚಿದ್ದಾರೆ.

20.ರೆಬಲ್ ಶಾಸಕ ರೇಣುಕಾಚಾರ್ಯ ಕಳೆದ ಆರು ದಿನಗಳಿಂದ ಸಮರ್ಪಕ ಮರಳು ಪೂರೈಕೆ, ಅವಳಿ ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರಿಸ ಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ.ಅದರ ಮುಂದುವರೆದ ಭಾಗವಾಗಿ ಇಂದು ಹೊನ್ನಾಳಿ ಬಂದ್ ಮಾಡಿ ಪ್ರತಿಭಟನೆ ನಡೆಸಿ ಬಂದ್ ಯಶಸ್ವಿಯಾಗಿದೆ. ಹಾಲಿ ಸಚಿವ, ಮಾಜಿ ಸಚಿವರ ನಡುವೆ ಮರಳು ವಿಚಾರ ಪ್ರತಿಷ್ಟೇಯಾಗಿದ್ದು, ಪರಸ್ಪರ ಒಬ್ಬರ ಮೇಲೆಬ್ಬರು ವಾಗ್ದಾಳಿ ನಡೆಸಿದ್ದಾರೆ.

21.ಸಾಣೇಹಳ್ಳಿ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಎಂ ಎಲ್ ಸಿ ರಘು ಆಚಾರ ವಿರುದ್ದ ಜಗತಿಕ ಲಿಂಗಾಯತ ಮಹಾಸಭಾದಿಂದ ಪ್ರತಿಭಟನೆ ನಡೆಸಲಾಯಿತು. ದಾವಣಗೆರೆ ಎಸಿ ಕಚೇರಿ ಬಳಿ ಇರುವ ರಘು ಆಚಾರ ಕಚೇರಿಗೆ ಮಸಿ ಬಳಿದು ಆಕ್ರೋಶ ವ್ಯಕ್ತ ಪಡಿಸಿದ ಕಾರ್ಯಕರ್ತರು ರಘು ಆಚಾರ್ ಭಾಚವಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದರು..ಕೂಡಲೇ ರಘು ಆಚಾರ್ ಸ್ವಾಮೀಜಿಗಳ ಕ್ಷಮೆ ಕೇಳ ಬೇಕು ಇಲ್ಲದೇ ಇದ್ದರೇ ಬುಧವಾರ ರಘು ಆಚಾರ ವಿರುದ್ದ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಕಾರ್ಯಕರ್ತರು ನೀಡಿದ್ದಾರೆ.

22.ಧಾರವಾಡದಲ್ಲಿ ನಡೆದಿದ್ದ ಗೋಮಾಂಸ ಸಾಗಾಣಿಕೆ ಪ್ರಕರಣ ಖಂಡಿಸಿ ಹಾಗೂ ಪೊಲೀಸರ ನಡೆ ಖಂಡಿಸಿ ಬಿಜೆಪಿ ರೈತ ಯುವ ಮೋರ್ಚಾ ವತಿಯಿಂದ‌ ಪ್ರತಿಭಟನೆ ನಡೆಸಲಾಯಿತು.‌ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಠಾಣೆ ಪೊಲೀಸರು ನ್ಯಾಯಯುತವಾಗಿ ಕೆಲಸ‌ ಮಾಡದೇ ಅಕ್ರಮ ಗೋಮಾಂಸ ಸಾಗಣೆ‌ ಮಾಡೋರ ಪರ ನಿಂತಿದ್ದಾರೆ. ಅಲ್ಲದೇ ಹಿಂದೂಪರ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆದರೂ ಅದನ್ನು ಗಂಭೀರವಾಗಿ ಪರಿಗಣಿಸದೇ ಅನ್ಯಾಯ ಮಾಡುತ್ತಿದ್ದಾರೆ ಅಂತಾ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

23.ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾ ನ್ಯಾಯಾಧೀಶರು ಉದ್ಘಾಟನೆ ಮಾಡಿದರು. ನಗರದ ಡಿಆರ್ ಮೈದಾನದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಈಶಪ್ಪ ಭೂತೆ ಹಾಗೂ ಎಸ್.ಪಿ ಜಿ.ಸಂಗಿತಾ ಬಲೂನ್ ಮತ್ತು ಪಾರಿವಾಳವನ್ನು ಹಾರಿ ಬಿಡುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ನಂತರ ಕ್ರೀಡಾ ಜ್ಯೋತಿ ಸ್ವೀಕರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾನಲೆ ನೀಡಿದರು. ಸದಾ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುವ ನೂರಾರು ಪೊಲೀಸ್ ಸಿಬ್ಬಂದಿ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಸಂಭ್ರಮಿಸಿದರು‌.

24.ಬಿ.ಎಡ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರೋತ್ಸಾಹಧನವನ್ನು ತಡೆಹಿಡಿದಿರುವುದನ್ನು ಖಂಡಿಸಿ ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರು ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. 2017-18 ನೇ ಸಾಲಿನಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಆದರೆ ಈ ವರ್ಷದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುತ್ತಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಪ್ರೋತ್ಸಾಹಧನವನ್ನು ನೀಡಲಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಮಾತ್ರ ಇಲ್ಲಿಯವರೆಗೆ ಪ್ರೋತ್ಸಾಹಧನ ನೀಡುತ್ತಿಲ್ಲ ಯಾಕೆ ಅಂತಾ ಅಸಮಾಧಾನ ವ್ಯಕ್ತಪಡಿಸಿದರು.

