ಅಂಬಿ ಅಭಿಮಾನಿಗಳಿಗೆ ಅಭಿ ಕೊಡ್ತಿದ್ದಾರೆ 'ಒಲವಿನ ಉಡುಗೊರೆ'..!

ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಆಘಾತದಿಂದ ಚಿತ್ರರಂಗ, ಅಭಿಮಾನಿಗಳು ಇನ್ನು ಹೊರಬಂದಿಲ್ಲ. ಪುತ್ರ ಅಭಿಷೇಕ್ ಅಂತೂ ತಂದೆಯ ಅಗಲಿಕೆಯ ನೋವಿನಲ್ಲೇ ದಿನ ದೂಡುತ್ತಿದ್ದಾರೆ. ಇದೆಲ್ಲದರ ನಡುವೆ ಅಭಿಷೇಕ್ ಅಭಿನಯದ ಅಮರ್ ಚಿತ್ರದಿಂದ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಅಭಿಮಾನಿಗಳಿಗೆ ಅಭಿ ಒಲವಿನ ಉಡುಗೊರೆ ಕೊಡ್ತಿದ್ದಾರೆ.
ಅಂಬರೀಶ್, ಸುಮಲತಾ ಮುದ್ದಿನ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್. ನಾಗಶೇಖರ್ ನಿರ್ದೇಶನದ ಈ ರೊಮ್ಯಾಂಟಿಕ್ ಲವ್ ಸ್ಟೋರಿ ಶೂಟಿಂಗ್ 80ರಷ್ಟು ಮುಕ್ತಾಯವಾಗಿದೆ. ಮಗನ ಚೊಚ್ಚಲ ಸಿನಿಮಾ ನೋಡದೇ ರೆಬೆಲ್ ಸ್ಟಾರ್ ಇಹಲೋಕ ತ್ಯಜಿಸಿದ್ದಾರೆ. ಶೂಟಿಂಗ್ ವೇಳೆ ಮತ್ತು ರಶಸ್ನಲ್ಲಿ ಮಗನ ನಟನೆ ನೋಡಿದ್ದ ಅಂಬಿ ಕಂಪ್ಲೀಟ್ ಸಿನಿಮಾ ನೋಡೋಕೆ ಸಾಧ್ಯವಾಗಲೇಯಿಲ್ಲ.
ಅಮರ್ ಸಿನಿಮಾದಲ್ಲಿ ಅಭಿಷೇಕ್ ಜೊತೆ ತಾನ್ಯಾ ಹೋಪ್ ನಾಯಕಿಯಾಗಿ ಮಿಂಚಿದ್ದು, ದೇಶ ವಿದೇಶದಲ್ಲಿ ಚಿತ್ರೀಕರಣ ಮಾಡಿ ಬಂದಿದೆ ಚಿತ್ರತಂಡ. ನಿರ್ಮಾಪಕ ಸಂದೇಶ್ ನಾಗರಾಜ್ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡ್ತಿರೋ ಸಿನಿಮಾ ಅಮರ್. ಅಭಿಷೇಕ್ ಅಮರ್ ಸಿನಿಮಾದಲ್ಲಿ ಬೈಕ್ ರೈಡರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಅಮರ್ ಸಿನಿಮಾದಲ್ಲಿ ಅಂಬಿ ಎವರ್ಗ್ರೀನ್ ಸಾಂಗ್ ಮರುಬಳಕೆ
ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಸೂಪರ್ ಹಿಟ್ ಗೀತೆಗಳು ನಮಗೆ ಗೊತ್ತೇಯಿದೆ. ಆದ್ರೆ, ಒಲವಿನ ಉಡುಗೊರೆ ಸಿನಿಮಾದ ಟೈಟಲ್ ಸಾಂಗ್ ಖುದ್ದು ಅಂಬರೀಶ್ಗೆ ಬಹಳ ಇಷ್ಟವಾಗಿದ್ದ ಹಾಡು. ಈ ಹಾಡನ್ನ ಅಮರ್ ಸಿನಿಮಾದಲ್ಲಿ ಮರುಬಳಕೆ ಮಾಡಿಕೊಳ್ಳುವ ಮೂಲಕ ರೆಬೆಲ್ ಸ್ಟಾರ್ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಡ್ತಿದೆ ಚಿತ್ರತಂಡ. ಇದನ್ನ ಅಂಬಿಗೆ ಅರ್ಪಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಡಿ. ರಾಜೇಂದ್ರ ಬಾಬು ನಿರ್ದೇಶನದಲ್ಲಿ 1987ರಲ್ಲಿ ಬಂದಿದ್ದ ಸೂಪರ್ ಹಿಟ್ ಸಿನಿಮಾ ಒಲವಿನ ಉಡುಗೊರೆ. ಎಂ. ರಂಗಾರಾವ್ ಸಂಗೀತ, ಆರ್. ಎನ್ ಜಯಗೋಪಾಲ್ ಸಾಹಿತ್ಯ, ಜಯಚಂದ್ರನ್ ಗಾಯನದಲ್ಲಿ ಈ ಹಾಡು ಮ್ಯಾಜಿಕ್ ಮಾಡಿತ್ತು. ಪ್ರೇಯಸಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪ್ರಿಯಕರ ತನ್ನ ಮನಸಿನ ಭಾವನೆಗಳನ್ನ ಹೇಳಿಕೊಳ್ಳುವ ಹಾಡಿದು. ಅಂಬಿ ಜೊತೆ ಮಂಜುಳಾ ಶರ್ಮ ನಾಯಕಿಯಾಗಿ ಮಿಂಚಿದ್ರು. ಸಿನಿಮಾ ಸೂಪರ್ ಹಿಟ್ ಆಗಿ ಅಂಬಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತ್ತು.
ಅಮರ್ ಚಿತ್ರದ ಸ್ಪೆಶಲ್ ಅಟ್ರಾಕ್ಷನ್ ಈ ಸೂಪರ್ ಹಿಟ್ ಸಾಂಗ್..!
ಮೈಸೂರಿನಲ್ಲಿ ‘ಒಲವಿನ ಉಡುಗೊರೆ’ ಸಾಂಗ್ ಶೂಟಿಂಗ್
ಈ ಹಾಡು ಅಮರ್ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಲಿದೆಯಂತೆ. ಮೈಸೂರಿನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದ್ದು, ಅಭಿಷೇಕ್ ಜೊತೆ ತಾನ್ಯ ಹೋಪ್ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ಎವರ್ಗ್ರೀನ್ ಸಾಂಗ್ ಮತ್ತೊಮ್ಮೆ ತೆರೆಮೇಲೆ ಬರ್ತಿರೋದು ವಿಶೇಷ. ಅಷ್ಟೆ ಅಲ್ಲ ಅಂಬಿಯ ಜನಪ್ರಿಯ ಗೀತೆ ಸಿನಿಮಾದಲ್ಲಿ ಇರೋದ್ರಿಂದ ಅಮರ್ ಸಿನಿಮಾ ಮತ್ತಷ್ಟು ಕುತೂಹಲ ಕೆರಳಿಸಿದೆ.
ನಾಣಿ..ಎಂಟ್ರಟ್ರೈನ್ಮೆಂಟ್ ಬ್ಯೂರೊ, ಟಿವಿ5