ಸಿದ್ದಗಂಗಾ ಶ್ರೀಗಳಗೆ ಸ್ಟಂಟ್ ಅಳವಡಿಕೆ: ಆರೋಗ್ಯದಲ್ಲಿ ಚೇತರಿಕೆ

ತುಮಕೂರಿನ ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗೆ ಭಾನುವಾರ ಬೆಳಗ್ಗೆ ಎಂಡೋಸ್ಕೋಪಿ ಮೂಲಕ ಎರಡು ಸ್ಟಂಟ್ಗಳನ್ನು ಅಳವಡಿಸಲಾಗಿದ್ದು ಇದೀಗ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಶ್ರೀ ಶಿವಕುಮಾರ ಸ್ವಾಮೀಜಿ ಶನಿವಾರ ರೋಟಿನ್ ಚೆಕಾಪ್ ಗಾಗಿ ಬೆಂಗಳೂರು ನಗರದ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದೆರಡು ದಿನಗಳಿಂದ ಶ್ರೀಗಳ ಆರೋಗ್ಯದಲ್ಲಿ ಜ್ವರ ಕಾಣಿಸಿಕೊಂಡಿದ್ದು, ಹೀಗಾಗಿ ಶನಿವಾರ ರವೀಂದ್ರ ನೇತೃತ್ವದ ತಂಡದಿಂದ ಚಿಕಿತ್ಸೆ ನೀಡಲಾಗಿತ್ತು.
ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ.ರವೀಂದ್ರ ಮಾತನಾಡಿ, ಪಿತ್ತಕೋಶ, ಮೂತ್ರನಾಳದಲ್ಲಿ ಸೋಂಕು ಉಂಟಾಗಿತ್ತು. ಎಂಡೋಸ್ಕೋಪಿ ಮೂಲಕ ಎರಡು ಸ್ಟಂಟ್ಗಳನ್ನು ಅಳವಡಿಸಿದ್ದೇವೆ. ಈಗ ಸೋಂಕು ಕಡಿಮೆಯಾಗಿದೆ. ಚಿಕಿತ್ಸೆ ವೇಳೆ ಅರವಳಿಕೆ ನೀಡಲಾಗಿತ್ತು. ಶ್ರೀಗಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಗಂಭೀರ ಪರಿಸ್ಥಿತಿ ಇದ್ದರೆ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಬೇಕಿತ್ತು. ಆದರೆ ಶ್ರೀಗಳು ಆರಾಮಾಗಿರುವುದರಿಂದ ಸದ್ಯಕ್ಕೆ ವಾರ್ಡ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಗಾಲ್ ಬ್ಲಾಡರ್ನ ಇನ್ಫೆಕ್ಷನ್ ಇದ್ದಾಗ ಕೆಲವೊಮ್ಮೆ ಪದೇ ಪದೇ ಜ್ವರ ಬರುವ ಸಾಧ್ಯತೆ ಇದೆ. ಹಾಗಾಗಿ ಶ್ರೀಗಳನ್ನು ಇಂದು ಡಿಸ್ಚಾರ್ಜ್ ಮಾಡದೆ ಆಸ್ಪತ್ರೆಯಲ್ಲಿಯೇ ಇರಿಸಿಕೊಂಡು ನಿಗಾ ವಹಿಸಲಾಗುವುದು ಎಂದು ಹೇಳಿದರು.
ಆಸ್ಪತ್ರೆಗೆ ದಾಖಲಾದ ಶ್ರೀಗಳ ಆರೋಗ್ಯ ವಿಚಾರಿಸಲು ಆದಿಚುಂಚನಗಿರಿ ಮಠದ ಡಾ.ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ಶ್ರೀಗಳಿಗೆ 10 ಬಾರಿ ಸ್ಟಂಟ್ ಹಾಕಿದ್ದರೂ ಆವರ ಆರೋಗ್ಯ ಸುಸ್ಥಿರವಾಗಿರಲು ಆಸ್ಪತ್ರೆ ವೈದ್ಯರ ಶ್ರಮವೇ ಕಾರಣ. ಆಸ್ಪತ್ರೆಯಲ್ಲಿ ಶ್ರೀಗಳು ಭಕ್ತರನ್ನು ನಗುಮೊಗದಿಂದಲೇ ಭೇಟಿಯಾಗುತ್ತಿದ್ದಾರೆ ಎಂದು ಹೇಳಿದರು.
ಸದ್ಯ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಆದ್ರೆ ಶ್ರೀಗಳಿಗೆ ವಿಶ್ರಾಂತಿಯ ಅಗತ್ಯವಿದೆ..ಈ ಹಿನ್ನಲೆ ಇವತ್ತು ಕೂಡ ಆಸ್ಪತ್ರೆಯಲ್ಲಿಯೇ ಅಬಸರ್ವೇಷನ್ ನಲ್ಲಿ ಇಡಲು ವೈದ್ಯರು ನಿರ್ಧರಿಸಿದ್ದಾರೆ... ಶ್ರೀಗಳ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು ನಾಳೇ ಡಿಶ್ಚಾರ್ಜ್ ಮಾಡಲು ವೈದ್ಯರು ತೀರ್ಮಾನಿಸಿದ್ದಾರೆ.