25.ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಿಕ್ಷಕ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಎದರು ಪ್ರತಿಭಟನಾ ಧರಣಿ ನಡೆಸಿ, ರಾಜ್ಯ ಸರ್ಕಾರದ ವಿರುದ್ದ ದಿಕ್ಕಾರ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಗ್ರಾಮೀಣ ಭಾಗದ ಶಿಕ್ಷಕರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಗ್ರಾಮೀಣ ಭತ್ಯೆ 2500 ರೂಪಾಯಿ ನೀಡಬೇಕೆಂದು ಒತ್ತಾಯಿಸಿದರು.

26.ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‌ನಿಂದ ಬಿದ್ದು ಮಹಿಳೆಯೋರ್ವಳು ಮೃತಪಟ್ಟ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ಹೊರವಲಯದ ನುಗ್ಗಿಕೇರಿ ಬಳಿ ಘಟನೆ ನಡೆದಿದ್ದು, ೪೦ ವರ್ಷದ ಶಿರೀನ್ ದಾದಾಪೀರ ಎಂಬ ಮಹಿಳೆ ಸಾವನ್ನಪ್ಪಿದ ಮೃತ ದುರ್ದೈವಿ. ಮೃತ ಮಹಿಳೆಯೂ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಿವಾಸಿಯಾಗಿದ್ದು, ಊರಿಗೆ ತೆರಳುತ್ತಿದ್ದರು. ಬಸ್ ನಲ್ಲಿ ಶಿರೀನ್ ಬಾಗಿಲು ಬಳಿಯಲ್ಲೇ ಕುಳಿತಿದ್ದು, ರಸ್ತೆ ತಿರುವಿನಲ್ಲಿ ಬಸ್ ವೇಗವಾಗಿ ಚಲಿಸುತ್ತಿದ್ದಾಗ ಹೊರಗೆ ಬಿದ್ದು ಶಿರೀನ್ ಸಾವನ್ನಪ್ಪಿದ್ದಾಳೆ.

27.ವಿಕಲಚೆತನರು ಎಂದ್ರೆ ಎಲ್ಲರೂ ಕೈಲಾಗದವರು ಎಂದುಕೊಳ್ಳುತ್ತಾರೆ. ಆದ್ರೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿರೋ ವಿಕಲಾಂಗಚೇತನ ಹಾಲಪ್ಪ ಕೊಪ್ಪಳ ಎಂಬುವರು ತಮಗೆ ಒಂದು ಕಾಲೇ ಇಲ್ಲವಾದ್ರೂ ಬೆರೆಯವರಿಗೆನು ಕಡಿಮೆ ಇಲ್ಲ ಎಂಬುವ ರೀತಿಯಲ್ಲಿ ಮಾದರಿ ಕೃಷಿಕನಾಗಿದ್ದಾರೆ. ಕೆ.ಇ.ಬಿ ಹಾಗೂ ಶಾಲಾ ಮಂಡಳಿ ನಿರ್ಲಕ್ಷದಿಂದ ಹಾಲಪ್ಪ 10 ವರ್ಷದವನಾಗಿದ್ದಾಗ ಶಾಲೆ ಬಳಿ ಹರಿದು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಷದಿಂದ ಒಂದು ಕಾಲು ಕಳೆದುಕೊಳ್ಳಬೇಕಾಯಿತು. ಬಲಗಾಲು ಕಳೆದುಕೊಂಡು 20 ವರ್ಷಗಳೇ ಕಳೆದಿವೆ. ಕಾಲು ಕಳೆದುಕೊಂಡ ವೇಳೆ ಇತನಿಗೆ ಪರಿಹಾರ ರೂಪದಲ್ಲಿ ಘೋಷಣೆಯಾದ 5 ಲಕ್ಷ ರೂಪಾಯಿಯಲ್ಲಿ ಒಂದು ರೂಪಾಯಿ ಕೂಡಾ ತೆಗೆದುಕೊಳ್ಳದೆ ಎಲ್ಲವನ್ನೂ ಶಾಲಾ ಕೆಲಸಕ್ಕೆ ಬಳಸಿಕೊಳ್ಳುವಂತೆ ಮರಳಿ ನೀಡಿದ ಮಹಾನ್ ತ್ಯಾಗಿ. ಬಡವನಾಗಿದ್ರೂ ಕೂಡಾ ಅಂಗವಿಕಲತೆ ಮೆಟ್ಟಿನಿಲ್ಲುವ ಉದ್ದೇಶದಿಂದ ಸರ್ಕಾರದಿಂದ ಬಸ್ ಪಾಸ್, ವೇತನ, ಮನೆ, ವಾಹನ ಸೇರಿದಂತೆ ಇತರೆ ಸರ್ಕಾರಿ ಸೌಲಭ್ಯಗಳನ್ನ ಇಲ್ಲಿಯ ವರೆಗೂ ಪಡೆದುಕೊಂಡಿಲ್ಲ. ಎಲ್ಲರಂತೆ ನಿತ್ಯ ಕೃಷಿ ಹಾಗೂ ಮನೆಕೆಲಸ ಮಾಡ್ತಾನೆ.

28.ಎರಡು ಬಾಟಲ್ ಎಣ್ಣೆಗಾಗಿ ವೈನ್ ಶಾಪ್ ಗೆ ನುಗ್ಗಿದ ದರೋಡೆಕೋರರ ತಂಡ ಸಿಬ್ಬಂದಿ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.ಅಫಜಲಪುರ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಘಟನೆ ನಡೆದಿದ್ದು ದರೋಡೆಕೋರರ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಟ್ಟನಡು ರಾತ್ರಿ ಬಂದ ಗ್ಯಾಂಗ್ ಮಲಗಿದ್ದ ವೈನ್ ಶಾಪ್ ಸಿಬ್ಬಂದಿ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಿ ನಂತ್ರ ಎರಡು ಬಾಟಲ್ ಎಣ್ಣೆ ತಗೊಂಡು ಎಸ್ಕೇಪ್ ಆಗಿದೆ.

29.ದಾಲ್ ಮಿಲ್ ಕಾವಲುಗಾರನನ್ನ ಬರ್ಬರವಾಗಿ ಕೊಲೆಗೈದ ದಾರುಣ ಘಟನೆ ಕಲಬುರಗಿಯಲ್ಲಿ ನಡೆದಿದೆ..ಕಪನೂರು ರಸ್ತೆಯ ಕೈಗಾರಿಕ ವಲಯದ ಸರಡಗಿ ದಾಲ್ ಮಿಲ್ ನಲ್ಲಿ ಘಟನೆ ನಡೆದಿದ್ದು ಕೊಲೆಯಾದವನನ್ನ ಭೀಮನಾಳ ಗ್ರಾಮದ ಸುಭಾಷಚಂದ್ರ ಅಂತ ಗುರುತಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಠಾಣೆ ಪೋಲೀಸ್ರು ಸಿಸಿಟಿವಿ ಪರಿಶೀಲಿಸಿದ್ದಾರೆ ಆದ್ರೆ ತಿಂಗಳ ಹಿಂದೆಯೇ ಕ್ಯಾಮರಾ ಕೆಟ್ಟುಹೋಗಿದೆ ಅಂತ ದಾಲ್ ಮಿಲ್ ಮಾಲೀಕರು ಪೋಲೀಸರಿಗೆ ತಿಳಿಸಿದ್ದಾರೆ.

30.ಚಾನ್ಸ್ ಸಿಗುತ್ತೆ ಅಂದ್ರೆ ಸಿದ್ರಾಮಯ್ಯ ಪಾರ್ಟಿ ಚೇಂಜ್ ಮಾಡ್ತಾರೆ.ಸಿದ್ರಾಮಯ್ಯನವರಂತ ಅವಕಾಶವಾದಿ ನಾನು ನೋಡೇ ಇಲ್ಲ ಅಂತ ಬಿಜೆಪಿ ನಾಯಕ ಈಶ್ವರಪ್ಪ ಹೇಳಿದ್ದಾರೆ.. .ಕಲಬುರಗಿಯಲ್ಲಿಂದು ಮಾತನಾಡಿದ ಈಶ್ವರಪ್ಪ ಈವರೆಗೆ ಅದೆಸ್ಟು ಪಾರ್ಟಿ ಚೇಂಜ್ ಮಾಡಿಲ್ಲ ಹೇಳಿ.ಹಿಂದಿನ ವಿಚಾರ ಬಿಡಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಯಾಕೆ ಬಂದ್ರು..ಅದೇ ಕಾಂಗ್ರೆಸ್ ನಾಯಕಿ ಇಂದಿರಾಗಾಂಧಿಗೆ ಸಿದ್ರಾಮಯ್ಯ ಅದೆಂತ ಕೆಟ್ಟಪದ ಬಳಸಿ ಬಯ್ದಿದ್ರು ಗೊತ್ತಿಲ್ವ..ಇಂತಹ ಅವಕಾಶವಾದಿ ರಾಜಕಾರಣಿಯನ್ನ ನಾನು ನೋಡೇ ಇಲ್ಲ ಎಂದರು.

31.ಈಗಾಗಲೇ ತೀರ್ಪು ನೀಡಿ 5 ತಿಂಗಳ ಕಾಲ ಕಳೆದಿವೆ, ಆದ್ರೆ ಸರ್ಕಾರ ನೀರು ತರುವ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲಾ ಎಂದು ಮಹದಾಯಿ ಹೋರಾಟಗಾರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಹೋರಾಟಗಾರರು, ತೀರ್ಪಿನ ಪ್ರಕಾರ ಇದುವರೆಗೂ ನೀರನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗುತ್ತಿಲ್ಲ. ಈಗಾಗಲೇ 13 ಟಿಎಂಸಿ ನೀರು ಬಳಸಿಕೊಳ್ಳುವಂತೆ ನ್ಯಾಯಾಧಿಕರಣ ತೀರ್ಪು ನೀಡಿದೆ. ಆದ್ರೆ, ರಾಜ್ಯ ಸರ್ಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳು ನೀರಿನ‌ ಸದ್ಬಳಕೆಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ತೀರ್ಪು ಬಂದು ಐದು ತಿಂಗಳು ಕಳೆದರೂ ಮಹದಾಯಿ ನೀರಿನ ಬಳಕೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿ ದಿನೇ ದಿನೇ ವಿಳಂಬವಾಗುತ್ತಿದೆ ಎಂದಿದ್ದಾರೆ.

32.ಖಾಸಗಿ ಆಸ್ಪತ್ರೆಯ ಲಾಭಿಗೆ ಮಣಿದು ಕರ್ನಾಟಕ ವೈದ್ಯಕೀಯ ಪರಿಷತ್ ಬದುಕಿರುವ ತಾಯಿಯನ್ನು ಸತ್ತಿದ್ದಾಳೆ ಎಂದು ಸರ್ಟಿಫಿಕೇಟ್ ನೀಡಿರುವ ಆರೋಪ ಕೇಳಿಬಂದಿದೆ, ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ದೊಡ್ಡಕಡತೂರು ಗ್ರಾಮದ ಪಾರ್ಥಸಾರಥಿ ಎಂಬುವರು ಮಗಳು ದಿವ್ಯಾ ಮಾರ್ಚ್-31-2017 ರಂದು ಮಾಲೂರು ಪಟ್ಟಣ ಸಮೀಪ ಇರುವ ಸೇಂಟ್ ಮೇರೀಸ್ ಆಸ್ಪತ್ರೆಗೆ ಹೆರಿಗೆಗೆಂದು ದಾಖಲುಮಾಡಿದ್ರು. ಆಸ್ಪತ್ರೆಯಲ್ಲಿ ವೈದ್ಯರ ನಿರ್ಲ್ಯಕ್ಷದಿಂದಾಗಿ ಹೆಚ್ಚು ಅರವಳಿಕೆ ಚುಚ್ಚುಮದ್ದು ನೀಡಿದ ಹಿನ್ನೆಲೆ ದಿವ್ಯಾ ಕೋಮಾ ಸ್ಥಿತಿಗೆ ತಲುಪಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಅಲ್ಲಿನ ವೈದ್ಯರು ಕೈ ಚೆಲ್ಲಿದ್ದಾಗ ದಿವ್ಯಾಳನ್ನ ತಮ್ಮ ಮನೆಗೆ ಕರೆತಂದು ಪೋಷಕರು ಹಾಗೂ ಪತಿ ತಮ್ಮ ಕೆಲಸ ಕಾರ್ಯಗಳನ್ನ ಬಿಟ್ಟು ಪೋಷಿಸುತ್ತಿದ್ದಾರೆ.

33.ಕುಮಾರಸ್ವಾಮಿ ಸರಕಾರ ಬಂದ ಮೇಲೆ ಆಡಳಿತ ಸಂಪೂರ್ಣವಾಗಿ ಕುಸಿದಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಜಗದೀಶ ಶೆಟ್ಟರ್ ಕುಮಾರಸ್ವಾಮಿ ಕೇವಲ ನಾಲ್ಕೈದು ಜಿಲ್ಲೆಯ ಮುಖ್ಯಮಂತ್ರಿಯಾಗಿದ್ದು,ಕುಮಾರಸ್ವಾಮಿ ಏನೇ ಚಿಂತನೆ ಮಾಡಿದ್ರೂ ಕೇವಲ ಐದಾರು ಜಿಲ್ಲೆಗಳಿಗೆ ಮಾತ್ರ ಎಂದರು. ಕುಮಾರಸ್ವಾಮಿ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಇಡೀ ರಾಜ್ಯದ ಮುಖ್ಯಮಂತ್ರಿಯಾಗಿ ವರ್ತನೆ ಮಾಡಿ ಎಂದು ಜಗದೀಶ್ ಶೆಟ್ಟರ್ ಸಲಹೆ ನೀಡಿದರು.

34.ಕೈಗಾ ಅಣುವಿದ್ಯುತ್ ಸ್ಥಾವರ ರಾಜ್ಯದ ಏಕೈಕ ಅಣುವಿದ್ಯುತ್ ತಯಾರಿಕಾ ಪ್ರದೇಶ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಕೈಗಾ ಅಣುವಿದ್ಯುತ್ ಕೇಂದ್ರ ಸದ್ಯ ನಾಲ್ಕು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ದೇಶಕ್ಕೆ ಬೆಳಕನ್ನ ಒದಗಿಸುವ ಕಾರ್ಯ ಮಾಡುತ್ತಿದೆ. ಇದೀಗ ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಕೈಗಾ ದೇಶದಲ್ಲಿಯೇ ಗಮನ ಸೆಳೆಯುವಂತೆ ವಿಶ್ವ ದಾಖಲೆ ನಿರ್ಮಿಸಿತು.

35.ಅಭಿಮಾನಿಗಳ ದಾದಾ ಡಾ.ವಿಷ್ಣುವರ್ಧನ್‌ ಅವರ ಸ್ಮಾರಕ ವಿವಾದ ಸದ್ಯಕ್ಕೆ ನಿಲ್ಲುವಂತೆ ಕಾಣ್ತಿಲ್ಲ. ಇಂದು ಮೈಸೂರಿನಲ್ಲಿ ಸ್ಮಾರಕ್ಕೆ ನಿಗಧಿಯಾಗಿರುವ ಸ್ಥಳದಲ್ಲಿ ಪೂಜೆ ಪೂನಸ್ಕಾರಗಳ ಜೊತೆ ಸ್ಮಾರಕ ನಿರ್ಮಾಣಕ್ಕೆ ಪ್ರತಿಭಟನೆಯೂ ನಡೆದಿದೆ. ಆದ್ರೆ ಈ ಜಾಗದಲ್ಲಿ ಉಳುಮೆ ಮಾಡುತ್ತಿದ್ದ ಜಮೀನಿನ ಮಾಲೀಕರು ಮಾತ್ರ ಈ ಜಾಗಕ್ಕೆ ಪ್ರಾಣ ಬಿಟ್ಟೆವು ಜಾಗ ಕೊಡೋಲ್ಲ ಅಂತ ಗಲಾಟೆ ಮಾಡಿದ್ದಾರೆ.

36.17 ದಿನದಲ್ಲಿ ಬಾಬರಿ ಮಸೀದಿಯನ್ನು ಒಡೆಯಲಾಯಿತು. ಆದರೆ, 17 ವರ್ಷವಾದರೂ ರಾಮಮಂದಿರ ಕಟ್ಟಲು ಏಕೆ ಸಾಧ್ಯವಾಗಿಲ್ಲ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರದ ಬಗ್ಗೆ ಸ್ವಾಮೀಜಿಗಳು ಹಾಗೂ ಮಠಾಧೀಶರು ಹೋರಾಟ ಮಾಡುತ್ತಿರುವುದಕ್ಕೆ ನನ್ನ ವಿರೋಧವಿಲ್ಲ. ಚುನಾವಣೆ ಸಮಯದಲ್ಲಿ ಈ ವಿಷಯ ಕೈಗೆತ್ತಿಕೊಳ್ಳುವುದನ್ನು ಬಿಡಬೇಕು. ನಾವೂ ಹಿಂದುಗಳೆ ರಾಮಮಂದಿರ ಕಟ್ಟುವುದಾದರೆ ನಾವು ಬೆಂಬಲ ನೀಡುತ್ತೇವೆ. ಆದರೆ ಈ ವಿಷಯ ಪ್ರಸ್ತಾಪ ಚುನಾವಣೆ ಸಂದರ್ಭದಲ್ಲಿ ಬೇಡ. ಈ ಬಾರಿ ಮೋದಿಯನ್ನು ಸೋಲಿಸಿ ಬಳಿಕ ರಾಮಮಂದಿರವನ್ನು ಕಟ್ಟೋಣ ಎಂದರು.

37.ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಳ್ಳುವುದರಲ್ಲಿ ತಪ್ಪೇನೂ ಅವರೂ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದಾರೆ ಎಂದು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ತುಮಕೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆಸಿದ್ದಾರೆ. ಕೆಡಿಪಿ ಸಭೆಯ ಬಳಿಕ ಮಾತ್ನಾಡಿದ ಸಚಿವ ಕೃಷ್ಣ ಭೈರೇಗೌಡ ನಮ್ಮ ಸಿಎಂ ಸಭೆಯಲ್ಲಿ ಭಾಗವಹಿಸೋದ್ರಲ್ಲಿ ಯಾವುದೇ ಗೊಂದಲ ಇಲ್ಲಾ. ಗೊಂದಲ ಸೃಷ್ಠೀ ಮಾಡೋಕೆ ಮಾಧ್ಯಮಗಳು ಪ್ರಯತ್ನ ಮಾಡ್ತಿವೆ.

38.ವಿವಿಧ ಬೇಡಿಕೆಗಳ ಇಡೆರಿಕೆಗಾಗಿ ಯಾದಗಿರಿ ನಗರ ಸಾರಿಗೆ ಸ್ಥಂಸೆಯ ವಿರುದ್ದ ಹಾಲಿ ಹಾಗೂ ನಿವೃತಿ ಹೊಂದಿದ ಕೆಎಸ್ ಆರ್ ಟಿ ಸಿ ಸಿಂಬ್ಬದಿಗಳು ನಗರದ ಹೊರವಲಯದಲ್ಲಿರುವ ಪ್ರಾದೇಶಿಕ ಕಾರ್ಯಗ್ರಹದ ಮುಂದೆ ಅರ್ದಿಷ್ಟ ಪ್ರತಿಭಟನೆಯನ್ನು ನಡೆಸಿದ್ರು. ಪ್ರಾದೇಶಿಕ ಕಾರ್ಯಗ್ರಹದಲ್ಲಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದು ಹಾಗೂ ಸರ್ಕಾರದ ನಿಯಮದ ಪ್ರಕಾರ ಎಂಟು ಗಂಟೆ ಕೆಲಸ ಮಾಡುವುದ್ದಾಗಿ ಆದೇಶವನ್ನು ಹೊರದಿಸಿದೆ ಆದರೆ ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪ್ರತಿ ದಿನ ಕಿರುಕುಲ ನಿಡುತ್ತಿದ್ದಾರೆ.

39.ಬಿಸಿಯೂಟ ಕಾರ್ಯಕರ್ತೆಯರ ಸಮಸ್ಯೆಗಳನ್ನು ಬಗಿಹರಿಸಲು ನಾನು ಚಿಂತನೆ ನೆಡೆಸಿದ್ದೇನೆ ನಿಮ್ಮ ಚಿಂತನೆಗೆ ಸ್ಪಂದಿಸಲು ಸರ್ಕಾರ ಸಿದ್ದವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

40.ಬಿಜೆಪಿ ನಾಯಕರು ಏನೇ ಮಾಡಿದರು ಸರ್ಕಾರವನ್ನು ಅಸ್ಥಿರ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.ಬೆಂಗಳೂರಿನ ಕಾಡುಮಲ್ಲೇಶರ ದೇವಸ್ಥಾನದಲ್ಲಿ ಸೋಮವಾರ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬಿಜೆಪಿ ಮುಖಂಡರು ಸರ್ಕಾರವನ್ನು ಬಳಿಸಲು ಎಷ್ಟೇ ತಂತ್ರಗಳನ್ನು ಮಾಡಿದರು ಸರ್ಕಾರವನ್ನು ಏನೂ ಮಾಡಲು ಸಾಧ್ಯವಿಲ್ಲ ನೀವೆ ನೋಡ್ತಾ ಇರಿ ಎಂದರು.

41.ದುನಿಯಾ ವಿಜಯ್ ವಿರುದ್ಧ ವಿಜಿ ಪತ್ನಿ ನಾಗರತ್ನ ದೂರು ದಾಖಲಿಸಲು ಮುಂದಾಗಿದ್ದಾರೆ. ಮನೆ ಬೇಕೆಂಬ ಕಾರಣಕ್ಕೆ ನಾಗರತ್ನ ದೂರು ನೀಡಲು ಮುಂದಾಗಿದ್ದು, ರಾಜ್ಯ ಮಹಿಳಾ ಆಯೋಗದ ಮೋರೆ ಹೋಗಿದ್ದಾರೆ. ವಿಜಯ್ ತಮಗೆ ಸರಿಯಾಗಿ ಜೀವನಾಂಶ ನೀಡಿಲ್ಲವೆಂಬ ಕಾರಣಕ್ಕೆ ಮತ್ತು ತಮಗೆ ಸೇರಿದ ಮನೆ ಮಾರಿದ್ದು, ಆ ಮನೆ ತಮಗೆ ಬೇಕೆಂಬ ಕಾರಣಕ್ಕೆ ನಾಗರತ್ನ ವಿಜಿ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

42.ಅಂಬರೀಶ್ ಅಂತಿಮ ದರ್ಶನಕ್ಕೆ ಬರದೆ ಅಭಿಮಾನಿಗಳ ಆಕ್ರೋಷಕ್ಕೆ ತುತ್ತಾಗಿದ್ದ ಮಾಜಿ ಸಂಸದೆ ರಮ್ಯಾ, ರಾತ್ರೋ ರಾತ್ರಿ ಮಂಡ್ಯದಿಂದ ಮನೆ ಖಾಲಿ ಮಾಡೋ ಮೂಲಕ, ರಾಜಕೀಯವಾಗಿಯೂ ಮಂಡ್ಯದಿಂದ ದೂರ ಸರಿದ್ರಾ ಎಂಬ ಊಹಾಪೋಹ ಮಂಡ್ಯ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ. ಊಹಾಪೋಹ ಸತ್ಯ ಎಂಬ ರೀತಿಯಲ್ಲಿ ತಡರಾತ್ರಿ ಮಂಡ್ಯದ ವಿದ್ಯಾನಗರದಲ್ಲಿರುವ ರಮ್ಯಾ ಅವರ ಮನೆಗೆ ಬಂದ ಎರಡು ಲಾರಿಗಳಿಗೆ, ರಮ್ಯಾ ಅವರ ಮನೆಯ ವಸ್ತುಗಳನ್ನು ತುಂಬುತ್ತಿರುವ ದೃಶ್ಯ ಕ್ಯಮೆರಾದಲ್ಲಿ ಸೆರೆಯಾಗಿದೆ. ರಮ್ಯಾ ಮೊದಲಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಂಡ್ಯದಲ್ಲಿ ಮನೆ ಮಾಡಿ, ಇಲ್ಲೇ ಇದ್ದು ಮಂಡ್ಯ ಜನರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದರು.

43.ಆಪರೇಷನ್ ಕಮಲದ ಬಗ್ಗೆ ಡಾ.ಸುಧಾಕರ್ ಸ್ಪಷ್ಟನೇಯನ್ನು ನೀಡಿದ್ದಾರೆ, ನಾನು ಜನಾದರ್ನ ರೆಡ್ಡಿ ಅವರನ್ನು ಭೇಟಿ ಮಾಡಿಲ್ಲ ಅನಾರೋಗ್ಯದ ಹಿನ್ನೆಲೆಯಲ್ಲಿ ನಾನು ಆಸ್ಪತ್ರೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.

44.ವಿಜಯಪುರದ ರತ್ನಾಪೂರ ಗ್ರಾಮದ ಈ ಬಾಲಕಿ, ಕಿರಾತಕರಿಬ್ಬರ ಹುಚ್ಚಾಟಕ್ಕೆ ಬಲಿಯಾಗಿದ್ದಾಳೆ. ಗ್ರಾಮದ ಶಂಕರ್ ಹಾಗೂ ಮೋಹನ್ ಅಪ್ರಾಪ್ತೆಯನ್ನು ಪ್ರೀತಿಸು ಅಂತ ಬೆನ್ನು ಬಿದಿದ್ರಂತೆ. ಈ ಕುರಿತು ಬಾಲಕಿ ಪೋಷಕರಿಗೆ ಹೇಳಿದ್ರಂತೆ. ಇದ್ರಿಂದ ಆಕ್ರೋಶಗೊಂಡ ಯುವಕರು ಬಾಲಕಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಅಂತ ಆರೋಪ ಮಾಡಿದ್ದಾರೆ.

45.ಬಳ್ಳಾರಿ ಸಂಪತ್ತಭರಿತ ಜಿಲ್ಲೆಯಾಗಿತ್ತು. ಜಿಲ್ಲೆಯ ಸಂಡೂರು, ಕೂಡ್ಲಿಗಿ ಸೇರಿದಂತೆ ವಿವಿಧೆಡೆ ಹಸಿರಿನಿಂದ ಕೂಡಿತ್ತು. ಇದೇ ಸಂಡೂರಿನ ಹಸಿರಿಗೆ ಮಹಾತ್ಮಾ ಗಾಂಧಿ ಕೂಡಾ ಮನಸೋತ್ತಿದ್ರು. ಆದ್ರೀಗ ಹಸಿರು ಅನ್ನೋದನ್ನ ಭೂತಗನ್ನಡಿ ಹಾಕಿಕೊಂಡು ಹುಡುಕುವ ಪರಿಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಗಣಿನಗರಿಯ ಶಾಲೆಯೊಂದು ತಮ್ಮ ಮಕ್ಕಳ ಜೊತೆಗೆ ಜಿಲ್ಲೆಯ ಶಾಲಾ ಮಕ್ಕಳಿಗೆ ಹಸಿರಿನ ಬಗ್ಗೆ ಮಾಹಿತಿ ನೀಡುತ್ತಿದೆ.

46.ಮರಳಿನ ಸಮರ್ಪಕ ಪೂರೈಕೆ ಹಾಗೂ ಹೊನ್ನಾಳಿ , ನ್ಯಾಮತಿ ತಾಲೂಕನ್ನ ಬರಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಶಾಸಕ ರೇಣುಕಾಚಾರ್ಯ ನರೆನೀಡಿದ್ದ ಬಂದ್ ಯಶಸ್ವಿಯಾಗಿದೆ. ಶಾಸಕರ ಹೋರಾಟಕ್ಕೆ ಹೊನ್ನಾಳಿ ಜನತೆ ಕೂಡಾ ಸಾಥ್​ ನೀಡಿದ್ದು.. ಬಂದ್​ಗೆ ಸಹಕಾರ ನೀಡಿದರು ಈ ಹಿಂದೆ ಸ್ವತಃ ನದಿಗಿಳಿದು ಮರಳು ತುಂಬಿದ್ದ ಶಾಸಕರು ಎರಡು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕೂಡಾ ನಡೆಸಿದ್ರು.ಇಷ್ಟಾದ್ರೂ ಎಚ್ಚೆತ್ತುಕೊಳ್ಳದ ಸರ್ಕಾರದ ವಿರುದ್ಧ ಸಮರ ಸಾರಿದ ರೇಣುಕಾಚಾರ್ಯ ದೋಸ್ತಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದು ಮಾತ್ರವಲ್ಲದೇ ಸಚಿವರಿಗೆ ಸವಾಲೆಸೆದಿದ್ದಾರೆ.

47.ಗದಗ ಜಿಲ್ಲೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆಯಿಲ್ಲದೆ ಬರದಿಂದ ತತ್ತರಿಸಿ ಹೋಗಿತ್ತು. ಹೀಗಿದ್ದರೂ ಕಷ್ಟಪಟ್ಟು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ಸಿಗದ ರೈತ ಕಂಗಾಲಾಗಿದ್ದಾನೆ. ಪ್ರತೀ ಕ್ವೀಂಟಾಲ್​ಗೆ 600 ರೂಪಾಯಿ ಬೆಲೆ ಇದ್ದು ಹಾಕಿ ಬಂಡವಾಳ ಕೂಡ ಸಿಕುತ್ತಿಲ್ಲ ಅನ್ನೋದು ರೈತರ ಅಳಲು.ಕಷ್ಟ ಪಟ್ಟು ಈರುಳ್ಳಿ ಬೆಳೆದ ರೈತ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಇನ್ನಾದ್ರು ಸರ್ಕಾರ ಪ್ರತೀ ಕ್ವೀಂಟಾಲ್​ ಈರುಳ್ಳಿಗೆ 2 ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಬೇಕು ಅಂತಾ ಅನ್ನದಾತನ ಆಗ್ರಹವಾಗಿದೆ.

48.ತುಮಕೂರು ಜಿಲ್ಲೆ ತಿಪಟೂರಿನ ಗಣೇಶನ ಉತ್ಸವಕ್ಕೆ ವರ್ಣರಂಜಿತ ಇತಿಹಾಸವಿದೆ. ಆದ್ರೆ, ಈ ಬಾರಿಯ ಉತ್ಸವ ಕೂಡ ಸೂಕತದ ಗುರುತೊಂದಕ್ಕೆ ಸಾಕ್ಷಿಯಾಗಿಬಿಡ್ತು. ರಾತ್ರಿ 12.30ಕ್ಕೆ ಸಾವಿರಾರು ಜನ ಪಟಾಕಿ ಸಿಡಿಸೋದನ್ನು ನೋಡಿ ಸಂಭ್ರಮಿಸುತ್ತಿದ್ರು. ದುರಾದೃಷ್ಟವಶಾತ್ ಬಾರಿ ಗಾತ್ರದ ಪಟಾಕಿ ಗುಂಪಿನಲ್ಲಿದ್ದ ಸಿತಾರ ಅನ್ನೋ ಯುವತಿ ಮೇಲೆ ಸಿಡಿದಿದೆ. ಇದ್ರಿಂದ 21 ವರ್ಷದ ಸಿತಾರ ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರು ಯಾವುದೇ ಪ್ರಯೋಜನವಾಗಿಲ್ಲ

49.ಸಮ್ಮಿಶ್ರ ಸರ್ಕಾರ ಬೀಳಿಸೋದಿಕೆ ಮತ್ತೆ ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ಚಾಲನೆ ನೀಡಿದ್ರಾ ಅನ್ನೋ ಅನುಮಾನ ವ್ಯಕ್ತವಾಗ್ತಿದೆ. ಯಾಕಂದ್ರೆ ಶ್ರೀರಾಮಲು ಆಪ್ತರೊಬ್ಬರು ದುಬೈ ಉದ್ಯಮಿಯ ಜತೆ ಆಪರೇಷನ್ ಕಮಲದ ಬಗ್ಗೆ ಮಾತಾಡಿರೋ ಆಡಿಯೋ ತುಣುಕೊಂಡು ರಿಲೀಸ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗ್ಲೇ ಸಾಕಷ್ಟು ವೈರಲ್ ಕೂಡ ಆಗಿದೆ. ಕಾಂಗ್ರೆಸ್​​ನ ಸುಮಾರು ೨೦ ಕ್ಕೂ ಹೆಚ್ಚು ಶಾಸಕರು ಬಿಜೆಪಿಗೆ ಬರೋಕೆ ತಯಾರಾಗಿದ್ದಾರೆ. ಅವರಿಗೆ ತಲಾ ೨೫ ಕೋಟಿ ಕೆಲವರಿಗೆ ಸಚಿವ ಸ್ಥಾನವನ್ನ ನೀಡುವ ಆಫರ್ ಕೂಡ ನೀಡಿದ್ದೇವೆ ಅಂತ ನಡೆಸಿರುವ ಮಾತುಕತೆ ಸದ್ದುಗದ್ದಲಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಆಡೀಯೋ ತುಣಕನ್ನ ನೋಡಿದ್ರೆ ಬಿಜೆಪಿ ನಾಯಕರು ಮತ್ತೆ ಆಪರೇಷನ್ ಗೆ ಕೈಹಾಕಿರೋದು ಸ್ಪಷ್ಟವಾಗ್ತಿದೆ.

50.ಮಾರಕ ಕ್ಯಾನ್ಸರ್‌ಗೆ ತುತ್ತಾಗಿ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಮುಂಬೈಗೆ ಮರಳಿದ್ದಾರೆ.ಮುಂಬೈ ಏರ್‌ಪೋರ್ಟ್‌ನಲ್ಲಿ ಸೋನಾಲಿ ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟ ಸೋನಾಲಿ ಪತಿ ಗೋಲ್ಡಿ ಭೇಲ್, ಸದ್ಯಕ್ಕೆ ಸೋನಾಲಿ ಚಿಕಿತ್ಸೆ ಪೂರ್ಣಗೊಂಡಿದ್ದು, ಚಿಕಿತ್ಸೆ ಬಳಿಕ ಸೋನಾಲಿ ಚೇತರಿಸಿಕೊಂಡಿದ್ದಾಳೆ. ಆರೋಗ್ಯವಾಗಿದ್ದಾಳೆ ಎಂದಿದ್ದಾರೆ.ಅಲ್ಲದೇ ಚಿಕಿತ್ಸೆಗಾಗಿ ಆಗಾಗ ನ್ಯೂಯಾರ್ಕ್‌ಗೆ ಹೋಗಬೇಕೆಂದು ಹೇಳಿದ್ದಾರೆ.

Next Story

RELATED STORIES